ಸರಕಾರ ಜೈಲಿನಲ್ಲಿಟ್ಟಿರುವ ಹಲವು ರಾಜಕೀಯ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ಅವರಲ್ಲಿ ಕೆಲವರಿಗೆ ಜೈಲಿನಲ್ಲಿ ಕೊವಿಡ್-19 ಸೋಂಕು ತಗಲಿದೆ ಎಂದು ವರದಿಯಾಗಿದೆ. ವಿಪರೀತ ಕಿಕ್ಕಿರಿದಿರುವ ಜೈಲುಗಳ ಪರಿಸ್ಥಿತಿಗಳು ಶೋಚನೀಯವಾಗಿವೆ, ಅಲ್ಲಿ ಮೂಲಭೂತ ಸೌಕರ್ಯಗಳೂ ಇಲ್ಲ. ಅವು ಅವರುಗಳ ಆರೋಗ್ಯ ಹದಗೆಡಲು ಬಹಳಷ್ಟು ಕಾರಣ. ಅಲ್ಲದೆ ಅವರಿಗೆ ಬೇರೆ ಕಾಯಿಲೆಗಳೂ ಇದ್ದು, ಬಹಳ ಸಮಯದಿಂದ ಔಷಧೋಪಚಾರಗಳಿಗೆ ಒಳಗಾಗಿದ್ದಾರೆ.
ಅಖಿಲ್ ಗೊಗೊಯ್ ರವರಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ. ವರವರ ರಾವ್ ಅವರ ಆರೋಗ್ಯವೂ ಆತಂಕಕಾರಿಯಾಗಿದೆ ಎಂದು ವರದಿಯಾಗಿದೆ. ಜೈಲುಗಳ ಕಿಕ್ಕಿರಿದ ಮತ್ತು ಅನಾರೋಗ್ಯಕರ ಪರಿಸ್ಥಿತಿಗಳಿಂದಾಗಿ ಗೌತಮ್ ನವ್ಲಖ, ಆನಂದ್ ತೇಲ್ತುಂಬ್ಡೆ, ಸುಧಾ ಭಾರಧ್ವಾಜ್, ಶೋಮಾ ಸೆನ್ ಮುಂತಾದ ಕಲ್ಪಿತ ಆಪಾಧನೆಗಳ ಮೇಲೆ ಜೈಲಿನಲ್ಲಿರುವ ಪ್ರಮುಖ ಮಾನವ ಹಕ್ಕು ಕಾರ್ಯಕರ್ತರು ಸೋಂಕಿಗೊಳಗಾಗುವ ಎಲ್ಲ ಅಪಾಯಗಳಿವೆ. ಬೇರೆ ರಾಜಕೀಯ ಕೈದಿಗಳಲ್ಲಿ ಪ್ರೊ. ಸಾಯಿಬಾಬಾ ಅವರ ಪರಿಸ್ಥಿತಿ ಇನ್ನೂ ಕಟ್ಟದಾಗಿದೆ. 90ಶೇಕಡಾ ವಿಕಲಾಂಗತೆ ಇರುವ ಇವರಿಗ 19 ವೈದ್ಯಕೀಯ ಸಮಸ್ಯೆಗಳಿವೆ, ಇವುಗಳಲ್ಲಿ ಹಲವು ಜೀವ ಬೆದರಿಕೆ ಇರುವಂತವು. ವಿಶ್ವಸಂಸ್ಥೆ ನೇಮಿಸಿರುವ ಮಾನವ ಹಕ್ಕುಗಳ ವಿಶೇಷ ವರದಿಗಾರರು ಕೂಡ ಕಳೆದ ವರ್ಷ ಇವರ ಆರೋಗ್ಯ ಪರಿಸ್ಥಿತಿಯಿಂದಾಗಿ ಇವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಆದ್ದರಿಂದ ಎಲ್ಲ ರಾಜಕೀಯ ಬಂಧಿಗಳನ್ನು ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಮತ್ತು ಸಾಕಷ್ಟು ವೈದ್ಯಕೀಯ ಆರೈಕೆಯನ್ನು ಒದಗಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.