ಭಾಷಾವಾರು ರಾಜ್ಯಗಳ ರಚನೆಗಾಗಿನ ಹೋರಾಟದಲ್ಲಿ ಕಮ್ಯುನಿಸ್ಟರು ಪಥಪ್ರದರ್ಶಕ ಪಾತ್ರವನ್ನು ವಹಿಸಿದ್ದರು. ವಿಶಾಲಾಂಧ್ರ, ಐಕ್ಯ ಕೇರಳ ರಚನೆಗಾಗಿನ ಹೋರಾಟದ ಹೊರತಾಗಿ ಮಹಾರಾಷ್ಟ್ರ ರಚನೆಯಲ್ಲಿ ನಾಯಕತ್ವ ವಹಿಸಿದ್ದ ‘ಸಂಯುಕ್ತ ಮಹಾರಾಷ್ಟ್ರ ಸಮಿತಿ’ಯಲ್ಲಿ ಅನೇಕ ಕಮ್ಯುನಿಸ್ಟರು ಮತ್ತು ಎಡ ಪಂಥೀಯ ಮುಖಂಡರು ಪ್ರಮುಖ ಪಾತ್ರ ವಹಿಸಿದ್ದರು. ಮತ್ತೊಂದೆಡೆ, ಆರ್.ಎಸ್.ಎಸ್. ಮತ್ತು ಅದರ ಮುಖ್ಯಸ್ಥ ಗೋಲ್ವಾಲ್ಕರ್ ಭಾಷಾವಾರು ಪ್ರಾಂತಗಳ ರಚನೆಯನ್ನು ವಿರೋಧಿಸಿದರು. ೧೯೫೬ ರಲ್ಲಿ, ರಾಜ್ಯಗಳ ಪುನರ್ ವಿಂಗಡನಾ ಆಯೋಗ(ಎಸ್.ಆರ್.ಸಿ.) ಭಾಷಾವಾರು ರಾಜ್ಯಗಳ ರಚನೆಗೆ ಶಿಫಾರಸು ಮಾಡಿತು. ಆದರೆ ಮಹಾರಾಷ್ಟ್ರ- ಗುಜರಾತಿಗೆ ದ್ವಿಭಾಷಾ ರಾಜ್ಯದ ಶಿಫಾರಸು ಮಾಡಿತು. ಭಾರತ ಸರ್ಕಾರವು ಮುಂಬಯಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಸಿತು. ಭಾರಿ ಪ್ರತಿಭಟನೆಗಳು ಆ ಇಡೀ ಪ್ರದೇಶವನ್ನೇ ನಡುಗಿಸಿದವು ಮತ್ತು ಕಮ್ಯುನಿಸ್ಟರು ದೇಶದ ಇತರೆಡೆಗಳಲ್ಲಿ ಕೂಡ ಸೌಹಾರ್ದ ಚಳುವಳಿಯನ್ನು ಕಟ್ಟಿದರು. ಮಹಾರಾಷ್ಟ್ರದಲ್ಲಿ, ಆ ಹೋರಾಟದ ಸಂದರ್ಭದಲ್ಲಿ ಭದ್ರತಾ ಪಡೆಗಳು ೧೦೬ ಜನರನ್ನು ಗುಂಡು ಹೊಡೆದು ಸಾಯಿಸಿದವು. ಅಂತಿಮವಾಗಿ, ಕೇಂದ್ರ ಸರ್ಕಾರವು ಬೇಡಿಕೆಯನ್ನು ಒಪ್ಪಲೇಬೇಕಾತು, ಮೇ ೧, ೧೯೬೦ರಂದು ಮುಂಬಯಿಯನ್ನು ರಾಜಧಾನಿಯನ್ನಾಗಿ ಮಾಡಿ ಮರಾಠಿ ಮಾತನಾಡುವ ರಾಜ್ಯವಾಗಿ ಮಹಾರಾಷ್ಟವನ್ನು, ಮತ್ತು ಗುಜರಾತಿ ಮಾತನಾಡುವ ರಾಜ್ಯವಾಗಿ ಗುಜರಾತನ್ನು ರಚಿಸಲಾಯಿತು.
ಈ ವಿಷಯದಲ್ಲಿ ಕಮ್ಯುನಿಸ್ಟ್ ಪಕ್ಷದ ತಿಳುವಳಿಕೆಯನ್ನು ರಾಜ್ಯಗಳ ಪುನರ್ ವಿಂಗಡನಾ ಆಯೋಗಕ್ಕೆ ಜೂನ್ ೧೯೫೪ ರಲ್ಲಿ ಸಲ್ಲಿಸಲಾದ ಮನವಿ ಪತ್ರದಲ್ಲಿ ಸವಿಸ್ತಾರವಾಗಿ ನೀಡಲಾಗಿದೆ. ಅದರ ಕೆಲವು ಅಂಶಗಳು ಇಲ್ಲಿವೆ:
“ರಾಜ್ಯಗಳ ಪುನರ್ ವಿಂಗಡನೆಯ ಕುರಿತು ಪರಿಶೀಲನೆ ನಡೆಸಿ ವರದಿ ಮಾಡಲು ಭಾರತ ಸರ್ಕಾರವು ಒಂದು ಆಯೋಗವನ್ನು ಕೊನೆಗೂ ನೇಮಿಸಿರುವುದು ನಮಗೆ ಸಂತಸ ತಂದಿದೆ. ಭಾಷಾವಾರು ರಾಜ್ಯಗಳ ರಚನೆಗಾಗಿ ದೇಶಾದ್ಯಂತ ನಡೆಯುತ್ತಿರುವ ಚಳುವಳಿಯನ್ನು ಇನ್ನು ಮುಂದೆಯೂ ಕಡೆಗಣಿಸುವುದು ಯುಕ್ತವಲ್ಲ ಎಂಬುದಕ್ಕೆ ಭಾರತ ಸರ್ಕಾರ ಮನ್ನಣೆ ನೀಡಿದಂತೆ ಎಂಬುದು ನಮ್ಮ ಅಭಿಪ್ರಾಯ.
“ಆದಾಗ್ಯೂ, ಭಾಷಾವಾರು ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದೆ, ಅದರ ಆರ್ಥಿಕ ಕಾರ್ಯಸಾಧ್ಯತೆ, ಆಡಳಿತಾತ್ಮಕ ಅನುಕೂಲತೆಗಳನ್ನೂ, ಮತ್ತು ರಾಷ್ಟ್ರೀಯ ಐಕ್ಯತೆ ಹಾಗೂ ಭದ್ರತೆಯನ್ನೂ ಪರಿಶೀಲಿಸುತ್ತದೆ ಎಂದು ಪ್ರಧಾನ ಮಂತ್ರಿಗಳು, ಆಯೋಗವನ್ನು ನೇಮಿಸುವುದಾಗಿ ಪ್ರಕಟಿಸುತ್ತಾ ಸಂಸತ್ತಿನಲ್ಲಿ ನೀಡಿದ ಹೇಳಿಕೆಯು ಸಹಜವಾಗಿಯೇ ಸಾರ್ವಜಕರಲ್ಲಿ ಅನುಮಾನವನ್ನು ಸೃಷ್ಟಿಸಿತು; ಭಾಷಾವಾರು ರಾಜ್ಯಗಳ ರಚನೆಯ ಬೇಡಿಕೆಯನ್ನು, ಕೆಲವು ಪ್ರಕರಣಗಳಲ್ಲಿಯಾದರೂ, ‘ನಿರಾಕರಿಸಲು ಒಂದು ಕಾರಣ ಹುಡುಕಲು’ ಈ ಆಯೋಗ ಎಂಬ ಸಂದೇಹ ಜನರಲ್ಲಿ ಹುಟ್ಟಿತು.
“ಪ್ರಸ್ತುತ ಭಾರತದಲ್ಲಿನ ರಾಜ್ಯಗಳ ಹಂಚಿಕೆಗೆ ಯಾವುದೇ ವಿವೇಚನಾತ್ಮಕ ಆಧಾರವಿರಲಿಲ್ಲ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಪ್ರಧಾನಿಯವರು ತಾವೇ ಹೇಳಿದಂತೆ, ಇವತ್ತಿನ ವ್ಯವಸ್ಥೆಯು ‘ಬಹುಮಟ್ಟಿಗೆ ಐತಿಹಾಸಿಕ ಪ್ರಕ್ರಿಯೆಗಳ ಮತ್ತು ಭಾರತದಲ್ಲಿನ ಬ್ರಿಟಿಷ್ ಅಧಿಕಾರದ ವಿಸ್ತರಣೆ ಹಾಗೂ ಕ್ರೋಢೀಕರಣಗಳ ಪರಿಣಾಮ’. ಇದಕ್ಕೂ ಪ್ರಜಾಸತ್ತಾತ್ಮಕ ಜೀವನ ಹಾಗೂ ಆಡಳಿತವನ್ನು ಕಟ್ಟುವುದಕ್ಕೂ ಏನೇನೂ ಸಂಬಂಧವಿಲ್ಲ. ಅದು ಬ್ರಿಟಿಷರು ನಮ್ಮ ಜನ ವಿಭಾಗಗಳ ನಡುವೆ ತಿಕ್ಕಾಟಗಳನ್ನು ಉತ್ತೇಜಿಸಲು ನೆರವಾಗಿದೆಯಷ್ಟೇ, ಆ ಮೂಲಕ ಪ್ರಜಾಸತ್ತಾತ್ಮಕ ಚಳುವಳಿಯನ್ನು ಛಿದ್ರಗೊಳಿಸಲು ಸಹಾಯ ಮಾಡಿದೆ.
“ಇಂತಹ ತಿಕ್ಕಾಟಗಳನ್ನು ಪೋಷಿಸುವ ಮತ್ತು ನಮ್ಮ ಪ್ರಜಾಸತ್ತಾತ್ಮಕ ಚಳುವಳಿಯನ್ನು ಛಿದ್ರಗೊಳಿಸುವ ಉದ್ದೇಶಪೂರ್ವಕ ಪ್ರಯತ್ನಗಳ ವಿರುದ್ಧವೇ ನಮ್ಮ ದೇಶದಲ್ಲಿನ ರಾಷ್ಟ್ರೀಯ ಚಳುವಳಿಯು ಭಾಷಾವಾರು ಪ್ರಾಂತಗಳ ರಚನೆಯ ಬೇಡಿಕೆಯನ್ನು ಎತ್ತಿತು. ಆ ಬೇಡಿಕೆಯನ್ನು ಎತ್ತಿದ್ದು ಭಾರತದ ಏಕತೆಯನ್ನು ಛಿದ್ರಗೊಳಿಸುವ ಉದ್ದೇಶದಿಂದಾಗಿರದೇ, ಅದು ಇಡೀ ನಮ್ಮ ಜನಸಮುದಾಯವನ್ನು ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಜೀವನದ ಎಲ್ಲಾ ಆಯಾಮಗಳಲ್ಲೂ ಭಾಗವಹಿಸುವಂತೆ ಮಾಡಿ ಆ ಮೂಲಕ ಭಾರತದ ಐಕ್ಯತೆ ಮತ್ತು ಸಮಗ್ರತೆಯನ್ನು ಬಲಪಡಿಸುವುದಕ್ಕಾಗಿಯೇ ಆಗಿದೆ.”
ʻʻಹೀಗೆ ಭಾಷಾವಾರು ರಾಜ್ಯಗಳಿಗಾಗಿನ ನಮ್ಮ ಜನರ ಹೋರಾಟವು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿನ ನಮ್ಮ ಹೋರಾಟದ ಅವಿಭಾಜ್ಯ ಅಂಗವಾಗಿದೆ. ಭಾಷಾವಾರು ರಾಜ್ಯಗಳ ರಚನೆಯು ನಮ್ಮ ಒಟ್ಟು ಜನಸಮೂಹವು ದೇಶದ ಆರ್ಥಿಕ ಹಾಗೂ ಬದುಕಿನ ಪ್ರಜಾಸತ್ತಾತ್ಮಕ ಮರುನಿರ್ಮಾಣದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಬೇಕು ಎನ್ನುವುದರ ಪೂರ್ವಭಾವಿ ಷರತ್ತು ಎಂದು ಕಮ್ಯುನಿಸ್ಟ್ ಪಕ್ಷ ಅಭಿಪ್ರಾಯಪಡುತ್ತದೆ. ಅಷ್ಟೇ ಅಲ್ಲ, ಅದಿಲ್ಲದೇ ದೇಶವು ಪ್ರಗತಿ ಹಾಗೂ ಸಮೃದ್ಧಿಯ ವಿಶಾಲ ಹಾದಿಯಲ್ಲಿ ಹೋಗಲು ಸಾಧ್ಯವಿಲ್ಲ. ಅದಕ್ಕೂ ಮಿಗಿಲಾಗಿ, ವಿವಿಧ ಭಾಷೆಗಳನ್ನಾಡುವ ಎಲ್ಲಾ ಜನರ ಪ್ರಜಾಸತ್ತಾತ್ಮಕ ಸಂಸ್ಕೃತಿಯು ಪೂರ್ಣವಾಗಿ ಅರಳಲು ಮತ್ತು ಅವರ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಇದು ತೀರಾ ಅವಶ್ಯಕವಾದದ್ದು. ಪ್ರಜಾಪ್ರಭುತ್ವದ ಆಧಾರದಲ್ಲಿ ಭಾರತದ ಐಕ್ಯತೆಯನ್ನು ಕಟ್ಟುವ ಸಲುವಾಗಿ ಒಂದು ಅಚಲವಾದ ಭದ್ರ ಬುನಾದಿಯನ್ನು ಹಾಕಲೂ ಸಹ ಇದು ಅವಶ್ಯಕ; ಸಕಲ ಜನಗಳ ಸಮಾನತೆಗಾಗಿ ಒಂದು ಸಮೃದ್ಧ, ಪ್ರಗತಿಪರ ಹಾಗೂ ಪ್ರಜಾಸತ್ತಾತ್ಮಕ ಭಾರತಕ್ಕಾಗಿ ಎಲ್ಲರೂ ಸ್ವಯಂಪ್ರೇರಿತರಾಗಿ ಏಕಮನಸ್ಸಿನಿಂದ ಹೋರಾಡಲು ಕೂಡ ಅದು ಅಗತ್ಯ.”
“ಬ್ರಿಟಿಷರನ್ನು ಹೊರ ಹಾಕಿದ ಆಗಸ್ಟ್ ೧೯೪೭ರಿಂದ, ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಬದುಕಿನ ಎಲ್ಲಾ ಆಯಾಮಗಳಲ್ಲೂ ಪೂರ್ಣವಾಗಿ ಭಾಗವಹಿಸಲು ತಮಗೆ ಹಕ್ಕು ಮತ್ತು ಅವಕಾಶಗಳು ಇರಬೇಕು ಎಂದು ಭಾರತದ ಜನರು ಆಗ್ರಹಪೂರ್ವಕವಾಗಿ ಹಂಬಲಿಸುವುದು ಸಹಜವೇ ಆಗಿದೆ. ಭಾಷಾವಾರು ರಾಜ್ಯಗಳ ರಚನೆಗಾಗಿ ಬೆಳೆಯುತ್ತಿರುವ ಹಕ್ಕೊತ್ತಾಯವು ದೇಶದಲ್ಲಿನ ಪ್ರಜಾಸತ್ತಾತ್ಮಕ ಉತ್ಕ್ರಾಂತಿಯ ಭಾಗವೇ ಆಗಿದೆ…
“ಈಗಿನ ಹೈದರಾಬಾದ್ ಸಂಸ್ಥಾನದ ವಿಘಟನೆ ಮಾಡದೇ ದಕ್ಷಿಣದಲ್ಲಿ ಯಾವುದೇ ಭಾಷಾವಾರು ರಾಜ್ಯದ ರಚನೆಯನ್ನು ವಿವೇಚನಾತ್ಮಕ ಆಧಾರದಲ್ಲಿ ಮಾಡಲಾಗದು ಎಂಬುದನ್ನು ಕೇಂದ್ರ ಸಮಿತಿಯು ನಿಮಗೆ ಮನಗಾಣಿಸಲು ಬಯಸುತ್ತದೆ.
“ರಾಜ್ಯಗಳನ್ನು ಪುನರ್ ವಿಂಗಡಿಸುವಾಗ ಈಗಿರುವಂತೆ ಎ. ಬಿ ಮತ್ತು ಸಿ ರಾಜ್ಯಗಳು ಎಂಬ ವ್ಯತ್ಯಾಸಗಳನ್ನು ಸಂಪೂರ್ಣವಾಗಿ ರದ್ದುಮಾಡಬೇಕು ಮತ್ತು ಆ ನಿಟ್ಟಿನಲ್ಲಿ ಶಿಫಾರಸು ಮಾಡಬೇಕೆಂದು ಕೇಂದ್ರ ಸಮಿತಿಯು ಆಯೋಗವನ್ನು ಒತ್ತಾಯಿಸುತ್ತದೆ. ಭಾರತದ ಜನರು ಅನುಭೋಗಿಸುವ ಪ್ರಜಾಸತ್ತಾತ್ಮಕ ಹಕ್ಕುಗಳ ದರ್ಜೆಯಲ್ಲಿ ಯಾವುದೇ ವ್ಯತ್ಯಾಸಗಳು ಇರಲು ಸಾಧ್ಯವಿಲ್ಲ. ರಾಜಪ್ರಮುಖ ಎಂಬ ಹುದ್ದೆಯನ್ನು ಈ ಕೂಡಲೇ ರದ್ದುಗೊಳಿಸಬೇಕು ಮತ್ತು ಅವರ ಎಲ್ಲಾ ಸವಲತ್ತುಗಳನ್ನು ತೆಗೆದುಹಾಕಬೇಕೆಂದು ಕೂಡ ತಾವು ಶಿಫಾರಸು ಮಾಡಬೇಕೆಂದು ಕೇಂದ್ರ ಸಮಿತಿಯು ಮುಂದುವರಿದು ಒತ್ತಾಸುತ್ತದೆ. ಅದರ ಜೊತೆಯಲ್ಲಿಯೇ, ಅವರಿಗೆ ನೀಡುವ ರಾಜಧನವನ್ನು ನಿಲ್ಲಿಸಬೇಕು ಮತ್ತು ಸಂಸ್ಥಾನದ ಕಂದಾಯಗಳನ್ನು ದುರುಪಯೋಗಪಡಿಸಿಕೊಂಡು ಗಳಿಸಿರುವ ವೈಯಕ್ತಿಕ ಆಸ್ತಿಪಾಸ್ತಿಗಳನ್ನೂ ಸರ್ಕಾರವು ವಹಿಸಿಕೊಳ್ಳಬೇಕು.
“ಭಾಷಾವಾರು ರಾಜ್ಯಗಳಿಗಾಗಿನ ಈ ಹಕ್ಕೊತ್ತಾಯವನ್ನು ನಿರಾಕರಿಸುವ ದೃಷ್ಟಿಯಿಂದ ಸಾಮಾನ್ಯವಾಗಿ ಎತ್ತುವ ವಾದಗಳಿಗೆ ಪ್ರತ್ಯುತ್ತರ ನೀಡುವ ಅಗತ್ಯವಿದೆಯೆಂದು ಕೇಂದ್ರ ಸಮಿತಿಯು ಭಾವಿಸುತ್ತದೆ….. ನಾವು ಸೂಚಿಸುತ್ತಿರುವ ರಾಜ್ಯಗಳ ಈ ಪುನರ್ಸಂಘಟನೆಯು ಹೆಚ್ಚು ತರ್ಕಬದ್ಧವಾದ ನೆಲೆಯಲ್ಲಿವೆ, ಈ ಮೂಲಕ ರಾಜ್ಯದ ಬಹುಸಂಖ್ಯಾತ ಜನರು ಮಾತನಾಡುವ ಭಾಷೆಯಲ್ಲಿ ಆಡಳಿತವನ್ನು ನಡೆಸಬಹುದು.
“ಭಾಷಾವಾರು ರಾಜ್ಯಗಳ ರಚನೆಯ ವಿರುದ್ಧ ಎತ್ತುತ್ತಿರುವ ಮತ್ತೊಂದು ವಾದವೇನೆಂದರೆ ಹಾಗೆ ಹಂಚಿಕೆ ಮಾಡುವುದರಿಂದ ಭಾರತದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟಾಗುತ್ತದೆ ಎಂಬುದಾಗಿದೆ. ಈ ವಾದವು ಸ್ಪಷ್ಟವಾಗಿ ಅಸಂಗತ ಹಾಗೂ ದೋಷಪೂರಿತವಾದದ್ದು. ಭಾಷಾವಾರು ರಾಜ್ಯಗಳು ತಮ್ಮದೇ ಆದ ಸೈನ್ಯ ಹಾಗೂ ರಕ್ಷಣಾ ಸೇವೆಗಳನ್ನು ಹೊಂದಿರುವ ಪ್ರತ್ಯೇಕ ಪ್ರಭುತ್ವಗಳಾಗಿರುವುದಿಲ್ಲ. ರಕ್ಷಣಾ ಇಲಾಖೆಯು ಕೇಂದ್ರದ ವಿಷಯವಾಗಿಯೇ ಮುಂದುವರೆಯುತ್ತದೆ… ಅನುಭವಗಳು ತೋರಿಸುತ್ತಿರುವುದೇನೆಂದರೆ ಈಗಿನ ವ್ಯವಸ್ಥೆಯ ಮುಂದುವರಿಕೆಯೇ ಜನರ ನಡುವಿನ ತಿಕ್ಕಾಟಗಳಿಗೆ ಕಾರಣವಾಗಿವೆ, ಅವು ಖಂಡಿತವಾಗಿಯೂ ಭಾರತದ ಐಕ್ಯತೆಯ ಬೆಳವಣಿಗೆಗೆ ಸಹಾಯಕವಾಗುವಂಥದ್ದಲ್ಲ. ನಮ್ಮ ರಾಷ್ಟ್ರೀಯ ಚಳುವಳಿಯ ಉದ್ದಕ್ಕೂ ಕಾಂಗ್ರೆಸ್ ನಾಯಕರುಗಳಾಗಲೀ ಅಥವಾ ಉಳಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾಗಲೀ ಸರ್ವ ಪಕ್ಷಗಳ ಸಮಿತಿಗಳಲ್ಲಿ ೧೯೪೭ರ ತನಕ ಈ ಭಾಷಾವಾರು ರಾಜ್ಯಗಳ ಪ್ರಶ್ನೆಯನ್ನು ಚರ್ಚಿಸುವಾಗ ಈ ಐಕ್ಯತೆ ಮತ್ತು ಸಮಗ್ರತೆಯ ಗುಮ್ಮವನ್ನು ಎಂದೂ ಎತ್ತಿರಲಿಲ್ಲ.
“ಪ್ರತಿಪಾದಿಸುತ್ತಿರುವ ಇನ್ನೊಂದು ಪ್ರಶ್ನೆಯೆಂದರೆ ಆರ್ಥಿಕ ಕಾರ್ಯಸಾಧ್ಯತೆಯದು… ರಾಜ್ಯಗಳ ಆರ್ಥಿಕ ಕಾರ್ಯಸಾಧ್ಯತೆಯು ಕೇಂದ್ರ ಹಾಗೂ ರಾಜ್ಯಗಳ ಆದಾಯಗಳನ್ನು ಪರಸ್ಪರ ಹಂಚಿಕೊಳ್ಳುವ ಪ್ರಶ್ನೆಯಾಗಿದೆ. ಇವತ್ತು ದೇಶದ ಯಾವ ರಾಜ್ಯವೂ, ಇವತ್ತಿನ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯೊಂದಿಗೆ ಮಿಗುತಾಯದ್ದು ಆಗಿಲ್ಲ, ಅಥವಾ ಸ್ವಯಂಪರಿಪೂರ್ಣವೂ ಆಗಿಲ್ಲ. ಅವೆಲ್ಲವುಗಳ ಆಯವ್ಯಯಗಳು ಕೊರತೆಯವೇ ಆಗಿವೆ.
“ಇದಕ್ಕೂ ಮಿಗಿಲಾಗಿ, ಭಾರತದ ವಿವಿಧ ಪ್ರದೇಶಗಳ ನಡುವೆ ಅಸಮಾನ ಆರ್ಥಿಕ ಅಭಿವೃದ್ಧಿ ಇದೆ ಎಂಬ ವಾಸ್ತವವನ್ನು ಕಾಣದೇ ಇರಲು ಸಾಧ್ಯವಿಲ್ಲ. ನಿಸ್ಸಂಶಯವಾಗಿಯೂ, ಈ ಅಸಮಾನ ಆರ್ಥಿಕ ಅಭಿವೃದ್ಧಿಯಿಂದಾಗಿ ಕೆಲವು ಪ್ರದೇಶಗಳ ಹಿಂದುಳಿದಿರುವಿಕೆಯ ನೆಪ ಮಾಡಿಕೊಂಡು ಆ ಪ್ರದೇಶದ ಜನರಿಗೆ ಭಾಷಾವಾರು ರಾಜ್ಯವನ್ನು ತಿರಸ್ಕರಿಸಲು ಸಾಧ್ಯವಿಲ್ಲ; ಭಾಷಾವಾರು ರಾಜ್ಯದ ಮೂಲಕ ಅವರನ್ನು ದೇಶದ ಆಡಳಿತದಲ್ಲಿ ಪಾಲ್ಗೊಳ್ಳಲು ಸಮರ್ಥಗೊಳಿಸಬಹುದಾಗಿದೆ. ಇಂತಹ ಒಂದು ವಾದದ ಅರ್ಥವೇನೆಂದರೆ ಕೇವಲ ಆರ್ಥಿಕವಾಗಿ ಮುಂದುವರೆದ ಪ್ರದೇಶದ ಜನಗಳು ಮಾತ್ರವೇ ದೇಶದ ರಾಜಕೀಯ, ಆರ್ಥಿಕ ಹಾಗೂ ಆಡಳಿತಾತ್ಮಕ ಜೀವನದಲ್ಲಿ ಭಾಗವಹಿಸುವ ಹಕ್ಕನ್ನು ಹೊಂದಿರುತ್ತಾರೆ ಎಂದಾಗುತ್ತದೆ.
“ಈ ಹಿನ್ನೆಲೆಯಲ್ಲಿ, ತೀರಾ ಹಿಂದುಳಿದ ರಾಜ್ಯಗಳಿಗೆ ಕೇಂದ್ರವು ಸಹಾಯ ಮಾಡುವುದರ ಮೂಲಕ ಅವರೂ ಕೂಡ ತ್ವರಿತವಾಗಿ ತಮ್ಮ ಹಿಂದುಳಿದಿರುವಿಕೆಯನ್ನು ತೊಡೆದುಹಾಕಲು ಸಮರ್ಥವಾಗುತ್ತವೆ ಮತ್ತು ಅದು ಇಡೀ ದೇಶವು ಸಮಾನ ಅಭಿವೃದ್ಧಿ ಹೊಂದಲು ಸಹಾಯಕವಾಗುತ್ತದೆ ಎಂಬ ಅಂಶವನ್ನು ಒತ್ತಿಹೇಳಲು ಭಾರತ ಕಮ್ಯುನಿಸ್ಟ್ ಪಕ್ಷ ಬಯಸುತ್ತದೆ. ಅದು ಮಾತ್ರವೇ ವಿವಿಧ ಭಾಷೆಗಳನ್ನು ಮಾತನಾಡುವ ಜನರ ಸೌಹಾರ್ದ ಭಾವನೆಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಭಾರತದ ಐಕ್ಯತೆಯನ್ನು ಗಟ್ಟಿಗೊಳಿಸುತ್ತದೆ. ಆದರೆ ಅದೇ ಹಿಂದುಳಿದಿರುವಿಕೆಯ ಕಾರಣ ನೀಡಿ ಆ ಪ್ರದೇಶದ ಜನರಿಗೆ ಪ್ರಜಾಸತ್ತಾತ್ಮಕ ಅಭಿವೃದ್ಧಿಯ ಅವಕಾಶವನ್ನು ನಿರಾಕರಿಸುವುದು ವಿಚ್ಛಿದ್ರಕಾರಿ ಶಕ್ತಿಗಳನ್ನು ಬಲಪಡಿಸಿದಂತಾಗುತ್ತದೆ.
“ಭಾಷಾವಾರು ರಾಜ್ಯಗಳ ರಚನೆಯೊಂದಿಗೆ ಹೊಂದಿಕೆಯಾಗುವಂತೆ, ಹೊಸ ಭಾಷಾವಾರು ರಾಜ್ಯಗಳ ಗಡಿಗಳನ್ನು ಗುರುತಿಸುವಾಗ ಈ ಕೆಳಗಿನ ವಿಧಾನಗಳನ್ನು ಅನುಸರಿಸುವಂತೆ ಶಿಫಾರಸು ಮಾಡಬೇಕೆಂದು ನಾವು ತಮ್ಮನ್ನು ಒತ್ತಾಸುತ್ತೇವೆ:
“ಹಳ್ಳಿಯನ್ನು ಒಂದು ಘಟಕವಾಗಿ ತೆಗೆದುಕೊಳ್ಳಬೇಕು. ಆ ಹಳ್ಳಿಯಲ್ಲಿರುವ ಬಹುಸಂಖ್ಯಾತ ಜನರು ಮಾತನಾಡುವ ನಿರ್ದಿಷ್ಟ ಭಾಷೆಯ ಆಧಾರದಲ್ಲಿ ಮತ್ತು ಆ ನಿರ್ದಿಷ್ಟ ಭಾಷಾವಾರು ರಾಜ್ಯಕ್ಕೆ ಆ ಹಳ್ಳಿ ಹೊಂದಿಕೊಂಡಿರುವ ಆಧಾರದಲ್ಲಿ ಗಡಿಯನ್ನು ಗುರುತಿಸಬೇಕು.
“ಎಷ್ಟೇ ಜಾಗರೂಕವಾಗಿ ಗಡಿಯನ್ನು ಗುರುತಿಸಿದ್ದಾಗ್ಯೂ ಈ ಗಡಿ ಪ್ರದೇಶಗಳಲ್ಲಿ ಮತ್ತು ಪ್ರತಿಯೊಂದು ಇಂತಹ ರಾಜ್ಯಗಳ ಒಳಗಡೆ ಕೂಡ ಭಾಷಾವಾರು ಅಲ್ಪಸಂಖ್ಯಾತರು ಇರುತ್ತಾರೆ ಎಂಬುದನ್ನು ತಿಳಿದಿರಬೇಕು. ಅಂತಹವರಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಹಂತಗಳಲ್ಲಿ ಶಿಕ್ಷಣ ನೀಡುವುದನ್ನು ಖಾತ್ರಿಪಡಿಸಬೇಕು. ಅವರ ಕಾಲೇಜು ಶಿಕ್ಷಣವನ್ನೂ ಅವರ ಮಾತೃಭಾಷೆಯಲ್ಲೇ ನೀಡಬೇಕು ಮತ್ತು ಎಷ್ಟರಮಟ್ಟಿಗೆ ಹಾಗೂ ಕಾರ್ಯಸಾಧ್ಯವಾದ ಪರಿಸ್ಥಿತಿಯ ಅಡಿಯಲ್ಲಿ ನೀಡಬೇಕು ಎಂಬ ಪ್ರಶ್ನೆಗಳನ್ನು ಆಯಾಯ ರಾಜ್ಯಗಳಿಗೇ ಬಿಡಬೇಕು. ಆಗ ಮಾತ್ರವೇ, ಈ ಗಡಿ ಪ್ರದೇಶಗಳು, ವೈಷಮ್ಯ ಮತ್ತು ಅನೈಕ್ಯತೆಯ ತಾಣಗಳಾಗದೇ, ಭಾಷಾವಾರು ರಾಜ್ಯಗಳ ನಡುವಿನ ಪರಸ್ಪರ ಬಾಂಧವ್ಯದ ನೆಲೆಗಳಾಗಿ ಹೊರಹೊಮ್ಮುತ್ತವೆ.
“ಈ ರಾಜ್ಯಗಳ ಗಡಿಗಳನ್ನು ಗುರುತಿಸುವಾಗ, ಅಂಥಲ್ಲಿ ಆದಿವಾಸಿ ಪ್ರದೇಶಗಳು ಸಿಗಬಹುದು. ಆ ಆದಿವಾಸಿ ಪ್ರದೇಶಗಳಲ್ಲಿ, ಒಂದು ನಿರ್ದಿಷ್ಟ ವಿಶೇಷ ಲಕ್ಷಣ ಹೊಂದಿರುವ ಬುಡಕಟ್ಟುಗಳು ಜೀವಿಸುತ್ತಿದ್ದರೆ, ಅವರ ಸಾಂಸ್ಕೃತಿಕ ಹಾಗೂ ಭಾಷಾಬಾಂಧವ್ಯ ಯಾವ ನೆರೆಹೊರೆಯ ರಾಜ್ಯಕ್ಕೆ ಹೊಂದಿಕೊಳ್ಳುತ್ತದೋ ಮತ್ತು ಅವರ ಆರ್ಥಿಕ ಅಭಿವೃದ್ಧಿ ಹೊಂದಿಕೊಂಡಿದೆಯೋ ಹಾಗೂ ಸಹಜವಾಗಿ ಬೆಳೆಯಲು ಸಾಧ್ಯವಿದೆಯೋ ಅಂತಹ ರಾಜ್ಯಗಳಿಗೆ ಆ ಪ್ರದೇಶವನ್ನು ಸೇರಿಸಬೇಕು… ಒಂದು ಭಾಷಾವಾರು ರಾಜ್ಯಕ್ಕೆ ಅಥವಾ ಆಡಳಿತಾತ್ಮಕವಾಗಿ ತಹಶೀಲ್, ಜಿಲ್ಲಾ ಅಥವಾ ಪ್ರಾದೇಶಿಕ ಘಟಕಗಳಾಗಿ ವಿಂಗಡಿಸಲ್ಪಡುತ್ತವೋ ಅಂಥಲ್ಲಿಗೆ ಆದಿವಾಸಿ ಪ್ರದೇಶಗಳನ್ನು ಸೇರಿಸುವಾಗ ಅವರ ಸ್ಥಳೀಯ ಅಥವಾ ಪ್ರಾದೇಶಿಕ ಸ್ವಾಯತ್ತತೆಯನ್ನು ಕಾಪಾಡುವಂತೆ ನೋಡಿಕೊಳ್ಳಬೇಕು.
“ಆದ್ದರಿಂದ, ಜನರಿಗೆ ಯಾವುದೇ ರೀತಿಯ ಆತಂಕ ಕಳವಳ ಉಂಟಾಗದಂತೆ ನೋಡಿಕೊಳ್ಳಬೇಕು ಮತ್ತು ಪ್ರಥಮತಃ ಭಾಷೆಗಳ ಆಧಾರದಲ್ಲಿನ ರಾಜ್ಯಗಳ ರಚನೆಯನ್ನು ಶಿಫಾರಸು ಮಾಡುವ ಒಂದು ಮಧ್ಯಂತರ ವರದಿಯನ್ನು ಸೆಪ್ಟೆಂಬರ್ ೧೯೫೪ ಕ್ಕೆ ಮುಂಚೆ ನೀಡಬೇಕೆಂದು ಆಯೋಗವನ್ನು ಭಾರತ ಕಮ್ಯುನಿಸ್ಟ್ ಪಕ್ಷವು ಒತ್ತಾಯಿಸುತ್ತದೆ.”
ಕನ್ನಡಕ್ಕೆ: ಟಿ.ಸುರೇಂದ್ರ ರಾವ್