ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಜಿ.ವಿ.ಶ್ರೀರಾಮರೆಡ್ಡಿ ಉಚ್ಚಾಟನೆ

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಯು ಕಾಂ||ಜಿ.ವಿ. ಶ್ರೀರಾಮರೆಡ್ಡಿಯವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ.

ಇದಕ್ಕೆ ಪೂರ್ವ, ಅವರ ಪ್ರಾಥಮಿಕ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟು ಅವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು.

ಒಂದು ವಾರದೊಳಗೆ ಅವರ ಮೇಲಿರುವ ಆರೋಪಗಳಿಗೆ ಉತ್ತರಿಸಬೇಕಿತ್ತು. ಆದರೆ ಅವರು ಉತ್ತರಿಸಲಿಲ್ಲ. ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಿಲ್ಲಾ ಸಮಿತಿ ಸಭೆಗೆ ಖುದ್ದು ಹಾಜರಿದ್ದು ವಿವರಿಸುವಂತೆ ಆಹ್ವಾನಿಸಿದ್ದರೂ, ಅಂತಹ ಅವಕಾಶವನ್ನು ಬಳಸಿಕೊಂಡು ತಮ್ಮ ನಿಲುಮೆ ಮತ್ತು ಕ್ರಮಗಳನ್ನು ಪ್ರತಿಪಾದಿಸಲು ಮುಂದಾಗಲಿಲ್ಲ.

ಅವರು, ಈಚೆಗೆ ಬಾಗೇಪಲ್ಲಿ ಎಪಿಎಂಸಿ ಅಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಅಧಿಕೃತ ರಾಜಕೀಯ ನಿಲುಮೆಗೆ ವಿರುದ್ಧವಾಗಿ, ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಿದ್ದರಲ್ಲದೇ, ಸಿಪಿಎಂ ಪಕ್ಷದ ಬೆಂಬಲದಿಂದ ಆಯ್ಕೆಯಾಗಿದ್ದ ಸೋಮಶೇಖರ ರೆಡ್ಡಿಯವರನ್ನು ಕೋಮುವಾದಿ ಬಿಜೆಪಿ ಪಕ್ಷಕ್ಕೆ ಸೇರಿಸಿ, ಅದರ ಪರವಾಗಿ ಎಪಿಎಂಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿಸಿದ್ದರು. ಮಾತ್ರವಲ್ಲಾ, ಅವರಿಗೆ ಉಳಿದಿಬ್ಬರು ಸಿಪಿಐಎಂ ಬೆಂಬಲಿತ ಎಪಿಎಂಸಿ ಸದಸ್ಯರಿಂದ ಬೆಂಬಲಕೊಡಿಸಿ ಪಕ್ಷ ವಿರೋಧಿ ಚಟುವಟಿಕೆಗೆ ನೇತೃತ್ವ ನೀಡಿದ್ದರು.

ಕಳೆದ ಡಿಸೆಂಬರ್ ೨೦೧೮ ರಲ್ಲಿ ಪಕ್ಷದ ಕೇಂದ್ರ ಸಮಿತಿಯು ಪಕ್ಷದ ಸಂಘಟನಾ ಶಿಸ್ತು ಉಲ್ಲಂಘನೆ ಮತ್ತು ನೈತಿಕ ದಿವಾಳಿತನದ ಆಧಾರದಲ್ಲಿ, ಪಕ್ಷದ, ಕೇಂದ್ರ ಸಮಿತಿ ಸದಸ್ಯತ್ವದಿಂದ ಹಾಗೂ ರಾಜ್ಯ ಸಮಿತಿಯ ಕಾರ್ಯದರ್ಶಿ ಹಾಗೂ ಎಲ್ಲಾ ಹಂತಗಳ ಚುನಾತ ಸ್ಥಾನಗಳಿಂದ ತೆಗೆದು ಹಾಕಿತ್ತು.

ಕೇಂದ್ರ ಸಮಿತಿಯ ಮುಂದೆ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಪಕ್ಷದ ನಿರ್ದೇಶನ ಹಾಗೂ ಶಿಸ್ತಿಗನುಸಾರ ನಡೆದುಕೊಳ್ಳುವುದಾಗಿ ಹೇಳಿ, ಕೇಂದ್ರ ಸಮಿತಿ ಅನುಮತಿಯಿಂದ ಅವರು ತಮ್ಮ ಸಾಮಾನ್ಯ ಸದಸ್ಯತ್ವ ಉಳಿಸಿಕೊಂಡಿದ್ದರು.

ಅದೇ ರೀತಿ, ಅವರ ಹಿಂದಿನ ಕೆಲಸ ಕಾರ್ಯಗಳನ್ನು ಗಮನಿಸಿ ಈಚೆಗೆ ಪಕ್ಷದ ಜಿಲ್ಲಾ ಸಮಿತಿಯು, ಅವರನ್ನು ಜಿಲ್ಲಾ ಸಮಿತಿ ಸದಸ್ಯರನ್ನಾಗಿ ಸೇರ್ಪಡೆ ಮಾಡಿತ್ತು.

ಆದರೆ, ಅಲ್ಲಿಂದ ಇಲ್ಲಿಯವರೆಗೆ ಪಕ್ಷದ ಕೇಂದ್ರ ಸಮಿತಿ ಹಾಗೂ ರಾಜ್ಯ ಮತ್ತು ಜಿಲ್ಲಾ ಸಮಿತಿಗಳ ನಿರ್ಣಯಗಳನ್ನು ಜಾರಿಗೊಳಿಸದೇ, ತೀವ್ರವಾಗಿ ಉಲ್ಲಂಘಿಸುತ್ತಿದ್ದರು.

ಕೆಲ ಸದಸ್ಯರ ಗುಂಪು ಕಟ್ಟಿಕೊಂಡು ಪಕ್ಷದ ನಾಯಕತ್ವವನ್ನು ನಿಂದಿಸುತ್ತಾ, ಪಕ್ಷ ವಿರೋಧಿ ಹಾಗೂ ಪಕ್ಷವನ್ನು ಒಡೆಯುವ ಕೆಲಸದಲ್ಲಿ ವ್ಯಾಪಕವಾಗಿ ತೊಡಗಿದ್ದರು.

ಅವರನ್ನು ತಾಳ್ಮೆಯಿಂದ ಸರಿಪಡಿಸುವ ಕೇಂದ್ರ ಹಾಗೂ ರಾಜ್ಯ ಸಮಿತಿಗಳ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದ್ದರು. ಅವರಿಗೆ ಕೇಂದ್ರ ಸಮಿತಿ, ರಾಜ್ಯ ಸಮಿತಿಗಳು ತಮ್ಮನ್ನು ತಿದ್ದಿಕೊಳ್ಳಲು ನೀಡಿದ ಅವಕಾಶಗಳನ್ನು ಅವರು ದುರುಪಯೋಗ ಪಡಿಸಿಕೊಂಡರು.

ಕಳೆದ ಮೂರು ತಿಂಗಳ ಹಿಂದೆ ದೆಹಲಿಯಿಂದ ಇಬ್ಬರು ಪಾಲಿಟ್ ಬ್ಯುರೋ ಸದಸ್ಯರು ಬೆಂಗಳೂರಿಗೆ ಬಂದು ಕಾಂ. ಜಿ.ವಿ. ಶ್ರೀರಾಮರೆಡ್ಡಿಯವರ ಜೊತೆ ಚರ್ಚಿಸಿ ಸರಿಪಡಿಸಿಕೊಳ್ಳಲು ತಿಳಿ ಹೇಳಿದರು ಮತ್ತು ಕಾಂ. ಸುಂದರಯ್ಯ ಸ್ಮಾರಕ ಶಿಕ್ಷಣ ದತ್ತಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ಕೆಲಸದ ವಿಚಾರಗಳ ಸಂಬಂಧದಲ್ಲಿ ಸಂಘಟನಾ ಮಾರ್ಗದರ್ಶನವನ್ನು ನೀಡಿದರೂ, ಅವುಗಳನ್ನು ಜಾರಿಗೊಳಿಸಲು ನಿರಾಕರಿಸಿದರು.

ಈಗ, ಮಿತಿ ಮೀರಿದ ಅಶಿಸ್ತು ಸಂಘಟನಾ ನಿಯಮಗಳ ತೀವ್ರ ಉಲ್ಲಂಘನೆಗಳಿಂದ, ಪಕ್ಷದ ಘನತೆ, ಗೌರವ ಉಳಿಸಿಕೊಳ್ಳುವ ಕಾರಣದಿಂದ ಮತ್ತು ಅವರ ಗುರುತರ ಸಂಘಟನಾ ಅಶಿಸ್ತು, ರಾಜಕೀಯ ತಪ್ಪು. ಪಕ್ಷದ ಮೇಲ್ಸಮಿತಿಗಳ ನಿರ್ಣಯಗಳ ತೀವ್ರ ಉಲ್ಲಂಘನೆ ಮತ್ತು ಗುಂಪುಗಾರಿಕೆ, ಕೋಮುವಾದಿ ಹಾಗೂ ಫ್ಯಾಶಿಸ್ ಬಿಜೆಪಿ ಜೊತೆ ಕೈ ಗೂಡಿಸಿದುದು ಹಾಗೂ ಪಕ್ಷ ಒಡೆಯುವ ಚಟುವಟಿಕೆಗಳ ಕಾರಣದಿಂದ, ಪಕ್ಷದ ಜಿಲ್ಲಾ ಸಮಿತಿಯು ಸರ್ವಾನುಮತದಿಂದ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ.

ಸಭೆಯ ಅಧ್ಯಕ್ಷತೆಯನ್ನು ಕಾಂ||ಮಹಮದ್ ಅಕ್ರಂ ವಹಿಸಿದ್ದರು. ಸಭೆಯಲ್ಲಿ, ರಾಜ್ಯ ಸಮಿತಿ ಕಾರ್ಯದರ್ಶಿ ಕಾಂ||ಯು. ಬಸವರಾಜ, ರಾಜ್ಯ ಮುಖಂಡರಾದ ಕಾಂ||ನಿತ್ಯಾನಂದ ಸ್ವಾಮಿ, ಕಾಂ||ಕೆ. ಎನ್ ಉಮೇಶ್ ಭಾಗಿಯಾಗಿದ್ದರು.

ಜಿ.ವಿ.ಶ್ರೀರಾಮರೆಡ್ಡಿಯವರ ಉಚ್ಚಾಟನೆಯ ಜಿಲ್ಲಾ ಸಮಿತಿಯ ನಿರ್ಣಯವನ್ನು ಪಕ್ಷದ ರಾಜ್ಯ ಸಮಿತಿ ಹಾಗೂ ಕೇಂದ್ರ ಸಮಿತಿಗಳು ಅನುಮೋದಿಸಿವೆ.

ಜಯರಾಮರೆಡ್ಡಿ

ಕಾರ್ಯದರ್ಶಿ, ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ

Leave a Reply

Your email address will not be published. Required fields are marked *