ಡಿಜೆ ಹಳ್ಳಿ-ಕೆಜಿ ಹಳ್ಳಿ ಧಾಳಿ ಪ್ರಕರಣ ನ್ಯಾಯಂಗ ತನಿಖೆಗೆ ಒತ್ತಾಯ

ಬೆಂಗಳೂರಿನ ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿಯಲ್ಲಿ ನಡೆದಿರುವ ಧಾಳಿಯ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಸ್ವತಂತ್ರವಾದ ನ್ಯಾಯಂಗ ತನಿಖೆಯನ್ನು ಮಾಡಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಪತ್ರದ ಪೂರ್ಣ ಅಂಶವನ್ನು ಈ ಕೆಳಗೆ ನೀಡಲಾಗಿದೆ.

ಇವರಿಗೆ,

ಮಾನ್ಯ ಮುಖ್ಯ ಮಂತ್ರಿಗಳು,

ಕರ್ನಾಟಕ ಸರ್ಕಾರ,  ವಿಧಾನ ಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಬೆಂಗಳೂರು ನಗರದ ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಧಾಳಿಗಳ ಒಟ್ಟು ಪ್ರಕರಣಗಳನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಲು ಒತ್ತಾಯ.

ಈಚೆಗೆ, ಸಾಮಾಜಿಕ ಜಾಲತಾಣದಲ್ಲಿ  ಪ್ರವಾದಿ ಮಹಮದ್ ಕುರಿತ ಕೋಮು ಪ್ರಚೋದಕ ಮತ್ತು ಅವಹೇಳನಕಾರಿ ಪೋಸ್ಟಿಂಗ್ ಮತ್ತು ಆ ವಿಚಾರಕ್ಕೆ ಸಂಬಂಧಿಸಿ ದೂರು ದಾಖಲೆಯಲ್ಲಾದ ವಿಳಂಬವು, ಹಿಂಸಾಚಾರಕ್ಕೆ ತಿರುಗಿ, ಬೆಂಗಳೂರಿನ ಪುಲಕೇಶಿ ನಗರದ ಶಾಸಕರ ಮನೆ ಹಾಗೂ ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಪೋಲೀಸ್ ಠಾಣೆಗಳ ಮೇಲೆ ದಾಳಿ ನಡೆದು ಕೋಟ್ಯಾಂತರ ರೂಪಾಯಿಗಳ ಆಸ್ತಿ- ಪಾಸ್ತಿಗೆ ಹಾನಿಯಾಗಿದೆ. ಅದೇ ರೀತಿ, ಗೋಲಿಬಾರ್ ನಲ್ಲಿ ಮುವ್ವರು ಕೊಲ್ಲಲ್ಪಟ್ಟಿದ್ದಾರೆ.

ಇದೊಂದು, ಮುಂಬರುವ ದಿನಗಳ ರಾಜಕೀಯ ದುರ್ಲಾಭಕ್ಕಾಗಿ ಉಂಟು ಮಾಡಲಾಗಿರುವ ದುಷ್ಕೃತ್ಯವಾಗಿದೆ. ಈ ಒಟ್ಟು ಅಹಿತಕರ ಘಟನೆಗಳನ್ನು ಮತ್ತು ಈ ದುರ್ಘಟನೆಗಳಿಗೆ ಕಾರಣವಾದ ಎಲ್ಲ ಶಕ್ತಿಗಳನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ಅವರ ಮೇಲೆ ಕಠಿಣ ಕಾನೂನಿನ ಕ್ರಮಗಳನ್ನು ಜರುಗಿಸಬೇಕು ಹಾಗೂ ಆ ಪ್ರದೇಶದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಗೆ ಅಗತ್ಯ ಕ್ರಮ ವಹಿಸಬೇಕೆಂದು ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಸುತ್ತದೆ.

ಮೇಲ್ನೋಟಕ್ಕೆ ಈ ಘಟನೆಗಳ ಹಿಂದೆ ಬಲಪಂಥೀಯ ಕೋಮುವಾದಿ ಹಿಂದೂ ಹಾಗೂ ಮುಸ್ಲಿಂ ಮೂಲಭೂತವಾದಿ ಶಕ್ತಿಗಳ ಕೈವಾಡವಿರುವುದು ಹಾಗೂ ಅವುಗಳ ರಾಜಕೀಯ ದುರ್ಲಾಭದ ದುರ್ಗಂಧವಿರುವುದು ಕಂಡು ಬರುತ್ತದೆ.

ಅದೇ ರೀತಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸರಕಾರದ ಯಾವುದೇ ನಿಯಂತ್ರಣವಿಲ್ಲದೇ ಇರುವುದರಿಂದ, ಕೋಮು ಪ್ರಚೋಧಕ ಅವಹೇಳನಕಾರಿ ಪೋಸ್ಟಿಂಗ್‌ಗಳು, ದೂಷಣೆಗಳು, ಸ್ವೇಚ್ಛಾಚಾರಗಳು, ಈ ದಿನಗಳಲ್ಲಿ ನಿರಂತರವಾಗಿ ಕಂಡು ಬರುತ್ತಲೇ ಇವೆ. ಇದರಿಂದ ಧಾರ್ಮಿಕ ಮುಖಂಡರು, ಪ್ರವಾಧಿಗಳು, ರಾಜಕೀಯ ನಾಯಕರು, ಪ್ರಗತಿಪರ ಸಾಹಿತಿಗಳು ಗಂಭೀರವಾಗಿ ನಿಂದನೆಗೊಳಗಾಗುತ್ತಿದ್ದಾರೆ. ಬೆದರಿಸಲ್ಪಡುತ್ತಿದ್ದಾರೆ.

ಇಂತಹ ಆತಂಕಕಾರಿ ದುಷ್ಕೃತ್ಯಗಳು ಮಾಧ್ಯಮಗಳಲ್ಲಿ ನಡೆಯುತ್ತಿರುವಾಗ, ರಾಜಕೀಯ ಲೆಕ್ಕಾಚಾರದೊಂದಿಗೆ ತಮ್ಮ ಸರಕಾರ ಗಂಭೀರವಾಗಿ ಮೌನ ವಹಿಸುತ್ತಿರುವುದರಿಂದ ಗೌರವಾನ್ವಿತರು ನಿರಂತರವಾಗಿ ಅಪಮಾನಕ್ಕೊಳಗಾಗುವುದು ಮತ್ತು ಈಗಿನ ಇಂತಹ ದುರ್ಘಟನೆಗಳು ಸಂಭವಿಸುತ್ತಿರುವುದು ಮುಂದುವರೆದಿದೆ.

ಆದ್ದರಿಂದ, ದೃಶ್ಯ ಮತ್ತಿತರೆ ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲಾ ಮಾಧ್ಯಮಗಳಲ್ಲಿನ ಅವಹೇಳನಕಾರಿ ಹಾಗೂ ಕೋಮು ಪ್ರಚೋದಕ ದೂಷಣೆಗಳು ಮತ್ತು ಪೋಸ್ಟಿಂಗ್ ಗಳ ಮೇಲೆ ತಕ್ಷಣ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

ಅದೇ ರೀತಿ, ಈ ದಾಳಿಗಳ ಒಟ್ಟು ಪ್ರಕರಣಗಳನ್ನು ಒಂದು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕು. ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಲು, ಜನತೆಯ ಆತಂಕವನ್ನು ನಿವಾರಿಸಲು, ಅಗತ್ಯ ಕ್ರಮವಹಿಸುವಂತೆ ಹಾಗೂ ಕೊಲ್ಲಲ್ಪಟ್ವವರ ಕುಟುಂಬಗಳಿಗೆ ತಕ್ಷಣ ಪರಿಹಾರಗಳನ್ನು ಘೋಷಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಜ್ಯ ಸಮಿತಿ ಒತ್ತಾಸುತ್ತದೆ.

ಯು. ಬಸವರಾಜ ಕಾರ್ಯದರ್ಶಿ

ದಿನಾಂಕ : 17.08.2020

ಸ್ಥಳ: ಬೆಂಗಳೂರು.

Leave a Reply

Your email address will not be published. Required fields are marked *