ಸಹಕಾರಿ ಬ್ಯಾಂಕುಗಳ ಮೇಲೆ ಕೇಂದ್ರ ಸರಕಾರದ ಉಸ್ತುವಾರಿಯ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು

“ಆಂತರಿಕ ತುರ್ತು ಪರಿಸ್ಥಿತಿಯ 45ನೇ ವಾರ್ಷಿಕದಂದೇ ತಂದಿರುವುದು ನಿಜವಾಗಿಯೂ ಒಂದು ವ್ಯಂಗ್ಯ”

ಕೇಂದ್ರ ಸರಕಾರ  ಒಂದು ಸುಗ್ರೀವಾಜ್ಞೆಯ ಮೂಲಕ 1540 ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳ ಉಸ್ತುವಾರಿಯನ್ನು ತಾನೆ ವಹಿಸಿಕೊಂಡಿದೆ. ಸಿಪಿಐ(ಎಂ) ಪೊಲಿಟ್‌ ಬ್ಯುರೋ ಇದು ಏಕಪಕ್ಷೀಯ ನಿರ್ಧಾರ ಎಂದು ಖಂಡಿಸುತ್ತ ಇದನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಸಹಕಾರೀ ಬ್ಯಾಂಕುಗಳೂ ಸೇರಿದಂತೆ ಸಹಕಾರಿ ವಲಯದ ಉಸ್ತುವಾರಿಯನ್ನು ರಾಜ್ಯ ಸರಕಾರಗಳು ನೋಡಿಕೊಳ್ಳುತ್ತಿವೆ. ಆದರೆ ಕೇಂದ್ರ ಸರಕಾರ ಯಾವ ಚುನಾಯಿತ ರಾಜ್ಯ ಸರಕಾರದೊಡನೆಯೂ ಸಮಾಲೋಚನೆ ನಡೆಸದೆ ಈ ನಿರ್ಧಾರವನ್ನು ಕೈಗೊಂಡಿದೆ. ಇದು ದೇಶದ ಒಕ್ಕೂಟ ರಚನೆಯ ಮೇಲೆ ಮತ್ತೊಂದು ದಾಳಿ. ಈ ರೀತಿಯ ವಿಪರೀತ ಕೇಂದ್ರೀಕರಣ ನಮ್ಮ ಸಂವಿಧಾನದ ಮೂಲ ಲಕ್ಷಣಗಳಲ್ಲಿ ಒಂದಾದ ಒಕ್ಕೂಟ ತತ್ವದ ಮೇಲೆ ನಡೆಸಿರುವ ಪ್ರಹಾರ. ಇದು ಸಹಕಾರಿಗಳ ಸ್ವಾಯತ್ತತೆಯನ್ನು ಧ್ವಂಸ ಮಾಡುತ್ತದೆ ಎಂದು ಪೊಲಿಟ್ ‌ಬ್ಯುರೊ ಹೇಳಿದೆ.

ಸದ್ಯ ಈ ಬ್ಯಾಂಕುಗಳು 8.4 ಕೋಟಿ ಖಾತೆದಾರರನ್ನು ಮತ್ತು 4.5ಲಕ್ಷ ಕೋಟಿ ರೂ.ಗಳ ಠೇವಣಿಗಳನ್ನು ಹೊಂದಿವೆ. ಬಿಜೆಪಿ ಕೇಂದ್ರ ಸರಕಾರ ಈ ಮೋದಲು ರಿಝರ್ವ್ ಬ್ಯಾಂಕ್‌ನ ಮೀಸಲು ನಿಧಿಗೆ ಮಾಡಿದಂತೆ ಈ ಸಹಕಾರಿ ಬ್ಯಾಂಕುಗಳಲ್ಲಿ ಇರುವ ಅಪಾರ ಹಣದ ಮೇಲೆ ಕಣ್ಣು ಹಾಕಿದೆ.

ದೇಶದ ಬಹುಭಾಗಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಕೃಷಿಯಲ್ಲಿ ಸಹಕಾರಿ ವಲಯ ಮತ್ತು ಅದರ ಬ್ಯಾಂಕುಗಳು ಬೆನ್ನೆಲುಬಾಗಿವೆ. ಈಗ ಅವುಗಳ ಠೇವಣಿಗಳು ಕೇಂದ್ರ ಸರಕಾರಕ್ಕೆ ಹಂಚಿಕೆಗೆ ಲಭ್ಯವಾಗುವುದರಿಂದ, ಹೆಚ್ಚಿನ ಸಾಲ ಸಾಮರ್ಥ್ಯ ಇರುವ ಶ್ರೀಮಂತರು ಬಡವರ ಖರ್ಚಿನಲ್ಲಿ ಪ್ರಯೋಜನ ಪಡೆಯಲಿದ್ದಾರೆ. ಇದು ನಮ್ಮ ಕೋಟ್ಯಂತರ ಜನಗಳ ಜೀವನಾಧಾರಗಳಿಗೆ ಬೆಂಬಲವನ್ನು ನಾಶ ಪಡಿಸುತ್ತದೆ.

ಈ ಸುಗ್ರೀವಾಜ್ಞೆಯನ್ನು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯ 45ನೇ ವಾರ್ಷಿಕ ದಂದೇ ತಂದಿರುವುದು ನಿಜವಾಗಿಯೂ ಒಂದು ವ್ಯಂಗ್ಯ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಇದು ಭಾರತದ ಸಂವಿಧಾನಿಕ ವ್ಯವಸ್ಥೆಯ ಮೇಲೊಂದು ಗಂಭೀರ ದಾಳಿ ಎನ್ನುತ್ತ ಇದನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *