ತಬ್ಲೀಗಿ ಜಮಾತ್ ಆರೋಪ ಮುಕ್ತ

ಮುಂಬೈ ಹೈಕೋರ್ಟಿನ ಔರಂಗಾಬಾದ್ ಪೀಠವು ಇತ್ತೀಚೆಗೆ 36 ತಬ್ಲೀಗಿ ಜಮಾತ್ ಸದಸ್ಯರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಗಳನ್ನು ರದ್ದು ಮಾಡಿದೆ. ಇದರಿಂದಾಗಿ ತಬ್ಲೀಗಿ ಜಮಾತ್ ವಿರುದ್ಧ ಮತ್ತು ಒಟ್ಟಾರೆ ಮುಸಲ್ಮಾನರ ವಿರುದ್ಧ ಕೋವಿಡ್ 19 ರ ಸಾಂಕ್ರಾಮಿಕ ಆರಂಭದಲ್ಲಿ ಮಾಡಲಾಗಿದ್ದ ಅಪಪ್ರಚಾರವು ಎಷ್ಟು ಆಧಾರರಹಿತಿತವಾಗಿದೆ ಎಂಬುದು ಸಾಬಿತಾಗಿದೆ. 29 ವಿದೇಶಿಯರ ವಿರುದ್ಧ ವಿದೇಶಿಯರ ಕಾಯ್ದೆ ಮತ್ತು ಸಾಂಕ್ರಾಮಿಕ ಕಾಯ್ದೆ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಿತು. ಹಾಗೆಯೇ ಅವರಿಗೆ ಆಶ್ರಯ ನೀಡಿದ 6 ಜನ ಭಾರತೀಯರನ್ನು ಆರೋಪದಿಂದ ಮುಕ್ತಗೊಳಿಸಿತು.

ನ್ಯಾಯಾಲಯವು ಆರೋಪಿಗಳ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ವ್ಯಾಖ್ಯಾನಿಸಿತು ಮಾತ್ರವಲ್ಲ ಅವರನ್ನು ಅನ್ಯಾಯವಾಗಿ ಗುರಿಯಿಟ್ಟು ಸತಾಯಿಸಲಾಗಿದೆ ಎಂದು ಹೇಳಿತು. ಈ ತಬ್ಲೀಗಿಗಳನ್ನು ಸಾಂಕ್ರಾಮಿಕದ ಘನಘೋರ ಸಮಯದಲ್ಲಿ ಬಲಿಪಶು ಮಾಡಲು ಸರಕಾರ ಪ್ರಯತ್ನಿಸಿತು ಎಂದು ಅಭಿಪ್ರಾಯ ಪಟ್ಟ ನ್ಯಾಯಾಲಯ ಇದರ ಹಿಂದಿನ ಉದ್ದೇಶ ರಾಜಕೀಯ ವಾಗಿರಬಹುದು ಎಂದು ಸಂಶಯ ವ್ಯಕ್ತಪಡಿಪಡಿಸಿತು. ಮುದ್ರಣ ಮತ್ತು ಎಲೆಕ್ಟಾçನಿಕ್ ಮಾಧ್ಯಮಗಳಲ್ಲಿ ಈ ಸಮಯದಲ್ಲಿ ವ್ಯಾಪಕವಾದ ಅಪಪ್ರಚಾರ ನಡೆಸಿ ಆ ವಿದೇಶಿ ಯಾತ್ರಿಕರನ್ನು ಅವಮಾನಿಸಲಾಯಿತು. ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ ನ್ಯಾಯಾಲಯ ಅವರನ್ನು ಸರಿ ಸುಮಾರು ಚಿತ್ರಹಿಂಸೆಗೆ ಗುರಿಪಡಿಸಲಾಯಿತು ಎಂದು ಹೇಳಿತು.

ಆ ದಿನಗಳಲ್ಲಿ ತಬ್ಲೀಗಿಗಳ ವಿರುದ್ಧ ಮತ್ತು ಮುಸಲ್ಮಾನರ ವಿರುದ್ಧ ವ್ಯವಸ್ಥಿತವಾದ ಅಪಪ್ರಚಾರ ನಡೆಸಿ ಕೋವಿಡ್-19 ರ ಪ್ರಸಾರಕ್ಕೆ ಅವರನ್ನೇ ಗುರಿಪಡಿಸಲಾಯಿತು. ಅವರು ಉದ್ದೇಶಪೂರ್ವಕವಾಗಿ ಸಾಂಕ್ರಾಮಿಕವನ್ನು ಪ್ರಸಾರ ಮಾಡಿದರು ಎಂದು ಕತೆ ಕಟ್ಟಿ ಪ್ರಚಾರ ಮಾಡಲಾಯಿತು. ಅದನ್ನು ಕರೊನಾ ಜಿಹಾದ್ ಎಂದು ಕರೆಯಲಾಯಿತು. ದೇಶವನ್ನು ಬುಡಮೇಲು ಮಾಡಲು ಅವರು ಹೆಣೆದ ತಂತ್ರವಿದು ಎಂದು ಹೇಳಲಾಯಿತು. ತಬ್ಲೀಗಿ ಜಮಾತ್ ಈ ಸಾಂಕ್ರಾಮಿಕ ರೋಗಕ್ಕೆ ಮೂಲ ಕಾರಣ ಎಂದು ಕೇಂದ್ರ ಸರ್ಕಾರ ಪದೆ ಪದೆ ಹೇಳುತಿತ್ತು.

ಸಾಂಪ್ರದಾಯಿಕ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಹೀಯಾಳಿಸಲು ಅವಮಾನಿಸಲು ಬಳಸಿಕೊಳ್ಳಲಾಯಿತು. ನಾವು ನಮ್ಮ ದೇಶದ ಶ್ರೇಷ್ಠ ಪರಂಪರೆ ಮತ್ತು ಸಂಸ್ಕೃತಿಗೆ ಅನುಗುಣವಾಗಿ ನಡೆದು ಕೊಂಡಿದ್ದೇವಾ ಎಂದು ನಾವು ಚಿಂತಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿತು. ಆ ವಿದೇಶಿಯರು ನಮ್ಮ ದೇಶದ ಅತಿಥಿಗಳಾಗಿದ್ದರು ಎಂದು ಹೇಳಿದ ನ್ಯಾಯಾಲಯ ಅವರನ್ನು ನಾವು ನಡೆಸಿಕೊಂಡ ರೀತಿ ಹೇಗಿತ್ತು. ನ್ಯಾಯಾಲಯ ತನ್ನ ತೀರ್ಪಿನಲ್ಲಿ ಜಾತ್ಯತೀತತೆಗೆ, ಧಾರ್ಮಿಕ ಸಾಮರಸ್ಯಕ್ಕೆ ಒತ್ತು ಕೊಟ್ಟಿತು ಮಾತ್ರವಲ್ಲ ನಮ್ಮ ದೇಶದ ಐಖ್ಯತೆ, ಸಮಗ್ರತೆಯನ್ನು ಕಾಪಾಡಲು ಇವು ಅತ್ಯವಶ್ಯಕವಾಗಿದೆ ಎಂದು ಹೇಳಿತು.

ನ್ಯಾಯಾಲಯವು ಈ ಪ್ರಕರಣದಲ್ಲಿ ಸರ್ಕಾರವನ್ನು ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಬೇರೆ ಬೇರೆ ದೇಶಗಳ ಬೇರೆ ಬೇರೆ ಧರ್ಮಗಳ ಜನರನ್ನು ತಾರತಮ್ಯದಿಂದ ಕಾಣಬಾರದು ಎಂದು ಸರ್ಕಾರವನ್ನು ಎಚ್ಚರಿಸಿತು. ಈ ಪ್ರಕರಣದಲ್ಲಿ ಪೊಲೀಸರು ಕಾರ್ಯಾಂಗದ ನಿರ್ದೇಶನಗಳಿಗೆ ತಕ್ಕಂತೆ ವರ್ತಿಸಿ ತಾರತಮ್ಯದಿಂದ ವರ್ತಿಸಿದೆ ಎಂದು ಗುಡುಗಿದೆ.

ಇನ್ನೆರಡು ಉಚ್ಛ ನ್ಯಾಯಾಲಯವು ಸಹ ತಬ್ಲೀಗೀ ಜಮಾತ್ ಸದಸ್ಯರ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಿದೆ. ಕಾರಣ ಬೇರೆ ಇರಬಹುದು. ಆದಾಗ್ಯೂ ತಬ್ಲೀಗೀ ಜಮಾತ್ ವಿರುದ್ಧದ ಅಪಪ್ರಚಾರ ಸುಳ್ಳು ಹಾಗೂ ದುರುದ್ದೇಶಪೂರಕ ಎಂದು ಈಗ ಸಾಬೀತಾಗಿದೆ. ಒಂದು ಸರ್ಕಾರವೇ ಪೂರ್ವಗ್ರಹಪೀಡಿತವಾದರೆ ಸುಳ್ಳು ಆರೋಪಗಳಿಗೆ ಸಿಕ್ಕಿಹಾಕಿಕೊಂಡ ಜನತೆಗೆ ನ್ಯಾಯ ಸಿಗುವುದಾದರೂ ಹೇಗೆ?

ನಮ್ಮ ದೇಶದಲ್ಲಿ ಮುಸಲ್ಮಾನರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಹಿಂಸೆಗೆ, ತಾರತಮ್ಯಕ್ಕೆ ಬಲಿಯಾಗುತ್ತಿರುವ ಮುಸಲ್ಮಾನರು ನಮ್ಮ ದೇಶದಲ್ಲೇ ಅತಿ ಹೆಚ್ಚು ಎಂಬುದನ್ನು ನಾವು ಮರೆಯಬಹುದೆ? ತಾವು ಹುಟ್ಟಿ ಬೆಳೆದ ಈ ದೇಶದಲ್ಲಿ ತಾವು ಪರಕೀಯರಾಗಿ ಬದುಕುವ ಪರಿಸ್ಥಿತಿ ಅವರು ಒಳಗಾಗಿರುವುದು ಅವರನ್ನು ನಿರಂತರವಾಗಿ ಹಿಂಸಿಸುತ್ತದೆ. ಇಲ್ಲಿ ತಮ್ಮ ಹೆಣ್ಣು ಮಕ್ಕಳು ಸುರಕ್ಷಿತವಾಗಿಲ್ಲ. ಇಲ್ಲಿ ಆಸ್ತಿಪಾಸ್ತಿ ಸುರಕ್ಷಿತವಾಗಿಲ್ಲ. ತಮ್ಮ ಮನೆಗಳು, ಪ್ರಾರ್ಥನಾ ಮಂದಿರಗಳು ಸುರಕ್ಷಿತವಾಗಿಲ್ಲ. ಯಾವುದೇ ಅಪರಾಧ ಮಾಡದೆ, ತಮ್ಮನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಲಾಗದೆ ಜೈಲುಗಳಲ್ಲಿ ಕೊಳೆಯುತ್ತಿರುವ ಮುಸ್ಲಿಂ ಯುವಕರು ಅದೆಷ್ಟು ಜನ?

ಇಂತಹ ಪರಿಸ್ಥಿತಿಯಲ್ಲಿ ಮುಸ್ಲಿಂ ಯುವಕರು ಆರೆಸ್ಸೆಸ್‌ನವರಂತೆ ಪಿಡಿಎಫ್, ಎಸ್‌ಡಿಎಫ್‌ಐ ಅಂತಹ ಸಂಘಟನೆಗಳನ್ನು ಕಟ್ಟಲು ಮುಂದಾದರೆ ಆಶ್ಚರ್ಯವೇನಿಲ್ಲ. ಆದರೆ ಹಿಟ್ಲರ್‌ಶಾಹಿ, ಆರೆಸ್ಸೆಸ್ ಈ ದೇಶದ ಯಾವ ಯುವಕರಿಗೂ ಆದರ್ಶವಲ್ಲ. ನಮ್ಮ ಯುವಕರು ಅಂತಹ ಸಂಘಟನೆಗಳಿಗೆ ಆಕರ್ಷಿತರಾಗಬಾರದು. ಕಾನೂನು ಬಡವರಪರ ಇರುವುದಿಲ್ಲ. ಕಾನೂನು ದಮನಕಾರಿಯಾಗಿದೆ. ಅಂತಹ ದಮನಕಾರಿ ಅಸ್ತ್ರವನ್ನು ನಮ್ಮ ಯುವಕರು ಕೈಗೆತ್ತಿಕೊಳ್ಳಬಾರದು. ಹಿಂದುಗಳ ಬಗ್ಗೆ ಮುಸಲ್ಮಾನರಲ್ಲಿ, ಮುಸಲ್ಮಾನರ ಬಗ್ಗೆ ಹಿಂದುಗಳಲ್ಲಿ ದ್ವೇಷ, ಅಸಹನೆ ಬಿತ್ತುವವರ ವಿರುದ್ಧ ಎಚ್ಚರ ಅಗತ್ಯ.

Leave a Reply

Your email address will not be published. Required fields are marked *