ದೇಶಾದ್ಯಂತ ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶಕ್ಕೆ ಜೆ.ಇ.ಇ.-ಎನ್.ಇ.ಇ.ಟಿ. ಪರೀಕ್ಷೆಗಳತ್ತ ಏಕಪಕ್ಷೀಯವಾಗಿ ಮುಂದೊತ್ತುತ್ತಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ದೃಢವಾಗಿ ವಿರೋಧಿಸಿದೆ.
ಅತ್ಯಂತ ಆಕ್ರೋಶಕಾರಿ ಸಂಗತಿಯೆಂದರೆ, ಸಾಂಕ್ರಾಮಿಕದಿಂದ ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿರುವಾಗ ಮತ್ತು ಸಾವುಗಳ ಸಂಖ್ಯೆಯೂ ಏರುತ್ತಿರುವ ಸಮಯದಲ್ಲಿ ದೇಶಾದ್ಯಂತ ಭೌತಿಕವಾಗಿಯೇ ಈ ಪರೀಕ್ಷೆಗಳನ್ನು ನಡೆಸಬೇಕೆನ್ನುವ ಸಂವೇದನಾಶೂನ್ಯತೆ. ವಿದ್ಯಾರ್ಥಿಗಳು ಮತ್ತು ಈ ಕೋರ್ಸ್‍ಗಳ ಭವಿಷ್ಯದ ದೃಷ್ಟಿಯಿಂದ ಈ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಅವಧಿಯನ್ನು ಆರಂಭಿಸಬೇಕೆನ್ನುವ ಕಾಳಜಿ ಸಾಧುವೇ ಮತ್ತು ಅರ್ಥವಾಗುವಂತದ್ದೇ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಒಂದು ಸಾಹಸಕ್ಕೆ ಕೈಹಾಕುವುದು ಆತುರದ ಕೃತ್ಯವಾಗುತ್ತದೆ. ಇದು ನಮ್ಮ ಸುಮಾರು ಒಂದು ದಶಲಕ್ಷ ಪ್ರತಿಭಾವಂತ ಯುವ ಜನರ ಆರೋಗ್ಯ ಕಾಳಜಿಯನ್ನು ಸಂಪೂರ್ಣವಾಗಿ ಶಿಥಿಲಗೊಳಿಸುತ್ತದೆ ಎಂದು ಹೇಳಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಪರೀಕ್ಷೆ ನಡೆಸುವುದನ್ನು ಸೋಂಕಿನ ಹರಡಿಕೆಯ ಮೇಲೆ ಸ್ವಲ್ಪ ಹತೋಟಿ ಹೊಂದಲು ಸಾಧ್ಯವಾಗುವವರೆಗೆ ಸದ್ಯಕ್ಕೆ ತಡೆಹಿಡಿಯಬೇಕು ಎಂದು ಆಗ್ರಹಿಸಿದೆ. ಒಂದು ಬೋಧನಾ ವರ್ಷವನ್ನು ಕಳೆದುಕೊಳ್ಳದಂತೆ ವಿದ್ಯಾರ್ಥಿಗಳನ್ನು ರಕ್ಷಿಸುವ ರೀತಿಯಲ್ಲಿ ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿಯನ್ನು ಮರುಪರಿಶೀಲಿಸಬೇಕು ಎಂದು ಅದು ಹೇಳಿದೆ.