ನ್ಯಾಯಾಂಗ ನುಣುಚಿಕೆ, ನ್ಯಾಯಾಂಗ ಕಸರತ್ತು ಇತ್ಯಾದಿ
ಕಾರ್ಯಾಂಗದ ಅಗತ್ಯಗಳಿಗೆ ಅನುಗುಣವಾಗಿ ವಿನಮ್ರವಾಗಿ ಹೊಂದಿಕೊಳ್ಳುವ ಒಂದು ಬೆದರಿದ ನ್ಯಾಯಾಂಗ ಎಂಬುದೊಂದು ಆತಂಕಕಾರಿ ಬೆಳವಣಿಗೆ. ಇದರಿಂದ ಸರಕಾರ ಕಾನೂನು ಮತ್ತು ಸಂವಿಧಾನದ ವಿಧಿ-ವಿಧಾನಗಳನ್ನು ಉಲ್ಲಂಘಿಸಿದಾಗ ಅದನ್ನು ಉತ್ತರದಾಯಾಗಿಸುವ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ನ್ಯಾಯಾಂಗದ ಪಾತ್ರಕ್ಕೆ ಧಕ್ಕೆ ಬರುತ್ತದೆ. ನ್ಯಾಯಾಂಗದ ಸಮಗ್ರತೆ ಮತ್ತು ಸ್ವಾತಂತ್ರ್ಯದಲ್ಲಿ ಆಗಿರುವ ಸವೆತ, ನ್ಯಾಯಾಂಗ ನುಣುಚಿಕೆ, ನ್ಯಾಯಾಂಗ ಕಸರತ್ತು ಮೋದಿಯ ಸರ್ವಾಧಿಕಾರಶಾಹಿ ಆಳ್ವಿಕೆಯ ನೇರ ಫಲಿತಾಂಶ. ಈಗ, ಪ್ರಶಾಂತ ಭೂಷಣ ಅವರನ್ನು ನ್ಯಾಯಾಂಗ ನಿಂದನೆಯ ದೋಷಿ ಎಂದುದರ ವಿರುದ್ಧ ಎದ್ದು ಬಂದಿರುವ ವ್ಯಾಪಕ ಪ್ರತಿಭಟನೆಗಳು ಮತ್ತು ಅವರಿಗೆ ದೊರೆತಿರುವ ಬೆಂಬಲ ಉನ್ನತ ನ್ಯಾಯಾಂಗದಲ್ಲಿನ ಈ ಪ್ರವೃತ್ತಿಗಳನ್ನು ಹಿಂದಕ್ಕೆ ತಳ್ಳುವ ಕ್ರಿಯೆ ಆರಂಭ ಆಗಿದೆ ಎಂಬುದು ಸಂತೋಷದ ಸಂಗತಿ.
ಹಿರಿಯ ವಕೀಲ ಪ್ರಶಾಂತ ಭೂಷಣ್ ಅವರನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆಯ ದೋಷಿ ಎಂದ ಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರುಗಳ ಪೀಠದ ತೀರ್ಪು ಆ ಸಂಸ್ಥೆಯ ಪ್ರತಿಷ್ಠೆಯನ್ನು ತಗ್ಗಿಸಿದೆ. ಇದು ದೇಶದ ಸವೋಚ್ಚ ನ್ಯಾಯಾಲಯ ವಿಮರ್ಶೆಗಳನ್ನು ಸಹಿಸುವುದಿಲ್ಲ, ಭಿನ್ನಮತವನ್ನು ಶಿಕ್ಷಿಸಲು ನಿಂದನೆ ಕಾನೂನನ್ನು ಬಳಸುತ್ತದೆ ಎಂದು ಕೆಟ್ಟದಾಗಿ ಬಿಂಬಿಸಿದೆ.
ನ್ಯಾಯಾಲಯದ ಬಗ್ಗೆ ಅಪನಿಂದೆ ಮಾಡುವಂತದ್ದು ಎಂದು ನ್ಯಾಯಾಲಯಕ್ಕೆ ಕಂಡು ಬಂದ ಪ್ರಶಾಂತ ಭೂಷಣ್ ಅವರ ಎರಡು ಟ್ವೀಟ್‌ಗಳನ್ನು ನೋಡಿದರೆ ಇಂತಹ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಸುಪ್ರಿಂ ಕೋರ್ಟಿನ ಮಾಜಿ ನ್ಯಾಯಾಧೀಶರುಗಳು ಹಲವಾರು ತೀರ್ಪುಗಳ ಬಗ್ಗೆ, ನ್ಯಾಯಾಲಯದ ಕಾರ್ಯವೈಖರಿಯ ಬಗ್ಗೆ ಹಲವಾರು ವಿಮರ್ಶೆಗಳನ್ನು ಮತ್ತು ಆರೋಪಗಳನ್ನು ಮಾಡಿದ್ದಾರೆ. ಅವರನ್ನೆಲ್ಲ ನ್ಯಾಯಾಲಯಕ್ಕೆ ಅಪಕೀರ್ತಿ ತಂದಿರುವ ಅಪರಾಧಿಗಳು ಎನ್ನಬೇಕೇ? ಅವರ ಮೇಲೆ ಕ್ರಮ ಕೈಗೊಂಡಿರದಿದ್ದರೆ, ಏಕೆ ಈ ಭಿನ್ನ ಮಾನದಂಡಗಳು?
ಮೂವರು ನ್ಯಾಯಾಧೀಶರ ಪೀಠ ಭೂಷಣ್‌ರವರಿಗೆ ಶಿಕ್ಷೆಯನ್ನು ಇನ್ನೂ ವಿಧಿಸಿಲ್ಲ. ಈ ತೀರ್ಪಿನ ವಿರುದ್ಧ ಬಂದಿರುವ ಭಾರೀ ಪ್ರತಿಭಟನೆಗಳಿಂದಾಗಿ ನ್ಯಾಯಾಲಯ, ಭೂಷಣ್ ಕ್ಷಮೆ ಕೋರಬೇಕು, ಅದರೊಂದಿಗೆ ಇದು ಮುಕ್ತಾಯವಾಗುತ್ತದೆ ಎಂದು ಹೇಳಬೇಕಾಗಿ ಬಂದಿದೆ. ಪ್ರಶಾಂತ್ ಭೂಷಣ್, ಇದು ತನ್ನ ನ್ಯಾಯಯುತ ವಿಮರ್ಶೆ ಎಂದು ನಂಬಿರುವುದರಿಂದ ಕ್ಷಮೆ ಕೋರಲು ನಿರಾಕರಿಸಿದ್ದಾರೆ. ಇದರಿಂದಾಗಿ ತೀರ್ಪು ಏನಾಗುತ್ತದೆ ಎಂದು ಕಾದು ನೋಡಬೇಕಷ್ಟೇ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಭೂಷಣ್ ಅವರ ವಿರುದ್ಧ ಈ ತೀರ್ಪನ್ನು ಪ್ರತ್ಯೇಕವಾಗಿ ಕಾಣಲು ಸಾಧ್ಯವಿಲ್ಲ. ಇದು ಇತ್ತೀಚಿನ ವರ್ಷಗಳಲ್ಲಿ ಸುಪ್ರಿಂ ಕೋರ್ಟ್ ಕೆಲಸ ಮಾಡುತ್ತಿರುವ ಮತ್ತು ನ್ಯಾಯ ನೀಡಿಕೆ ಮಾಡುತ್ತಿರುವ ವೈಖರಿಯ ಬಗ್ಗೆ ಕಾಣ ಬಂದಿರುವ ಹಲವಾರು ಕಳವಳಕಾರೀ ಪ್ರವೃತ್ತಿಗಳ ಒಂದು ಭಾಗವಾಗಿದೆ. ನ್ಯಾಯಾಲಯ ಹೆಚ್ಚೆಚ್ಚಾಗಿ ಒಂದು ಕಾರ್ಯಾಂಗದ ನ್ಯಾಯಾಲಯವಾಗುತ್ತಿರುವಂತೆ ಕಾಣುತ್ತದೆ. ಇದಕ್ಕೆ ನಾಗರಿಕರ ಸಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯುವ ಬಗ್ಗೆ ಏನೂ ಕಾಳಜಿಯಿದ್ದಂತಿಲ್ಲ. ನ್ಯಾಯಾಲಯದ ಕಾರ್ಯನಿರ್ವಹಣೆ, ಅದು ಕಾರ್ಯಾಂಗದ ಹಿತಗಳಿಗೆ ತಲೆಬಾಗಿರುವುದು, ಸಂವಿಧಾನಿಕ ಪ್ರಶ್ನೆಗಳಿಂದ, ಕಾರ್ಯಾಂಗದ ಘೋರ ನಿರ್ಧಾರಗಳಿಂದ ನುಣುಚಿಕೊಳ್ಳುತ್ತಿರುವುದು, ನ್ಯಾಯಾಲಯದ ತೀರ್ಪುಗಳ ಪರಾಮರ್ಶೆಯಲ್ಲಿ ನ್ಯಾಯಾಂಗದ ವಿಧಿ-ವಿಧಾನಗಳ ಉಲ್ಲಂಘನೆ ಮತ್ತು ಹೊಣೆಗಾರಿಕೆಯ ಕೊರತೆ ಇವೆಲ್ಲ ತಪಾಸಣೆಗೆ ಒಳಗಾಗಿವೆ.
ಕಳೆದ ಒಂದು ವರ್ಷದಲ್ಲಿ, ಈ ಪ್ರವೃತ್ತಿ ಹೆಚ್ಚು ಎದ್ದು ಕಾಣುತ್ತಿದೆ. ಇದರಲ್ಲಿ ಕಣ್ಣಿಗೆ ರಾಚುವಂತಹ ಉದಾಹರಣೆಯೆಂದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಪಟ್ಟಂತಹ ಸಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳ ಪ್ರಶ್ನೆಗಳನ್ನು ಎತ್ತಿಕೊಂಡಿರುವ ರೀತಿ. ನ್ಯಾಯಾಲಯ ಇನ್ನೂ ಕೂಡ ಕಲಮು ೩೭೦ಕ್ಕೆ ಸಂಬಂಧಪಟ್ಟ ಸಂವಿಧಾನಿಕ ತಿದ್ದುಪಡಿಯ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿರುವ ಕ್ರಮದ ಸಿಂಧುತ್ವಕ್ಕೆ ಸವಾಲು ಹಾಕಿರುವ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿಲ್ಲ. ವಿಶೇಷವಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ೪ಜಿ ಅಂತರ್ಜಾಲವನ್ನು ವಂಚಿಸಿರುವ ವಿಷಯದಲ್ಲಿ ಅಲ್ಲಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೊನೆಗೂ ಅದು ಈ ಕುರಿತ ನಿಷೇಧವನ್ನು ಹೇರಿರುವ ಸರಕಾರೀ ಸಮಿತಿಗೆ ಅದನ್ನು ಪರಾಮರ್ಶಿಸುವಂತೆ ಹೇಳಿದೆಯಷ್ಟೇ.
ಇನ್ನು ಕಾನೂನುಬಾಹಿರ ನಿರ್ಬಂಧಕ್ಕೆ ಒಳಪಟ್ಟ ವ್ಯಕ್ತಿಗಳನ್ನು ಹಾಜರುಪಡಿಸಬೇಕೆಂಬ ಹೆಬಿಯಸ್ ಕಾರ್ಪಸ್ ಅರ್ಜಿಗಳಿಗೆ ಸಂಬಂಧಪಟ್ಟಂತೆ, ನಾಗರಿಕರ ಸ್ವಾತಂತ್ರ್ಯದ ಹಕ್ಕನ್ನು ವಂಚಿಸುವ ಕ್ರಮಕ್ಕೆ ಕಾರ್ಯಾಂಗವನ್ನು ಉತ್ತರದಾಯಾಗಿಸುವ ತನ್ನ ಹೊಣೆಗಾರಿಕೆಯನ್ನೇ ನ್ಯಾಯಾಲಯ ತ್ಯಜಿಸಿ ಬಿಟ್ಟಿದೆ.
ಇತ್ತೀಚೆಗೆ ಒಂದು ವಿಲಕ್ಷಣ ಪ್ರಕರಣ ನಡೆದಿದೆ. ಕಾಂಗ್ರೆಸ್ ಮುಖಂಡ ಸೈಫುದ್ಧಿನ್ ಸೋಝ್ ನಿರ್ಬಂಧದಲ್ಲಿ ಇಲ್ಲ, ಅವರು ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರರು ಎಂದು ಸರಕಾರ ನ್ಯಾಯಾಲಯದ ಮುಂದೆ ಸಾರಿತು. ಅದೇ ಸಂಜೆ, ಅವರನ್ನು ತಮ್ಮ ಮನೆಯಿಂದ ಹೊರಬರದಂತೆ ನಿರ್ಬಂಧಿಸಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಕಾಣಬಂದವು. ಆದರೂ ನ್ಯಾಯಾಲಯ ಇದರಿಂದಲೂ ವಿಚಲಿತಗೊಳ್ಳಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆಯ ಆರೋಪವನ್ನು ಹಾಕಲಿಲ್ಲ.
ವಲಸೆ ಕಾರ್ಮಿಕರ ಶೋಚನೀಯ ಸ್ಥಿತಿಯನ್ನು ಕುರಿತ ಪ್ರಕರಣಗಳಲ್ಲಿ, ಮೊದಲಿಗೆ ಸುಪ್ರಿಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿತು. ಬದಲಾಗಿ ಈ ಕುರಿತ ಅದರ ಟಿಪ್ಪಣಿಗಳು ನ್ಯಾಯಾಲಯ ಮತ್ತು ಮಾನವ ಹಕ್ಕುಗಳ ನಡುವಿನ ದೂರವನ್ನು ತೋರಿಸಿ ಕೊಟ್ಟಿವೆ. ನಿಜ ಹೇಳಬೇಕೆಂದರೆ, ಈ ವಿಷಯದಲ್ಲಿ, ಮತ್ತು ಇನ್ನೂ ಇತರ ಹಲವು ವಿಷಯಗಳಲ್ಲಿ ಹೈಕೋರ್ಟುಗಳು ಹೆಚ್ಚು ಸಹಾನುಭೂತಿಪರವಾಗಿದ್ದವು, ವಲಸೆ ಕಾರ್ಮಿಕರ ನರಳಾಟಗಳ ವಾಸ್ತವಕ್ಕೆ ಸ್ಪಂದಿಸಿದವು.
ಚುನಾವಣಾ ಬಾಂಡುಗಳಿಗೆ ಸವಾಲು ಹಾಕುವ ಅರ್ಜಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಿ ಎರಡೂವರೆ ವರ್ಷಗಳಾಗಿವೆ. ಇದು ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ಜೀವನ್ಮರಣ ಪರಿಣಾಮ ಹೊಂದಿರುವ ಒಂದು ಪ್ರಶ್ನೆ. ಆದರೆ ಇನ್ನೂ ಕೂಡ ನ್ಯಾಯಾಲಯಕ್ಕೆ ಇದನ್ನು ಕೈಗೆತ್ತಿಕೊಳ್ಳಲು ಸಮಯವೇ ಸಿಕ್ಕಿಲ್ಲ. ಇದು ಪ್ರಸಕ್ತ ಸರಕಾರಕ್ಕೆ ನೆರವಾಗುವ ನ್ಯಾಯಾಂಗ ನುಣುಚಿಕೆಯ ಇನ್ನೊಂದು ಉದಾಹರಣೆ. ಮಹಾಸೋಂಕಿನ ಸಮಯದಲ್ಲಿ ತಾನು ಕೈಗೆತ್ತಿಕೊಳ್ಳುವ ಪ್ರಕರಣಗಳ “ಆದ್ಯತೆ”ಗಳ ಪಟ್ಟಿಯನ್ನು ತಯಾರಿಸಲು ನ್ಯಾಯಾಲಯ ನಿರ್ಧರಿಸಿತು. ಆದರೆ ಕಲಮು ೩೭೦ರ ರದ್ಧತಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಚಿಂದಿಗೊಳಿಸಿದ್ದು, ಮತ್ತು ಚುನಾವಣಾ ಬಾಂಡ್ ಈ ‘ಆದ್ಯತೆ’ಗಳಲ್ಲಿ ಸೇರಿಲ್ಲ.
ಇದರ ಮೊದಲು, ಆಗಿನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ನೇತೃತ್ವದ ಪೀಠದ ಅಡಿಯಲ್ಲಿ ಅಯೋಧ್ಯಾ ವಿವಾದದ ಮೇಲೆ ತೀರ್ಪು ಕೊಡಲು ನಲ್ವತ್ತಕ್ಕೂ ಹೆಚ್ಚು ದೈನಂದಿನ ವಿಚಾರಣೆಗಳನ್ನು ನಿಗದಿ ಪಡಿಸಿತು. ಅದು ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಒಂದು ರಾಮಮಂದಿರ ಕಟ್ಟುವ ಆಳುವ ಪಕ್ಷದ ಆಶ್ವಾಸನೆಗೆ ಅನುಕೂಲಕರವಾದ ಒಂದು ತೀರ್ಪನ್ನು ಕೊಟ್ಟಿತು. ಆದರೆ, ತದ್ವಿರುದ್ಧವಾಗಿ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ಐವರು ನ್ಯಾಯಾಧೀಶರ ಪೀಠದ ತೀರ್ಪಿನ ಪ್ರಶ್ನೆ ಬಂದಾಗ, ಅದರ ಪರಾಮರ್ಶೆ ಅರ್ಜಿಯನ್ನು ಎತ್ತಿಕೊಂಡ ಪೀಠ ಒಂದು ವಿಚಿತ್ರ ನಿಲುವನ್ನು ತಳೆತು. ಈ ಪರಾಮರ್ಶೆ ಅರ್ಜಿಯನ್ನು ತಳ್ಳಿ ಹಾಕುವ ಬದಲು, ಅದು ಇದನ್ನು ಒಂದು ಇನ್ನೂ ವಿಸ್ತಾರವಾದ ಕಾನೂನಿನ ಪ್ರಶ್ನೆಗಳನ್ನು ಪರಿಶೀಲಿಸಲೆಂದು ಒಂದು ದೊಡ್ಡ ಪೀಠಕ್ಕೆ ಕಳಿಸಿತು. ಇದು ಯಾವುದೇ ಪರಾಮರ್ಶೆ ಅರ್ಜಿಯ ವಿಚಾರಣೆ ಮಾಡುವ ಪೀಠದ ವ್ಯಾಪ್ತಿಯ ಹೊರಗಿರುವ ಅಂಶವಾಗಿದೆ. ನಂತರ ಭಾರತದ ಮುಖ್ಯ ನ್ಯಾಯಾಧೀಶರು ಈ ಪ್ರಶ್ನೆಗಳನ್ನು ಪರಿಶೀಲಿಸಲು ಒಂದು ಒಂಬತ್ತು ನ್ಯಾಯಾಧೀಶರ ಪೀಠವನ್ನು ರಚಿಸಿದರು. ಇದು ‘ಆಸ್ಥೆ’ ಎಂಬುದು ಕಾನೂನು ಮತ್ತು ಸಂವಿಧಾನಕ್ಕಿಂತ ಮೇಲಿನ ಸ್ಥಾನವನ್ನು ಹೊಂದಿರಬೇಕು ಎಂಬ ಆಳುವ ಪಕ್ಷದ ನೋಟಕ್ಕೆ ಅನುಗುಣವಾಗಿರುವ ನ್ಯಾಯಾಂಗ ಕಸರತ್ತು.
ಸರ್ವೋಚ್ಚ ನ್ಯಾಯಾಲಯದ ಕಾರ್ಯನಿರ್ವಹಣೆಯಲ್ಲಿ ಕಾಣುತ್ತಿರುವ ಈ ಅನಾರೋಗ್ಯಕರ ಪ್ರವೃತ್ತಿಗಳಿಗೆ ಮುಖ್ಯ ಕಾರಣ ಮೋದಿ ಸರಕಾರದ ಬುಡಕ್ಕೇ ಬರುತ್ತದೆ. ಅದು ನ್ಯಾಯಾಧೀಶರುಗಳ ನೇಮಕದಲ್ಲಿ ಬಹಿರಂಗ ವಾಗಿಯೇ ಹಸ್ತಕ್ಷೇಪ ಮಾಡಿಕೊಂಡು ಬಂದಿದೆ. ಇದು ಕೊಲಿಜಿಯಂ ಶಿಫಾರಸು ಮಾಡಿದ್ದ ಗೋಪಾಲ ಸುಬ್ರಮಣ್ಯಂ ನೇಮಕವನ್ನು ತಡೆ ಹಿಡಿಯುವುದರೊಂದಿಗೆ ಆರಂಭವಾಯಿತು; ಹೈಕೋರ್ಟುಗಳ ನ್ಯಾಯಾಧೀಶರುಗಳ ಬಡ್ತಿ ಮತ್ತು ವರ್ಗಾವಣೆಗಳ ಮೇಲೆ ಪ್ರಭಾವ ಬೀರುತ್ತಿದೆ; ನ್ಯಾಯಮೂರ್ತಿ ಪಿ.ಸತಾಶಿವಂರನ್ನು ಕೇರಳ ರಾಜ್ಯಪಾಲರಾಗಿ ನೇಮಿಸಿದ್ದು, ನ್ಯಾಯಮೂರ್ತಿ ಗೊಗೊಯ್ ಅವರನ್ನು ರಾಜ್ಯಸಭಾ ಸದಸ್ಯರಾಗಿ ನೇಮಿಸಿದ್ದು ಮುಂತಾಗಿ, ನಿವೃತ್ತರಾಗುತ್ತಿರುವ ಮುಖ್ಯ ನ್ಯಾಯಾಧೀಶರುಗಳಿಗೆ ಸೌಕರ್ಯಭರಿತ ಹುದ್ದೆಗಳನ್ನು ಒದಗಿಸುತ್ತಿದೆ.
ಕಾರ್ಯಾಂಗದ ಅಗತ್ಯಗಳಿಗೆ ಅನುಗುಣವಾಗಿ ವಿನಮ್ರವಾಗಿ ಹೊಂದಿಕೊಳ್ಳುವ ಒಂದು ಬೆದರಿದ ನ್ಯಾಯಾಂಗ ಎಂಬುದೊಂದು ಆತಂಕಕಾರಿ ಬೆಳವಣಿಗೆ. ಇದರಿಂದ ಸರಕಾರ ಕಾನೂನು ಮತ್ತು ಸಂವಿಧಾನದ ವಿಧಿ-ವಿಧಾನಗಳನ್ನು ಉಲ್ಲಂಘಿಸಿದಾಗ ಅದನ್ನು ಉತ್ತರದಾಯಾಗಿಸುವ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ನ್ಯಾಯಾಂಗದ ಪಾತ್ರಕ್ಕೆ ಧಕ್ಕೆ ಬರುತ್ತದೆ. ನ್ಯಾಯಾಂಗದ ಸಮಗ್ರತೆ ಮತ್ತು ಸ್ವಾತಂತ್ರ್ಯದಲ್ಲಿ ಆಗಿರುವ ಸವೆತ ಮೋದಿಯ ಸರ್ವಾಧಿಕಾರಶಾಹಿ ಆಳ್ವಿಕೆಯ ಒಂದು ನೇರ ಫಲಿತಾಂಶ.
ಉನ್ನತ ನ್ಯಾಯಾಂಗದಲ್ಲಿನ ಈ ಪ್ರವೃತ್ತಿಗಳನ್ನು, ಹೆಚ್ಚೆಚ್ಚು ಕಾನೂನು ಬಂಧುಗಳು-ನಿವೃತ್ತ ನ್ಯಾಯಾಧೀಶರುಗಳು, ನ್ಯಾಯಶಾಸ್ತ್ರಜ್ಞರು, ವಕೀಲ ವೃಂದಗಳ ಸದಸ್ಯರುಗಳು ಪ್ರಶ್ನಿಸುತ್ತಿರುವುದು ಸಂತೋಷಕರ ಸಂಗತಿ. ಪ್ರಶಾಂತ ಭೂಷಣ ಅವರನ್ನು ನ್ಯಾಯಾಂಗ ನಿಂದನೆಯ ದೋಷಿ ಎಂದುದರ ವಿರುದ್ಧ ಎದ್ದು ಬಂದಿರುವ ವ್ಯಾಪಕ ಪ್ರತಿಭಟನೆಗಳು ಮತ್ತು ಅವರಿಗೆ ದೊರೆತಿರುವ ಬೆಂಬಲ ಉನ್ನತ ನ್ಯಾಯಾಂಗದಲ್ಲಿನ ಈ ಪ್ರವೃತ್ತಿಗಳನ್ನು ಹಿಂದಕ್ಕೆ ತಳ್ಳುವ ಕ್ರಿಯೆ ಆರಂಭವಾಗಿದೆ ಎಂಬುದನ್ನು ತೋರಿಸುತ್ತದೆ.