ಭಾರತ ಕಮ್ಯುನಿಷ್ಠ್ ಪಕ್ಷ (ಮಾರ್ಕ್ಸ್ವಾದಿ)ಯು ರಾಜ್ಯದಾದ್ಯಂತ ಇಂದಿನಿಂದ ಆಗಷ್ಠ್ – 29, 2020 ರವರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ದ ಪ್ರತಿಭಟನಾ ಸಪ್ತಾಹ ನಡೆಸಲು ತನ್ನ ಘಟಕಗಳಿಗೆ ಮತ್ತು ರಾಜ್ಯದ ಜನತೆಗೆ ಕರೆ ನೀಡಿದೆ. ಈ ಪ್ರತಿಭಟನಾ ಸಪ್ತಾಹವು ಪಕ್ಷದ ಕೇಂದ್ರ ಸಮಿತಿಯು ದೇಶದಾದ್ಯಂತ ಪ್ರತಿಭಟನಾ ಸಪ್ತಾಹ ನಡೆಸಲು ಕರೆ ನೀಡಿದೆ.
ಕೋವಿಡ್-19 ವೈರಾಣುವನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮವಹಿಸದೇ ಜನತೆಯನ್ನು ಸಂಕಷ್ಟದಿಂದ ಉಳಿಯಲು ಬಿಟ್ಟಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಉಡಾಫೆತನಗಳನ್ನು ಸಿಪಿಐಎಂ ಬಲವಾಗಿ ಖಂಡಿಸಿದೆ. ಅದೇ ರೀತಿ, ದೇಶವು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಬಿಕ್ಕಟ್ಟಿನಿಂದ ಇಡೀ ದೇಶವನ್ನು ಪಾರು ಮಾಡುವ ನೀತಿಗಳ ಬದಲು ಕೇವಲ ದೊಡ್ಡ ಬಂಡವಾಳದಾರರು ಹಾಗೂ ಕಾರ್ಪೋರೇಟ್ ಕಂಪನಿಗಳ ಹಿತಗಳನ್ನು ರಕ್ಷಿಸಲು ಮುಂದಾಗುತ್ತಿದೆ.
ಬಜೆಟ್ ಸಂಪನ್ಮೂಲಗಳು ಸೇರಿದಂತೆ ದೇಶದ ಎಲ್ಲಾ ಸಾರ್ವಜನಿಕ ಸಂಪನ್ಮೂಲಗಳನ್ನು ದೊಡ್ಡ ಬಂಡವಾಳದಾರರ ಲೂಟಿಗೆ ತೆರೆದು ಕೊಡುತ್ತಿದೆ. ಮಿಲಿಯಾಂತರ ಕೋಟಿ ರೂ.ಗಳ ಸಾರ್ವಜನಿಕ ಬ್ಯಾಂಕುಗಳ ಸಾಲ ಮತ್ತು ತೆರಿಗೆ ಬಾಕಿ ಮನ್ನಾ ಮಾಡಲಾಗಿದೆ. ದೇಶಕ್ಕೆ ಭಾರಿ ಲಾಭ ನೀಡುವ ಬಿಎಸ್ಎನ್ಎಲ್, ಬ್ಯಾಂಕ್, ವಿಮೆ, ರೈಲ್ವೇ, ವಿಮಾನ ನಿಲ್ದಾಣಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸಂಸ್ಥೆಗಳನ್ನು ಅಕ್ರಮ ಬೆಲೆಗೆ ದಾನ ನೀಡುತ್ತಿದೆ. ಕೃಷಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡುತ್ತಿದೆ.
ವ್ಯತಿರಿಕ್ತವಾಗಿ, ಒಟ್ಟು ಆರ್ಥಿಕ, ಕೈಗಾರಿಕಾ ಹಾಗೂ ಕೃಷಿ ಬಿಕ್ಕಟ್ಟಿನಿಂದ ಬಳಲುತ್ತಿರುವ ಒಟ್ಟು ದೇಶದ ರೈತರು, ಕೃಷಿಕೂಲಿಕಾರರು, ಕಾರ್ಮಿಕರು, ಮದ್ಯಮ ವರ್ಗದ ಜನತೆ, ಸಣ್ಣ ವ್ಯಾಪಾರಿಗಳನ್ನು ಅದರಿಂದ ಹೊರ ತರುವುದನ್ನು ಉಪೇಕ್ಷಿಸಲಾಗಿದೆ. ಮಾತ್ರವಲ್ಲಾ, ಒಟ್ಟು ಆರ್ಥಿಕ ಬಿಕ್ಕಟ್ಟು ಮತ್ತಷ್ಠು ಆಳಗೊಳ್ಳಲು ಬಿಡಲಾಗಿದೆ. ಇದರಿಂದ ನಿರುದ್ಯೋಗ, ಬಡತನ ಮತ್ತು ದಲಿತರು ಹಾಗೂ ಮಹಿಳೆಯರ ಮೇಲಿನ ಸಾಮಾಜಿಕ ದೌರ್ಜನ್ಯಗಳು, ಆತ್ಮಹತ್ಯೆಗಳು, ಹಸಿವಿನ ಸಾವುಗಳು ವ್ಯಾಪಕವಾಗುತ್ತಿವೆ.
ಇದೇ ಸಂಕಷ್ಠದ ಸಂದರ್ಭದಲ್ಲಿ ಜನತೆಯ ಒಡೆದಾಳುವ ನೀತಿಗಳನ್ನು ಆಳಗೊಳಿಸಿ ಹೇರಲಾಗುತ್ತಿದೆ. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸಲಾಗುತ್ತಿದೆ. ರಾಜ್ಯ ಸರಕಾರಗಳ ಮತ್ತು ಸ್ವಾಯತ್ತ ಸಂವಿಧಾನಿಕ ಸಂಸ್ಥೆಗಳ ಹಕ್ಕುಗಳನ್ನು ದಮನ ಮಾಡಿ, ಸರ್ವಾಧಿಕಾರಗಳನ್ನು ಹೇರಲಾಗುತ್ತಿದೆ.
ಈ ಎಲ್ಲಾ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಜನತೆಯ ತಲಾ ಆದಾಯವನ್ನು ಈ ಸಂದರ್ಭದಲ್ಲಿ ಹೆಚ್ಚಿಸಿಕೊಂಡು, ಆ ಮೂಲಕ ಕೋವಿಡ್ – 19 ರ ವಿರುದ್ದ ತಮ್ಮ ಆರೋಗ್ಯ ರಕ್ಷಿಸಿಕೊಳ್ಳಲು ಮತ್ತು ದೇಶದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಅಗತ್ಯವಾದ ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಮಾಸಿಕ 7,500 ರೂ.ಗಳ ಮಾಸಿಕ ಸಹಾಯಧನ ಮತ್ತು ತಲಾ ವ್ಯಕ್ತಿಗೆ 10 ಕೆಜಿ ಸಮಗ್ರ ಪಡಿತರವೂ ಸೇರಿದಂತೆ 16, ಹಕ್ಕೊತ್ತಾಯಗಳಿಗಾಗಿ ಭಾರತ ಕಮ್ಯುನಿಷ್ಠ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಸಮಿತಿಯು ಈ ಪ್ರತಿಭಟನಾ ಸಪ್ತಾಹವನ್ನು ಸಂಘಟಿಸುತ್ತಿದ್ದು ರಾಜ್ಯದ ಜನತೆ ಬೆಂಬಲಿಸಿ ಬಾಗಿಯಾಗಲು ಸಿಪಿಐಎಂ ಮನವಿ ಮಾಡುತ್ತದೆ.
ವಂದನೆಗಳೊಂದಿಗೆ,
ಯು. ಬಸವರಾಜ, ಕಾರ್ಯದರ್ಶಿ