ನ್ಯೂನತೆಗಳಿರುವ ವ್ಯಕ್ತಿಗಳ ಹಕ್ಕುಗಳ ಕಾಯ್ದೆ(Rights of Persons with Disabilities Act), 2016 ರ ಕೆಲವು ಅಂಶಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಕಾಯ್ದೆಯ ಅಡಿಯಲ್ಲಿರುವ ಕೆಲವು ಅಪರಾಧಗಳನ್ನು ‘ಕ್ರಿಮಿನಲ್’ ಅಲ್ಲ ಎನ್ನುವ, ಇನ್ನು ಕೆಲವನ್ನು ‘’ಅಮುಖ್ಯ ’(ಮೈನರ್) ಎಂದು ಪಟ್ಟಿ ಮಾಡುವ, ಹಾಗೂ ಮತ್ತೆ ಕೆಲವನ್ನು ಒಟ್ಟು ಸೇರಿಸಿ ದುರ್ಬಲಗೊಳಿಸುವ ತಿದ್ದುಪಡಿಗಳನ್ನು ಸರಕಾರ ಸೂಚಿಸಿದೆ. ಇದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ. ಏಕೆಂದರೆ ಇವು ಈ ಕಾಯ್ದೆಯ ಸ್ವರೂಪವನ್ನೇ ತೀವ್ರ ರೀತಿಯಲ್ಲಿ ಬದಲಿಸುತ್ತವೆ ಎಂದು ಅದು ಅಭಿಪ್ರಾಯ ಪಟ್ಟಿದೆ. ಹಿಂದೆ ಇದ್ದ 1995ರ ‘ನ್ಯೂನತೆಗಳಿರುವ ವ್ಯಕ್ತಿಗಳ (PwD) ಕಾಯ್ದೆ’ಯನ್ನು ರದ್ದು ಮಾಡಿ ತಂದಿರುವ ಈ RPD ಕಾಯ್ದೆಯ ಒಂದು ಪ್ರಗತಿಪರ ಅಂಶವೆಂದರೆ, ಕಾಯ್ದೆಯನ್ನು ಅನುಸರಿಸದೇ ಇರುವುದಕ್ಕೆಮತ್ತು ಉಲ್ಲಂಘನೆಗೆ ದಂಡನೆಯ ಪರಿಚ್ಛೇದಗಳು ಇದರಲ್ಲೇ ಅಡಕವಾಗಿವೆ ಎಂಬುದು.
ಈ ತಿದ್ದುಪಡಿಗಳಿಗೆ ಸರಕಾರ ಹಾಸ್ಯಾಸ್ಪದ ನೆವಗಳನ್ನು ಕೊಟ್ಟಿದೆ. ಇಂತಹ ಅಂಶಗಳು “ಅಡ್ಡಿಗಳಾಗಿ ಪರಿಣಮಿಸಿವೆ ಮತ್ತು ದೇಶೀ ಮತ್ತು ವಿದೇಶೀ ಹೂಡಿಕೆದಾರರು ಇಬ್ಬರಿಂದಲೂ ಹೂಡಿಕೆಗಳ ಮೇಲೆ ಪರಿಣಾಮ ಬೀರುವ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಕಾಣಲಾಗುತ್ತಿದೆ” ಎಂದು ಅದು ಹೇಳುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ‘ವ್ಯಾಪಾರ ಸುಗಮತೆ’ ಎಂಬುದು ದೀರ್ಘ ಹೋರಾಟಗಳ ಮೂಲಕ ಗೆದ್ದುಕೊಂಡಿರುವ ಆಧಾರಭೂತ ಮಾನವ ಹಕ್ಕುಗಳನ್ನು ಬಲಿಗೊಟ್ಟು ಸಾಧ್ಯವಿಲ್ಲ. RPD ಕಾಯ್ದೆಯಲ್ಲಿ ಈ ಅಂಶಗಳನ್ನು ಸೇರಿಸಿರುವ ಉದ್ದೇಶವೆಂದರೆ, ನಮ್ಮ ಸಮಾಜದಲ್ಲಿ ವಿವಿಧ ಪದರುಗಳ ತಾರತಮ್ಯವನ್ನು ಎದುರಿಸಬೇಕಾಗಿರುವ ಅತ್ಯಂತ ಅಂಚಿಗೆ ತಳ್ಳಲ್ಪಟ್ಟಿರುವ ವಿಭಾಗವೊಂದಕ್ಕೆ ಸಂಸತ್ತು ಪಾಸು ಮಾಡಿದ ಒಂದು ಕಾನೂನಿನ ಪಾಲನೆಯಾಗಬೇಕು ಮತ್ತು ಜವಾಬುದಾರಿಕೆಯನ್ನು ಖಾತ್ರಿಪಡಿಸಬೇಕು ಎಂಬುದೇ ಆಗಿದೆ.
ಈ ಪ್ರಸ್ತಾವಿತ ತಿದ್ದುಪಡಿಗಳ ನಿಜವಾದ ಉದ್ದೇಶವೇನೆಂಬುದನ್ನು ಸರಕಾರವೇ ಒಪ್ಪಿಕೊಂಡಿದೆ. ಇದು ಮಹಾಮಾರಿಯ ಪರಿಸ್ಥಿತಿಯನ್ನು ಬಳಸಿಕೊಂಡು ದೇಶದ ಅರ್ಥವ್ಯವಸ್ಥೆಯನ್ನು ದೇಶಿ-ವಿದೇಶಿ ಬಂಡವಾಳದ ಲೂಟಿಗೆ ಇನ್ನಷ್ಟು ತೆರೆದುಕೊಡುವ ಮೋದಿ ಸರಕಾರದ ಪ್ರಯತ್ನಗಳಿಗೆ ಅನುಸಾರವಾಗಿಯೇ ಇದೆ. ಹೋರಾಟಗಳ ಗಳಿಕೆಗಳನ್ನು ಈ ರೀತಿಯಲ್ಲಿ ನಿರಾಕರಿಸುವ ಪ್ರಯತ್ನಗಳು ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ದಾಳಿಗಳು, ಭಿನ್ನಮತದ ದಮನ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಇತ್ಯಾದಿಗಳಿಗೆ ಅನುಗುಣವಾಗಿಯೇ ಇದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ನ್ಯೂನತೆಗಳಿರುವವರ ಹಕ್ಕುಗಳ ಸಂಘಟನೆಗಳು ಮತ್ತು ಸಕ್ರಿಯ ಕಾರ್ಯಕರ್ತರಿಗೆ ಸಮಾನತೆ, ನ್ಯಾಯ ಮತ್ತು ತಾರತಮ್ಯ-ರಹಿತತೆಯ ಆಧಾರಭೂತ ನೀತಿಗಳಿಗೆ ವಿರುದ್ಧ ಹೋಗುವ ಈ ಪ್ರತಿಗಾಮಿ ತಿದ್ದುಪಡಿಗಳನ್ನು ಮಾಡಲಾಗದಂತೆ ಸರಕಾರವನ್ನು ತಡೆಯುವ ಅವರ ಹೋರಾಟದಲ್ಲಿ ಸೌಹಾರ್ದತೆ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದೆ.