ಸ್ವಾತಂತ್ರ್ಯ ದಿನದಂದು ಪ್ರತಿಜ್ಞೆಗೈಯೋಣ- ಜನತೆಗೆ ಎಡಪಕ್ಷಗಳ ಕರೆ
ಈ ಸ್ವಾತಂತ್ರ್ಯ ದಿನದಂದು ನಮ್ಮ ಸಂವಿಧಾನವನ್ನು ಸುರಕ್ಷಿತಗೊಳಿಸುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ ಎಂದು ಪ್ರತಿಜ್ಞೆ ತೆಗೆದುಕೊಳ್ಳೋಣ ಹಾಗೂ ಸಪ್ಟಂಬರ್ 1 ರಂದು, ಭಾರತ ತನ್ನನ್ನು ಅಮೆರಿಕಾದ ಒಂದು ಅಡಿಯಾಳು ಮಿತ್ರನೆಂಬ ಸ್ಥಿತಿಯನ್ನು ಈ ಅವಧಿಯಲ್ಲಿ ಇನ್ನಷ್ಟು ಬೆಸೆದಿರುವುದನ್ನು ಪ್ರತಿಭಟಿಸೋಣ ಎಂದು ಎಡಪಕ್ಷಗಳು ಭಾರತದ ಜನತೆಗೆ ಕರೆ ನೀಡಿವೆ.
- ಕೊವಿಡ್-19 ಮಹಾಸೋಂಕು ಮತ್ತು ರಾಷ್ಟ್ರೀಯ ಲಾಕ್ ಡೌನಿನ ಅವಧಿಯಲ್ಲಿ ಈ ಮಹಾಸೋಂಕನ್ನು ಎದುರಿಸಲು ಮತ್ತು ಜನಗಳಿಗೆ ಪರಿಹಾರ ಒದಗಿಸುವುದರ ಮೇಲೆ ಏಕಚಿತ್ತದಿಂದ ಗಮನ ಕೇಂದ್ರೀಕರಿಸುವ ಬದಲು, ಆರೆಸ್ಸೆಸ್ ನೇತೃತ್ವದ ಬಿಜೆಪಿ ಕೇಂದ್ರ ಸರಕಾರ ಭಾರತೀಯ ಸಂವಿಧಾನದ ಮೂಲತತ್ವಗಳನ್ನೇ ಆಕ್ರಮಣಕಾರೀ ರೀತಿಯಲ್ಲಿ ಶಿಥಿಲಗೊಳಿಸುತ್ತಿದೆ. ಇದರೊಂದಿಗೇ ತೀವ್ರ ಕೋಮುಧ್ರುವೀಕರಣವನ್ನು ಮತ್ತು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯ ಮೇಲೆ ಗುರಿಯಿಡುವುದನ್ನು ಇನ್ನಷ್ಟು ತೀಕ್ಷ್ಣಗೊಳಿಸುತ್ತಿದೆ. ಪ್ರತಿಯೊಂದು ಸಂವಿಧಾನಿಕ ಸಂಸ್ಥೆಯೂ, ಸಂಸತ್ತಿನಿಂದ ಹಿಡಿದು, ನ್ಯಾಯಾಂಗ, ಚುನಾವಣಾ ಆಯೋಗ, ಸಿ.ಬಿ.ಐ., ಇ.ಡಿ. ಇತ್ಯಾದಿ ದಾಳಿಗೊಳಗಾಗಿವೆ, ಅವುಗಳ ಸ್ವಾಧೀನತೆಯನ್ನು ಶಿಥಿಲಗೊಳಿಸಲಾಗುತ್ತಿದೆ. ಅವೆಲ್ಲವನ್ನೂ ಭಾರತೀಯ ಸಂವಿಧಾನದ ರಕ್ಷಣೆಯಲ್ಲಿ ಸ್ವತಂತ್ರವಾಗಿ ಕ್ರಿಯೆಗಿಳಿಯದಂತೆ ಶಿಥಿಲಗೊಳಿಸಲಾಗುತ್ತಿದೆ. ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳು ತೀವ್ರ ದಾಳಿಗೊಳಗಾಗಿವೆ, ಮತ್ತು ಸರಕಾರದ ಧೋರಣೆಗಳ ವಿರುದ್ಧ ಯಾವುದೇ ಭಿನ್ನಮತ ವ್ಯಕ್ತಗೊಳಿಸುವುದನ್ನು ‘ರಾಷ್ಟ್ರ-ವಿರೋಧಿ’ ಎಂದು ಹೇಳಲಾಗುತ್ತಿದೆ, ಮತ್ತು ಜನಗಳು, ಕಾರ್ಯಕರ್ತರು ಹಾಗೂ ಚಿಂತಕರನ್ನು ಯು.ಎ.ಪಿ.ಎ. , ರಾಜದ್ರೋಹ ಮುಂತಾದ ಕರಾಳ ಕಾಯ್ದೆಗಳಡಿಯಲ್ಲಿ ಶಿಕ್ಷಿಸಲಾಗುತ್ತಿದೆ. ಸಂವಿಧಾನದ ಒಂದು ಮೂಲ ಲಕ್ಷಣವಾದ ಒಕ್ಕೂಟ ತತ್ವದ ಸೂತ್ರಗಳ ನಿರಾಕರಣೆ ಮಾಡಿ ಎಲ್ಲ ಅಧಿಕಾರಗಳನ್ನು ಕೇಂದ್ರೀಕರಿಸುವ ಒಂದು ಪ್ರಯತ್ನ ನಡೆಯುತ್ತಿದೆ.
ಇಂತಹ ಸನ್ನಿವೇಶದಲ್ಲಿ, ಜನತೆ ನಮ್ಮ ಸಂವಿಧಾನವನ್ನು ಮತ್ತು ಇದರ ಅಡಿಯಲ್ಲಿ ಜನತೆಗೆ ಲಭ್ಯವಾಗಿರುವ ಖಾತ್ರಿಗಳನ್ನು ಸುರಕ್ಷಿತಗೊಳಿಸಿಕೊಳ್ಳಲು ಒಂದುಗೂಡುವುದು, ಈ ಮೂಲಕ ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುವುದು ಅಗತ್ಯವಾಗಿದೆ ಎಂದು ಎಡಪಕ್ಷಗಳು ಹೇಳಿವೆ.
- ಸಪ್ಟಂಬರ್ 1: ‘ಆತ್ಮನಿರ್ಭರ್ ಭಾರತ್’ನ ನಿರಾಕರಣೆಗೆ ಪ್ರತಿಭಟನೆ: ಅಮೆರಿಕ ಸಂಯುಕ್ತ ಸಂಸ್ಥಾನಗಳ ಆದೇಶಗಳಿಗೆ ಬಿಜೆಪಿ ಕೇಂದ್ರ ಸರಕಾರ ನಮ್ರ ಸೇವಕನಂತೆ ತಲೆ ಬಾಗುತ್ತಿರುವುದು, ಜಾಗತಿಕ ಆಧಿಪತ್ಯವನ್ನು ಬಲಗೊಳಿಸಿಕೊಳ್ಳುವ ಅಮೆರಿಕನ್ ಸಾಮರಿಕ ತಂತ್ರಗಳ ಒಂದು ಅಡಿಯಾಳು ಮಿತ್ರನ ಸ್ಥಾನಕ್ಕೆ ಭಾರತವನ್ನು ಇಳಿಸುವಂತಾಗಿದೆ. ಇದು ಭಾರತಕ್ಕೆ ಮತ್ತು ನಮ್ಮ ಜನತೆಗೆ ಹಿತಕಾರಿ ಅಲ್ಲ. ಭಾರತ ಸಮಯದ ಒರೆಗಲ್ಲಲ್ಲಿ ಸಾಬೀತಾಗಿರುವ ತನ್ನ ಸ್ವತಂತ್ರ ವಿದೇಶಾಂಗ ಧೋರಣೆಯನ್ನೇ ಅನುಸರಿಸಬೇಕು.
ಭಾರತ ತನ್ನ ವಿದೇಶಾಂಗ ಧೋರಣೆಯ ದಿಕ್ಕನ್ನು ಸರಿಪಡಿಸಿಕೊಳ್ಳಬೇಕು. ಅಮೆರಿಕಕ್ಕೆ ಮತ್ತು ಅಮೆರಿಕ-ಇಸ್ರೇಲ್ ಕೂಟಕ್ಕೆ ಅಡಿಯಾಳಾಗುವ ವಿದೇಶಾಂಗ ಧೋರಣೆ ಭಾರತದ ಸಾರ್ವಭೌಮತ್ವವನ್ನು ಶಿಥಿಲಗೊಳಿಸುತ್ತದೆ ಮತ್ತು ಅದು ಭಾರತದ ಸ್ವಾವಲಂಬನೆಯ, ‘ಆತ್ಮನಿರ್ಭರ್ ಭಾರತ್’ನ ನಿರಾಕರಣೆಯಾಗುತ್ತದೆ ಎಂದಿರುವ ಎಡಪಕ್ಷಗಳು ಸಪ್ಟಂಬರ್ 1 ರಂದು ಈ ಅವಧಿಯಲ್ಲಿ ಅಡಿಯಾಳುತನವನ್ನು ಇನ್ನಷ್ಟು ಬೆಸೆದುಕೊಳ್ಳುತ್ತಿರುವುದನ್ನು ಪ್ರತಿಭಟಿಸಬೇಕು ಎಂದು ಕರೆ ನೀಡಿವೆ.
ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)-ಲಿಬರೇಷನ್, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಮತ್ತು ಆರ್ ಎಸ್ ಪಿ ಪ್ರಧಾನ ಕಾರ್ಯದರ್ಶಿಗಳು ಜಂಟಿ ಹೇಳಿಕೆಯೊಂದರಲ್ಲಿ ಈ ಮನವಿ ಮಾಡಿದ್ದಾರೆ.