ಕಲ್ಲಿದ್ದಲು ಕಾರ್ಮಿಕರ ಮೂರು ದಿನಗಳ ಮುಷ್ಕರಕ್ಕೆ ಬೆಂಬಲ
ವಿದೇಶಿ ಸಂಸ್ಥೆಗಳು ಸೇರಿದಂತೆ ಖಾಸಗಿ ವಲಯಕ್ಕೆ ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆಗೆ ಅವಕಾಶ ನೀಡುವ ಸರಕಾರದ ನಿರ್ಧಾರವನ್ನು ರದ್ದು ಮಾಡಬೇಕು ಮತ್ತು ಸಾರ್ವಜನಿಕ ವಲಯದ ಕಲ್ಲಿದ್ದಲು ಕಂಪನಿಗಳನ್ನು ಖಾಸಗೀಕರಿಸುವ ನಡೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಕಲ್ಲಿದ್ದಲು ಕಾರ್ಮಿಕರ ಸಂಘಗಳು ಮತ್ತು ಒಕ್ಕೂಟಗಳ ಮೂರು ದಿನಗಳ ಮುಷ್ಕರಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಬೆಂಬಲ ವ್ಯಕ್ತಪಡಿಸಿದೆ.
ಸರಕಾರದ ಈ ನಿರ್ಧಾರ ನಮ್ಮ ದೇಶದ ಇಂಧನ ಭದ್ರತೆಯನ್ನು ಖಾತ್ರಿಪಡಿಸಲು ರಾಷ್ಟ್ರೀಯ ಹಿತದೃಷ್ಟಿಯಿಂದ ಕೈಗೊಂಡಿದ್ದ ಕಲ್ಲಿದ್ದಲು ಗಣಿಗಾರಿಕೆಯ ರಾಷ್ಟ್ರೀಕರಣವನ್ನು ಸಂಪೂರ್ಣವಾಗಿ ತಲೆಕೆಳಗಾಗಿಸುತ್ತದೆ. ಇದು ನಮ್ಮ ಅರ್ಥವ್ಯವಸ್ಥೆಯ ಸ್ವಾವಲಂಬೀ ಆಧಾರವನ್ನು ಧ್ವಂಸ ಮಾಡುತ್ತದೆ ಮತ್ತು ವಿದೇಶಿ ಹಾಗೂ ದೇಶಿ ಖಾಸಗಿ ಕಾರ್ಪೊರೇಟ್‌ಗಳ ಗರಿಷ್ಟ ಲಾಭಗಳಿಗೆ ನಮ್ಮ ದೇಶ ಸ್ವಯಂ- ಅಡಿಯಾಳು ಅಗುವಂತೆ ಮಾಡುತ್ತದೆ ಎಂದು ಪೊಲಿಟ್ ಬ್ಯುರೊ ಹೇಳಿದೆ.
ಕಲ್ಲಿದ್ದಲು ಹಲವು ಮಹತ್ವದ ಕೈಗಾರಿಕೆಗಳಿಗೆ- ವಿದ್ಯುತ್ ಉತ್ಪಾದನೆ, ಉಕ್ಕು, ಅಲುಮಿನಿಯಂ, ರಸಗೊಬ್ಬರ ಮತ್ತು ಸಿಮೆಂಟ್ ಉದ್ದಿಮೆಗಳಿಗೆ- ಅಗತ್ಯವಾಗಿರುವಂತಹ ಸಂಪನ್ಮೂಲ. ಆದ್ದರಿಂದ ಈಗ ರಫ್ತುಗಳ ಮೇಲಿನ ನಿಯಂತ್ರಣವೂ ಇಲ್ಲವಾಗುವುದರಿಂದ ನಮ್ಮ ದೇಶೀ ಉದ್ದಿಮೆಗಳಿಗೆ ಈ ಅಗತ್ಯ ಲಾಗುವಾಡು ಕೇಂದ್ರ ಸರಕಾರದ ಈ ನಡೆಯಿಂದಾಗಿ ಲಭ್ಯವಾಗದಂತಾಗುತ್ತದೆ.
ಇಂತಹ ಖಾಸಗೀಕರಣಕ್ಕೆ ಗುರುತಿಸಿರುವ 41 ಕಲ್ಲಿದ್ದಲು ಬ್ಲಾಕುಗಳು ದೇಶದ ವಿವಿಧ ಭಾಗಗಳಲ್ಲಿ, ಮಧ್ಯಪ್ರದೇಶ, ಛತ್ತೀಸ್‌ಗಡ, ಝಾರ್ಖಂಡ್, ತೆಲಂಗಾಣ ರಾಜ್ಯಗಳ ಅರಣ್ಯಪ್ರದೇಶಗಳಲ್ಲಿ ಇವೆ. ಇವು ನಮ್ಮ ಕೋಟ್ಯಂತರ ಜನಗಳಿಗೆ ಪಾರಂಪರಿಕ ವಾಸಸ್ಥಳಗಳು ಹಾಗೂ ಜೀವನೋಪಾಯದ ಮೂಲಗಳಾಗಿವೆ. ಆದ್ದರಿಂದ ಸರಕಾರದ ಈ ನಡೆ ನಮ್ಮ ಬುಡಕಟ್ಟು ಸಮುದಾಯಗಳ ಬದುಕುಗಳನ್ನು ಬುಡಮೇಲು ಮಾಡುತ್ತದೆ.
ಇಂತಹ ಖಾಸಗೀಕರಣದೊಂದಿಗೇ ಪರಿಸರ ವಿಧಿವಿಧಾನಗಳನ್ನು ಮತ್ತಷ್ಟು ನಿಯಂತ್ರಣಹೀನಗೊಳಿಸುವ ಕ್ರಮಗಳೂ ಬರುತ್ತವೆ. ಇವು ತೀವ್ರ ಪರಿಸರ ಮಾಲಿನ್ಯದ ಗಂಭೀರ ಬೆದರಿಕೆಗಳನ್ನು ಒಡ್ಡುತ್ತದೆ.