ಬೆಂಗಳೂರಿನ ಪೂರ್ವ ವಲಯದ ಪುಲಕೇಶಿನಗರದ ಶಾಸಕರ ಮನೆ, ಡಿ.ಜೆ.ಹಳ್ಳಿ ಪೋಲಿಸ್ ಠಾಣೆ ಮತ್ತು ಕೆ.ಜಿ.ಹಳ್ಳಿಯ ಹಲವೆಡೆ ಆಗಸ್ಟ್ 11 ರಂದು ನಡೆದಿರುವ ದಾಳಿಗಳನ್ನು ಹಾಗೂ ಅದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಫೇಸ್ಬುಕ್ ಅವಹೇಳನಕಾರಿ ಪೋಸ್ಟಿಂಗ್ ಅನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ), ಕರ್ನಾಟಕ ರಾಜ್ಯ ಸಮಿತಿ ಮತ್ತು ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ. ಜನತೆಯು ಊಹಾಪೋಹಗಳಿಗೆ ಹಾಗೂ ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿವಿಗೊಡದೆ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ.
ಪುಲಕೇಶಿನಗರದ ಶಾಸಕರಾದ ಶ್ರೀ ಅಖಂಡ ಶ್ರೀನಿವಾಸ್ಮೂರ್ತಿ ಅವರ ಸಂಬಂಧಿ ತನ್ನ ಫೇಸ್ಬುಕ್ ಖಾತೆಯಲ್ಲಿ ಹಾಕಿರುವ ಅವಹೇಳನಕಾರಿ ಪೋಸ್ಟಿಂಗ್ಸ್ ಆಧರಿಸಿ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ಪ್ರಚೋದನಕಾರಿ ಹೇಳಿಕೆಗಳಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ತಿಳಿಗೊಳಿಸಲು ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆ ಅಗತ್ಯ ಕ್ರಮಗಳನ್ನು ಸಂಯಮದಿಂದ ಕೈಗೊಳ್ಳಬೇಕೆಂದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುತುವರ್ಜಿ ವಹಿಸಬೇಕೆಂದು ಸಿಪಿಐ(ಎಂ) ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಆ ಮೂಲಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಎಲ್ಲಾ ವ್ಯಕ್ತಿಗಳು, ಶಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮವಹಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.
ರಾಜ್ಯ ಹಾಗೂ ಬೆಂಗಳೂರಿನ ಜನತೆ ಕೋವಿಡ್-19 ಸಾಂಕ್ರಾಮಿಕದಿಂದ ಬಾದಿತರಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ವ್ಯವಸ್ಥಿತ ಸಂಚಿನ ಭಾಗವಾಗಿ ಅವಹೇಳನಕಾರಿ ಪೋಸ್ಟಿಂಗ್ ಅನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿರುವಂತೆ ಮೇಲ್ನೋಟಕ್ಕೆ ಪೋಸ್ಟಿಂಗ್ಸ್ ಆರಂಭಗೊಂಡಿರುವ ಬಂಧಿತ ವ್ಯಕ್ತಿಯ ಪೂರ್ವಾಪರಗಳನ್ನು ಗಮನಿಸಿದಲ್ಲಿ ಕಂಡುಬರುತ್ತದೆ. ಇಂತಹ ಪೋಸ್ಟಿಂಗ್ಸ್ ನಿಂದಾಗಿ ಅಮಾಯಕ ಜನತೆಯ ಭಾವನೆಗಳಿಗೆ ಉಂಟಾಗುವ ಘಾಸಿಯನ್ನು ದುರುಪಯೋಗ ಮಾಡಿಕೊಳ್ಳಲು ಹೊಂಚು ಹಾಕಿರುವ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳು ಯುವಜನತೆಯ ಭಾವೋದ್ರೇಕವನ್ನು ಕೆರಳಿಸಿ ಗಲಭೆಗಳಿಗೆ ಕೊಡುಗೆ ನೀಡಿದೆ. ಇಂತಹ ಸೂಕ್ಷ್ಮ ಸಂದರ್ಭವನ್ನು ಸಂವೇದನಾಶೀಲವಾಗಿ ಪರಿಗಣಿಸಿ ಉಂಟಾಗಬಹುದಾದ ಅವಗಡಗಳನ್ನು ತಪ್ಪಿಸುವಲ್ಲಿ ರಾಜ್ಯ ಸರ್ಕಾರದ ಪೋಲಿಸ್ ಬೇಹುಗಾರಿಕೆ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಈ ಗಲಭೆಗಳು ತೋರ್ಪಡಿಸುತ್ತವೆ.
ಫೇಸ್ಬುಕ್ ಪೋಸ್ಟಿಂಗ್ ಮಾಡಿರುವ ವ್ಯಕ್ತಿಯ ಹಲವು ಪೋಸ್ಟಿಂಗ್ಗಳು ಬಲಪಂಥೀಯ ಸಂಘಪರಿವಾರದ ಸಾಮಾಜಿಕ ಮಾಧ್ಯಮದ ಪ್ರಚಾರದ ಅಂಶಗಳನ್ನು ಒಳಗೊಂಡಿರುವುದನ್ನು ಗಮನಿಸಬಹುದಾಗಿದೆ. ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಈ ದುರುದ್ದೇಶಪೂರಿತ ಪೋಸ್ಟಿಂಗ್ ನಿಂದ ಉಂಟಾಗುವ ಪರಿಸ್ಥಿತಿಯ ದುರ್ಲಾಭ ಪಡೆಯಲು ಸಂಘ ಪರಿವಾರ ಮತ್ತು ಬಿಜೆಪಿಯು ನಡೆಸುತ್ತಿರುವ ಯತ್ನವನ್ನು ಜನತೆ ಮನಗಾಣಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ.
ಅದೇ ವೇಳೆ ಇಂತಹ ಎಲ್ಲಾ ಸಂದರ್ಭದಲ್ಲೂ ಧರ್ಮಗಳ ನಡುವೆ ಕಂದಕ ಸೃಷ್ಠಿಸಿ ಅದರ ದುರ್ಲಾಭ ಪಡೆದು ತನ್ನ ರಾಜಕೀಯ ಇರುವಿಕೆಯನ್ನು ಸ್ಥಾಪಿಸಲು ಹೊರಟಿರುವ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ದುರುದ್ದೇಶವನ್ನು ಜನತೆ ಅರಿಯಬೇಕೆಂದು ಹಾಗೂ ಈ ಎರಡೂ ಬಲಪಂಥೀಯ ಶಕ್ತಿಗಳ ವಿಭಜಕ ನೀತಿಗಳನ್ನು ಬೆಂಗಳೂರು ಹಾಗೂ ರಾಜ್ಯದ ಜನತೆ ತಿರಸ್ಕರಿಸಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ.
ಇಂತಹ ಘಟನೆಗೆ ಕಾರಣವಾಗಿರುವ ಎಲ್ಲರ ಮೇಲೆ ಬಿಗಿ ಕ್ರಮವಹಿಸಿ ಶಾಂತಿ ಸೌಹಾರ್ದತೆ ಸ್ಥಾಪಿಸಲು ರಾಜ್ಯ ಸರ್ಕಾರ ಅಗತ್ಯ ತುರ್ತು ಕ್ರಮ ವಹಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಒಟ್ಟು ಪ್ರಕರಣದ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಲು ಸ್ವತಂತ್ರ ನ್ಯಾಯಾಂಗ ತನಿಖೆಗೆ ಕ್ರಮ ವಹಿಸಬೇಕೆಂದು ರಾಜ್ಯ ಸಕಾ೯ರವನ್ನು ಸಿಪಿಐ(ಎಂ) ಒತ್ತಾಯಿಸಿದೆ.
ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು, ಶಾಸಕರು ಮತ್ತು ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ಜವಾಬ್ದಾರಿಯುತ ನಡವಳಿಕೆಗಳನ್ನು ಪ್ರದರ್ಶಿಸಿ ಹೊಣೆಗಾರಿಕೆಯ ಹೇಳಿಕೆಗಳನ್ನು ನೀಡಬೇಕೇ ವಿನಃ ಪರಿಸ್ಥಿತಿಯನ್ನು ಹದಗೆಡಿಸುವ ನಿಟ್ಟಿನ ಹೇಳಿಕೆಗಳನ್ನು ನೀಡುವಂತಹ ಹೊಣೆಗೇಡಿತನವನ್ನು ಪ್ರದರ್ಶಿಸಬಾರದೆಂದು ಸಿಪಿಐ(ಎಂ) ಆಗ್ರಹಿಸಿದೆ.
ಬೇಜವಾಬ್ದಾರಿ ಪೋಸ್ಟಿಂಗ್ಸ್ ಮತ್ತು ಹೊಣೆಗೇಡಿತನದ ಭಾವೋದ್ರೇಕದ ಉತ್ತೇಜನಗಳು ಮೂರು ಜನರ ಸಾವಿಗೆ, ಹತ್ತಾರು ಜನರ ನೋವಿಗೆ ಹಾಗೂ ಲಕ್ಷಾಂತರ ರೂಪಾಯಿ ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಅತ್ಯಂತ ತುರ್ತಾಗಿ ಸಂಯಮದ ನಡವಳಿಕೆಯನ್ನು ಜನತೆ ಪ್ರದರ್ಶಿಸಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ.
ಸಹಿ/-
ಯು.ಬಸವರಾಜ, ಕಾಯ೯ದಶಿ೯, ಸಿಪಿಐ(ಎಂ), ಕನಾ೯ಟಕ ರಾಜ್ಯ ಸಮಿತಿ
ಕೆ.ಎನ್.ಉಮೇಶ್, ಕಾಯ೯ದಶಿ೯, ಸಿಪಿಐ(ಎಂ), ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ
ಎನ್.ಪ್ರತಾಪ್ಸಿಂಹ, ಕಾರ್ಯದಶಿ೯,ಸಿಪಿಐ(ಎಂ), ಬೆಂಗಳೂರು ಉತ್ತರ ಜಿಲ್ಲಾ ಸಮಿತಿ