ಉನ್ನತ ವ್ಯಕ್ತಿತ್ವದ ಸ್ವಾತಂತ್ರ್ಯ ಹೋರಾಟಗಾರ, ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಆಝಾದ್ ಬಗ್ಗೆ ಕೀಳುಮಟ್ಟದ, ಕೋಮು ಭಾವನೆ ಉದ್ರೇಕಿಸುವ ಹೇಳಿಕೆ ನೀಡಿರುವ ಐಪಿಎಸ್ ಅಧಿಕಾರಿ ನಾಗೇಶ್ವರ ರಾವ್ ವಿರುದ್ಧ ಕಾನೂನು ಕ್ರಮ ಮತ್ತು ಎಫ್‍ಐಆರ್-ಗೃಹಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ
ನಾಗೇಶ್ವರರಾವ್, ಅಗ್ನಿಶಾಮಕ ಸೇವೆಗಳು, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ ಇಲಾಖೆಯ ಮಹಾನಿರ್ದೇಶಕರಾಗಿರುವ ಒಬ್ಬ ಉನ್ನತ ಐ.ಪಿ.ಎಸ್. ಅಧಿಕಾರಿ, ಒಂದು ವರ್ಷದ ಹಿಂದೆ ಸಿ.ಬಿ.ಐ.ನ ಮುಖ್ಯಸ್ಥರಾಗಿದ್ದವರು. ಈ ಅಧಿಕಾರಿ ಈಗ ಒಂದು ಟ್ವಿಟರ್ ಹೇಳಿಕೆಯ ವಿವಾದ್ ಎಬ್ಬಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ (ಜುಲೈ 27) ವರದಿಯಿಂದ ಗೊತ್ತಾಗಿದೆ..
ಈ ಟ್ವಿಟರ್ ನಲ್ಲಿ ಅವರು 1947ರಿಂದ 1977ರ 30 ವರ್ಷಗಳಲ್ಲಿ 20ವರ್ಷಗಳ ಕಾಲ ‘ಹಿಂದುಗಳ ಬುಡಕೀಳುವ’ (Deracination of Hindus) ಮೊದಲ ಘಟ್ಟ ಎನ್ನುತ್ತ ಈ ಅವಧಿಯ ನಾಲ್ವರು ಶಿಕ್ಷಣ ಮಂತ್ರಿಗಳನ್ನು ಹೆಸರಿಸಿದ್ದಾರೆ. ಅವರೆಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹ-ಮೌಲಾನಾ ಅಬುಲ್ ಕಲಂ ಆಝಾದ್(1947-58), ಪ್ರೊ.ಹುಮಾಯೂನ್ ಕಬೀರ್, ಜಸ್ಟಿಸ್ ಎಂ ಸಿ ಛಾಗ್ಲ ಮತ್ತು ಫಕ್ರುದ್ದೀನ್ ಅಲಿ ಅಹ್ಮದ್(1963-67) ಮತ್ತು ಪ್ರೊ. ನೂರುಲ್ ಹಸನ್( 1972-77). ಇವರು ‘ರಕ್ತಸಿಕ್ತ ಇಸ್ಲಾಮೀ ಅತಿಕ್ರಮಣ/ಆಳ್ವಿಕೆಯನ್ನು ಶುಭ್ರಗೊಳಿಸಲು” ಪ್ರಯತ್ನಿಸಿದ್ದಾರೆ ಎಂದೆಲ್ಲ ಹೇಳಿದ್ದಾರೆ. ಜತೆಗೆ ‘ಎಡಪಂಥೀಯ’ ಇತಿಹಾಸಕಾರರ ಬಗ್ಗೆ ಅವಹೇಳನಕರ ಮಾತುಗಳನ್ನು ಹೇಳಿದ್ದಾರೆ.
ಇದಕ್ಕೆ ಬೌದ್ಧಿಕ ವಲಯಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಟ್ಟಿದೆ. ಮೌಲಾನಾ ಆಝಾದ್ ಸ್ವಾತಂತ್ರ್ಯ ಚಳುವಳಿಯ ಉನ್ನತ ಮುಖಂಡರಲ್ಲಿ ಒಬ್ಬರು. ಪ್ರೊ.ಹುಮಾಯೂನ್ ಕಬೀರ್, ಜಸ್ಟಿಸ್ ಎಂ ಸಿ ಛಾಗ್ಲ ಮತ್ತು ಪ್ರೊ. ನೂರುಲ್ ಹಸನ್ ಪ್ರಸಿದ್ಧ ಶಿಕ್ಷಣವೇತ್ತರು.
ಈ ಉನ್ನತ ಐಪಿಎಸ್ ಅಧಿಕಾರಿ ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ, ತನ್ನ ಸೇವಾ ನಿಯಮವನ್ನು ಉಲ್ಲಂಘಿಸಿದ್ದಾರೆ ಮಾತ್ರವಲ್ಲ ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಅಡಿಯಲ್ಲೂ ಅಪರಾಧಗಳನ್ನು ಮಾಡಿದ್ದಾರೆ, ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಗೃಹಮಂತ್ರಿ ಗಳಿಗೆ ಪತ್ರ ಬರೆದಿದ್ದಾರೆ.
ದಿಲ್ಲಿಯ ಮಂದಿರ್ ಮಾರ್ಗ್ ಪೋಲಿಸ್ ಠಾಣೆಯ ಎಸ್.ಹೆಚ್.ಒ.ಗೆ ಕೂಡ ಪತ್ರ ಬರೆದು ನಾಗೇಶ್ವರ ರಾವ್ ವಿರುದ್ಧ ಐ.ಪಿ.ಸಿ.ಯ ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಎಫ್‍ಐಆರ್ ದಾಖಲಿಸಬೇಕು ಎಂದೂ ಕೇಳಿದ್ದಾರೆ. ಈ ಪತ್ರದ ಪ್ರತಿಗಳನ್ನು ಡಿಸಿಪಿ, ನವದೆಹಲಿ ಮತ್ತು ದಿಲ್ಲಿ ಪೋಲೀಸ್ ಕಮಿಶನರ್ ರವರಿಗೂ ಕಳಿಸಿದ್ದಾರೆ, ಮತ್ತು ಗೃಹಮಂತ್ರಿಗಳಿಗೆ ಬರೆದ ಪತ್ರದಲ್ಲೂ ಈ ದೂರಿನ ಬಗ್ಗೆ ಹೇಳುತ್ತ ಕಾನೂನುಕ್ರಮದ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ತಮ್ಮ ಟ್ವಿಟರ್‍ನಲ್ಲಿ ನಾಗೇಶ್ವರ ರಾವ್ ಅವರು ಬಳಸಿರುವ “‘ಹಿಂದುಗಳ ಬುಡಕೀಳುವುದು”, “ರಕ್ತಸಿಕ್ತ ಇಸ್ಲಾಮೀ ಅತಿಕ್ರಮಣ..”, “ಹಿಂದೂ ಸಮಾಜದ ಮರುಹಿಂದೂಕರಣ” ಮುಂತಾದ ಪದಗಳನ್ನು ಉಲ್ಲೇಖಿಸುತ್ತ ಆತನ ಟ್ವಿಟರ್ ನ ಧಾಟಿ ಮತ್ತು ಆಶಯ ಸಮುದಾಯಗಳ ನಡುವೆ ವೈರತ್ವ ಮತ್ತು ವೈಷಮ್ಯವನ್ನು ಉಂಟು ಮಾಡುವುದು ಮತ್ತು ಮುಸ್ಲಿಮರ ವಿರುದ್ಧ ದ್ವೇಷಬಾವನೆಗಳನ್ನು ಪ್ರಚೋದಿಸುವುದು, ಸಂವಿಧಾನ ಮತ್ತು ಕಾನೂನಿನ ಆಶಯಗಳಿಗೆ ವಿರುದ್ಧವಾದ ಅವರ ಪದಬಳಕೆ ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ಬೃಂದಾ ಕಾರಟ್ ದಿಲ್ಲಿ ಪೋಲಿಸರ ಗಮನಕ್ಕೆ ತಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಿಲ್ಲಿ ಪೋಲೀಸ್ ಈ ಎರಡು ಸೆಕ್ಷನ್‍ಗಳನ್ನು ಉಪಯೋಗಿಸುವಲ್ಲಿ, ತಪ್ಪು ಕಾರಣಗಳಿಗಾಗಿಯಾದರೂ ಮತ್ತು ತಮಗೆ ಬೇಕಾದಲ್ಲಿ ಮಾತ್ರವಾದರೂ, ಸಾಕಷ್ಟು ಚುರುಕಾಗಿ ಕೆಲಸ ಮಾಡುತ್ತಿದೆ ಎಂಬ ಸಂಗತಿಯನ್ನೂ ಬೃಂದಾಕಾರಟ್ ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಕೇಂದ್ರ ಗೃಹ ಮಂತ್ರಿಗಳಿಗೆ ಬರೆದ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:
“ತಮ್ಮ ಮಂತ್ರಾಲಯದ ಅಡಿಯಲ್ಲಿ ಅಗ್ನಿಶಾಮಕ ಸೇವೆಗಳು, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ ಇಲಾಖೆಯ ಮಹಾನಿರ್ದೇಶಕರಾಗಿ ಸೇವೆಯಲ್ಲಿರುವ ಐ.ಪಿ.ಎಸ್. ದರ್ಜೆಯ ಶ್ರೀ ನಾಗೇಶ್ವರ ರಾವ್ ನೀಡಿರುವ ಒಂದು ಸಾರ್ವಜನಿಕ ಹೇಳಿಕೆಯತ್ತ ತಮ್ಮ ಗಮನವನ್ನು ಸೆಳೆಯ ಬಯಸುತ್ತೇನೆ.
ಅವರು ಒಬ್ಬ ಸೇವಾರತ ಅಧಿಕಾರಿಯಾಗಿದ್ದು ಸೇವಾ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಡುತ್ತಾರೆ. ಯಾವುದೇ ಸರಕಾರೀ ಅಧಿಕಾರಿ ರಾಜಕೀಯ ಪ್ರೇರಿತ ಸಾರ್ವಜನಿಕ ಹೇಳಿಕೆಗಳನ್ನು ಕೊಡಬಾರದು ಎಂಬುದು ಈ ಷರತ್ತುಗಳಲ್ಲಿ ಒಂದು. ಎರಡನೆಯದಾಗಿ, ಪ್ರತಿಯೊಬ್ಬ ಅಧಿಕಾರಿಯೂ ಭಾರತದ ಸಂವಿಧಾನವನ್ನು ಕಾಪಾಢಲು ಮತ್ತು ರಕ್ಷಿಸಲು ಕರ್ತವ್ಯಬದ್ಧರಾಗಿರುತ್ತಾರೆ.
ಆದರೆ ಮೇಲೆ ಹೆಸರಿಸಿದ ವ್ಯಕ್ತಿಯು ಜುಲೈ 27ರ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿರುವಂತೆ(ಪತ್ರಿಕೆಯ ಪ್ರತಿಯನ್ನು ಲಗತ್ತಿಸಿದೆ) ತನ್ನ ಟ್ವಿಟರ್ ಸಾರ್ವಜನಿಕ ಹೇಳಿಕೆಯಲ್ಲಿ ರಾಜಕೀಯವಾಗಿ ಪ್ರೇರಿತವಾದ ಅತ್ಯಂತ ಆಕ್ರೋಶಕಾರಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇವು ಸಂವಿಧಾನದ ಭಾವನೆಗೂ ವಿರುದ್ಧ ಹೋಗುತ್ತವೆ.
ಅವರು ಧೀರ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಂ ಆಝಾದ್ ಮತ್ತು ಇತರ ಗಮನಾರ್ಹ ಶಿಕ್ಷಣ ತಜ್ಞರನ್ನು, ಮುಖ್ಯವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದವರನ್ನು ಅವಮಾನಗೊಳಿಸಿದ್ದಾರೆ, ಅವರ ವಿರುದ್ಧ ಹೀನಾಯಕರ ಭಾಷೆಯನ್ನು ಬಳಸಿದ್ದಾರೆ ಮತ್ತು ಎರಡು ಸಮುದಾಯಗಳ ನಡುವೆ ವೈರತ್ವದ ಭಾವನೆಗಳನ್ನು ಪ್ರಚೋದಿಸಿದ್ದಾರೆ. ಅವರು ಆರೆಸ್ಸೆಸ್ ಮತ್ತು ಬಿಜೆಪಿಯನ್ನು “ಭಾರತದ ಮರುಹಿಂದೂಕರಣ”ಕ್ಕಾಗಿ ಬಹಿರಂಗವಾಗಿಯೇ ಪ್ರಶಂಸಿಸಿದ್ದಾರೆ. “ಬಿಜೆಪಿಯ ಬೆಳವಣಿಗೆ”ಯ ಮೇಲೆ ಅನುಕೂಲಕರವಾಗಿ ಟಿಪ್ಪಣಿ ಮಾಡಿದ್ದಾರೆ. “ಎಡಪಂಥೀಯರ” ವಿರುದ್ಧ ಕೀಳುಭಾವದ ಟಿಪ್ಪಣಿ ಮಾಡಿದ್ದಾರೆ.
ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಖಾತ್ರಿಯ ಪ್ರಕಾರ ಒಬ್ಬ ವ್ಯಕ್ತಿ ತನ್ನದೇ ಅಭಿಪ್ರಾಯವನ್ನು ಹೊಂದಿರಬಹುದು. ಆದರೆ ಒಬ್ಬ ಸೇವಾರತ ಅಧಿಕಾರಿಯಾಗಿದ್ದು ನಾಗೇಶ್ವರ ರಾವ್ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರು ಐ.ಪಿ.ಸಿ.ಯ ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲೂ ಮನನೋಯಿಸುವ ಅಪರಾಧ ಮಾಡಿದ್ದಾರೆ.
ಅವರು ಈ ರೀತಿಯಲ್ಲಿ ಸೇವಾ ಷರತ್ತುಗಳನ್ನು ಉಲ್ಲಂಘಿಸಿರುವುದು ಅಥವ ಕೋಮುವಾದಿ ಭಾವನೆಗಳನ್ನು ಪ್ರಚೋದಿಸಿರುವುದು ಇದೇ ಮೊದಲ ಬಾರಿಯೇನಲ್ಲ. ಸುಮಾರಾಗಿ ಇದೇ ಆಧಾರದಲ್ಲಿ, ಅವರು ತೊಂಭತ್ತರ ದಶಕದ ಕೊನೆಯಲ್ಲಿ ಒಡಿಶಾದ ಬೆಹ್ರಂಪುರ್ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಧಿಕಾರಿಯಾಗಿ ಸೇವೆಯಲ್ಲಿದ್ದಾಗ ಕೆಲವು ವಿಷಕಾರೀ ಕೋಮುವಾದಿ ಹೇಳಿಕೆಗಳನ್ನು ಕೊಟ್ಟಿದ್ದರು. ಎರಡು ಅಧಿಕೃತ ತನಿಖೆಗಳು ಅವರನ್ನು ಅಪರಾಧಿಯೆಂದು ಹೇಳಿ ಶಿಸ್ತುಕ್ರಮಗಳನ್ನು ಕೈಗೊಳ್ಳಲಾಗಿತ್ತು. ಹೀಗೆ ಅವರು ಸ್ವಭಾವತಃ ಕೆಟ್ಟ ದಾಖಲೆಯಿರುವ ತಪ್ಪುಗಾರ.
ಅವರು ಜುಲೈ 31ರಂದು ನಿವೃತ್ತರಾಗಲಿದ್ದಾರೆ ಎಂಬ ವರದಿಗಳಿದ್ದು, ಈ ಟಿಪ್ಪಣಿಗಳು ನಿವೃತ್ತಿಯ ನಂತರ ಅವರನ್ನು ಬಿಜೆಪಿ ಅಥವ ಆರೆಸ್ಸೆಸ್ ಪ್ರವೇಶಕ್ಕೆ ಅರ್ಹರಾಗಿಸಬಹುದು. ಆದರೆ ಅವರು ಈ ಟಿಪ್ಪಣಿಗಳನ್ನು ಒಬ್ಬ ಸೇವಾರತ ಅಧಿಕಾರಿಯಾಗಿ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆರೋಪ ಪಟ್ಟಿಯನ್ನು ಹಾಕಬೇಕು ಮತ್ತು ಐ.ಪಿ.ಸಿ.ಯ ಸಂಬಂಧಪಟ್ಟ ವಿಭಾಗಗಳ ಅಡಿಯಲ್ಲಿ ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು. ನೀವು ಈ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೀರಿ ಎಂದು ನಾನು ಆಶಿಸುತ್ತೇನೆ. ಈ ಮೂಲಕ ನಾಗೇಶ್ವರ ರಾವ್‍ರಂತಹ ಸೇವಾ ನಿಯಮಗಳನ್ನು ಮತ್ತು ಸಂವಿಧಾನದ ಚೇತನವನ್ನು ಉಲ್ಲಂಘಿಸುವವರು ಕಾನೂನಿನ ಪ್ರಕಾರ ಶಿಕ್ಷೆಗೊಳಗಾಗುತ್ತಾರೆ ಎಂಬ ವಿಶ್ವಾಸ ರಾಜಕೀಯವಾಗಿ ತಟಸ್ಥರಾಗಿದ್ದು ಸಂವಿಧಾನಿಕ ಚೌಕಟ್ಟಿನ ಒಳಗೆ ದೇಶದ ಸೇವೆ ಮಾಡುತ್ತಿರುವ ಅಧಿಕಾರಿಗಳಲ್ಲಿ ಮೂಡುವಂತಾಗುತ್ತದೆ.
ದಿಲ್ಲಿ ಪೋಲೀಸ್ ನಿಮ್ಮ ವ್ಯಾಪ್ತಿಯಲ್ಲಿ ಬರುವುದರಿಂದಾಗಿ, ನಾನು ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಒಂದು ಎಫ್.ಐ.ಆರ್. ದಾಖಲಿಸಬೇಕೆಂದು ದೂರನ್ನು ಸಲ್ಲಿಸಿದ್ದೇನೆ ಎಂಬುದನ್ನೂ ತಮಗೆ ತಿಳಿಸಬಯಸುತ್ತೇನೆ. ಅವರ ವಿರುದ್ಧ ಕಾನೂನುಕ್ರಮದ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ವಿನಂತಿಸುತ್ತೇನೆ.”