ಜನಗಳ ನೋವುಗಳ ಅಪಹಾಸ್ಯ, 8 ಕೋಟಿ ವಲಸೆ ಕಾರ್ಮಿಕರಿಗೆ, 5 ಕೋಟಿ ರೈತರಿಗೆ ವಂಚನೆ
ಪ್ರಧಾನ ಮಂತ್ರಿಗಳು ಜೂನ್ 30ರಂದು ಮಾಡಿರುವ ಪ್ರಕಟಣೆಗಳು ನಮ್ಮ ಕೋಟ್ಯಂತರ ಜನಗಳು ಅನುಭವಿಸುತ್ತಿರುವ ಬದುಕುಳಿಯುವ ಮತ್ತು ಜೀವನೋಪಾಯದ ಬಿಕ್ಕಟ್ಟನ್ನು ಎದುರಿಸಲು ಏನೇನೂ ಸಾಲದಾಗಿದೆ. ಕಳೆದ ಮೂರು ತಿಂಗಳಿಂದ ಜೀವನೋಪಾಯ ಅಥವ ಆಹಾರದಿಂದಲೂ ವಂಚಿತರಾಗಿರುವ ಜನಗಳು ಬದುಕುಳಿಯಲು 5 ಕೆ.ಜಿ. ಆಹಾರಧಾನ್ಯಗಳು ಮತ್ತು ಒಂದು ಕೆ.ಜಿ. ಬೇಳೆಕಾಳುಗಳನ್ನು ಒದಗಿಸಿದರಷ್ಟೇ ಸಾಲದು. ಮುಂದಿನ ಆರುತಿಂಗಳು ಕನಿಷ್ಟ ಪ್ರತಿವ್ಯಕ್ತಿಗೆ ಪ್ರತಿ ತಿಂಗಳು 10 ಕೆ.ಜಿ. ಆಹಾರಧಾನ್ಯಗಳನ್ನು ಖಾತ್ರಿ ಪಡಿಸಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಕನಿಷ್ಟ 14 ಕೋಟಿ ಜನಗಳು ಉದ್ಯೋಗ ಕಳಕೊಂಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಎಂಟು ಕೋಟಿ ವಲಸೆ ಕಾರ್ಮಿಕರು ರಸ್ತೆಗಳ ಮೇಲಿದ್ದರು ಎಂದು ಸರಕಾರವೇ ಒಪ್ಪಿಕೊಂಡಿದೆ. ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಪ್ರತಿ ಕುಟುಂಬಕ್ಕೆ ಮುಂದಿನ ಆರು ತಿಂಗಳು ಕನಿಷ್ಟ ತಿಂಗಳಿಗೆ 7500 ರೂ. ನಗದು ವರ್ಗಾವಣೆ ಅಗತ್ಯವಿದೆ. ಜನಧನ ಖಾತೆಗಳಿಗೆ 500ರೂ. ಪ್ರಕಟಿಸಿರುವುದು ಅತ್ಯಲ್ಪ, ಅದು ಜನಗಳ ನೋವುಗಳ ಅಪಹಾಸ್ಯವಷ್ಟೇ.
ಮರಳಿ ಬಂದ ಎಲ್ಲ ಕಾರ್ಮಿಕರಿಗೆ ಮನರೇಗದ ಅಡಿಯಲ್ಲಿ ಉದ್ಯೋಗ ಒದಗಿಸುವ ದಾವೆ ಒಂದು ಕುತರ್ಕವಷ್ಟೆ. ಹೆಚ್ಚುವರಿ ಒಂದು ಕೋಟಿ ಜನರಿಗೆ ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸಲು 2.46 ಲಕ್ಷ ಕೋಟಿ ರೂ.ಗಳನ್ನು ಕೊಡಬೇಕಾಗುತ್ತದೆ. ಆದರೆ ಬಜೆಟಿನಲ್ಲಿ ಒದಗಿಸಿರುವ ಮತ್ತು ಲಾಕ್ ಡೌನಿನಲ್ಲಿ ಪ್ರಕಟಿಸಿರುವ ಕ್ರಮಗಳ ಮೊತ್ತಗಳು ಎಲ್ಲವನ್ನೂ ಸೇರಿಸಿದರೂ 1.5 ಲಕ್ಷ ಕೋಟಿ ರೂ. ಗಿಂತಲೂ ಕಡಿಮೆ. ಆದಾಯ ತರುವ ಉದ್ಯೋಗ ಒದಗಿಸುವುದು ಸಾಧ್ಯವಾಗುವವ ವರೆಗೆ ದೇಶಾದ್ಯಂತ ನಿರುದ್ಯೋಗ ಭತ್ಯೆಯನ್ನು ಕೊಡಲೇ ಬೇಕು.
ಪ್ರಧಾನ ಮಂತ್ರಿಗಳು 9 ಕೋಟಿ ರೈತರಿಗೆ 2000 ರೂ. ನಗದು ವರ್ಗಾವಣೆಯಿಂದ ಪ್ರಯೋಜನವಾಗಿದೆ ಎಂದು ಹೇಳಿಕೊಂಡಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಗಳ ಮೊದಲು ‘ಪ್ರಧಾನ ಮಂತ್ರಿ ಕಿಸಾನ್ ಯೋಜನಾ’ ಪ್ರಕಟಿಸಲಾಯಿತು. ಅದು 14 ಕೋಟಿ ರೈತರಿಗೆ ಮೂರು ವಾರ್ಷಿಕ ಕಂತುಗಳಲ್ಲಿ 2000ರೂ. ಒದಗಿಸುವ ಯೋಜನೆ. ಈಗ ಪ್ರಕಟಿಸಿರುವ 2000 ರೂ. ವಾಸ್ತವವಾಗಿ ಈ ಯೋಜನೆಯ ವಿಳಂಬ ಮಾಡಿ ಕೊಡುತ್ತಿರುವ ಎರಡನೇ ಕಂತು. ಇದು ಹೆಚ್ಚುವರಿ ಪರಿಹಾರವೇನೂ ಅಲ್ಲ, ಈ ಮೊದಲೇ ಪ್ರಕಟಿಸಿರುವುದನ್ನು ಹೊಸ ಪೊಟ್ಟಣ ಕಟ್ಟಿ ಕೊಡಲಾಗುತ್ತಿದೆ. ಅಲ್ಲದೆ ಆ ಯೋಜನೆಯಲ್ಲಿ 14 ಕೋಟಿ ರೈತರಿಗೆ ಕೊಡುವುದಾಗಿ ಹೇಳಲಾಗಿತ್ತು. ಅದೀಗ 9 ಕೋಟಿಗೆ ಇಳಿದಿದೆ. ಅಂದರೆ 5 ಕೋಟಿ ರೈತರಿಗೆ ಈ ಅಲ್ಪ ಮೊತ್ತವನ್ನು ಕೂಡ ವಂಚಿಸಲಾಗಿದೆ.
ತನ್ನ ಸರಕಾರದ ಅಡಿಯಲ್ಲಿ ಭಾರತ ಕೊವಿಡ್ ಮಹಾಮಾರಿಯನ್ನು ಪ್ರಶಂಸಾರ್ಹ ರೀತಿಯಲ್ಲಿ ಎದುರಿಸಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿಕೊಂಡಿದ್ದಾರೆ. ಜಗತ್ತಿನಲ್ಲೇ ಅತಿ ಕಡಿಮೆ ತಪಾಸಣೆ ದರ ಹೊಂದಿರುವ ದೇಶಗಳಲ್ಲಿ ಒಂದಾಗಿದ್ದರೂ ಭಾರತ ಈಗ ಅಮೆರಿಕ ಮತ್ತು ಬ್ರೆಝಿಲ್ ನಂತರ ಅತಿ ಹೆಚ್ಚು ಸೋಂಕಿತರ ಸಂಖ್ಯೆಯನ್ನು ಹೊಂದಿದೆ. ಅಲ್ಲದೆ ಸೋಂಕು ಖಾತ್ರಿಯಾಗಿರುವವರ ಮತ್ತು ಸಾವುಗಳ ಸಂಖ್ಯೆ ವಿಪತ್ಕಾರೀ ರೀತಿಯಲ್ಲಿ ಏರುತ್ತಲೇ ಇದೆ. ಈಗಲಾದರೂ ಕೇಂದ್ರ ಸರಕಾರ ಯುದ್ಧೋಪಾದಿಯಲ್ಲಿ ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸಬೇಕಾಗಿದೆ, ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ವೈಯಕ್ತಿಕ ಸುರಕ್ಷತಾ ಸಾಧನ(ಪಿಪಿಇ)ಗಳನ್ನು ಒದಗಿಸಬೇಕಾಗಿದೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಬೇಕಾಗಿದೆ.
ಮಹಾಮಾರಿಯನ್ನು ಎದುರಿಸಲೆಂದು ಪ್ರಧಾನ ಮಂತ್ರಿಗಳ ಹೆಸರಲ್ಲಿ ಇರುವ ಖಾಸಗಿ ಟ್ರಸ್ಟ್ ಸಂಗ್ರಹಿಸಿರುವ ಸಾವಿರಾರು ಕೋಟಿ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡಿ ಈ ಕೆಳಗಿನವುಗಳನ್ನು ಖಾತ್ರಿಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ:
- ಸಾರ್ವಜನಿಕ ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸಬೇಕು.
- ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಎಲ್ಲ ಕುಟುಂಬಗಳಿಗೆ ಆರು ತಿಂಗಳು 7500ರೂ. ತಿಂಗಳಿಗೆ ನಗದು ವರ್ಗಾವಣೆ ಮಾಡಬೇಕು
- ಮುಂದಿನ ಆರು ತಿಂಗಳು ಆಹಾರದ ಅಗತ್ಯವಿರುವ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ. ಆಹಾರಧಾನ್ಯಗಳನ್ನು ಉಚಿತವಾಗಿ ಒದಗಿಸಬೇಕು.