ಮೋದಿ ಮತ್ತು ಬಿಜೆಪಿ/ಆರೆಸ್ಸೆಸ್‌ನ “ಹೊಸ ಭಾರತ”ಕ್ಕೆ ಮೊದಲು ಮತ್ತು ಅತ್ಯಂತ ಮುಖ್ಯವಾಗಿ ಬೇಕಾಗಿರುವುದು ಭಾರತೀಯ ಸಂವಿಧಾನದಲ್ಲಿ ನಿರೂಪಿಸಿದ ಮತ್ತು ಮೂರ್ತಗೊಂಡಿರುವ ಹಳೇ ಭಾರತದ ನಾಶ. ಈ ಬಿಜೆಪಿ ಸರಕಾರದ ಕಳೆದ ಆರು ವರ್ಷಗಳಲ್ಲಿ ನಮ್ಮ ಸಂವಿಧಾನದ ಪ್ರತಿಯೊಂದು ಬುನಾದಿ ಸ್ಥಂಭಗಳನ್ನು-ಜಾತ್ಯತೀತ ಪ್ರಜಾಪ್ರಭುತ್ವ, ಒಕ್ಕೂಟತತ್ವ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು- ಶಿಥಿಲಗೊಳಿಸಿ ಸಂವಿಧಾನದ ಮೇಲೆ ಪ್ರಹಾರ ತೀವ್ರಗೊಂಡಿರುವುದನ್ನು ನೋಡಿದ್ದೇವೆ, ಕಳೆದ ಆರು ವರ್ಷಗಳಲ್ಲಿ ಭಾರತದ ಆರ್ಥಿಕ ಸ್ವಾವಲಂಬನೆಯನ್ನು ಮತ್ತು ಬುನಾದಿಗಳನ್ನು ಕೂಡ ಶಿಥಿಲಗೊಳಿಸಿದ್ದನ್ನು ನೋಡಿದ್ದೇವೆ.
ಈ ‘ಹೊಸ ಭಾರತ’ದ ಈ ಅಪಾಯಗಳನ್ನು ಪ್ರತಿರೋಧಿಸಬೇಕಾಗಿದೆ, ಸೋಲಿಸಬೇಕಾಗಿದೆ. ಇದು ಈ ಸ್ವಾತಂತ್ರ್ಯ ದಿನದಂದು ಭಾರತೀಯ ಜನತೆ ಕೈಗೊಳ್ಳುವ ಯಾವುದೇ ಪ್ರತಿಜ್ಞೆಯ ಅರ್ಥ.
ನಮ್ಮ 73ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ವೇಳೆಯಲ್ಲಿ ಭಾರತದ ಭವಿಷ್ಯದ ಬಗ್ಗೆ ಒಂದು ಹೊಸ ರಾಷ್ಟ್ರೀಯ ಕಥನವನ್ನು ನಮಗೆ ಬರೆದು ಕೊಡಲಾಗುತ್ತಿದೆ. ‘ಹೊಸ ಭಾರತ’ದ ಈ ಕಥನದ ಪ್ರಕಾರ ಆಗಸ್ಟ್ 15, 1947 ಭಾರತ ಸ್ವಾತಂತ್ರ್ಯ ಗಳಿಸಿದ ದಿನ, ಆಗಸ್ಟ್ 5, 2019 ಸಂವಿಧಾನದ ಕಲಮು 370 ಮತ್ತು 35ಎ ರದ್ದುಗೊಳಿಸಿದ ದಿನ; ಮತ್ತು ಆಗಸ್ಟ್ 5, 2020, ಪ್ರಧಾನ ಮಂತ್ರಿಗಳು ಔಪಚಾರಿಕವಾಗಿ ರಾಮಮಂದಿರ ನಿರ್ಮಾಣವನ್ನು ಆರಂಭಿಸಿದ ದಿನ, ಭಾರತದ ನಿಜವಾದ ಸ್ವಾತಂತ್ರ್ಯ ದಿನ.
ಈ ಹೊಸ ಕಥನ ಭಾರತದ ಸ್ವಾತಂತ್ರ್ಯ ಗಾಥೆಯ ಮತ್ತು ಭಾರತೀಯ ಸಂವಿಧಾನದ ಅಡಿಯಲ್ಲಿ ಮೂಡಿಬಂದ ಗಣತಂತ್ರದ ಸಂಪೂರ್ಣ ನಿರಾಕರಣೆಯಾಗಿದೆ, ಅದಕ್ಕೆ ತದ್ವಿರುದ್ಧವಾಗಿದೆ. ಇದು ಪ್ರಧಾನ ಮಂತ್ರಿ ಮೋದಿಯ ಭಾಷಣದ ಸಾರ. ಈ ಬಗ್ಗೆ ಮುಂದೆ ನೋಡೋಣ.
ಭಾರತೀಯ ಸಂವಿಧಾನ ನಮ್ಮ ಜನಗಳ ಮತ್ತು ನಮ್ಮ ದೇಶದ ಜೀವಾಳವಾದ ಶ್ರೀಮಂತ ಬಹುಳತೆ ಮತ್ತು ವೈವಿಧ್ಯತೆಯನ್ನು ಬಿಂಬಿಸುತ್ತದೆ. ಈ ವೈವಿಧ್ಯತೆಯಲ್ಲಿ ಸರ್ವಸಾಮಾನ್ಯತೆಯ ಎಳೆಗಳನ್ನು ಗಟ್ಟಿಗೊಳಿಸಿದಾಗ ಮತ್ತು ಈ ಬಹುಳತೆಯ ಪ್ರತಿಯೊಂದು ಆಯಾಮವನ್ನು-ಭಾಷಿಕ, ಜನಾಂಗೀಯ, ಧಾರ್ಮಿಕ ಇತ್ಯಾದಿಗಳನ್ನು-ಗೌರವಿಸಿದಾಗ ಹಾಗೂ ಸಮಾನತೆಯ ಆಧಾರದಲ್ಲಿ ಕಂಡಾಗ ಮಾತ್ರವೇ ಭಾರತದ ಐಕ್ಯತೆಯನ್ನು ಕ್ರೋಡೀಕರಿಸಲು ಸಾಧ್ಯ. ಈ ವೈವಿಧ್ಯತೆಯ ಮೇಲೆ, ಯಾವುದೇ ತೆರನ ಏಕರೂಪತೆಯನ್ನು ಹೇರುವ ಪ್ರಯತ್ನ ಒಂದು ಸಾಮಾಜಿಕ ಅಂತಃಸ್ಫೋಟಕ್ಕೆ ದಾರಿ ಮಾಡಿಕೊಡುತ್ತದಷ್ಟೇ. ಆರೆಸ್ಸೆಸ್ ಮತ್ತು ಅದರ ರಾಜಕೀಯ ಅಂಗವಾದ ಬಿಜೆಪಿಯು ಸರಕಾರವನ್ನು ಮತ್ತು ಪ್ರಭುತ್ವವನ್ನು ಬಳಸಿಕೊಂಡು ಹೇರಬಯಸುವ ಇಂತಹ ಒಂದು ಧಾರ್ಮಿಕ ಏಕರೂಪತೆ, ಅಗತ್ಯವಾಗಿಯೇ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಹೊರಗೆಸೆದೇ ಬರಲು ಸಾಧ್ಯ. ಇದು ಒಂದು ಸರ್ವಾಧಿಕಾರಶಾಹಿ/ನಿರಂಕುಶಾಧಿಕಾರದ ಅಡಿಯಲ್ಲಿ, ಅದು ತನ್ನ ‘ಆಂತರಿಕ ಶತ್ರುಗಳು’ ಎಂದು ನಿರೂಪಿಸುವವರ ವಿರುದ್ಧ ಫ್ಯಾಸಿಸ್ಟ್ ತೆರನ ವಿಧಾನಗಳನ್ನು ಬಳಸಿಕೊಂಡು ಬರುತ್ತದೆ.
ಇಂತಹ ಒಂದು “ಹೊಸ ಭಾರತ”ದ ಸ್ಥಾಪನೆ ಮೋದಿ ಸರಕಾರದ ಉತ್ಪನ್ನವೇನೂ ಅಲ್ಲ, ಅದಕ್ಕೆ ಸುಮಾರು ಒಂದು ಶತಮಾನದ ಚರಿತ್ರೆಯಿದೆ-1925ರಲ್ಲಿ ಆರೆಸ್ಸೆಸ್‌ನ ಸ್ಥಾಪನೆಯಿಂದ ಆರಂಭಿಸಿ, ಹಿಂದುತ್ವದ ಬಗ್ಗೆ ಸಾವರ್ಕರ್ ಸಿದ್ಧಾಂತಗಳು ಮತ್ತು 1939ರಲ್ಲಿ ಗೋಲ್ವಾಲ್ಕರ್‌ರವರ ಒಂದು ಫ್ಯಾಸಿಸ್ಟ್ ತೆರನ ‘ಹಿಂದೂರಾಷ್ಟ್ರ’ವನ್ನು ಸಾಧಿಸುವ ಸೈದ್ಧಾಂತಿಕ ಹಾಗೂ ಸಂಘಟನಾ ರಚನೆಯ ವರೆಗಿನ ಚರಿತ್ರೆ.
ಭಾರತೀಯ ಜನತೆ ಈ ಕಣ್ಣೋಟವನ್ನು ಮತ್ತೆ-ಮತ್ತೆ ತಿರಸ್ಕರಿಸಿದ್ದಾರೆ, ಸ್ವಾತಂತ್ರ್ಯ ಆಂದೋಲನ ಇದನ್ನು ಸ್ವತಂತ್ರ ಭಾರತ ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರ ಎಂದು ಸಾರುವ ಮೂಲಕ ದೃಢವಾಗಿ ತಿರಸ್ಕರಿಸಿದೆ. ಇದು 1947ರಲ್ಲಿ ದೇಶದ ವಿಭಜನೆ ಮತ್ತು ಪಾಕಿಸ್ತಾನದ ರಚನೆಯೊಂದಿಗೆ ಈಡೇರಿದ ಇಸ್ಲಾಮೀ ಗಣತಂತ್ರದ ಕಣ್ಣೋಟಕ್ಕಿಂತಲೂ ಸಂಪೂರ್ಣ ಭಿನ್ನವಾಗಿತ್ತು. ಆದರೂ ಭಾರತೀಯ ಗಣತಂತ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪದ ಬದಲು ಆರೆಸ್ಸೆಸ್ ಕಣ್ಣೋಟವನ್ನು ಸ್ಥಾಪಿಸುವ ಪ್ರಯತ್ನ ಈ ಎಲ್ಲ ದಶಕಗಳಲ್ಲೂ ಮುಂದುವರೆದು ಈಗಿನ ಸ್ಥಿತಿಯನ್ನು ತಲುಪಿದೆ.
ಭಾರತೀಯ ಸಂವಿಧಾನದ ಮೇಲೆ ಪ್ರಹಾರಗಳು
ಈ “ಹೊಸ ಭಾರತ”ಕ್ಕೆ ಮೊದಲು ಮತ್ತು ಅತ್ಯಂತ ಮುಖ್ಯವಾಗಿ ಬೇಕಾಗಿರುವುದು ಭಾರತೀಯ ಸಂವಿಧಾನದಲ್ಲಿ ನಿರೂಪಿಸಿದ ಮತ್ತು ಮೂರ್ತಗೊಂಡಿರುವ ಹಳೇ ಭಾರತದ ನಾಶ. ಮೋದಿ ಪ್ರಧಾನ ಮಂತ್ರಿಯಾಗಿರುವ ಈ ಬಿಜೆಪಿ ಸರಕಾರದ ಕಳೆದ ಆರು ವರ್ಷಗಳಲ್ಲಿ ನಮ್ಮ ಸಂವಿಧಾನದ ಪ್ರತಿಯೊಂದು ಬುನಾದಿ ಸ್ಥಂಭಗಳನ್ನು-ಜಾತ್ಯತೀತ ಪ್ರಜಾಪ್ರಭುತ್ವ, ಒಕ್ಕೂಟತತ್ವ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು- ಶಿಥಿಲಗೊಳಿಸಿ ಸಂವಿಧಾನದ ಮೇಲೆ ಈ ಪ್ರಹಾರ ತೀವ್ರಗೊಳಿಸಿರುವುದನ್ನು ನೋಡಿದ್ದೇವೆ.
ಸಂವಿಧಾನದ ಮೇಲೆ ಈ ಪ್ರಹಾರದೊಂದಿಗೆ ಅಗತ್ಯವಾಗಿಯೇ ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು, ಪ್ರಾಧಿಕಾರಗಳನ್ನು ಶಿಥಿಲಗೊಳಿಸಲಾಗಿದೆ, ಅವನ್ನು ನಿಷ್ಪ್ರಯೋಜಕಗೊಳಿಸಲಾಗಿದೆ. ಇವು ಸಂವಿಧಾನದ ಕಾರ್ಯನಿರ್ವಹಣೆ ಮತ್ತು ಜನಗಳಿಗೆ ಸಂವಿಧಾನಿಕ ಖಾತ್ರಿಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ರೂಪಿಸಿದ್ದ ತಡೆ ಮತ್ತು ಸಮತೋಲನದ ಸಾಧನಗಳು. ನಮ್ಮ ಗಣತಂತ್ರದ ಮೂರು ಅಂಗಗಳನ್ನು ಸಂವಿಧಾನ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂದು ನಿರೂಪಿಸಿದೆ. ಇವುಗಳಲ್ಲಿ ಪ್ರತಿಯೊಂದೂ ತಮ್ಮ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಪ್ರತ್ಯೇಕವಾಗಿವೆ, ಆದರೆ ಪರಸ್ಪರ ಪೂರಕವಾಗಿವೆ.
ಶಾಸಕಾಂಗ
ಶಾಸಕಾಂಗ, ಅಂದರೆ ಸಂಸತ್ತನ್ನು ತೀವ್ರವಾಗಿ ಶಿಥಿಲಗೊಳಿಸಿ, ಅದನ್ನು “ಬಹುಮತದ ದಬ್ಬಾಳಿಕೆ”ಯ ಮಟ್ಟಕ್ಕೆ ಇಳಿಸಲಾಗಿದೆ. ಸಂಸದೀಯ ವಿಧಿ-ವಿಧಾನಗಳು, ಸಮಿತಿಗಳ ನಿರ್ವಹಣೆಯ ವಿಧಾನಗಳು ಮತ್ತು ಕಲಾಪಗಳು ಎಲ್ಲವನ್ನೂ ಶಿಥಿಲಗೊಳಿಸಲಾಗಿದೆ.
ಜನತೆಯ ಸಾರ್ವಭೌಮತ್ವವನ್ನು ಜನತೆಗೆ ಜವಾಬುದಾರರಾದ ಶಾಸಕರು ಚಲಾಯಿಸುತ್ತಾರೆ ಮತ್ತು ಸರಕಾರ ಈ ಶಾಸಕಾಂಗಕ್ಕೆ ಜವಾಬುದಾರವಾಗಿರುತ್ತದೆ ಎಂಬುದು ಭಾರತೀಯ ಸಂವಿಧಾನದ ಕೇಂದ್ರ ಅಂಶ, ‘ನಾವು, ಜನತೆ’ ನಮ್ಮ ಸಾರ್ವಭೌಮತ್ವವನ್ನು ಹೀಗೆ ಚಲಾಯಿಸುತ್ತೇವೆ. ಇದನ್ನು ಈಗ ಶಿಥಿಲಗೊಳಿಸಲಾಗುತ್ತಿದೆ ಎಂಬರ್ಥದಲ್ಲಿ ಇದು ಅಪಾಯಕಾರಿ. ಸಂಸತ್ತು ಕ್ರಿಯಾಹೀನವಾದರೆ, ಜನತೆಗೆ ಉತ್ತರದಾಯಿಯಾಗುವುದನ್ನು ಕೈಬಿಡಲಾಗುತ್ತದೆ ಮತ್ತು ಸರಕಾರ ಶಾಸಕಾಂಗಕ್ಕೆ ಉತ್ತರದಾಯಿಯಾಗದೆ ತಪ್ಪಿಸಿಕೊಳ್ಳುತ್ತದೆ.
ನ್ಯಾಯಾಂಗ
ಒಂದು ಸ್ವತಂತ್ರ ನ್ಯಾಯಾಂಗವನ್ನು ಸ್ಥಾಪಿಸಿರುವುದು ಕಾರ್ಯಾಂಗದ ಕ್ರಿಯೆಗಳ ಮೂಲಕ ಸಂವಿಧಾನಿಕ ಅಂಶಗಳ ಉಲ್ಲಂಘನೆಯಾಗುವುದಿಲ್ಲ ಎಂದು ಖಾತ್ರಿಪಡಿಸಲು ಮತ್ತು ಸಂವಿಧಾನ ಜನತೆಗೆ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಖಾತ್ರಿಗಳನ್ನು ಎತ್ತಿ ಹಿಡಿಯಲು. ನ್ಯಾಯಾಂಗದ ನಿಷ್ಪಕ್ಷಪಾತತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ, ನ್ಯಾಯಾಂಗದ ಮೇಲ್ವಿಚಾರಣೆ, ಅದರ ಜತೆಗೆ ಜನತೆಯ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆಯೂ ಅಸ್ತಿತ್ವವನ್ನು ಕಳಕೊಳ್ಳುತ್ತವೆ. ಕಳೆದ ಆರು ವರ್ಷಗಳಲ್ಲಿ ಇದನ್ನು ನಾವು ಆತಂಕದಿಂದ ಗಮನಿಸಿದ್ದೇವೆ.
ಚುನಾವಣಾ ಆಯೋಗ
ಭಾರತದ ಚುನಾವಣಾ ಅಯೋಗದ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತತೆ ನಮ್ಮ ಪ್ರಜಾಪ್ರಭುತ್ವದ ಆರೋಗ್ಯವನ್ನು ಕಾಪಾಡುವ ಮೂಲಾಧಾರ. ಇದನ್ನು ಅದು ಎಲ್ಲ ಸ್ಪರ್ಧಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಒಂದು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಮೂಲಕ ಮಾಡುತ್ತದೆ. ಇದಕ್ಕೆ ಧಕ್ಕೆಯಾದರೆ, ಆಗ ಸರಕಾರಗಳು ಜನತೆಯ ತೀರ್ಪು ಅಥವ ಜನಾದೇಶವಾಗಿ ಉಳಿಯುವುದಿಲ್ಲ.
ಸಿಬಿಐ, ಜಾರಿ ನಿರ್ದೇಶನಾಲಯ, ವಿಚಕ್ಷಣಾ ಆಯೋಗ ಮುಂತಾದ ಸಂವಿಧಾನಿಕ ಪ್ರಾಧಿಕಾರಗಳನ್ನು ರೂಪಿಸಿರುವುದು ಕ್ರಿಮಿನಲ್ ಮತ್ತು ಸಿವಿಲ್ ಅಪರಾಧಗಳ ಸರಿಯಾದ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರನ್ನು ಸಂವಿಧಾನ ಸ್ಥಾಪಿಸಿರುವ ನಾಡಿನ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು ಎಂದು. ಇವುಗಳಿಗೆ ಧಕ್ಕೆಯಾದರೆ, ಇವು ಸರಕಾರದ ರಾಜಕೀಯ ಅಂಗಗಳಂತೆ ಕೆಲಸ ಮಾಡಲಾರಂಭಿಸಿದರೆ, ಆಗ ಆಳುವ ಪಕ್ಷ ಮತ್ತು ಅದರ ಸದಸ್ಯರ ಎಲ್ಲ ಅಪರಾಧಗಳು ಮತ್ತು ಭ್ರಷ್ಟಾಚಾರಗಳು ರಕ್ಷಣೆ ಪಡೆಯುತ್ತವೆ, ಅವುಗಳ ವಿರುದ್ಧ ಯಾವ ಕ್ರಮವೂ ಇರುವುದಿಲ್ಲ, ಅದೇ ವೇಳೆಯಲ್ಲಿ ವಿರೋಧಿಗಳಿಗೆ ಕಿರುಕುಳ ಕೊಡಲಾಗುತ್ತದೆ, ಅವರನ್ನು ಬೆದರಿಸಲಾಗುತ್ತದೆ ಮತ್ತು ಅವರ ಬಾಯಿ ಮುಚ್ಚಿಸಲಾಗುತ್ತದೆ.
ಸಂವಿಧಾನ ಮತ್ತು ಅದರ ಸಂಸ್ಥೆಗಳ ಇಂತಹ ಒಂದು ಸರ್ವಾಂಗೀಣ ಸವೆತ ವ್ಯಾಪಕವಾದ ಭ್ರಷ್ಟಾಚಾರ ಮತ್ತು “ಬಂಟ ಬಂಡವಾಳಶಾಹಿ”(ಕ್ರೋನಿ ಕ್ಯಾಪಿಟಲಿಸಂ)ಗೆ ದಾರಿ ಮಾಡಿಕೊಡುತ್ತದೆ. ಇದು ಆಳುವ ಪಕ್ಷಕ್ಕೆ ಬೃಹತ್ ಪ್ರಮಾಣದಲ್ಲಿ ಹಣಬಲದ ಶೇಖರಣೆಯ ದಾರಿಯಾಗುತ್ತದೆ. ಇದು ಒಂದೇ ಹೊಡೆತದಲ್ಲಿ ಪ್ರಜಾಪ್ರಭುತ್ವದ ಗುಣಮಟ್ಟವನ್ನು ಶಿಥಿಲಗೊಳಿಸುತ್ತದೆ. ಇದು ಯಾವುದೇ ಚುನಾವಣೆಯಲ್ಲಿ ಒಂದು ಸರಕಾರಕ್ಕೆ ಸಿಕ್ಕ ಜನಾದೇಶವನ್ನು ಕುದುರೆ ವ್ಯಾಪಾರದ ಮೂಲಕ ಉಲ್ಲಂಘಿಸುವ ಪರಿಸ್ಥಿತಿಗಳನ್ನು ನಿರ್ಮಿಸುತ್ತದೆ. ಈ ಮೂಲಕ ಈಗ ‘ಬಿಜೆಪಿ ಚುನಾವಣೆ ಸೋಲಬಹುದು, ಆದರೂ ಸರಕಾರ ರಚನೆ ಅದರದ್ದೇ’ ಎಂಬ ಪಲ್ಲವಿ ಕೇಳಬರುವಂತಾಗಿದೆ.
ವಿವೇಚನೆಯ ಮೇಲೆ ಪ್ರಹಾರ
ಇಂತಹ ‘ಹೊಸ ಭಾರತ’ದ ಒಂದು ಕಥನ ಯಶಸ್ವಿಯಾಗಬೇಕಾದರೆ ಭಾರತದ ಚರಿತ್ರೆಯನ್ನು, ಅದು ಈ ಕಥನದ ಸೈದ್ಧಾಂತಿಕ ಹೂರಣವನ್ನು ಪೋಷಿಸುವಂತೆ ಮಾಡಲು ಹೊಸದಾಗಿ ಬರೆಯಬೇಕಾಗುತ್ತದೆ. ಇದಕ್ಕನುಗುಣವಾಗಿ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು, ಅದು ವಿಚಾರ ಮತ್ತು ಆಚರಣೆಯಲ್ಲಿ ವಿವೇಚನಾಶೂನ್ಯತೆಯನ್ನು ಪ್ರೋತ್ಸಾಹಿಸುವಂತೆ, ವೈಜ್ಞಾನಿಕ ಮನೋಭಾವವನ್ನು ಪೋಷಿಸುವ ಬದಲು ಕಂದಾಚಾರ/ ಪುರಾಣ/ಕುರುಡು ನಂಬಿಕೆಯನ್ನು ಪ್ರೋತ್ಸಾಹಿಸುವಂತೆ ಪುನರ‍್ರೂಪಿಸಬೇಕಾಗುತ್ತದೆ. ಸಾಂಸ್ಕೃತಿಕ ರಂಗದಲ್ಲಿ ಸಂಸ್ಥೆಗಳು ಮತ್ತು ಅಕಾಡೆಮಿಗಳ ಸ್ವರೂಪವನ್ನು, ಅವು ಭಾರತೀಯ ಸಂಸ್ಕೃತಿಯ ಸಮ್ಮಿಶ್ರ ವಿಕಾಸವನ್ನು ಮರೆಮಾಚುವಂತೆ ಬದಲಿಸಬೇಕು, ಇದಕ್ಕಾಗಿ ಒಂದು ಏಕರೂಪತೆಯನ್ನು ಮತ್ತು ಏಕ-ಸಂಸ್ಕೃತಿ ಕಥನವನ್ನು ಹೇರಲಾಗುತ್ತದೆ. ಇದು ಭಾರತದ ವೈವಿಧ್ಯಮಯ ಮತ್ತು ಬಹುತ್ವದ ಸ್ವರೂಪದಿಂದ ವಿಕಾಸಗೊಂಡ ಸಂಸ್ಕೃತಿಗೆ ಸಂಪೂರ್ಣ ವಿರುದ್ಧವಾಗಿದೆ. ಇತಿಹಾಸದ ಪುನರ್ಲೇಖನ ಮತ್ತು ಪುನರ‍್ರಚನೆ ಮಾಡಬೇಕಾಗುತ್ತದೆ. ಭಾರತದ ಸಮ್ಮಿಶ್ರ ಇತಿಹಾಸದ ಅಧ್ಯಯನದ ಸ್ಥಾನದಲ್ಲಿ ಭಾರತೀಯ ಪೌರಾಣಿಕ ಗ್ರಂಥಗಳು ಬರುತ್ತವೆ. ಪುರಾತತ್ವಶಾಸ್ತ್ರ ನಮ್ಮ ಇತಿಹಾಸದ ಒಂದು ವೈಜ್ಞಾನಿಕ ಅಧ್ಯಯನವನ್ನು ನಡೆಸುವ ಬದಲಾಗಿ ಹಿಂದುತ್ವದ ಅವೈಜ್ಞಾನಿಕ ಹೇಳಿಕೆಗಳನ್ನು , ಚರಿತ್ರೆಯನ್ನು ಸಾಬೀತು ಮಾಡಲು ಸಾಕ್ಷ್ಯಗಳನ್ನು ಉತ್ಪಾದಿಸಬೇಕಾಗುತ್ತದೆ.
ಹೊಸ ಸಾಂಕೇತಿಕತೆ
ಇಂತಹ “ಹೊಸ ಭಾರತ”ದ ಯಶಸ್ಸನ್ನು ನಮ್ಮ ಸಮಾಜದಲ್ಲಿ ಒಂದು ಹೊಸ ಸಾಂಕೇತಿಕತೆಯನ್ನು ನಿರ್ಮಿಸುವ ಮೂಲಕ ಮಾತ್ರವೇ ಕಾಯ್ದುಕೊಳ್ಳಲು ಸಾಧ್ಯ. ಇದಕ್ಕೆ ನೆಹರೂರವರ “ಆಧುನಿಕ ಭಾರತದ ಮಂದಿರ”ಗಳಿಗೆ ಪ್ರತಿಯಾಗಿ ಮಹಾಸೋಂಕಿನ ಸಮಯದಲ್ಲಿ ಭಾರೀ ವೆಚ್ಚದಲ್ಲಿ, ಹಿಟ್ಲರನ ಕುಖ್ಯಾತ ಬರ್ಲಿನ್ ಗುಮ್ಮಟವನ್ನು ಹೋಲುವಂತಹ ಸೆಂಟ್ರಲ್ ವಿಸ್ತಾ, ಭಾರೀ ಪ್ರತಿಮೆಗಳು, ಬುಲೆಟ್ ರೈಲುಗಳು ಮತ್ತು ಇಂತಹುದೇ ಭ್ರಾಮಕ ಉತ್ಪನ್ನಗಳು ಬರುತ್ತವೆ.
ಅಲ್ಲದೆ, ಈ “ಹೊಸ ಭಾರತ”ದ ಕಥನ ಜನಗಳ ಮೆಲೆ ಪ್ರಜ್ಞೆಯ ಮೇಲೆ ಸುಳ್ಳು ಸುದ್ದಿಗಳನ್ನು ಸುರಿಯುವ, ಹುಸಿ ಕಥನಗಳನ್ನು ಹೆಣೆಯುವ ಮತ್ತು ಭಾರತೀಯ ಜನತೆಯನ್ನು ಪೀಡಿಸುತ್ತಿರುವ ನಿಜವಾದ ಸಮಸ್ಯೆಗಳು ಮತ್ತು ಅದು ಉಂಟುಮಾಡುವ ಸಂಕಟಗಳನ್ನು ಹಿನ್ನೆಲೆಗೆ ತಳ್ಳುವಲ್ಲಿ ಶಾಮೀಲಾಗುವ ಒಂದು ಮಾಧ್ಯಮವಿಲ್ಲದೆ ಬಹಳ ದಿನ ಉಳಿಯಲಾರದು.
ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಪ್ರಚಾರಗಳು ಮತ್ತು ಹಿಂಸಾಚಾರದ ಮೂಲಕ ಸಾಮಾಜಿಕ ಉದ್ವಿಗ್ನತೆಗಳನ್ನು ಹರಡಿಸುವುದು ಈ “ಹೊಸ ಭಾರತ”ದ ಭಾಗವಾಗಿ ಬರಬೇಕು, ಇಲ್ಲವಾದರೆ, ಕೋಮುವಾದಿ ಹಿಂದುತ್ವ ವೋಟ್ ಬ್ಯಾಂಕನ್ನು ತನ್ನ ಜೀವನಾಡಿಯಾಗಿ ಕ್ರೋಡೀಕರಿಸಲು ಅದಕ್ಕೆ ಸಾಧ್ಯವಾಗದು.
ಆಗಸ್ಟ್ 5ರ ಅಯೋಧ್ಯೆ ಭಾಷಣ
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಕೆಲಸವನ್ನು ಆರಂಭಿಸಿದ ಮೋದಿ ಭಾಷಣದಲ್ಲಿ, ಒಂದರ್ಥದಲ್ಲಿ, “ಹೊಸ ಭಾರತ”ದ ಈ ಕಣ್ಣೋಟ ಮೂರ್ತೀಭವಿಸಿತ್ತು.
ಸುಪ್ರಿಂ ಕೋರ್ಟ್ ಅಯೋಧ್ಯಾ ವಿವಾದದ ಮೇಲೆ ಒಂದು ತೀರ್ಪು ನೀಡಿತು, ಆದರೆ ನ್ಯಾಯವನ್ನಲ್ಲ. ಅದು ಬಾಬ್ರಿ ಮಸೀದಿ ಧ್ವಂಸ ಒಂದು ಕಾನೂನಿನ ಕ್ರಿಮಿನಲ್ ಉಲ್ಲಂಘನೆ ಎಂದು ಹೇಳಿತು, ಅದರಲ್ಲಿ ತೊಡಗಿದ್ದವರನ್ನು ತ್ವರಿತವಾಗಿ ಶಿಕ್ಷಿಸಬೇಕು ಎಂದಿತು. ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣದ ಕೆಲಸವನ್ನು ಮಸೀದಿಯ ಧ್ವಂಸದಲ್ಲಿ ತೊಡಗಿದ್ದವರಿಗೇ ಒಪ್ಪಿಸಿತು. ಆದರೆ ಈ ನಿರ್ಮಾಣವನ್ನು ಒಂದು ಟ್ರಸ್ಟ್ ಕೈಗೊಳ್ಳಬೇಕಿತ್ತು.
ಪ್ರಧಾನ ಮಂತ್ರಿಗಳು ಮತ್ತು ಸರಕಾರ ಈ ಕೆಲಸವನ್ನು ಭಂಡತನದಿಂದ ತಾವೇ ವಹಿಸಿಕೊಂಡರು, ಮಂದಿರ ನಿರ್ಮಾಣದ ಆರಂಭವನ್ನು ಒಂದು ಅಧಿಕೃತ ಸರಕಾರೀ ಸಮಾರಂಭವಾಗಿ ಪರಿವರ್ತಿಸಿದರು. ಜಾತ್ಯತೀತ ಪ್ರಜಾಸತ್ತಾತ್ಮಕ ಸಂವಿಧಾನದ ಅಡಿಯಲ್ಲಿ ಪ್ರತಿಜ್ಞೆ ಕೈಗೊಂಡು ಅಧಿಕಾರದಲ್ಲಿರುವ ಪ್ರಧಾನ ಮಂತ್ರಿ ಅದನ್ನೇ ಉಲ್ಲಂಘಿಸಲು ಮುಂದಾದರು. ಪ್ರತಿಯೊಬ್ಬ ನಾಗರಿಕರಿಗೆ ಸಂವಿಧಾನ ಧರ್ಮದ ಆಯ್ಕೆಯ ಖಾತ್ರಿಯನ್ನು ಕೊಟ್ಟಿದೆ. ಸರಕಾರ ಅದನ್ನು ರಕ್ಷಿಸಬೇಕು ಮತ್ತು ಖಾತ್ರಿಪಡಿಸಬೇಕು. ಸರಕಾರಕ್ಕೆ ತನ್ನದೇ ಆದ ಧರ್ಮ ಎಂಬುದಿಲ್ಲ. ಈ ಅನುಲ್ಲಂಘನೀಯ ಸಂವಿಧಾನಿಕ ಪ್ರತಿಪಾದನೆಯನ್ನು ಸ್ವತಃ ಪ್ರಧಾನ ಮಂತ್ರಿಗಳೇ ಗಾಳಿಗೆ ತೂರಿದರು. ಈ ಬಹಿರಂಗ ಉಲ್ಲಂಘನೆ “ಹೊಸ ಭಾರತ”ವನ್ನು ಆರೆಸ್ಸೆಸ್‌ನ ರಾಜಕೀಯ ಯೋಜನೆಯ ಲಾಂಛನವಾಗಿಸುವ ಸಂಕೇತವಾಗಿದೆ.
ಅವರ ಭಾಷಣದ ಅತ್ಯಂತ ಕೆಟ್ಟ ಅಂಶವೆಂದರೆ ಈ ಮಂದಿರ ನಿರ್ಮಾಣದ ಆಂದೋಲನವನ್ನು ರಾಷ್ಟ್ರೀಯ ಆಂದೋಲನದೊಂದಿಗೆ ಹೋಲಿಸಿದ್ದು. “ನಮ್ಮ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥ ತ್ಯಾಗ ಮಾಡದ ಸ್ಥಳವೇ ಇಲ್ಲ. ಆಗಸ್ಟ್ 15 ಲಕ್ಷಾಂತರ ಜನಗಳ ತ್ಯಾಗಗಳು ಮತ್ತು ಸ್ವಾತಂತ್ರ್ಯದ ಆಳವಾದ ಹಂಬಲದ ಸಾಕಾರ. ಅದೇ ರೀತಿಯಲ್ಲಿ, ರಾಮಮಂದಿರದ ನಿರ್ಮಾಣಕ್ಕಾಗಿ ಹಲವು ಪೀಳಿಗೆಗಳವರು ಹಲವು ಶತಮಾನಗಳ ಕಾಲ ನಿಸ್ವಾರ್ಥ ತ್ಯಾಗಗಳನ್ನು ಮಾಡಿದ್ದಾರೆ”ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಹೋರಾಟ ಎಲ್ಲರನ್ನೂ ಒಳಗೊಳ್ಳುವ ಒಂದು ಭಾರತದ ಕಣ್ಣೋಟವನ್ನು ಹೊಂದಿತ್ತು, ತದ್ವಿರುದ್ಧವಾಗಿ, ಆರೆಸ್ಸೆಸ್‌ನದ್ದು ಹಲವರನ್ನು ಹೊರಗಿಡುವ ಒಂದು ಭಾರತದ ಕಣ್ಣೋಟ. ಈ ಎಲ್ಲರನ್ನೂ ಒಳಗೊಳ್ಳುವ ಕಣ್ಣೋಟ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ಅಣಿನೆರಿಕೆಗೆ ಸ್ಫೂರ್ತಿ ನೀಡಿತು. ಅದರ ಅಂತಿಮ ಫಲಶ್ರುತಿ ಆಗಸ್ಟ್ 15, 1947ರ ಸ್ವಾತಂತ್ರ್ಯ. ಹಲವರನ್ನು ಹೊರಗಿಡುವ “ಹೊಸ ಭಾರತ”ದ ಪ್ರಸಕ್ತ ಕಥನ ಭಾರತದ ಸ್ವಾತಂತ್ರ್ಯ ಹೋರಾಟ ಪ್ರತಿನಿಧಿಸಿದ ಪ್ರತಿಯೊಂದು ತತ್ವದ ನೇರ ನಿರಾಕರಣೆಯಾಗಿದೆ.
ಮಹತ್ವದ ಸಂಗತಿಯೆಂದರೆ, ಆರೆಸ್ಸೆಸ್ ಎಂದೂ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ. ಆರೆಸ್ಸೆಸ್‌ನ ಬಗ್ಗೆ ಸಹಾನುಭೂತಿಪರ ವ್ಯಾಖ್ಯಾನಗಳು (ವಾಲ್ಟರ್ ಕೆ ಆಂಡರ್ಸನ್ ಮತ್ತು ಶ್ರೀಧರ ದಾಮ್ಲೆಯವರ ‘ದಿ ಬ್ರದರ್‌ಹುಡ್ ಇನ್ ಸ್ಯಾಫ್ರನ್’ ಇವುಗಳಲ್ಲೊಂದು) ಕೂಡ ಸ್ವಾತಂತ್ರ್ಯ ಆಂದೋಲನದಲ್ಲಿ ಆರೆಸ್ಸೆಸ್‌ನ ಸಂಪೂರ್ಣ ಗೈರು ಹಾಜರಿ ಎಂದೇ ಹೇಳಬಹುದಾದನ್ನು, ಮತ್ತು ಅದರಿಂದಾಗಿ ಅದು ಬ್ರಿಟಿಶರಿಂದ ಗಳಿಸಿದ ರಿಯಾಯ್ತಿಗಳನ್ನು ವಿವರವಾಗಿ ಕೊಟ್ಟಿವೆ. ಆರೆಸ್ಸೆಸ್‌ನ ಸಿದ್ಧಾಂತಿ, ದಿವಂಗತ ನಾನಾಜಿ ದೇಶಮುಖ್ ಕೂಡ “ಆರೆಸ್ಸೆಸ್ ಒಂದು ಸಂಘಟನೆಯಾಗಿ ವಿಮೋಚನಾ ಹೋರಾಟದಲ್ಲಿ ಪಾತ್ರ ವಹಿಸಲಿಲ್ಲ ಏಕೆ?” ಎಂಬ ಪ್ರಶ್ನೆಯನ್ನು ಎತ್ತಿದರು.
1942ರ ಕ್ವಿಟ್ ಇಂಡಿಯಾ ಆಂದೋಲನದ ವೇಳೆಯಲ್ಲಿ ಬಾಂಬೆ ಗೃಹ ಇಲಾಖೆ “ಸಂಘ ಕಟ್ಟುನಿಟ್ಟಾಗಿ ಕಾನೂನಿನ ಒಳಗೇ ತನ್ನನ್ನು ಇರಿಸಿಕೊಂಡಿತು, ನಿರ್ದಿಷ್ಟವಾಗಿ, ಆಗಸ್ಟ್ 1942ರಲ್ಲಿ ಭುಗಿಲೆದ್ದ ಗಲಭೆಗಳಲ್ಲಿ ಭಾಗವಹಿಸದೆ ದೂರವೇ ಉಳಿಯಿತು” ಎಂದು ದಾಖಲಿಸಿದೆ.
ಈ ಸತ್ಯಗಳನ್ನು ಮರೆಮಾಚಲು, ಆರೆಸೆಸ್/ಬಿಜೆಪಿ ಕಮ್ಯುನಿಸ್ಟರ ವಿರುದ್ಧ, ಅವರು 1942ರ ಕ್ವಿಟ್ ಇಂಡಿಯಾ ಚಳುವಳಿಗೆ ವಿಶ್ವಾಸಘಾತ ಮಾಡಿದರು ಎಂದು ನಿಂದಿಸುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಕ್ವಿಟ್ ಇಂಡಿಯ ಆಂದೋಲನದ 50ನೇ ವಾರ್ಷಿಕೋತ್ಸವದ ಸ್ಮರಣಾರ್ಥ, ಆಗಸ್ಟ್ 9, 1942ರಂದು ನಡೆದ ಸಂಸತ್ತಿನ ಮಧ್ಯರಾತ್ರಿಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ ಆಗಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮರವರು ಏನು ಹೇಳಿದ್ದರು ಎಂದು ನೆನಪಿಸಿಕೊಳ್ಳುವುದು ಒಳ್ಳೆಯದು: “ಕಾನ್ಪುರ, ಜಮಷೇದ್‌ಪುರ ಮತ್ತು ಅಹಮದಾಬಾದಿನ ಗಿರಣಿಗಳಲ್ಲಿ ವ್ಯಾಪಕವಾದ ಮುಷ್ಕರಗಳ ನಂತರ, ದಿಲ್ಲಿಯಿಂದ ಲಂಡನಿನಲ್ಲಿದ್ದ ಗೃಹ ಕಾರ್ಯದರ್ಶಿಗೆ ಕಳಿಸಿದ ಸಪ್ಟಂಬರ್ 5, 1942ರ ಒಂದು ಟಿಪ್ಪಣಿ ಭಾರತ ಕಮ್ಯುನಿಸ್ಟ್ ಪಕ್ಷದ ಬಗ್ಗೆ ವರದಿ ಮಾಡುತ್ತ ಅದರ ಹಲವಾರು ಸದಸ್ಯರ ವರ್ತನೆ, ಅದು ಬ್ರಿಟಿಶ್-ವಿರೋಧಿ ಕ್ರಾಂತಿಕಾರಿಗಳಿಂದ ಕೂಡಿದೆ ಎಂದು ಸದಾ ಸ್ಪಷ್ಟವಾಗಿರುವ ಸಂಗತಿಯನ್ನು ಸಾಬೀತು ಮಾಡುತ್ತದೆ ಎಂದಿತು” ಎಂದು ರಾಷ್ಟ್ರಪತಿ ಶರ್ಮ ಅವರು ಹೇಳಿದರು.
ಈ ಬಗ್ಗೆ ಬೇರೇನಾದರೂ ಹೇಳುವ ಅಗತ್ಯವಿದೆಯೇ?
ಭಾರತದ ಭವಿಷ್ಯದ ನಾಶವನ್ನು ತಡೆಯಬೇಕು
ಈ “ಹೊಸ ಭಾರತ” ಭಾರತೀಯ ಇತಿಹಾಸದ ಪುನರ್ಲೇಖನ ಮಾಡುತ್ತದಷ್ಟೇ ಅಲ್ಲ, ಭಾರತೀಯ ಸಂವಿಧಾನ, ಅದರ ಸಹಯೋಗಿ ಸಂಸ್ಥೆಗಳು, ಪ್ರಾಧಿಕಾರಗಳು, ಅದು ಜನರಿಗೆ ನೀಡಿರುವ ಖಾತ್ರಿಗಳು, ಜನರ ಬದುಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ನಾಶಮಾಡುತ್ತದಷ್ಟೇ ಅಲ್ಲ, ಘರ್ಷಣೆ ಮತ್ತು ದ್ವೇಷವನ್ನು ಪ್ರೋತ್ಸಾಹಿಸಿ ಹಾಗೂ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹೆಚ್ಚೆಚ್ಚು ದಾಳಿಗಳನ್ನು ನಡೆಸಿ ಭಾರತದ ಭವಿಷ್ಯವನ್ನು ಕೂಡ ಶಿಥಿಲಗೊಳಿಸುತ್ತದೆ.
ಈ “ಹೊಸ ಭಾರತ” ದೇಶದ ಆರ್ಥಿಕ ಸ್ವಾವಲಂಬನೆಯನ್ನು ಮತ್ತು ಬುನಾದಿಗಳನ್ನು ಕೂಡ ಶಿಥಿಲಗೊಳಿಸುತ್ತದೆ. ಕಳೆದ ಆರು ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆಯ ನಾಶ ಇದಕ್ಕೆ ಸಾಕ್ಷಿ. ರಾಷ್ಟ್ರೀಯ ಆಸ್ತಿಗಳ ಲೂಟಿ, ಸಾರ್ವಜನಿಕ ವಲಯದ ಸಾರಾಸಗಟು ಖಾಸಗೀಕರಣ, ಭಾರತದ ಖನಿಜ ಸಂಪತ್ತಿನ, ಭಾರತದ ಅರಣ್ಯಗಳ, ಹಸಿರು ಆವರಣದ ಲೂಟಿ, ಮತ್ತು ಕಾರ್ಮಿಕ ವರ್ಗ ಹಾಗೂ ದುಡಿಯುವ ಜನರ ಸಂವಿಧಾನಿಕ ಹಕ್ಕುಗಳ ರದ್ಧತಿ-ಇದು ಪ್ರಸಕ್ತ ಆರ್ಥಿಕ ನೀಲನಕ್ಷೆ. ಭಾರತದ ಸಂಪತ್ತನ್ನು ಸಾರಾಸಗಟಾಗಿ ವಿದೇಶಿ ಮತ್ತು ದೇಶೀ ಕಾರ್ಪೊರೇಟ್‌ಗಳ ಗರಿಷ್ಟ ಲಾಭಗಳಿಗಾಗಿ ಬಿಟ್ಟುಕೊಡುವುದನ್ನು ಇದು ತೋರಿಸುತ್ತದೆ. ಭಾರತದ ಕೃಷಿಯ ಕಂಪನೀಕರಣ, ಅಗತ್ಯ ಸರಕುಗಳ ಕಾಯ್ದೆಯನ್ನು, ರೈತರಿಗೆ ದೊರೆತಿರುವ ಕನಿಷ್ಟ ಬೆಂಬಲ ಬೆಲೆ, ಬೆಲೆ ಹತೋಟಿಗಳು, ಖರೀದಿ ಮುಂತಾದ ಕನಿಷ್ಟ ರಕ್ಷಣೆಗಳನ್ನೂ ರದ್ದು ಮಾಡುವ ಈಗಿನ ಸುಗ್ರೀವಾಜ್ಞೆಗಳು ಯಾವುದೇ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಂಪೂರ್ಣ ನಾಶಕ್ಕೆ ದಾರಿ ಮಾಡಿಕೊಡುತ್ತವೆ, ಕೃಷಿ ವ್ಯಾಪಾರೀ ಕಂಪನಿಗಳ ಲಾಭಗಳನ್ನು ಹಿಗ್ಗಿಸಿ ಆಹಾರ ಕೊರತೆಯ ಅಪಾಯವನ್ನು ಸೃಷ್ಟಿಸುತ್ತವೆ. ಇದು ನಮ್ಮ ಅನ್ನದಾತರ ವಿನಾಶ.
ಈ “ಹೊಸ ಭಾರತ”, ಹೀಗೆ, ನಮ್ಮ ಸಂವಿಧಾನಿಕ ವ್ಯವಸ್ಥೆಯ ಅಸ್ತಿತ್ವಕ್ಕೇ ಬಿಕ್ಕಟ್ಟನ್ನು ತರುತ್ತದೆ. ಇದು ವಿಶಾಲ ಭಾರತೀಯ ಜನಸ್ತೋಮಗಳ ಜೀವನೋಪಾಯ, ಸ್ವಾತಂತ್ರ್ಯ, ಘನತೆ ಮತ್ತು ಸಮೃದ್ಧಿಯ ಅಸ್ತಿತ್ವವನ್ನೂ ಬಿಕ್ಕಟ್ಟಿಗೆ ಒಳಗಾಗಿಸುತ್ತದೆ, ಭಾರತೀಯ ಬಹುತ್ವ, ಅದರ ಭಾಷಾ ವೈವಿಧ್ಯತೆ ಹಾಗೂ ಒಕ್ಕೂಟ ತತ್ವದ ಅಸ್ತಿತ್ವಕ್ಕೂ ಸಂಚಕಾರ ತರುತ್ತದೆ, ಮತ್ತು ಪ್ರಜಾಪ್ರಭುತ್ವ, ಜನತೆಯ ಹಕ್ಕುಗಳು ಹಾಗೂ ವಿವೇಚನಾಶೀಲತೆ ಮತ್ತು ತರ್ಕಶೀಲತೆಗೂ ಬಿಕ್ಕಟ್ಟು ತರುತ್ತದೆ.
ಈ “ಹೊಸ ಭಾರತ”ದ ಈ ಅಪಾಯಗಳನ್ನು ಪ್ರತಿರೋಧಿಸಬೇಕಾಗಿದೆ, ಸೋಲಿಸಬೇಕಾಗಿದೆ. ಇದು ಈ ಸ್ವಾತಂತ್ರ್ಯ ದಿನದಂದು ಭಾರತೀಯ ಜನತೆ ಕೈಗೊಳ್ಳುವ ಯಾವುದೇ ಪ್ರತಿಜ್ಞೆಯ ಅರ್ಥ.