ರಾಜ್ಯದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕಳೆದ ವಾರ ನಡೆದ ಮಂತ್ರಿ ಮಂಡಲದ ಸಭೆಯಲ್ಲಿ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – ೨೦೨೦ ಹಾಗೂ ಕರ್ನಾಟಕ ಭೂ ಸುಧಾರಣಾ ಕಾಯ್ದೆ – ೧೯೬೧ ರ ಕಲಂ, ೫, ೬೩, ೭೯ (ಎ)(ಬಿ)(ಸಿ) ಹಾಗೂ ೮೦ ರ ತಿದ್ದುಪಡಿಯ ಪ್ರಸ್ತಾವನೆಯನ್ನು ಈ ಕೂಡಲೇ ಹಿಂಪಡೆಯಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪತ್ರದ ಪೂರ್ಣ ಅಂಶಗಳು ಈ ಕೆಳಗಿನಂತಿವೆ….
ದಿನಾಂಕ: ೧೮-೦೬-೨೦೨೦
ಇವರಿಗೆ,
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು.
ಮಾನ್ಯರೇ,
ವಿಷಯ: ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – ೨೦೨೦ ಹಾಗೂ ಕರ್ನಾಟಕ ಭೂ ಸುಧಾರಣಾ ಕಾಯ್ದೆ – ೧೯೬೧ ರ ಕಲಂ, ೫, ೬೩, ೭೯ (ಎ)(ಬಿ)(ಸಿ) ಹಾಗೂ ೮೦ ರ ತಿದ್ದುಪಡಿಯ ಪ್ರಸ್ತಾಪಗಳನ್ನು ಕೈಬಿಡಲು ಒತ್ತಾಯ
ಕರ್ನಾಟಕ ಸರಕಾರ ಮೇ ೧೩, ೨೦೨೦ರಂದು ಕರ್ನಾಟಕ ಭೂ ಸುಧಾರಣಾ ಕಾಯ್ದೆ- ೨೦೨೦ ನ್ನು ಪ್ರಕಟಿಸಿದೆ ಹಾಗೂ ಕಳೆದ ವಾರ ನಡೆದ ಮಂತ್ರಿ ಮಂಡಲದ ಸಭೆಯಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ- ೧೯೬೧ ರ ಕಲಂ ೫, ೬೩, ೭೯ (ಎ)(ಬಿ)(ಸಿ) ಮತ್ತು ೮೦ ಗಳಿಗೆ ತಿದ್ದುಪಡಿ ಮಾಡಲು ನಿರ್ಧರಿಸಿದೆ.
ಸದರಿ ತಿದ್ದುಪಡಿಗಳು ರಾಜ್ಯದ ಅಭಿವೃದ್ದಿಯ ವಿರೋಧಿ ಹಾಗೂ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ಮತ್ತು ಕಪ್ಪಹಣದ ಖದೀಮರು ಬಿಳಿಯಾಗಿಸಿಕೊಂಡು, ರೈತರಿಂದ ಬಲವಂತವಾಗಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ವ್ಯಾಪಕವಾಗಿ ಕೇಂದ್ರೀಕರಿಸಿಕೊಳ್ಳಲು ಮಾತ್ರವೇ ನೆರವಾಗಲಿವೆ. ಈ ಕ್ರಮಗಳು, ರಾಜ್ಯವನ್ನು ಅತ್ಯಂತ ಗಂಭೀರವಾದ ಸಂಕಷ್ಟಕ್ಕೆ ದೂಡಲಿವೆ. ಇವು ರಾಜ್ಯದ ಮಹಿಳೆಯರು, ದಲಿತರು, ಹಿಂದುಳಿದ ಹಾಗೂ ಮುಂದುವರೆದ ಜಾತಿ ಸಮುದಾಯಗಳ ಮತ್ತು ಅಲ್ಪ ಸಂಖ್ಯಾತ ಬಡವರನ್ನು ತೀವ್ರ ದಬ್ಬಾಳಿಕೆಗೀಡು ಮಾಡುತ್ತವೆ. ಆದ್ದರಿಂದ ಈ ಕ್ರಮಗಳನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ರಾಜ್ಯ ಸಮಿತಿಯು ತೀವ್ರವಾಗಿ ವಿರೋಧಿಸುತ್ತದೆ.
ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ದಿಯ ತಿರುಗಣಿಯಾಗುವಂತೆ, ಸದರಿ ಉಳುಮೆಯಲ್ಲಿ ತೊಡಗಿರುವ ರೈತರು ಹಾಗೂ ಗೇಣಿದಾರನನ್ನು ಭೂ ಒಡೆಯನನ್ನಾಗಿಸುವ ಮತ್ತು ರಕ್ಷಿಸುವ ಭೂಸುಧಾರಣೆಯು ಹಾಗೂ ಅವರ ಕೃಷಿಯು ಲಾಭದಾಯಕವಾಗಿ ನಡೆಯುವಂತೆ ಕೈಗೊಳ್ಳುವ ಕ್ರಮಗಳು ಮಾತ್ರವೇ, ರಾಜ್ಯದ ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟ ನಿವಾರಣೆಗೆ ನಾಂದಿಯಾಗಲಿವೆ.
ಆದರೆ, ಈಗಿನ ತಮ್ಮ ಸರಕಾರದ ಈ ತಿದ್ದುಪಡಿಯ ಕ್ರಮಗಳು, ಮಾತ್ರವಲ್ಲಾ, ಕೇಂದ್ರ ಸರಕಾರ ಈಚೆಗೆ ಪ್ರಕಟಿಸಿದ ಮೂರು ಸುಗ್ರೀವಾಜ್ಞೆಗಳು, ಈ ಎಲ್ಲವೂ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ದೇಶ ಮತ್ತು ರಾಜ್ಯವನ್ನು ತೆರೆಯಲಿವೆ.
ಮಾತ್ರವಲ್ಲಾ, ಈ ಎಲ್ಲ ಕ್ರಮಗಳು, ಈಗಿನ ಕರ್ನಾಟಕ ಭೂ ಸುಧಾರಣಾ ಕಾಯ್ದೆ- ೧೯೬೧ ನ್ನು ಬುಡಮೇಲು ಮಾಡಲಿವೆ. ಇವೆಲ್ಲವು ಗ್ರಾಮೀಣ ಪ್ರದೇಶಗಳನ್ನು ಮುಂಬರುವ ದಿನಗಳಲ್ಲಿ ಮಸಣಗಳನ್ನಾಗಿ ಪರಿವರ್ತಿಸಲಿವೆ. ಅದೇ ರೀತಿ, ಸಣ್ಣ ಹಾಗೂ ಮದ್ಯಮ ಕೈಗಾರಿಕೆಗಳಿಗೆ ಕಚ್ಛಾ ಮಾಲು ದೊರೆಯದಂತೆ ಮಾಡಿ ಅವುಗಳ ಮುಚ್ಚುವಿಕೆಗೆ ಕಾರಣವಾಗಲಿವೆ. ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದ್ದ ಸಣ್ಣ ವ್ಯಾಪಾರಿ ವಲಯವನ್ನು ಗುಡಿಸಿ ಹಾಕಲಿವೆ. ಆ ಮೂಲಕ ನಿರುದ್ಯೋಗವನ್ನು ವ್ಯಾಪಕಗೊಳಿಸಲಿವೆ. ದೇಶದ ಹಾಗೂ ರಾಜ್ಯದ ಗ್ರಾಹಕ ಮಾರುಕಟ್ಟೆಯನ್ನ ದೊಡ್ಡ ರೀತಿಯ ಲೂಟಿಗೆ ಒಳಪಡಿಸುತ್ತವೆ.
ಆದ್ದರಿಂದ, ರಾಜ್ಯ ಸರಕಾರ, ಕೇಂದ್ರದ ಸುಗ್ರೀವಾಜ್ಞೆಗಳನ್ನು ರಾಜ್ಯದಲ್ಲಿ ಜಾರಿಗೆ ತರಬಾರದು ಮತ್ತು ಈಗಾಗಲೇ ತಮ್ಮ ಸರಕಾರ ತಿದ್ದುಪಡಿ ಮಾಡಿದ ಕರ್ನಾಟಕ ಭೂ ಸುಧಾರಣಾ ಕಾಯ್ದೆ-೨೦೨೦ ನ್ನು ವಾಪಾಸು ಪಡೆಯಬೇಕು ಹಾಗೂ ಕಳೆದ ಮಂತ್ರಿಮಂಡಲದಲ್ಲಿ ಮೂಲ ಭೂ ಸುಧಾರಣೆ ಕಾಯ್ದೆ- ೧೯೬೧ರ ಕಲಂ ೫, ೬೩, ೭೯ (ಎ)(ಬಿ)(ಸಿ) ಹಾಗೂ ೮೦ ಗಳ ತಿದ್ದುಪಡಿಗಳ ಪ್ರಸ್ತಾಪಗಳನ್ನು ವಾಪಾಸ್ಸು ಪಡೆಯಬೇಕೆಂದು ಈ ಮೂಲಕ ಭಾರತ ಕಮ್ಯುನಿಸ್ಠ್ ಪಕ್ಷ (ಮಾರ್ಕ್ಸ್‌ವಾದಿ) ರಾಜ್ಯ ಸಮಿತಿ ಒತ್ತಾಸುತ್ತದೆ.
ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ