ಭಾರತ ಕಮ್ಯೂನಿಸ್ಟ್ ಪಕ್ಷದ ಮತ್ತು ಕಾರ್ಮಿಕ ಚಳುವಳಿಯ ಹಿರಿಯ ಮುಖಂಡರಾಗಿದ್ದ ಕಾಮ್ರೇಡ್ ಎಂ.ಸಿ.ನರಸಿಂಹನ್ ನಿಧನ ಅಪಾರ ನಷ್ಟವುಂಟು ಮಾಡಿದೆ.
ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿ ಮತ್ತು ಕಾರ್ಮಿಕ ಚಳುವಳಿಯ ಬಹುತೇಕ ಅವಧಿಯಲ್ಲಿ ಅದರ ಭಾಗವಾಗಿದ್ದ ಎಂಸಿಎನ್ ಅತ್ಯಂತ ಪ್ರಾಮಾಣಿಕ ಮತ್ತು ಮೃದು ಸ್ವಭಾವದ ಪ್ರೀತಿಯ ಸಂಗಾತಿಯಾಗಿದ್ದರು.
ವಿದ್ಯಾರ್ಥಿ ದೆಸೆಯಲ್ಲೇ ಕಮ್ಯುನಿಸ್ಟ್ ಚಳುವಳಿಗೆ ಆಕರ್ಷಿತರಾಗಿ ಬೆಂಗಳೂರಿನಲ್ಲಿ ಕಾರ್ಮಿಕರ ನಡುವೆ ಕೆಲಸ ಮಾಡುತ್ತಿದ್ದರು. ಕೆಜಿಎಫ್ ನಲ್ಲಿ ಅಲ್ಲಿನ ಕಮ್ಯುನಿಸ್ಟ್ ಮುಖಂಡರನ್ನು ಮೈಸೂರು ಸರ್ಕಾರ ದಾಳಿ ದಬ್ಬಾಳಿಕೆಗಳ ಮೂಲಕ ಗಡೀಪಾರು ಮುಂತಾದ ಕ್ರಮಗಳಿಂದ ಹಿಂಸಿಸುತ್ತಿತ್ತು. ಕಾಮ್ರೇಡ್ ಎನ್.ಎಲ್.ಉಪಾಧ್ಯಾಯ ಅವರ ಸಲಹೆ ಮೇರೆಗೆ ಕೆಜಿಎಫ್ ನ ಗಣಿ ಕಾರ್ಮಿಕರಿಗೆ ನೆರವು ನೀಡಲು ಮತ್ತು ಅವರ ಹಕ್ಕುಗಳಿಗಾಗಿ ಕೆಲಸ ಮಾಡಲು ಅಲ್ಲಿಗೆ ಹೋದರು. ಅವರ ನಡುವೆ ಕೆಲಸ ಮಾಡುತ್ತಲೇ ಜನಪ್ರಿಯರಾದರು. 1951-55 ರ ನಡುವೆ ಗಣಿಗಳಲ್ಲಿ ಅಪಘಾತ ತಡೆ ವಿಧಾನಗಳು ಮತ್ತು ಗಣಿ ಕಾರ್ಮಿಕರ ಕುರಿತು ಪರಿಹಾರಗಳನ್ನು ಕಾಣಲು ಹಲವಾರು ವಿದೇಶಗಳಿಗೆ ಅಧ್ಯಯನಕ್ಕೆಂದು ಹೋಗಿ ಬಂದರು.
ಇದಕ್ಕೂ ಮೊದಲು, 1948-51 ರ ಅವಧಿಯಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿದ್ದ ಕಾರಣದಿಂದ *ಜನಶಕ್ತಿ* ಪತ್ರಿಕೆಯನ್ನು ನಿಲ್ಲಿಸಲಾಗಿತ್ತು. ಅದು 1952 ರಲ್ಲಿ ಪುನಃ ಪ್ರಾರಂಭವಾದಾಗ ಅದರ ಸಂಪಾದಕರಾಗಿ ಎಂಸಿಎನ್ ಕೆಲಸ ಮಾಡಿದರು.
1957 ರಲ್ಲಿ ಕೆಜಿಎಫ್ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಸಿಪಿಐನಿಂದ ಆಯ್ಕೆಯಾದರು. (1952 ರಲ್ಲಿ ಮೈಸೂರು ವಿಧಾನಸಭೆಯ ಮೊಟ್ಟಮೊದಲ ಸಿಪಿಐ ಶಾಸಕರಾಗಿ ಕೆ.ಎಸ್.ವಾಸನ್ ಆಯ್ಕೆಯಾಗಿದ್ದರು). ಆಗ ಕೆಜಿಎಫ್ ಜೋಡಿ ಕ್ಷೇತ್ರವಾಗಿತ್ತು. ಸಾಮಾನ್ಯ ಕ್ಷೇತ್ರದಿಂದ ಎಂಸಿಎನ್ ಅವರು 19,973(27.36%) ಮತಗಳನ್ನು ಪಡೆದು ಕಾಂಗ್ರೆಸ್ನ ಓ.ಎಸ್.ಭಾಗ್ಯನಾಥನ್ ಅವರನ್ನು ಸೋಲಿಸಿದ್ದರು.
1962 ರಲ್ಲಿ ಕ್ಷೇತ್ರ ಬದಲಾವಣೆ ಮಾಡಿ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಗೆಲ್ಲಲಾಗಲಿಲ್ಲ.
1962ರಲ್ಲಿ ಎನ್.ಎಲ್.ಉಪಾಧ್ಯಾಯ, ಎಂ.ಎಸ್.ಕೃಷ್ಣನ್, ಸೂರ್ಯನಾರಾಯಣ ರಾವ್, ಎಂ.ಹೆಚ್.ಕೃಷ್ಣಪ್ಪ ಮುಂತಾದವರೊಂದಿಗೆ ಜೈಲುವಾಸ ಅನುಭವಿಸಿದರು.
1962 ರಲ್ಲಿ ಕಾಂಗ್ರೆಸ್ ಮತ್ತು ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಬೆಂಬಲದೊಂದಿಗೆ ಮೈಸೂರು ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಬಹುಶಃ ಸ್ವಾತಂತ್ರ್ಯ ನಂತರ ಕರ್ನಾಟಕದಲ್ಲಿ ವಿಧಾನಪರಿಷತ್ತಿಗೆ ಕಮ್ಯುನಿಸ್ಟರೊಬ್ಬರು ಆಯ್ಕೆಯಾದ ಮೊದಲ ಮತ್ತು ಕೊನೆಯವರು ಎಂಸಿಎನ್.
1964 ರಲ್ಲಿ ಕಮ್ಯುನಿಸ್ಟ್ ಪಕ್ಷ ವಿಭಜನೆ ಆದಾಗ ಸಿಪಿಐನೊಂದಿಗೆ ಉಳಿದ ಎಂಸಿಎನ್ ಕೊನೆಯವರೆಗೂ ಅದರ ಭಾಗವಾಗಿದ್ದರು. ಎಐಟಿಯುಸಿಯ ರಾಜ್ಯ ಘಟಕದ ಅಧ್ಯಕರಾಗಿದ್ದರು. ರಾಜ್ಯದ ಹಲವಾರು ಕಾರ್ಮಿಕ ಸಂಘಟನೆಗಳ ಮುಖಂಡರಾಗಿ, ವಕೀಲರಾಗಿ ಕಾರ್ಮಿಕರ ಮತ್ತು ದುಡಿಯುವ ಜನರ ಹಕ್ಕುಗಳಿಗಾಗಿ ಶ್ರಮಿಸಿದರು.
ಕಮ್ಯುನಿಸ್ಟ್ ಚಳುವಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕೊಂಡಿಯಾಗಿದ್ದ ಎಂಸಿಎನ್ ನಿಧನ ರಾಜ್ಯದ ಶ್ರಮಜೀವಿ ಚಳುವಳಿಗೆ ಅಪಾರ ನಷ್ಟವನ್ನುಂಟು ಮಾಡಿದೆ.
ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಿಪಿಐ(ಎಂ)ನ ರಾಜ್ಯ ಸಮ್ಮೇಳನ ನಡೆಸುವ ಸಂದರ್ಭದಲ್ಲಿ *ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿ* ಯ ಇತಿಹಾವನ್ನು ದಾಖಲಿಸುವ ಉದ್ದೇಶದಿಂದ ಕಾಮ್ರೇಡ್ ಎಂಸಿಎನ್ ಅವರನ್ನು ಸಂದರ್ಶಿಸಲೆಂದು ನಾನು ಮತ್ತು ಕಾಮ್ರೇಡ್ ವಸಂತರಾಜ್ ಸೇರಿ ಬಸವೇಶ್ವರ ನಗರದ ಅವರ ಮನೆಗೆ ಭೇಟಿ ಕೊಟ್ಟಿದ್ದೆವು. ತುಂಬಾ ಪ್ರೀತಿಯಿಂದ ಮಾತನಾಡಿದರು. ಆದರೆ ಅವರಿಗೆ ನೆನಪಿನ ಶಕ್ತಿ ತೀರಾ ಕುಂಟಿತವಾಗಿತ್ತು. ಅಂತಹ ಸಂದರ್ಭದಲ್ಲೂ ಅವರು ಕಮ್ಯುನಿಸ್ಟ್ ಪಕ್ಷಗಳು ವಿಲೀನವಾಗಬೇಕೆಂಬ ಮಾತುಗಳನ್ನು ಹೇಳುತ್ತಿದ್ದರು.
ಅವರ ನಿಧನಕ್ಕೆ ವೈಯುಕ್ತಿಕವಾಗಿ ಮತ್ತು ಸಿಪಿಐ(ಎಂ) ಪಕ್ಷದ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅವರ ಕುಟುಂಬದವರಿಗೆ ಸಂತಾಪಗಳನ್ನು ಸೂಚಿಸುತ್ತೇನೆ.
- ಪ್ರಕಾಶ್.ಕೆ.