ಬಿಜೆಪಿ ಮುಖಂಡರಾದ ಅನುರಾಗ್ ಠಾಕುರ್ ಮತ್ತು ಪರ್ವೇಶ್ ಶರ್ಮ ಜನವರಿಯಲ್ಲಿ ದ್ವೇಷ ಭಾಷಣ ಮಾಡಿದ ಅಪರಾಧಕ್ಕೆ ಸೆಕ್ಷನ್ 153ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ದಿಲ್ಲಿ ಪೊಲೀಸ್‍ಗೆ ಒಂದು ದೂರನ್ನು ಸಲ್ಲಿಸಿದ್ದರು. ದಿಲ್ಲಿ ಪೋಲೀಸರು ಇದಕ್ಕೆ ಸ್ಪಂಧಿಸಲಿಲ್ಲವಾದ್ದರಿಂದ ಕಾನೂನು ಪ್ರಕಾರ ಸೂಕ್ತ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಯಿತು.
ನ್ಯಾಯಾಲಯ ದೂರುದಾರರಾಗಿ ಬೃಂದಾ ಅವರ ವಕೀಲರ ಪೂರ್ಣ ವಾದಗಳನ್ನು ಆಲಿಸಿತು. ದಿಲ್ಲಿ ಪೊಲೀಸ್ ದಂಡನಾರ್ಹ ಅಪರಾಧ ಎಂದು ಸಾಬೀತಾಗಿಲ್ಲ ಎಂದು ವಾದಿಸಿದರು. ತೀರ್ಪನ್ನು ಕಾದಿರಿಸಲಾಯಿತು. ಆದರೆ ಇತರರು ಹೈಕೋರ್ಟಿಗೆ ಹೋದದ್ದರಿಂದ ಇದು ವಿಳಂಬವಾಯಿತು. ಹೈಕೋರ್ಟ್ ಈ ಅರ್ಜಿಯನ್ನು ಇತ್ಯರ್ಥ ಮಾಡುವಂತೆ ಮ್ಯಾಜಿಸ್ಟೇಟರಿಗೆ ನಿರ್ದೇಶನವಿತ್ತಿತು. ಆದರೆ ಈಗ ಈ ಹಂತದಲ್ಲಿ ನ್ಯಾಯಾಲಯ ಈ ಅರ್ಜಿಯನ್ನು ಸಲ್ಲಿಸಲು ಕೂಡ ಅಪರಾಧ ಸಂಹಿತೆಯ ವಿಭಾಗ 196 ಅಡಿಯಲ್ಲಿ ಪೂರ್ವಾನುಮತಿಬೇಕು ಎಂದು ತೀರ್ಪಿತ್ತಿದೆ.
ದಿಲ್ಲಿ ಪೊಲೀಸರು ಕೂಡ ಈ ಆಕ್ಷೇಪವನ್ನು ಈ ಹಿಂದೆ ಎತ್ತಿರಲಿಲ್ಲ. ಈ ಅನುಮತಿ ನಿಜವಾಗಿಯೂ ಬೇಕಿದ್ದರೆ ಕೇಸಿನ ವಿಚಾರಣೆಯ ಆರಂಭದಲ್ಲೇ ಇದನ್ನು ಹೇಳದೆ, ಪೂರ್ಣ ವಿಚಾರಣೆಯನ್ನು ನಡೆಸಿದ್ದಾರೂ ಏಕೆ? ಎಂದು ಪ್ರಶ್ನಿಸಿರುವ ಬೃಂದಾ ಕಾರಟ್ ಇದೊಂದು ಅನ್ಯಾಯಯುತ ನ್ಯಾಯಾಂಗ ಪ್ರಕ್ರಿಯೆ, ಇದರಿಂದಾಗಿ ದ್ವೇಷ ಭಾಷಣ ಮಾಡಿದ್ದು ಮೇಲ್ನೋಟಕ್ಕೇ ಸಾಬೀತಾಗಿದ್ದರೂ ಅವರ ಅಪರಾಧವನ್ನು ಮನ್ನಿಸಲಾಗಿದೆ ಎಂದು ಹೇಳಿದ್ದಾರೆ.