ಕೋವಿಡ್ ಅವಧಿಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆಗೆ ಪರ್ಯಾಯ-ಪರಿಹಾರಗಳನ್ನು ರೂಪಿಸಲು ಒತ್ತಾಯಿಸಿ ಮನವಿ

ದಿನಾಂಕ: 19-07-2020

ಮಾನ್ಯ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ,

ಮಾನ್ಯರೆ

ಕೊರೊನಾ ಹೆಸರಿನ ಗುರುತಿಲ್ಲದ ವೈರಾಣುವೊಂದು ವಿಶ್ವದ ಹಲವು ರಾಷ್ಟçಗಳನ್ನು ತಲ್ಲಣಗೊಳಿಸಿದೆ. ಇದರ ಅಪಾಯಕ್ಕೆ ತುತ್ತಾದ ದೇಶಗಳಲ್ಲಿ ಆರ್ಥಿಕ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳು ವಿಪರೀತವಾಗಿವೆ. ಜೀವನ ನಿರ್ವಹಣೆಗೆ ಅಗತ್ಯವಾದ ಆದಾಯಕ್ಕೆ ಕತ್ತರಿ, ಕೆಲಸ ಕಳೆದುಕೊಳ್ಳುವ ಭೀತಿ, ಆರ್ಥಿಕ ಸಂಕಷ್ಟಗಳ ಜೊತೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹಲವು ಪಟ್ಟು ಹೆಚ್ಚಿವೆ ಎಂದು ವಿಶ್ವಸಂಸ್ಥೆಯ ವರದಿಗಳೇ ಹೇಳುತ್ತಿವೆ. ಇವು ಮಹಿಳೆಯರ ಬದುಕನ್ನು ತಲ್ಲಣಗೊಳಿಸಿವೆ.

lockdownಭಾರತದಲ್ಲಿ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ದೇಶದ ಮಹಿಳಾ ಮತ್ತು ಮಕ್ಕಳ ಸಚಿವರೇ ಒಪ್ಪಿಕೊಂಡಂತೆ ಲಾಕ್ ಡೌನ್ ಅವಧಿಯಲ್ಲಿ 89000 ಮಹಿಳೆಯರನ್ನು ವಿವಿಧ ರೀತಿಯಲ್ಲಿ ರಕ್ಷಿಸಲಾಗಿದೆಯಂತೆ. ಇದು ಲೆಖ್ಖಕ್ಕೆ ಸಿಕ್ಕ ಸಂಖ್ಯೆಯಾದರೆ, ಪೀಡಕ ಮನೆಯಲ್ಲೇ ಇದ್ದ ಕಾರಣದಿಂದ ಸಹಾಯದ ಮೊರೆ ಹೋಗುವ ಯಾವ ದಾರಿಯೂ ಇಲ್ಲದೇ ಅವಡುಗಚ್ಚಿ ಸಹಿಸಿಕೊಂಡ ಮಹಿಳೆಯರ ಸಂಖ್ಯೆ ಇದರ ಎಷ್ಟೋ ಪಟ್ಟು ಹೆಚ್ಚಿರುತ್ತದೆ ಎಂಬುದು ಸ್ವಯಂವೇದ್ಯ. ರಾಜ್ಯದಲ್ಲಿ ಕೂಡಾ ಇದೇ ಪರಿಸ್ಥಿತಿ ಇದೆ. ಈ ಅವಧಿಯಲ್ಲಿ 50-60% ದೌರ್ಜನ್ಯಗಳು ಹೆಚ್ಚಿವೆ. ಸಹಾಯವಾಣಿಗಳಿಗೆ ಈ ಅವಧಿಯಲ್ಲಿ ಸಹಾಯ ಕೋರಿ ಬಂದ ಕರೆಗಳು ಹಿಂದಿನ ದಿನಗಳಿಗಿಂತ ಹೆಚ್ಚು ಎಂದು ವರದಿಗಳು ಹೇಳುತ್ತಿವೆ.

ಕೊವಿಡ್-19 ರ ಕಾರಣದಿಂದಾಗಿ ಲಾಕ್‌ಡೌನ್ ಘೊಷಿಸಲಾಯಿತು. ದುಡಿಯುವ ಜನರ ಬದುಕಿಗೆ ಯಾವುದೇ ರೀತಿಯ ವ್ಯವಸ್ಥೆಗೆ ಅವಕಾಶವೇ ನೀಡದೇ ಏಕಾಏಕಿ ಮಾಡಿದ ಲಾಕ್‌ಡೌನ್ ಘೋಷಣೆಯಿಂದಾಗಿ ಜನ ಕಂಗಾಲಾದರು. ಒಮ್ಮಲೇ ಕುಸಿದ ಕುಟುಂಬದ ಆರ್ಥಿಕ ಸ್ಥಿತಿ, ಕೆಲಸ ಕಳೆದುಕೊಳ್ಳುವ ಆತಂಕ, ಆದಾಯದ ಯಾವ ದಾರಿಯೂ ಇಲ್ಲದ ಸ್ಥಿತಿಗೆ ನೂಕಲ್ಪಟ್ಟ ಕುಟುಂಬಗಳು ಸಾವಿರಾರು. ಒಂದೆಡೆ ಕುಟುಂಬ ನಿರ್ವಹಣೆಯ ಒತ್ತಡ ಇನ್ನೊಂದೆಡೆ ಅತಂತ್ರ ಭವಿಷ್ಯದ ಕಳವಳಗಳಿಂದ ಉಂಟಾದ ಮಾನಸಿಕ ಕ್ಷೋಭೆಯೂ ಕೂಡ ಹಿಂಸಾಚಾರಕ್ಕೆ ಹೆಚ್ಚಲು ಕಾರಣವಾಗಿದೆ. ಇಂಥಹ ಸ್ಥಿತಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಳುವ ಸರ್ಕಾರದ ನಿರ್ಲಕ್ಷ ಧೋರಣೆಯೇ ಕಾರಣವೆಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ಸ್ ವಾದಿ)ಯು ಅಭಿಪ್ರಾಯ ಪಡುತ್ತದೆ. ರಾಜ್ಯದಲ್ಲಿ ಇರುವ ಮಹಿಳಾ ಆಯೋಗ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗೃಹ ಇಲಾಖೆಗಳು ಹೆಚ್ಚಿರುವ ದೌರ್ಜನ್ಯಗಳ ಬಗ್ಗೆ ತುಟಿ ಬಿಚ್ಚದಿರುವುದು ನಮ್ಮ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತದೆ.

ಬೆಂಗಳೂರು ಮಹಾನಗರದಲ್ಲಿಯೇ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ದೂರು ದಾಖಲಿಸಿಕೊಳ್ಳಲು ಪೋಲೀಸ್ ಠಾಣೆಗಳಲ್ಲಿ ಹಿಂದೆಮುಂದೆ ನೋಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೋವಿಡ್ ಕಾರಣದಿಂದ ಯಾರನ್ನೂ ಬಂಧಿಸುವ ಹಾಗಿಲ್ಲವೆಂದು ಪೋಲೀಸ್ ಠಾಣೆಗಳಲ್ಲಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಮಾನವ ಹಕ್ಕುಗಳ ಹೋರಾಟಗಾರರು, ಪ್ರಗತಿಪರ ಚಿಂತಕರನ್ನು ದುರುದ್ದೇಶಪೂರಿತವಾಗಿ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಬಂಧಿಸಿ ಜೈಲಿಗಟ್ಟಲು ತಡೆಯಿಲ್ಲದ ಈ ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರನ್ನು ಬಂಧಿಸಲು ಕುಂಟು ನೆಪ ಹೇಳಲಾಗುತ್ತಿದೆ.

ಈ ಅವಧಿಯಲ್ಲಿ ಹಲವಾರು ಜಿಲ್ಲೆಗಳಲ್ಲಿ ಬಾಲ್ಯ ವಿವಾಹಗಳು ನಡೆದಿವೆ. ಮರ್ಯಾದೆಯ ಹೆಸರಿನ ಹತ್ಯೆಗಳು ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಹಾಸನ ಜಿಲ್ಲೆಯ ಆಲ್ದೂರಿನಲ್ಲಿ ನಡೆದಿವೆ.

ಕೋವಿಡ್ ಅವಧಿಯಲ್ಲಿ ಕೆಲಸವಿಲ್ಲದೆ ಆದಾಯವಿಲ್ಲದಂತಾಗಿ ಅಸಂಘಟಿತ ವಿಭಾಗಗಳಲ್ಲಿನ ಲಕ್ಷಾಂತರ ಮಹಿಳೆಯರು ಕಂಗಾಲಾಗಿದ್ದಾರೆ. ಅದರಲ್ಲೂ ಮನೆಗೆಲಸಗಾರರು, ಬೀದಿಬದಿ ವ್ಯಾಪಾರಿಗಳು, ಗೃಹಾಧಾರಿತ ಆದಾಯದಾಯಕ ಚಟುವಟಿಕೆಗಳಲ್ಲಿ ತೊಡಗಿದ್ದವರು ಕನಿಷ್ಟ ಆದಾಯವಿಲ್ಲದೆ ಮನೆ ಬಾಡಿಗೆ ಕಟ್ಟಲಾಗದೆ, ಆರೋಗ್ಯಕ್ಕೆ ಹಣಕಾಸಿಲ್ಲದೆ, ಕರೆಂಟ್ ಬಿಲ್, ನೀರಿನ ಬಿಲ್ ಕಟ್ಟಲಾಗದೆ, ಮಕ್ಕಳ ಶಾಲಾ ಶುಲ್ಕಗಳನ್ನು ಪಾವತಿಸಲಾಗದೆ ಹಲವು ರೀತಿಯ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಕುಟುಂಬದ ಪೂರ್ತಿ ಹೊರೆಹೊತ್ತ ಒಂಟಿ ಮಹಿಳೆಯರು, ಗಂಡ ಸತ್ತವರು, ದೇವದಾಸಿ ಮಹಿಳೆಯರು ಅಕ್ಷರ ಸಹಃ ಎಲ್ಲ ತರಹದ ಅಸುರಕ್ಷತೆಯನ್ನು ಈ ಅವಧಿಯಲ್ಲಿ ಎದುರಿಸುತ್ತಿದ್ದಾರೆ.

ಸ್ವಸಹಾಯ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಾಗಿ ಸಣ್ಣ ಪುಟ್ಟ ಚಟುವಟಿಕೆಗಳ ಮೂಲಕ ಅಲ್ಪ ಸ್ವಲ್ಪ ಆದಾಯ ಗಳಿಸಿ ಜೀವನ ನಿರ್ವಹಿಸುತ್ತಿದ್ದ ಮಹಿಳೆಯರ ಆದಾಯ ನಿಂತಿದೆ. ಇದರಿಂದಾಗಿ ಜೀವನವೇ ದುಸ್ತರವಾಗಿರುವ ಸಂದರ್ಭದಲ್ಲಿ ಬ್ಯಾಂಕ್, ಸಹಕಾರ ಸಂಘಗಳು, ಎಂ.ಎಫ್.ಐ ಗಳಿಂದ ಪಡೆದ ಸಾಲ, ಬಡ್ಡಿ ತೀರಿಸುವ ಯಾವ ದಾರಿಯೂ ಇಲ್ಲದಾಗಿದೆ. ಭಾರತೀಯ ರಿಜರ್ವ್ ಬ್ಯಾಂಕಿನ ಆದೇಶವನ್ನೂ ಮೀರಿ ಎಂ.ಎಫ್.ಐಗಳು, ಧರ್ಮಸ್ಥಳ ಸಂಘಗಳು ಸಾಲ ಮತ್ತು ಬಡ್ಡಿ ವಸೂಲಿಗೆ ಮುಂದಾಗಿವೆ. ಸಾಲ ತೀರಿಸಲು ಅಶಕ್ತರಾದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಬೆದರಿಕೆ ಒಡ್ಡಲಾಗುತ್ತಿರುವಂತಹ ಸನ್ನಿವೇಶ ರಾಜ್ಯ ಸರ್ಕಾರದ ಗಮನದಲ್ಲಿಲ್ಲ ಎನ್ನುವುದು ಖಂಡನೀಯ.

ಬೆಳೆದ ಬೆಳಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತಾಪಿ ಕುಟುಂಬಗಳು ಕಂಗಾಲಾಗಿವೆ. ರೈತಾಪಿ ಕೆಲಸವನ್ನೇ ನಂಬಿಕೊಂಡಿರುವ ಕೃಷಿ ಕೂಲಿಕಾರ ಮಹಿಳೆಯರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಜನರ ಕೊಳ್ಳುವ ಸಾಮರ್ಥ್ಯ ಈ ಅವಧಿಯಲ್ಲಿ ತೀವ್ರವಾಗಿ ಕುಸಿದು ಅದು ಮಹಿಳೆ ಮತ್ತು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆರ್ಥಿಕ ಸಮಸ್ಯೆಗಳು ಒಂದೆಡೆಯಾದರೆ ಮಹಿಳೆ ಎಂಬ ಕಾರಣಕ್ಕೆ, ಅವಳು ಕುಟುಂಬಗಳಲ್ಲಿ, ದುಡಿಮೆಯ ಸ್ಥಳಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕನಿಷ್ಟ ಗಮನವನ್ನು ಸರ್ಕಾರ ತೋರಿಸದಿರುವುದನ್ನು ಸಿ.ಪಿ.ಐ( ಎಂ) ಪ್ರಶ್ನಿಸುತ್ತದೆ.

ಕೋವಿಡ್ ಸಂದರ್ಭದ ಪರಿಹಾರ ಪ್ಯಾಕೇಜ್ ಗಳಲ್ಲಿ ಲಿಂಗ ಸಂವೇದನೆಯ ಕೊರತೆ ಎದ್ದು ಕಾಣುತ್ತಿದೆ. ಇದನ್ನು ಸರಿಪಡಿಸಲು ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸಬೇಕು. ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಲು ಮುಂದಾಗಬೇಕೆAದು ಸಿ.ಪಿ.ಐ(ಎಂ) ಒತ್ತಾಯಿಸುತ್ತದೆ.
ಮಹಿಳೆಯರ ಮೇಲಿನ ಹಿಂಸೆಯ ತಡೆಗಾಗಿ ಸಿ.ಪಿ.ಐ (ಎಂ) ಹಕ್ಕೊತ್ತಾಯಗಳು

• ಪೋಲೀಸ್ ಸ್ಟೇಷನ್‌ಗಳು, ಪೋಲೀಸ್ ಇಲಾಖೆಗಳೇ ಲಾಕ್ ಡೌನ್ ಮತ್ತು ಸೀಲ್ ಡೌನ್ ಗೆ ಒಳಗಾಗಿರುವ ಸಂದರ್ಭಗಳಲ್ಲಿ ಮಹಿಳೆಯರ ನೆರವಿಗೆ ಪರ್ಯಾಯ ವ್ಯವಸ್ಥೆಗಳ ಮೂಲಕ ಎಲ್ಲ ಜಿಲ್ಲೆಗಳಲ್ಲೂ ಹೆಲ್ಪಲೈನ್ ಗಳನ್ನು ಕ್ರಿಯಾಶೀಲಗೊಳಿಸಬೇಕು. ತಕ್ಷಣಕ್ಕೆ ಸ್ಪಂದಿಸಬೇಕು.

• ಕೇರಳ ಸರ್ಕಾರದ ಮಾದರಿಯ ವಾಟ್ಸ್ಪ್ ಗುಂಪುಗಳನ್ನು ರಚಿಸಿ ವ್ಯಾಪಕವಾಗಿ ಪ್ರಚಾರ ನೀಡಬೇಕು.

• ಮಾಧ್ಯಮಗಳ ಮೂಲಕ ಮಹಿಳೆಯರ ಮೇಲಿನ ದೌಜ್ಯನ್ಯಗಳ ವಿರುದ್ಧ ಪ್ರಚಾರ ಮಾಡುವಂತೆ, ಅವುಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ಶಿಕ್ಷೆಯ ಕುರಿತು ಪ್ರಚಾರ ಮಾಡಬೇಕು.

• ಮಹಿಳಾ ಆಯೋಗ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಶಾಖೆಗಳು ತಾಲೂಕು ಮಟ್ಟಗಳಲ್ಲಿ ಕಾರ್ಯ ನಿರ್ವಹಿಸಬೇಕು. ಪಂಚಾಯತ್ ಮಟ್ಟಗಳಲ್ಲಿ ದೂರು ದಾಖಲಿಸಲು ವ್ಯವಸ್ಥೆ ಮಾಡಬೇಕು.

• ಕೌಟುಂಬಿಕ ದೌರ್ಜನ್ಯದಿಂದ ರಕ್ಷಣೆ ನೀಡಲು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ವಯ ರಕ್ಷಣಾ ವ್ಯವಸ್ಥೆಗಳನ್ನು ಬಿಗಿ ಮಾಡಬೇಕು. ರಕ್ಷಣಾ ಅಧಿಕಾರಿಗಳ ಸಹಾಯ ಸಿಗುವಂತೆ ಕ್ರಮವಹಿಸಬೇಕು.

• ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಆರ್ಥಿಕ ನೆರವು ಮತ್ತು ಸುರಕ್ಷಿತ ವಸತಿ ವ್ಯವಸ್ಥೆ ಮಾಡಬೇಕು.

• ಲಾಕ್‌ಡೌನ್ ಅವಧಿಯಲ್ಲಿ ಅನಗತ್ಯ ಗರ್ಭಧಾರಣೆಗೆ ಹೆಣ್ಣು ಮಕ್ಕಳು ಒಳಗಾಗುತ್ತಿರುವುದು ವರದಿಯಾಗಿದ್ದು ಅದನ್ನು ತಪ್ಪಿಸಲು ಉಚಿತ ಗರ್ಭನಿರೋಧಕಗಳನ್ನು ವಿತರಿಸಬೇಕು.

• ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ದೂರು ದಾಖಲಿಸಿಕೊಳ್ಳಲು ಪೋಲೀಸ್ ಇಲಾಖೆ ಸಬೂಬು ಹೇಳದಂತೆ ಕ್ರಮವಹಿಸಬೇಕು.

• ವಿವಿಧ ಕಾರಣಗಳಿಂದ ನಡೆಯುತ್ತಿರುವ ಬಾಲ್ಯವಿವಾಹಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.

• ರಾಯಚೂರು ಮತ್ತು ಹಾಸನ ಜಿಲ್ಲೆಗಳ ದಲಿತರ ಮೇಲಿನ ದೌರ್ಜನ್ಯ ಹಾಗೂ ಅವಮರ್ಯಾದಾ ಹತ್ಯೆಗಳ ಆರೋಪಿಗಳನ್ನು ಬಂಧಿಸಿ ಉಗ್ರಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು.

• ಗರ್ಭಿಣಿ ಮತ್ತು ಬಾಣಂತಿಯರಿಗೆ, ಮಕ್ಕಳಿಗೆ, ಹಿರಿಯ ನಾಗರೀಕರಿಗೆ ವೈದ್ಯಕೀಯ ಸಂಚಾರಿ ವಾಹನಗಳ ಮೂಲಕ ಅವರಿದ್ದಲ್ಲೇ ಚಿಕಿತ್ಸೆ ಮತ್ತು ಔಷದಿಗಳನ್ನು ಉಚಿತವಾಗಿ ನೀಡಬೇಕು.

• ಲಾಕ್ ಡೌನ್ ಮತ್ತು ಸೀಲ್ ಡೌನ್ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆಗಳಿಲ್ಲದಿರುವುದರಿಂದ ಆ ಪ್ರದೇಶದ ಗರ್ಭಿಣಿಯರು ಆಸ್ಪತ್ರೆಗಳನ್ನು ತಪುಪಲು ಮತ್ತು ವಿಶೇಷ ಚಿಕಿತ್ಸೆಗಳಿಗಾಗಿ ಪ್ರತ್ಯೇಕ ಆಂಬ್ಯುಲೆನ್ಸ್ ಗಳು ಘೋಷಿಸಬೇಕು.

• ಕೋವಿಡೇತರ ಸಾಮಾನ್ಯ ಚಿಕಿತ್ಸೆಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು.

• ಸ್ವ ಸಹಾಯ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರ ಹಳೆಯ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕು. ಬಡ್ಡಿ ರಹಿತ ಹೊಸ ಸಾಲ ನೀಡಬೇಕು. ಸಾಲ ವಸೂಲಿಗಾಗಿ ಕಿರುಕುಳ ಕೊಡುವ ಸಂಸ್ಥೆಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು.

• ಲಾಕ್‌ಡೌನ್ ಅವಧಿಯಲ್ಲಿ ಗ್ರಾಮಾಂತರದಲ್ಲಿ 80% ನಗರ ಪ್ರದೇಶಗಳಲ್ಲಿ 60% ಕೆಲಸವನ್ನು ಕಳೆದುಕೊಂಡಿದ್ದು ಅವರಲ್ಲಿ ಹೆಚ್ಚಿನವರು ಮಹಿಳೆಯರು. ಹಾಗಾಗಿ ಮಹಿಳೆಯರ ಕೆಲಸ ಮತ್ತು ಸಂಬಳನ್ನು ಉಳಿಸಬೇಕು.

• ವಲಸೆ ಕಾರ್ಮಿಕರ ಕುಟುಂಬಗಳಿಗೆ ಆಶ್ರಯವನ್ನು ನೀಡಿ. ಸುಲಭವಾಗಿ ಪರಿಹಾರ ಕ್ರಮಗಳು ತಲುಪುವಂತೆ ಏಕಗವಾಕ್ಷಿಯಂಥಹ ಕ್ರಮಗಳಿಗೆ ಸರ್ಕಾರ ಮುಂದಾಗಬೇಕು

• ಫ್ರಂಟ್ ಲೈನ್ ಕೊವಿಡ್ ವಾರಿರ‍್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಸ್ಕೀಂ ವಕರ‍್ಸ್ ಗಳಿಗೆ ಸುರಕ್ಷತಾ ಕ್ರಮಗಳ ಜೊತೆ ಸರಿಯಾದ ವೇತನ, ಭತ್ಯೆ ಮತ್ತು ವಿಮಾಸೌಲಭ್ಯ ಕಲ್ಪಿಸಬೇಕು.

• ಬಿ.ಪಿ.ಎಲ್ ಮತ್ತು ಎ.ಪಿ.ಎಲ್ ತಾರತಮ್ಯವಿಲ್ಲದೆ ಎಲ್ಲ ಕುಟುಂಬಗಳಿಗೆ ಒಂದೇ ತೆರನಾದ ಜೀವನಾಗತ್ಯ ಆಹಾರ ದಿನಸಿಯನ್ನು ತಲಾ 10 ಕೆ.ಜಿ. ಯಂತೆ ಮನೆ ಮನೆಗೆ ವಿತರಿಸಬೇಕು. ಉಚಿತ ಸಿಲಿಂಡರ್ ನೀಡಬೇಕು.

• ದೌರ್ಜನ್ಯದ ಮೂಲ ಆರ್ಥಿಕ ಕಾರಣಗಳಾಗಿರುವುದರಿಂದ ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಎಲ್ಲ ಕುಟುಂಬಗಳಿಗೆ ಮುಂದಿನ ಆರು ತಿಂಗಳುಗಳ ಕಾಲ ತಲಾ7500/ ನೇರ ನಗದು ವರ್ಗಾವಣೆ ಮಾಡುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು.

• ಕೋವಿಡ್ ಭಯದಿಂದ ಮತ್ತು ಆರ್ಥಿಕ ಅಭದ್ರತೆಗೆ ಒಳಗಾಗಿರುವ ಮಹಿಳೆಯರ ಮಾನಸಿಕ ಸಮಸ್ಯೆಗಳ ನಿವಾರಣೆಗೆ ವರ‍್ಡ್ ಮತ್ತು ಪಂಚಾಯತಿ ಮಟ್ಟದಲ್ಲಿ ಕೌನ್ಸಿಲಿಂಗ್ ಸೆಂಟರ್ ಗಳನ್ನು ಆರಂಭಿಸಬೇಕು.

• ಮನರೇಗಾವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. 200 ದಿನ ಕೆಲಸ ನೀಡಬೇಕು. ದಿನಕ್ಕೆ 600 ರೂ ಕೂಲಿ ನೀಡಬೇಕು. ನಗರದಲ್ಲಿ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ರಾಜ್ಯ ಸರ್ಕಾರಗಳು ಆದ್ಯ ಗಮನ ನೀಡಬೇಕು.

• ಕೋವಿಡ್ ಪರಿಹಾರ ಕಾರ್ಯಗಳಲ್ಲಿ ಧರ್ಮ, ಜಾತಿ ತಾರತಮ್ಯ/ಲಿಂಗತಾರತಮ್ಯ ಮಾಡಬಾರದು.

• ಮಾತೃಶ್ರಿ ಯೋಜನೆಯನ್ನು ಮುಂದುವರೆಸಬೇಕು.

• ಸಾಂತ್ವನ ಕೇಂದ್ರಗಳಿಗೆ ನೀಡುತ್ತಿರುವ ಅನುದಾನವನ್ನು ಮುಂದುವರೆಸಬೇಕು.

ಯು. ಬಸವರಾಜ
ಕಾರ್ಯದರ್ಶಿ

Leave a Reply

Your email address will not be published. Required fields are marked *