ಪರಿಸರದ ರಕ್ಷಣೆಯ ಕಾಳಜಿ ಇಲ್ಲ, ನಿಯಂತ್ರಣಗಳ ಉಲ್ಲಂಘನೆಗೆ ಲೈಸೆನ್ಸ್!
ಪರಿಸರ ರಕ್ಷಣೆಯ ಸಂಬಂಧವಾಗಿ ಮೋದಿ ಸರಕಾರ ಪ್ರಕಟಿಸಿರುವ ‘ಪರಿಸರ ಪರಿಣಾಮ ನಿರ್ಧಾರಣೆ’ (Environment Impact Assessment – ಇ.ಐ.ಎ.) ಕರಡು ಅಧಿಸೂಚನೆ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರಕಾರದ ಕಾರ್ಪೊರೇಟ್ಗಳ ಪರವಾದ ಅಜೆಂಡಾಕ್ಕೆ ಅನುಗುಣವಾಗಿಯೇ ಇದೆ. ಈ ಕರಡಿನ ಕಾಳಜಿ ಜನಗಳ ಹಿತಾಸಕ್ತಿಗಳೂ ಅಲ್ಲ, ಅಥವ ಪರಿಸರದ ರಕ್ಷಣೆಯೂ ಅಲ್ಲ. ನಿಜ ಹೇಳಬೇಕೆಂದರೆ ಅದು ತಪ್ಪು ಕೃತ್ಯಗಳಿಗೆ ಮತ್ತು ಉಲ್ಲಂಘನೆಗಳಿಗೆ ಲೈಸೆನ್ಸ್ ಕೊಡುತ್ತದೆ. ಆದ್ದರಿಂದ ಈ ಕರಡು ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪರವಾಗಿ ಪೊಲಿಟ್ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಕೇಂದ್ರ ಪರಿಸರ, ಅರಣ್ಯಗಳು ಮತ್ತು ಹವಾಮಾನ ಬದಲಾವಣೆ ಮಂತ್ರಿ ಪ್ರಕಾಶ ಜಾವಡೇಕರ್ ಅವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಎಲ್ಲರ ಅಭಿಪ್ರಾಯಗಳನ್ನು ತೆಗೆದುಕೊಂಡು ಇದರ ಮರುಕರಡನ್ನು ತಯಾರಿಸಬಹುದು. ಇದು ಪರಿಸರ, ಜನತೆ ಮತ್ತು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದೂ ಅವರು ಹೇಳಿದ್ದಾರೆ.
ಪರಿಸರ ರಕ್ಷಣೆ ಕುರಿತಂತೆ ಭಾರತದಲ್ಲಿ 1986ರಲ್ಲಿ ಒಂದು ಕಾಯ್ದೆಯನ್ನು ತಂದಿದ್ದು ಅದರ ಅಡಿಯಲ್ಲಿ 1994ರಲ್ಲಿ ‘ಪರಿಸರ ಪರಿಣಾಮ ನಿರ್ಧಾರಣೆ’ (ಇ.ಐ.ಎ.) ಅಧಿಸೂಚನೆಯನ್ನು ಹೊರಡಿಸಲಾಯಿತು. 2006ರಲ್ಲಿ ಇದರ ಸ್ಥಾನದಲ್ಲಿ ಒಂದು ಮಾರ್ಪಾಡು ಮಾಡಿದ ಅಧಿಸೂಚನೆಯನ್ನು ಹೊರಡಿಸಲಾಯಿತು. ಈಗ ಮೋದಿ ಸರಕಾರ ಇದರ ಸ್ಥಾನದಲ್ಲಿ ತರಲು ಒಂದು ಕರಡು ಇ.ಐ.ಎ. ಅಧಿಸೂಚನೆಯನ್ನು ಪ್ರಕಟಿಸಿ ಜೂನ್ 10 ರೊಳಗೆ ಪ್ರತಿಕ್ರಿಯೆಗಳನ್ನು ಕಳಿಸುವಂತೆ ಕೇಳಲಾಯಿತು. ಆ ಪ್ರಕಟಣೆಯ ದಿನಾಂಕ ಮಾರ್ಚ್ 23ರಂದು ಎಂದಿದ್ದರೂ ಅದು ಕೊವಿಡ್ ವಿರುದ್ಧ ಸಮರ ಉಂಟು ಮಾಡಿದ ಪರಿಸ್ಥಿತಿಯಿಂದಾಗಿ ಗಜೆಟ್ನಲ್ಲಿ ಅದರ ಪ್ರಕಟಣೆ ವಿಳಂಬಗೊAಡಿತು. ಇದೊಂದು ಗಂಭೀರ ಪ್ರಶ್ನೆಯಾದ್ದರಿಂದ ಈ ಬಗ್ಗೆ ಆಮೂಲಾಗ್ರ ಚರ್ಚೆ ನಡೆಯಬೇಕಾಗಿದೆ, ಆದ್ದರಿಂದ ಸಮಯ ಮಿತಿಯನ್ನು ವಿಸ್ತರಿಸಬೇಕು ಎಂದು ಬೃಂದಾ ಕಾರಟ್ ಮೇ 5 ರಂದು ಪರಿಸರ ಮಂತ್ರಿಗಳಿಗೆ ಪತ್ರ ಬರೆದರು. ಇತರ ಹಲವರಿಂದಲೂ ದೇಶದ ಎಲ್ಲೆಡೆಯಿಂದ ಈ ಆಗ್ರಹ ಬಂದಾಗ ಪರಿಸರ ಮಂತ್ರಾಲಯದ ಉನ್ನತ ಅಧಿಕಾರಿಗಳು ಈ ಗಡುವನ್ನು ಆಗಸ್ಟ್ 10ರ ವರೆಗೆ ವಿಸ್ತರಿಸಲು ಮುಂದಾದರು. ಆದರೆ ಪರಿಸರ ಮಂತ್ರಿಗಳು ಅದನ್ನು ಜೂನ್ 30 ಕ್ಕೆ ಇಳಿಸಿದರು. ಇದರ ವಿರುದ್ಧ ಕೆಲವರು ದಿಲ್ಲಿ ಹೈಕೋರ್ಟಿಗೆ ಹೋದರು. ಹೈಕೋರ್ಟ್ ಇದನ್ನು ಆಗಸ್ಟ್ 11ರ ವರೆಗೆ ವಿಸ್ತರಿಸಿತು. ಇದೊಂದು ಸಕಾರಾತ್ಮಕ ಮಧ್ಯಪ್ರವೇಶ ಎಂದು ಹೇಳುತ್ತ ಬೃಂದಾ ಕಾರಟ್ ಅವರು ತಮ್ಮ ಜುಲೈ 17ರ ಪತ್ರದಲ್ಲಿ ಈ ಕರಡನ್ನು ಕುರಿತಂತೆ ಸಿಪಿಐ(ಎಂ)ನ ವಿವರವಾದ ವಿಮರ್ಶೆಯನ್ನು ಪ್ರಸ್ತುತ ಪಡಿಸುತ್ತ, ಇದನ್ನು ಹಿಂತೆಗೆದುಕೊಳ್ಳಬೇಕಾಗಿದೆ ಎಂದು ಸಿಪಿಐ(ಎಂ) ಏಕೆ ಆಗ್ರಹಿಸುತ್ತಿದೆ ಎಂಬುದನ್ನು ವಿವರಿಸಿದ್ದಾರೆ.
ಭಾರತದ ಪರಿಸರ ನಿಯಂತ್ರಣ ರಚನೆ ಗಟ್ಟಿಮುಟ್ಟಾಗಿಲ್ಲ, ಅದನ್ನು ಸರಿಪಡಿಸಬೇಕಾಗಿದೆ ಎಂಬುದು ಸ್ಪಷ್ಟ. ‘ಪರಿಸರ ಪರಿಣಾಮ ನಿರ್ಧಾರಣೆ’ (Environment Impact Assessment – ಇ.ಐ.ಎ.) ಈ ರಚನೆಯ ಒಂದು ಭಾಗ. 2020ರಲ್ಲಿ ವಿಶ್ವ ಬ್ಯಾಂಕಿನ ‘ವ್ಯಾಪಾರ-ವ್ಯವಹಾರ ನಡೆಸುವ ಸುಗಮತೆ’ (Ease of Doing Business) ಸೂಚ್ಯಂಕದಲ್ಲಿ ಭಾರತದ ಸ್ಥಾನ 190 ದೇಶಗಳಲ್ಲಿ 63ನೇಯದು. ಕಳೆದ ವರ್ಷಕ್ಕೆ ಹೋಲಿಸಿದರೆ 14 ಶ್ರೇಯಾಂಕದಷ್ಟು ಉತ್ತಮಗೊಂಡಿದೆ. ಆದರೆ, ಯೇಲ್ ವಿಶ್ವವಿದ್ಯಾಲಯದ ‘ಜಾಗತಿಕ ಪರಿಸರ ನಿರ್ವಹಣೆ ಸೂಚ್ಯಂಕ’ (Global Environment Performance)ದಲ್ಲಿ 180 ದೇಶಗಳಲ್ಲಿ 168ನೇ ಸ್ಥಾನದಷ್ಟು ಕೆಳಗೆ ಇದೆ. 2.9 ಅಂಶಗಳಷ್ಟು ಇಳಿಕೆಯಾಗಿದೆ. ಅಂದರೆ ಸರಕಾರದ ಆದ್ಯತೆ ವ್ಯಾಪಾರ-ವ್ಯವಹಾರಗಳೇ, ಅವಕ್ಕೆ ನೆರವಾಗಲು ಅದು ಪರಿಸರ ನಿಯಂತ್ರಣಗಳನ್ನೂ ನಿಸ್ಸಾರಗೊಳಿಸುತ್ತದೆ, ಅದರಿಂದಾಗಿ ಪರಿಸರದ ಮೇಲೆ, ಮತ್ತು ತಮ್ಮ ಜೀವನ ಹಾಗೂ ಜೀವನೋಪಾಯಗಳಿಗಾಗಿ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿಸಿರುವವರ ಮೇಲೆ ಗಂಭೀರ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂಬುದನ್ನು ಇದು ತೋರಿಸುತ್ತದೆ ಎಂದು ಬೃಂದಾ ಕಾರಟ್ ತಮ್ಮ ಪತ್ರದ ಆರಂಭದಲ್ಲಿಯೇ ಹೇಳಿದ್ದಾರೆ.
ಇ.ಐ.ಎ. ಅಧಿಸೂಚನೆಗಳು, 2006(ಇ.ಐ.ಎ. 2006) ನ್ನು ಹೊರಡಿಸಿದ ನಂತರದ ಒಂದೂವರೆ ದಶಕದ ನಂತರ ಈ ಅವಧಿಯ ಅನುಭವಗಳನ್ನು ಬಳಸಿಕೊಳ್ಳಲು ಈ ಹೊಸ ಅಧಿಸೂಚನೆ(ಇ.ಐ.ಎ.2020) ಒಂದು ಅವಕಾಶವಾಗಿತ್ತು. ಈ ಮೂಲಕ ಇನ್ನೂ ಬಿಗುವಾದ ನಿಯಂತ್ರಣಗಳು ಹಾಗೂ ಕಟ್ಟುನಿಟ್ಟಾದ ಉಸ್ತುವಾರಿ ಮತ್ತು ಜಾರಿಯನ್ನು ಖಾತ್ರಿಪಡಿಸಲು ಇ.ಐ.ಎ. ಮಾರ್ಗಸೂತ್ರಗಳನ್ನು ರೂಪಿಸಬಹುದಾಗಿತ್ತು. ದುರದೃಷ್ಟವಶಾತ್, ಕರಡು ಇ.ಐ.ಎ.2020 ಈ ಹಿಂದಿನ ಇ.ಐ.ಎ.2006ರ ದೌರ್ಬಲ್ಯಗಳನ್ನು ಸರಿಪಡಿಸುವ ಬದಲು ತದ್ವಿರುದ್ಧವಾದುದನ್ನೇ ಮಾಡಿದೆ.
ಇದನ್ನು ವಿವರವಾಗಿ ಪರಿಶೀಲಿಸಿದಾಗ ಐದು ಅಂಶಗಳು ಸ್ಪಷ್ಟವಾಗುತ್ತವೆ:
- ಕರಡು ಇ.ಐ.ಎ 2020, ಈ ಮೊದಲು ಕೇಂದ್ರ ಸರಕಾರ ಇ.ಐ.ಎ. ನಿಯಂತ್ರಣಗಳನ್ನು ದುರ್ಬಲಗೊಳಿಸಲು ತಂದ ನಿಯಮಗಳು, ವಿಧಾನಗಳು, ಅಧಿಸೂಚನೆಗಳು ಮತ್ತು ತಿದ್ದುಪಡಿಗಳನ್ನು ರದ್ದು ಮಾಡಿರುವ ನ್ಯಾಯಾಲಯಗಳ ನಿರ್ಧಾರಗಳನ್ನು ತಳ್ಳಿಹಾಕುವ ಒಂದು ಉಪಕರಣವಾಗಿದೆ;
- ಇದು ಪ್ರಾಜೆಕ್ಟ್ ಮಂಡನೆಯ ವಿಷಯದಲ್ಲಿ ಈಗಿರುವ ಹಿತಾಸಕ್ತಿಗಳ ತಾಕಲಾಟದ ಪ್ರಶ್ನೆಯನ್ನು ಪರಿಶೀಲಿಸುವುದಿಲ್ಲ;
- ಖನಿಜಗಳ ಗಣಿಕಾರಿಕೆ ಕುರಿತಾದ 2010ರ ಮಾರ್ಗದರ್ಶಕ ಕೈಪಿಡಿ ಈ ಕರಡಿನ ಭಾಗ ಎಂದು ಖಾತ್ರಿಪಡಿಸದೆ, ನಿರ್ದಿಷ್ಟವಾಗಿ ಓಪನ್ ಕಾಸ್ಟ್ ಗಣಿಗಾರಿಕೆಯ ಮೇಲಿನ ನಿಯಂತ್ರಣಗಳನ್ನು ದುರ್ಬಲಗೊಳಿಸಿದೆ;
- ಪರಿಸರ ನಿಯಂತ್ರಣದ ಒಟ್ಟು ರಚನೆಯ ಭಾಗಗಳಾಗಿರುವ ವಿವಿಧ ಪರಿಣಾಮ ನಿರ್ಧಾರಣಾ ಮತ್ತು ತಾಂತ್ರಿಕ ಸಮಿತಿಗಳ ಆಯ್ಕೆ ವಿಧಾನವನ್ನು ಬದಲಿಸಿ ಈ ಸಮಿತಿಗಳ ಸ್ವಾಯತ್ತತೆಯನ್ನು, ರಾಜ್ಯಗಳ ಪಾತ್ರವನ್ನು, ಮತ್ತು ಹೆಚ್ಚು ಪ್ರಜಾಸತ್ತಾತ್ಮಕವಾದ ಸಂಯೋಜನೆಯನ್ನು ಕೂಡ ಖಾತ್ರಿಪಡಿಸಬೇಕಾಗಿದೆ;
- ಆದಿವಾಸಿಗಳ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಹಕ್ಕುಗಳನ್ನು ದುರ್ಬಲಗೊಳಿಸಲಾಗಿದೆ, ಕೆಲವು ವಿಷಯಗಳನ್ನು ನಿರ್ಮೂಲ ಮಾಡಲಾಗಿದೆ.
ಇದಲ್ಲದೆ, ಕರಡು ಇ.ಐ.ಎ 2020 ತಂದಿರುವ ಬದಲಾವಣೆಗಳಲ್ಲಿ ಆತಂಕ ಉಂಟು ಮಾಡುವಂತಹ ನಾಲ್ಕು ನಿರ್ದಿಷ್ಟ ಅಂಶಗಳಿವೆ ಎಂಬ ಸಂಗತಿಯತ್ತವೂ ಬೃಂದಾ ಕಾರಟ್ ಗಮನ ಸೆಳೆದಿದ್ದಾರೆ. ಅವೆಂದರೆ:
- ಪ್ರಾಜೆಕ್ಟ್ ಗಳ ವರ್ಗಿಕರಣ, ಇದರ ಮೂಲಕ ಬಹಳಷ್ಟು ಪ್ರಾಜೆಕ್ಟುಗಳು ಪರಿಸರ ಪರಿಣಾಮ ನಿರ್ಧಾರಣಾ ಸಮಿತಿಗಳ ಪರೀಕ್ಷಣೆ ಮತ್ತು ಸಾರ್ವಜನಿಕ ಸಮಾಲೋಚನೆಯ ವ್ಯಾಪ್ತಿಗೂ ಒಳಗಾಗದಂತೆ ಮಾಡಲಾಗಿದೆ.
- ಸಾರ್ವಜನಿಕ ಸಮಾಲೋಚನೆಗಳನ್ನು ಕೆಲವು ವಿಷಯಗಳಲ್ಲಿ ದುರ್ಬಲಗೊಳಿಸಲಾಗಿದೆ, ಇನ್ನು ಕೆಲವು ವಿಷಯಗಳಲ್ಲಿ ತೆಗೆದು ಬಿಡಲಾಗಿದೆ.
- ಪ್ರಾಜೆಕ್ಟ್ ಗಳ ಉಲ್ಲಂಘನೆಗಳಾದಲ್ಲಿ ಅವನ್ನು ನಂತರ ಕಾನೂನುಬದ್ಧಗೊಳಿಸುವ ಅಂಶವನ್ನು ಸೇರಿಸಲಾಗಿದೆ. ಮತ್ತು
- ವಿವಿಧ ಪರಿಚ್ಛೇದಗಳ ಮೂಲಕ ಹಲವಾರು ವಿನಾಯ್ತಿ/ ಸೌಲಭ್ಯಗಳನ್ನು ನೀಡಲಾಗಿದೆ.
ಈ ಅಂಶಗಳ ಬಗ್ಗೆ ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ನೀಡಿರುವ ವಿವರಣೆಗಳನ್ನು ಈ ಮುಂದೆ ಕೊಡಲಾಗಿದೆ.
ಈ ಕ್ರಮದ ಕಾನೂನುಬದ್ಧತೆ ಕೂಡ ಸಂದೇಹಾಸ್ಪದ
ಪರಿಸರ ರಕ್ಷಣೆ ಕಾಯ್ದೆ, 1986 “ಪರಿಸರವನ್ನು ರಕ್ಷಿಸಲು ಮತ್ತು ಉತ್ತಮಗೊಳಿಸಲು” ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರಕ್ಕೆ ಅಧಿಕಾರವನ್ನು ಕೊಡುತ್ತದೆ. ಆದರೆ ಕರಡು ಇ.ಐ.ಎ.2020, ತದ್ವಿರುದ್ಧವಾಗಿ, ವಿಭಿನ್ನ ವಿಧಾನಗಳಲ್ಲಿ ಈಗಿರುವ ರಕ್ಷಣೆಗಳನ್ನೂ ದುರ್ಬಲಗೊಳಿಸುತ್ತದೆ. ಅಲ್ಲದೆ, ರಾಷ್ಟ್ರೀ ಯ ಹಸಿರು ನ್ಯಾಯಮಂಡಳಿ(ಎನ್.ಜಿ.ಟಿ.) ಮತ್ತು ಸುಪ್ರಿಂ ಕೋರ್ಟ್ ಸೇರಿದಂತೆ ನ್ಯಾಯಾಲಯಗಳು ಕೇಂದ್ರ ಸರಕಾರ ಪರಿಸರ ನಿಯಂತ್ರಣಗಳನ್ನು ದುರ್ಬಲಗೊಳಿಸುವ ಅಥವ ಇತರ ಪ್ರಯತ್ನಗಳ ವಿರುದ್ಧ ನೀಡಿರುವ ತೀರ್ಪುಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದೆ. ಆದ್ದರಿಂದ ಈ ಕ್ರಮದ ಕಾನೂನುಬದ್ಧತೆ ಕೂಡ ಸಂದೇಹಾಸ್ಪದವಾಗಿದೆ, ಇದನ್ನು ನ್ಯಾಯಾಲಯಗಳು ರದ್ದು ಮಾಡಬಹುದು ಕೂಡ.
ಪರಿಸರ ಸಂಬಂಧಿ ಕಾಳಜಿಯಿಲ್ಲ, ಕಾಪೊರೇಟ್ಗಳ ಬಗ್ಗೆಯೇ ಕಾಳಜಿ
ಕರಡು ಇ.ಐ.ಎ. 2020 ಕಾರ್ಪೊರೇಟ್ ಹಿತಾಸಕ್ತಿಗಳನ್ನು ತುಷ್ಟೀಕರಿಸುವ ಪ್ರಸಕ್ತ ಸರಕಾರದ ಒಟ್ಟಾರೆ ಧೋರಣಾ ನಿಲುವಿನ, ಅಂದರೆ ಹೂಡಿಕೆಗೆ ಪ್ರೋತ್ಸಾಹ ಕೊಡುವ ಮತ್ತು ‘ಸುಗಮ ವ್ಯಾಪಾರ-ವ್ಯವಹಾರ’ಕ್ಕೆ ಸೌಕರ್ಯ ಒದಗಿಸುವ ಹೆಸರಲ್ಲಿ ಕಾರ್ಪೊರೇಟ್ ಆಗ್ರಹಗಳನ್ನು ಈಡೇರಿಸುವುದರ ಭಾಗವಾಗಿದೆ. ಇದರಲ್ಲಿ ಉದ್ದಿಮೆಗಳ ಮಂಜೂರಾತಿಗೆ ಅವು ಪಾಲಿಸಬೇಕಾದ ಪರಿಸರ ನಿಯಮಾವಳಿಗಳನ್ನು ಸಡಿಲಗೊಳಿಸುವ ನೀತಿ ನಿರ್ಧಾರಗಳೂ ಸೇರಿವೆ. ಇತ್ತೀಚೆಗೆ ವಾಣಿಜ್ಯ ಗಣಿಗಾರಿಕೆಯನ್ನು ನಿಯಂತ್ರಣಮುಕ್ತಗೊಳಿಸಿ, ಪರಿಸರ ಸಂಬಂಧಿ ನಿಯಮಾವಳಿಗಳನ್ನು ಮತ್ತು ಸಮಯ ಚೌಕಟ್ಟನ್ನು ಸಡಿಲಗೊಳಿಸಲಾಗಿದೆ. ಇವು ಪರಿಸರ ಸಂಬಂಧಿ ಕಾಳಜಿಗಳಿಂದಲ್ಲ, ಕಾಪೊರೇಟ್ಗಳ ಬಗ್ಗೆ ಕಾಳಜಿಯಿಂದ ಮಾಡಿರುವ ಬದಲಾವಣೆಗಳು.
ಉದಾಹರಣೆಗೆ, ‘ಮಾನ್ಯತೆ ಪಡೆದ ಪರಿಸರ ಪ್ರಭಾವ ನಿರ್ಧಾರಣೆ ಸಲಹಾ ಸಂಘಟನೆ’(ಎ.ಸಿ.ಒ.)ಗಳನ್ನು ಕುರಿತಂತೆ ಕಳೆದ ಹಲವು ವರ್ಷಗಳ ಗಂಭೀರ ಅನುಭವಗಳನ್ನು ಈ ಕರಡು ಇ.ಐ.ಎ. 2020 ಗಮನಕ್ಕೆ ತಗೊಂಡಿಲ್ಲ. ಈ ಎ.ಸಿ.ಒ.ಗಳು ಪ್ರಾಜೆಕ್ಟ್ಗಳ ಪ್ರಸ್ತಾವನೆಗಳನ್ನು ಮುಂದಿಟ್ಟವರ ಪರವಾಗಿ ಈ ಇ.ಐ.ಎ. ವರದಿಗಳನ್ನು ಸಲ್ಲಿಸಬೇಕು. ಈ ವರದಿಗಳು ಅತ್ಯಂತ ಅತೃಪ್ತಿಕರವಾಗಿರುತ್ತವೆ, ಅವುಗಳಲ್ಲಿ ಗಟ್ಟಿತನ ಇರುವುದಿಲ್ಲ, ಹೆಚ್ಚಾಗಿ ಬೇರೆ ವರದಿಗಳಿಂದ ನಕಲು ಮಾಡಿದ್ದೇ ಆಗಿರುತ್ತವೆ. ಒಂದೆಡೆ ಪ್ರಾಜೆಕ್ಟಿನ ಪ್ರಸ್ತಾವನೆಯನ್ನು ಕೊಟ್ಟವರ ಹಣವನ್ನು ಪಡೆಯುವ ಈ ಸಂಸ್ಥೆ, ಇನ್ನೊಂದೆಡೆಯಲ್ಲಿ ತನ್ನ ವರದಿಯಲ್ಲಿ ಪರಿಸರ ರಕ್ಷಣೆಯ ಕಾನೂನುಗಳನ್ನು ಪಾಲಿಸಬೇಕು- ಇವೆರಡರ ನಡುವೆ ಹಿತಾಸಕ್ತಿಗಳ ತಾಕಲಾಟದ ಪ್ರಶ್ನೆ ಮತ್ತೆ-ಮತ್ತೆೆ ಎದ್ದೇಳುತ್ತ ಬಂದಿವೆ. ಇದಲ್ಲದೆ ಈ ವರದಿಗಳ ಲಭ್ಯತೆಯ ಪ್ರಶ್ನೆಯೂ ಬಂದಿದೆ. ಇದನ್ನು ಪ್ರಕಟಿಸಬೇಕು ಎಂದು ಕಾನೂನು ಹೇಳುತ್ತದೆ, ಮತ್ತು ಯಾವುದೇ ಪ್ರಾಜೆಕ್ಟ್ ಮಂಜೂರಾತಿ ಮೊದಲು ಆ ಬಗ್ಗೆ ಸಾರ್ವಜನಿಕ ಸಮಾಲೋಚನೆಗಳು ನಡೆಯಬೇಕೆಂದೂ ಹೇಳುತ್ತದೆ. ಅದಕ್ಕೆ ಈ ವರದಿ ಮುಖ್ಯವಾಗುತ್ತದೆ. ಆದರೆ ಸಾಮಾನ್ಯವಾಗಿ ಪೂರ್ಣ ವರದಿಗಳು ಲಭ್ಯವಿರುವಿಲ್ಲ, ಕೇವಲ ಸಾರಾಂಶ ಪ್ರಕಟವಾಗಿರುತ್ತದೆ. ಹಾಗಿರುವಾಗ, ಅಥವ ಅದು ಪಕ್ಷಪಾತದಿಂದ ತುಂಬಿದ್ದರೆ ಅಥವ ಕಳಪೆ ಗುಣಮಟ್ಟದ್ದಾಗಿದ್ದರೆ ಇಂತಹ ಸಮಾಲೋಚನೆ ಸಾಧ್ಯವಾಗುವುದಿಲ್ಲ. ಈ ಪ್ರಕ್ರಿಯೆಯನ್ನು ಉತ್ತಮಪಡಿಸುವ ಅಗತ್ಯವಿತ್ತು, ಇ.ಐ.ಎ. ವರದಿಗಳನ್ನು ಸಾರ್ವಜನಿಕ ಸಂಸ್ಥೆಗಳು ಮತ್ತು ಇತರ ಸ್ವತಂತ್ರ ಸಂಸ್ಥೆಗಳು ಮಾಡುವಂತಾಗಬೇಕಿತ್ತು. ಆದರೆ ಕರಡು ಇ.ಐ.ಎ. 2020 ಈ ಪ್ರಕ್ರಿಯೆಯನ್ನು ಇನ್ನಷ್ಟು ಅಪಾರದರ್ಶಕ ಗೊಳಿಸಿದೆ.
ಆದಿವಾಸಿಗಳ ಹಕ್ಕುಗಳ ಉಪೇಕ್ಷೆ
ಈ ಕರಡಿನ ಅತ್ಯಂತ ಆಕ್ಷೇಪಣೀಯ ಸಂಗತಿ ಎಂದರೆ ಆದಿವಾಸಿಗಳ ಆತಂಕಗಳು ಈ ಇಡೀ ದಸ್ತಾವೇಜಿನ ಭಾಗವಾಗಿಯೇ ಇಲ್ಲ. ವಾಸ್ತವವಾಗಿ ಪರಿಸರ ನಿಯಂತ್ರಣಗಳನ್ನು ದುರ್ಬಲಗೊಳಿಸಿದರೆ, ಅದರಿಂದ ಅತಿ ಹೆಚ್ಚು ಬಾಧಿತರಾಗುವವರು ಇವರೇ. ಆದಿವಾಸಿ, ಬುಡಕಟ್ಟು, ಗ್ರಾಮಸಭಾ, ಅರಣ್ಯ ಹಕ್ಕುಗಳ ಕಾಯ್ದೆ, ಐದನೇ ಶೆಡ್ಯೂಲ್, ಆರನೇ ಶೆಡ್ಯೂಲ್, ಪಿ.ಇ.ಎಸ್.ಎ.(ಪಂಚಾಯತು-ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ- ಕಾಯ್ದೆ)ಈಪದಗಳು ಈ ದಸ್ತಾವೇಜಿನಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಬೇಸ್ಲೈನ್ ಮಾಹಿತಿ ಕುರಿತ ನಿರೂಪಣೆಯಲ್ಲಿ(ಪರಿಚ್ಛೇದ 3(5)), ಅಥವ ಸಾಮಾನ್ಯ ಷ಼ರತ್ತುಗಳು( ಪರಿಚ್ಚೇದ 3.30)ರಲ್ಲಿ ಭೂಸ್ವಾಧೀನಕ್ಕೆ ಸಂಬAಧಪಟ್ಟAತೆ ಆದಿವಾಸಿ ಸಮುದಾಯಗಳ ಸಂವಿಧಾನಿಕ ಮತ್ತು ಕಾನೂನು ಹಕ್ಕುಗಳನ್ನು ಉಪೇಕ್ಷಿಸಲಾಗಿದೆ. ಈ ಅಧಿಸೂಚನೆಯನ್ನು ತಿರಸ್ಕರಿಸಲು ಇದೊಂದೇ ಕಾರಣ ಸಾಕಾಗುತ್ತದೆ.
2010ರ ಕೈಪಿಡಿಯ ಬಗ್ಗೆ ಮೌನವೇಕೆ?
ಇ.ಐ.ಎ.2006ರ ನಾಲ್ಕು ವರ್ಷಗಳ ನಂತರ ಫೆಬ್ರುವರಿ 2010ರಲ್ಲಿ ಹೈದರಾಬಾದಿನ ಎ.ಎಸ್.ಸಿ. ಖನಿಜಗಳ ಗಣಗಾರಿಕೆಗೆ ಒಂದು ಇ.ಐ.ಎ. ಮಾರ್ಗದರ್ಶಕ ಕೈಪಿಡಿಯನ್ನು ತಯಾರಿಸಿತು. ಈಗ ಇ.ಐ.ಎ.2006ರ ಸ್ಥಾನದಲ್ಲಿ ಇ.ಐ.ಎ.2020 ಬರುವುದರೊಂದಿಗೆ ಈ ಕೈಪಿಡಿಯ ಸ್ಥಾನಮಾನವೇನು? ಈಗ ಗಣಿಗಾರಿಕೆಯನ್ನು ವಾಣಿಜ್ಯ ಹಿತಾಸಕ್ತಿಗಳಿಗೆ ತೆರೆಯುತ್ತಿರುವಾಗ ಇದು ಇನ್ನಷ್ಟು ಮಹತ್ವದ್ದಾಗುತ್ತದೆ. ಓಪನ್ ಕಾಸ್ಟಿಂಗ್(ತೆರೆದ ಹೊಂಡ) ಗಣಿಗಾರಿಕೆಗೆ ಭಾರೀ ಮಾನವ ಮತ್ತು ಪರಿಸರ ಬೆಲೆಗಳನ್ನು ತೆರಬೇಕಾಗಿದ್ದರೂ ಸರಕಾರ ಇದನ್ನೇ ಪ್ರಧಾನ ಗಣಿಗಾರಿಕೆ ವಿಧಾನವಾಗಿ ಮಂಜೂರು ಮಾಡುತ್ತಿದೆ. ಕಳೆದ ದಶಕದಲ್ಲಿ ಈÀ ವಿಧಾನದಿಂದಾಗಿ ಇಂತಹ ಗಣಿಗಳ ಸುತ್ತಲಿನ ಗಾಳಿ, ನೀರು ಮತ್ತು ನೆಲೆ ಭಾರಿ ವಿನಾಶವನ್ನು ಕಂಡಿವೆ. ಗಣಿ ಕಾರ್ಮಿಕರು ಇದನ್ನು ‘ಕಸಾಯಿ ಗಣಿಗಾರಿಕೆ’ ಎನ್ನುತ್ತಾರೆ. 2010ರ ಕೈಪಿಡಿಯ ಸ್ಥಾನಮಾನವೂ ಈಗ ಸಂದೇಹಾಸ್ಪದವಾಗಿರುವಾಗ, ಕರಡು ಇ.ಐ.ಎ 2020ರಲ್ಲಿ ಪರಿಸರಕ್ಕೆ ಈ ಹೆಚ್ಚುತ್ತಿರುವ ಬೆದರಿಕೆಯನ್ನು ಎದುರಿಸುವುದಿರಲಿ, ಅದನ್ನು ಗುರುತಿಸುವುದೂ ಇಲ್ಲ. 2010ರ ಕೈಪಿಡಿ ಇಂತಹ ಗಣಿಗಳಲ್ಲಿ ಗಣಗಾರಿಕೆ ಮುಗಿದ ನಂತರ ಅಲ್ಲಿಯ ನೆಲ-ಜಲವನ್ನು ಅದರ ಮೂಲ ನೆಲೆಗೆ ಮರಳಿಸುವ ಹೊಣೆಯನ್ನು ಪ್ರಾಜೆಕ್ಟ್ ದಾರರಿಗೆ ವಿಧಿಸುತ್ತದೆ. ಐದು ವರ್ಷಗಳಿಗೊಮ್ಮೆ ಇದರ ಪರಾಮರ್ಶೆಯನ್ನು ನಡೆಸಬೇಕೆಂದೂ ಹೇಳುತ್ತದೆ. ಈಗ ನಡೆಯುತ್ತಿರುವ ಬೃಹತ್ ಪ್ರಮಾಣದ ಪರಿಸರ ವಿನಾಶದ ಸಂದರ್ಭದಲ್ಲಿ ಇದೊಂದು ತುರ್ತು ಪ್ರಶ್ನೆಯಾಗಿದೆ. ಆದರೆ ಕರಡು ಇ.ಐ.ಎ.2020 ಇವೆಲ್ಲದರ ಬಗ್ಗೆ ಮೌನವಾಗಿದೆ.
ಅಧಿಕಾರದ ಕೇಂದ್ರೀಕರಣ
ಕೆಲವು ಅಂಶಗಳಲ್ಲಿ ಈ ಕರಡು ಇ.ಐ.ಎ.2020 ಅಧಿಕಾರವನ್ನು ಕೇಂದ್ರ ಮಂತ್ರಾಲಯದಲ್ಲಿ ಕೇಂದ್ರೀಕರಿಸುತ್ತದೆ. ಉದಾ: ಪರಿಚ್ಛೇದ 6,7,8 ಮತ್ತು 9ರಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಪರಿಣತ ನಿರ್ಧಾರಣೆ ಸಮಿತಿ ( Expert Appraisal Committee) ಮತ್ತು ತಾಂತ್ರಿಕ ಸಮಿತಿಗಳಿಗೆ ನೇಮಕಗಳ ಅಧಿಕಾರವನ್ನು ಕೇವಲ ಮಂತ್ರಾಲಯಕ್ಕೆ ಕೊಡಲಾಗಿದೆ, ಈ ಮೂಲಕ ಅದು ರಾಜ್ಯ ಮಟ್ಟದ ನೇಮಕಗಳಲ್ಲೂ ಹಸ್ತಕ್ಷೇಪ ಮಾಡುತ್ತದೆ. ಪರಿಸರ ಉಸ್ತುವಾರಿ ರೂಪುರೇಷೆಯನ್ನು ನಿರ್ಧರಿಸುವ ಈ ಸಮಿತಿಗಳಿಗೆ ಸ್ವಾಯತ್ತತೆ ಇರದಿದ್ದರೆ ಅವು ಸರಕಾರ ಬಯಸುವಂತೆ ಮಂಜೂರಾತಿ ನೀಡುವ ರಬ್ಬರ್ ಸ್ಟಾಂಪುಗಳಾಗುತ್ತವೆ. ಪರಿಚ್ಛೇದ 11 ಕೇಂದ್ರಕ್ಕೆ ಒಂದಕಿAತ ಹೆಚ್ಚು ಪರಿಣತರ ಸಮಿತಿಯನ್ನು ನೇಮಿಸುವ ಅಧಿಕಾರವನ್ನೂ ಇದು ಕೊಡುತ್ತದೆ. ಅಂದರೆ ರಾಜ್ಯಮಟ್ಟದ ಇಂತಹ ಸಮಿತಿ ಒಂದು ವೇಳೆ ಕೇಂದ್ರ ಸರಕಾರ ಬಯಸುವಂತೆ ವರ್ತಿಸದಿದ್ದರೆ ಬೇರೊಂದು ಸಮಿತಿಯನ್ನು ನೇಮಿಸಿ ತನಗೆ ಬೇಕಾದ ಮಂಜೂರಾತಿಯನ್ನು ಪಡೆಯಬಹುದು. ವಿವಿಧ ಸಮಿತಿಗಳಿಗೆ ನೇಮಕ ಕೇವಲ ಕೇಂದ್ರ ಮಂತ್ರಾಲಯದ ಅಧಿಕಾರವಾಗುವುದು ಸಲ್ಲದು, ಮತ್ತು ಇಂತಹ ಸಮಿತಿಗಳ ಸದಸ್ಯರ ಸಾಮಾಜಿಕ ಸಂಯೋಜನೆಯೂ ಹೆಚ್ಚು ಪ್ರಜಾಸತ್ತಾತ್ಮಕವಾಗಿರಬೇಕು, ಅಂದರೆ ಸೂಕ್ತ ಪರಿಣತಿ ಇರುವ ಮಹಿಳೆಯರು, ಪರಿಶಿಷ್ಟ ಜಾತಿ, ಬುಡಕಟ್ಟುಗಳ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಬೇಕು.
ಇವೆಲ್ಲವುಗಳಿಂದ, ಈ ಐದು ಅಂಶಗಳು ಸ್ಪಷ್ಟವಾಗುತ್ತವೆ : 1. ಕರಡು ಇ.ಐ.ಎ 2020, ಈ ಮೊದಲು ಕೇಂದ್ರ ಸರಕಾರ ಇ.ಐ.ಎ. ನಿಯಂತ್ರಣಗಳನ್ನು ದುರ್ಬಲಗೊಳಿಸಲು ತಂದ ನಿಯಮಗಳು, ವಿಧಾನಗಳು, ಅಧಿಸೂಚನೆಗಳು ಮತ್ತು ತಿದ್ದುಪಡಿಗಳನ್ನು ರದ್ದು ಮಾಡಿರುವ ನ್ಯಾಯಾಲಯಗಳ ನಿರ್ಧಾರಗಳನ್ನು ತಳ್ಳಿಹಾಕುವ ಒಂದು ಉಪಕರಣವಾಗಿದೆ ; 2. ಇದು ಪ್ರಾಜೆಕ್ಟ್ ಮಂಡನೆಯ ವಿಷಯದಲ್ಲಿ ಈಗಿರುವ ಹಿತಾಸಕ್ತಿಗಳ ತಾಕಲಾಟದ ಪ್ರಶ್ನೆಯನ್ನು ಪರಿಶೀಲಿಸುವುದಿಲ್ಲ; 3. ಖನಿಜಗಳ ಗಣಿಕಾರಿಕೆ ಕುರಿತಾದ ಮಾರ್ಗದರ್ಶಕ ಕೈಪಿಡಿ ಈ ಕರಡಿನ ಭಾಗ ಎಂದು ಖಾತ್ರಿಪಡಿಸದೆ, ನಿರ್ದಿಷ್ಟವಾಗಿ ಓಪನ್ ಕಾಸ್ಟ್ ಗಣಿಗಾರಿಕೆಯ ಮೇಲಿನ ನಿಯಂತ್ರಣಗಳನ್ನು ದುರ್ಬಲಗೊಳಿಸಿದೆ; 4. ಪರಿಸರ ನಿಯಂತ್ರಣದ ಒಟ್ಟು ರಚನೆಯ ಭಾಗಗಳಾಗಿರುವ ವಿವಿಧ ಪರಿಣಾಮ ನಿರ್ಧಾರಣಾ ಮತ್ತು ತಾಂತ್ರಿಕ ಸಮಿತಿಗಳ ಆಯ್ಕೆ ವಿಧಾನವನ್ನು ಬದಲಿಸಿ ಈ ಸಮಿತಿಗಳ ಸ್ವಾಯತ್ತತೆಯನ್ನು, ರಾಜ್ಯಗಳ ಪಾತ್ರವನ್ನು, ಮತ್ತು ಹೆಚ್ಚು ಪ್ರಜಾಸತ್ತಾತ್ಮಕವಾದ ಸಂಯೋಜನೆಯನ್ನು ಕೂಡ ಖಾತ್ರಿಪಡಿಸಬೇಕಾಗಿದೆ; 5. ಆದಿವಾಸಿಗಳ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಹಕ್ಕುಗಳನ್ನು ದುರ್ಬಲಗೊಳಿಸಲಾಗಿದೆ, ಕೆಲವು ವಿಷಯಗಳನ್ನು ನಿರ್ಮೂಲ ಮಾಡಲಾಗಿದೆ.
ನಾಲ್ಕು ಆತಂಕಕಾರಿ ಅಂಶಗಳು
ಇದಲ್ಲದೆ, ಕರಡು ಇ.ಐ.ಎ 2020 ತಂದಿರುವ ಬದಲಾವಣೆಗಳಲ್ಲಿ ಆತಂಕ ಉಂಟು ಮಾಡುವಂತಹ ನಾಲ್ಕು ನಿರ್ದಿಷ್ಟ ಅಂಶಗಳಿವೆ. ಅವೆಂದರೆ:1. ಪ್ರಾಜೆಕ್ಟ್ ಗಳ ಮರು ವರ್ಗಿಕರಣ, ಇದರ ಮೂಲಕ ಬಹಳಷ್ಟು ಪ್ರಾಜೆಕ್ಟುಗಳು ಪರಿಸರ ಪರಿಣಾಮ ನಿರ್ಧಾರಣಾ ಸಮಿತಿಗಳ ಪರೀಕ್ಷಣೆ ಮತ್ತು ಸಾರ್ವಜನಿಕ ಸಮಾಲೋಚನೆಯ ವ್ಯಾಪ್ತಿಗೂ ಒಳಗಾಗದಂತೆ ಮಾಡಲಾಗಿದೆ. 2. ಸಾರ್ವಜನಿಕ ಸಮಾಲೋಚನೆಗಳನ್ನು ಕೆಲವು ವಿಷಯಗಳಲ್ಲಿ ದುರ್ಬಲಗೊಳಿಸಲಾಗಿದೆ, ಇನ್ನು ಕೆಲವು ವಿಷಯಗಳಲ್ಲಿ ತೆಗೆದು ಬಿಡಲಾಗಿದೆ. 3. ಪ್ರಾಜೆಕ್ಟ್ ಗಳಲ್ಲಿ ಉಲ್ಲಂಘನೆಗಳಾದಲ್ಲಿ ಅವನ್ನು ನಂತರಕಾನೂನುಬದ್ಧಗೊಳಿಸುವ ಅಂಶವನ್ನು ಸೇರಿಸಲಾಗಿದೆ. ಮತ್ತು 4. ವಿವಿಧ ಪರಿಚ್ಛೇದಗಳ ಮೂಲಕ ಹಲವಾರು ವಿನಾಯ್ತಿ/ ಸೌಲಭ್ಯಗಳನ್ನು ನೀಡಲಾಗಿದೆ.
• ಕರಡಿನ ಪರಿಚ್ಛೇದ 5 ಹಲವಾರು ವಾತಾವರಣವನ್ನು ಕಲುಷಿತಗೊಳಿಸುವ ಉದ್ದಿಮೆಗಳನ್ನು ಬಿ2 ವರ್ಗಕ್ಕೆ ಸೇರಿಸಿದೆ, ಅಂದರೆ ಅವುಗಳಿಗೆ ಪರಿಣಾಮ ನಿರ್ಧಾರಣೆ ಸಮಿತಿಗಳ ಪರೀಕ್ಷಣೆಗಳು ಬೇಕಿಲ್ಲ, ಪರಿಸರ ಮಂಜೂರಾತಿಯನ್ನು ಪಡೆಯಬೇಕಾಗಿಲ್ಲ, ಮತ್ತು ಸಾರ್ವಜನಿಕ ಸಮಾಲೋಚನೆಗೂ ಒಳಗಾಗಬೇಕಿಲ್ಲ. ಇದು 2006ರ ಅಧಿಸೂಚನೆ ಮತ್ತು ಪರಿಸರ ಕಾಯ್ದೆಯ ಉಲ್ಲಂಘನೆಯೇ ಅಗುತ್ತದೆ. ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ವಲಯವಂತೂ ಸುಮಾರಾಗಿ ಎಲ್ಲ ಪರಿಸರ ಸಂಬಂಧಿ ನಿಯಂತ್ರಣಗಳಿಂದ ವಿನಾಯ್ತಿ ಪಡೆಯುತ್ತವೆ. 50ಸಾವಿರ ಚದರ ಮಿಟರಿನಿಂದ ಒಂದೂವರೆ ಲಕ್ಷ ಚದರ ಮೀಟರ್ ಅಳತೆಯ ನಿರ್ಮಾಣಗಳು ಮಾತ್ರವೇ ಪರಿಣಾಮ ನಿರ್ಧಾರಣಾ ಸಮಿತಿಯ ಪರೀಕ್ಷಣೆಗೆ ಒಳಗಾಗುತ್ತವೆ. ಈ ಹಿಂದೆ ಇ.ಐ.ಎ.2006 ಕ್ಕೆ ತಿದ್ದುಪಡಿ ತಂದು ಈ ಚದರಳತೆಯ ಪ್ರಾಜೆಕ್ಟ್ಗಳಿಗೆ ಈ ರೀತಿಯ ವಿನಾಯ್ತಿ ನೀಡಿದ್ದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್.ಜಿ.ಟಿ.) ರದ್ದು ಮಾಡಿತ್ತು. ಕೇಂದ್ರ ಸರಕಾರ ಇದರ ವಿರುದ್ಧ ಸುಪ್ರಿಂ ಕೊರ್ಟಿಗೆ ಅಪೀಲು ಹೋದಾಗ ಅದು ಎನ್.ಜಿ.ಟಿ. ನಿರ್ಧಾರವನ್ನು ಎತ್ತಿ ಹಿಡಿಯಿತು. ಈ ಕರಡಿನ ಮೂಲಕ ಕೇಂದ್ರ ಸರಕಾರ ಅದನ್ನು ಬದಿಗೆ ತಳ್ಳುವ ಪ್ರಯತ್ನ ಮಾಡಿದೆ. ಇನ್ನೊಂದು ಅತ್ಯಂತ ಆಕ್ಷೇಪಾರ್ಹ ಸಂಗತಿಯೆಂದರೆ ತೈಲ ಮತ್ತು ಅನಿಲ ಶೋಧನೆಯನ್ನೂ ಈ ಬಿ2 ವರ್ಗಕ್ಕೆ ಸೇರಿಸಲಾಗಿದೆ. ಇತ್ತೀಚೆಗೆ ಅಸ್ಸಾಂನ ಬಾಗ್ಜನ್ ತೈಲ ಬಾವಿಯಲ್ಲಿ ಸ್ಫೋಟದ ಸ್ವಲ್ಪವೇ ಮೊದಲು ದಿಬ್ರು ಸೈಖೋವ್ ರಾಷ್ಟ್ರೀಯ ಉದ್ಯಾನದಲ್ಲಿ ಪರಿಸರ ಮಂಜೂರಾತಿಯನ್ನು ಕೊಡಲಾಗಿತ್ತು ಎಂಬುದನ್ನು ಗಮನಿಸಬಹುದು. ಇಂತಹ ಪರಿಯೋಜನೆಗಳನ್ನು ಸಾರ್ವಜನಿಕ ಸಮಾಲೋಚನೆಯಿಂದ ತಪ್ಪಿಸಲಿಕ್ಕಾಗಿ, ಅವನ್ನು ಬಿ2 ವರ್ಗಕ್ಕೆ ಸೇರಿಸಲಾಗಿದೆ. ಇವು ಕಾರ್ಪೊರೇಟ್ ಹಿತಗಳನ್ನು ಈಡೇರಿಸಲಿಕ್ಕಾಗಿ ಮಾತ್ರ.
• ಪರಿಚ್ಛೇದ 5.7 ‘ಆಯಕಟ್ಟಿ’ನ ವಿಧ ಎಂಬುದರ ಬಗ್ಗೆ ಹೇಳುತ್ತದೆ. ಇಲ್ಲಿ ಆಯಕಟ್ಟಿನ ಉದ್ದಿಮೆ ಏನು ಎಂಬುದರ ನಿರೂಪಣೆ ಅಸ್ಪಷ್ಟವಾಗಿದೆ. ಇದರಿಂದಾಗಿ ಇದರಲ್ಲಿ ರಕ್ಷಣಾ ಮತ್ತು ಭದ್ರತಾ ಪ್ರಾಜೆಕ್ಟುಗಳಲ್ಲದೆ ಬೇರೆ ಉದ್ದಿಮೆಗಳನ್ನೂ ಸೇರಿಸಬಹುದು. ವಿದ್ಯುತ್ ಉತ್ಪಾದನೆ, ಖಾಸಗಿ ಬಂದರು ನಿರ್ಮಾಣ ಮುಂತಾದವನ್ನೂ ಈ ವರ್ಗಕ್ಕೆ ಸೇರಿಸಿ ಅವುಗಳಿಗೆ ಪರಿಣತರ ಮಂಜೂರಾತಿ, ಸಾರ್ವಜನಿಕ ಸಮಾಲೋಚನೆಯಿಂದ ವಿನಾಯ್ತಿ ಕೊಡಬಹುದು. ಇಲ್ಲಿರುವ ಪ್ರಶ್ನೆ, ರಾಷ್ಟ್ರೀಯ ಭದ್ರತೆಯ ಆವಶ್ಯಕತೆಗಳ ಬಗ್ಗೆ ನಾಗರಿಕರಿಗೂ ಗೊತ್ತಿದೆ, ಆದರೆ ಅಂತಹ ಪ್ರಾಜೆಕ್ಟುಗಳೂ ಪರಿಸರದ, ಕಾಳಜಿ, ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದು ಒಳ್ಳೆಯದಲ್ಲವೇ?
• ಪರಿಚ್ಛೇದ 26 ಕೂಡ ಮರು ವರ್ಗೀಕರಣದ ಮೂಲಕ ಪರಿಸರ ಮಂಜೂರಾತಿಯಿAದ ವಿನಾಯ್ತಿ ಕೊಡುತ್ತದೆ. ಇದರಲ್ಲಿ ಕೈಕಸಬುದಾರರು ಮತ್ತು ಇತರ ಸ್ಥಳೀಯ ಸಮುದಾಯಗಳವರು ಮರಳು, ಮಣ್ಣು, ಮರಮಟ್ಟು ಮುಂತಾದವುಗಳನ್ನು ಸ್ವಂತ ಬಳಕೆಗೆ ಮುಕ್ತವಾಗಿ ಪಡೆಯಬಹುದು ಎಂದು ಹೇಳುತ್ತಲೇ, ಹೀಗೆ ಪಡೆಯಬಹುದಾದವರ ಪಟ್ಟಿಯನ್ನು ವಿಸ್ತರಿಸಿ ಅದರಲ್ಲಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಸಾಬೀತಾಗಿರುವ ಇತರ ಕೆಲವು ಉದ್ದಿಮೆಗಳನ್ನೂ ಸೇರಿಸಲಾಗಿದೆ. ಸೌರ ಪಾರ್ಕ್, ಸೌರೋಷ್ಣ ಪ್ರಾಜೆಕ್ಟ್, ಸಣ್ಣ ನೀರಾವರಿ, ಸ್ಫೊಟಕಗಳು ಮುಂತಾದ ರಕ್ಷಣಾ ಉದ್ದಿಮೆಗಳೂ ಈ ಪಟ್ಟಿಯಲ್ಲಿವೆ. ಈ ಮರು ವರ್ಗೀಕರಣದ ಅಗತ್ಯವಿಲ್ಲ, ಮತ್ತು ಕುಂಬಾರರು ಮುಂತಾದ ಸ್ಥಳೀಯ ಸಮುದಾಯಗಳವರನ್ನು ಬಿಟ್ಟು ಬೇರೆ ಯಾರಿಗೂ ಈ ಹೆಸರಲ್ಲಿ ವಿನಾಯ್ತಿಗಳನ್ನು ಕೊಡಬೇಕಾಗಿಲ್ಲ.
• ಸಾರ್ವಜನಿಕ ಸಮಾಲೋಚನೆ ಕುರಿತಾದ ಪರಿಚ್ಛೇದ 14 ವಿವಿಧ ಪ್ರಾಜೆಕ್ಟ್ ಗಳಿಂದ ಬಾಧಿತರಾಗುವ ಜನಗಳ ಹಕ್ಕುಗಳಿಗೆ ಘೋರ ಅನ್ಯಾಯ ಮಾಡಿದೆ. ಪರಿಚ್ಛೇದ 12ಎ ಯಿಂದ ಜಿ ವರೆಗೆ ಸಾರ್ವಜನಿಕ ಸಮಾಲೋಚನೆಯಿಂದ ವಿನಾಯ್ತಿ ಕೊಡುವ ಉದ್ದಿಮೆಗಳನ್ನು ಪಟ್ಟಿ ಮಾಡಲಾಗಿದೆ. 50ಶೇ.ದ ವರೆಗೆ ವಿಸ್ತರಣೆ ಮತ್ತು ಆಧುನೀಕರಣಕ್ಕೂ ಸಾರ್ವಜನಿಕ ಸಮಾಲೋಚನೆಗಳ ಅಗತ್ಯವಿಲ್ಲೆಂದು ಹೇಳಲಾಗಿದೆ. ಪರಿಚ್ಛೇದ 14.8 ‘ಸ್ಥಳೀಯ ಸನ್ನಿವೇಶ’ ದ ಆಧಾರದಲ್ಲಿ ಸಾರ್ವಜನಿಕ ಸಂವಾದವನ್ನು ರದ್ದು ಮಾಡಬಹುದು ಎನ್ನುತ್ತದೆ. 14.9 ಇ.ಐ.ಎ. ವರದಿಯನ್ನು ಪಡೆಯಲು ಷರತ್ತುಗಳನ್ನು ವಿಧಿಸುತ್ತದೆ. ಸ್ಪಂದನೆಗಳಿಗೆ ಇರುವ 30 ದಿನಗಳ ಅವಧಿಯನ್ನು 60 ದಿನಗಳಿಗೆ ವಿಸ್ತರಿಸಬೇಕಿತ್ತು, ಬದಲಿಗೆ 20 ದಿನಗಳಿಗೆ ಇಳಿಸಲಾಗಿದೆ. ಇವೆಲ್ಲ ಅನ್ಯಾಯಪೂರ್ಣ ಮತ್ತು ಪ್ರಜಾಪ್ರಭುತ್ವ-ವಿರೋಧಿ ಅಂಶಗಳು. ರಕ್ಷಣಾ ಪ್ರಾಜೆಕ್ಟುಗಳೂ ಸೇರಿದಂತೆ ಪ್ರತಿಯೊಂದೂ ಸಾರ್ವಜನಿಕ ಸಮಾಲೋಚನೆಗೆ ಒಳಪಡಬೇಕು, ಮತ್ತು ಈ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಬೇಕು. ಐದನೇ ಮತ್ತು ಆರನೇ ಶೆಡ್ಯೂಲ್ ಪ್ರದೇಶಗಳಲ್ಲಿನ ಪ್ರಾಜೆಕ್ಟ್ ಗಳ ಬಗ್ಗೆ ಗ್ರಾಮಸಭಾದೊಂದಿಗೆ ಸಮಾಲೋಚನೆ ನಡೆಸಬೇಕು. ಭೂಸ್ವಾಧೀನ ಕಾಯ್ದೆ 2013ರಲ್ಲಿ ಇರುವಂತೆ ಗ್ರಾಮಸಭಾಗಳೊಂದಿಗೆ ಸಮಾಲೋಚನೆಗಳಿಗೆ ಒಂದು ಪ್ರತ್ಯೇಕ ವಿಧಾನವನ್ನು ಅಧಿಸೂಚನೆ ಒಳಗೊಂಡಿರಬೇಕು. ಆದಿವಾಸಿ ಸಮುದಾಯಗಳನ್ನು ತಟ್ಟುವ ಪ್ರಾಜೆಕ್ಟ್ಗಳಲ್ಲಿ ಸಮಾಲೋಚನೆ ಮಾತ್ರವಲ್ಲ, ಸಮ್ಮತಿಯನ್ನು ಪಡೆಯುವ ಪ್ರಶ್ನೆಯೂ ಇದೆ.
• ಕಾನೂನು ಉಲ್ಲಂಘನೆ ಕುರಿತಾದ ಪರಿಚ್ಛೇದ 22.1 ರಿಂದ 15, ಉಲ್ಲಂಘನೆ ನಡೆಸುವ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಹೊಡೆಯುವ ಅಪರಾಧಿಗಳಿಗೆ ನೆರವು ನೀಡುವಲ್ಲಿ ಅಸಾಧಾರಣ ಮಟ್ಟದ ವರೆಗೆ ಹೋಗಿದೆ. ಪರಿಚ್ಛೇದ 23 ಅಧಿಸೂಚನೆಯನ್ನು ಪಾಲಿಸದೆ ಇದ್ದಾಗ ಅವನ್ನು ಮನ್ನಾ ಮಾಡುವುದನ್ನು ಕುರಿತಾದ್ದು. ಉಲ್ಲಂಘನೆಗಳನ್ನು ವರದಿ ಮಾಡುವ ಸ್ಥಳೀಯ ಸಮುದಾಯಗಳ ಹಕ್ಕನ್ನು ಮಾನ್ಯ ಮಾಡಲಾಗಿಲ್ಲ. ಉಲ್ಲಂಘನೆಗಳಿಗೆ ಸ್ವಲ್ಪ ದಂಡ ತೆತ್ತು ಎಲ್ಲವನ್ನೂ ಹಾಗೆಯೇ ಮುಂದುವರೆಸಲು ಅವಕಾಶ ಮಾಡಿಕೊಡಲಾಗಿದೆ. ಈ ರೀತಿ ಉಲ್ಲಂಘನೆಗಳು ನಡೆದ ಮೇಲೆ ಅವನ್ನು ಕಾನೂನುಬದ್ಧಗೊಳಿಸುವ ಕ್ರಮವನ್ನು ಎನ್.ಜಿ.ಟಿ ಮತ್ತು ಸುಪ್ರಿಂ ಕೋರ್ಟ್ ಪರಿಸರ ಕಾಯ್ದೆಯ ಉಲ್ಲಂಘನೆ ಎಂದು ರದ್ದು ಮಾಡಿರುವ ತೀರ್ಪುಗಳಿವೆ. ಈ ಪರಿಚ್ಛೇದಗಳನ್ನು ಸಂಪೂರ್ಣವಾಗಿ ಕೈ ಬಿಡಬೇಕಾಗಿದೆ. ಕ್ರಿಮಿನಲ್ ಉಲ್ಲಂಘನೆಗಳನ್ನು ಹೀಗೆ ಮಾಫಿ ಮಾಡುವುದಾದರೆ ಪರಿಸರ ನಿಯಂತ್ರಣಗಳಾದರೂ ಏಕೆ ಬೇಕು?
• ಈ ಕರಡಿನಲ್ಲಿ ಪ್ರಾಜೆಕ್ಟ್ ಪ್ರಾಯೋಜಕರಿಗೆ ಪ್ರಯೋಜನಕಾರಿಯಾದ, ಆದರೆ ಜನರಿಗೆ ಮತ್ತು ಪರಿಸರಕ್ಕೆ ಅತ್ಯಂತ ಮಾರಕವಾದ ಹಲವಾರು ಪರಿಚ್ಛೇದಗಳಿವೆ. ಪರಿಚ್ಛೇದ 3(16) ಕಾರ್ಪೊರೇಟ್ ಪರಿಸರ ಹೊಣೆಗಾರಿಕೆಯನ್ನು ಬಹಳ ಸಡಿಲವಾಗಿ ನಿರೂಪಿಸುತ್ತದೆ, 19.1 ಪರಿಚ್ಚೇದವಂತೂ ವಿಚಿತ್ರವಾಗಿದೆ, ‘ನಿರ್ಮಾಣ ಅಥವ ಸ್ಥಾಪನೆ ಹಂತ’ ಎಂಬುದನ್ನು ಈಗಿರುವ ಗರಿಷ್ಟ 30 ವರ್ಷಗಳಿಂದ 50 ವರ್ಷಗಳ ವರೆಗೂ ವಿಸ್ತರಿಸಿದೆ. ಇದು ಖಾಸಗಿ ಗಣಿ ಕಂಪನಿಗಳಿಗೆ ದೇಶದ ನೈಸರ್ಗಿಕ ಸಂಪತ್ತುಗಳ ಇನಾಮು ಅಲ್ಲದೆ ಬೇರೇನೂ ಅಲ್ಲ. ಪರಿಚ್ಛೇದ 20.5 ಶರತ್ತುಗಳ ಪಾಲನೆಯ ಬಗ್ಗೆ ವಾರ್ಷಿಕ ವರದಿಗಳನ್ನು ಸಲ್ಲಿಸದವರಿಗೆ ಉದಾರವಾಗಿದೆ. ವಾಸ್ತವವಾಗಿ ಶರತ್ತುಗಳ ಪಾಲನೆಯಾಗದಿರುವುದು ಸ್ಥಳೀಯ ಸಮುದಾಯಗಳಿಗೆ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ಒಂದು ಪ್ರಮುಖ ಕಾರಣ. ಪರಿಚ್ಛೇದ 24.3 ಲೀಸ್ ಪಡೆದವರು ಜಿಲ್ಲಾ ಖನಿಜ ನಿಧಿಯನ್ನು ಇ.ಐ.ಎ ಜಾರಿಗೆ ಬಳಸಿಕೊಳ್ಳಲು ಅವಕಾಶ ನೀಡುತ್ತದೆ. ಈ ನಿಧಿಯನ್ನು ಸ್ಥಾಪಿಸಿರುವುದು ಖನಿಜಗಳ ಗಣಿಗಾರಿಕೆಗೆ ಅವಕಾಶ ನೀಡಿರುವಲ್ಲಿ ಸ್ಥಳೀಯ ಸಮುದಾಯಗಳ ಅಭಿವೃದ್ಧಿಯಲ್ಲಿ ಅಪಾರ ಕಂದರವನ್ನು ತುಂಬಲಿಕ್ಕಾಗಿ. ಅದನ್ನು ಲೀಸ್ದಾರರ ಅಗತ್ಯಗಳಿಗೆ ತಿರುಗಿಸುವುದು ಈ ಪರಿಕಲ್ಪನೆಗೇ ವಿರುದ್ಧವಾದದ್ದು. ಪರಿಚ್ಛೇದ 25 ಪರಿಸರ ಮಂಜೂರಾತಿ ಅಥವ ಪರಿಸರ ಅನುಮತಿಯ ವಿರುದ್ಧ ಎನ್.ಜಿ.ಟಿಗೆ ಅಪೀಲು ಹೋಗಲು ಕೇವಲ 30 ದಿನಗಳನ್ನು ಕೊಟ್ಟಿದೆ. ಇದನ್ನು ಎರಡರಿಂದ ಮೂರು ತಿಂಗಳ ವರೆಗೆ ವಿಸ್ತರಿಸಬೇಕಾಗಿದೆ.
ಒಟ್ಟಿನಲ್ಲಿ, ಈ ಕರಡು ಅಧಿಸೂಚನೆ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರಕಾರದ ಕಾರ್ಪೊರೇಟ್ಗಳ ಪರವಾದ ಅಜೆಂಡಾಕ್ಕೆ ಅನುಗುಣವಾಗಿಯೇ ಇದೆ. ಕರಡು ಇ.ಐ.ಎ. ಯ ಕಾಳಜಿ ಜನಗಳ ಹಿತಾಸಕ್ತಿಗಳೂ ಅಲ್ಲ, ಅಥವ ಪರಿಸರದ ರಕ್ಷಣೆಯೂ ಅಲ್ಲ. ನಿಜ ಹೇಳಬೇಕೆಂದರೆ ಅದು ತಪ್ಪು ಕೃತ್ಯಗಳಿಗೆ ಮತ್ತು ಉಲ್ಲಂಘನೆಗಳಿಗೆ ಲೈಸೆನ್ಸ್ ಕೊಡುತ್ತದೆ.
ಈ ಕರಡು ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು. ಸಂಬಂಧಪಟ್ಟ ಎಲ್ಲರ ಅಭಿಪ್ರಾಯಗಳನ್ನು ತೆಗೆದುಕೊಂಡು ಇದರ ಮರುಕರಡನ್ನು ತಯಾರಿಸಬಹುದು. ಇದು ಪರಿಸರ, ಜನತೆ ಮತ್ತು ದೇಶದ ಹಿತದೃಷ್ಟಿಯಿಂದ ಒಳ್ಳೆಯದು.