ಜನವಿರೋಧಿ ನಡೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳ ಮಹಾಪೂರ

೨೦೨೦ ಆಗಸ್ಟ್ ೨೦ ರಿಂದ ೨೬ ರವರೆಗೆ ಮೋದಿ ಸರಕಾರದ ಜನವಿರೋಧಿ ನಡೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆ ನಡೆಸಲು ಸಿಪಿಐ(ಎಂ) ಕೇಂದ್ರ ಸಮಿತಿ ಕರೆಯ ಭಾಗವಾಗಿ ಕರ್ನಾಟಕ ರಾಜ್ಯದಲ್ಲಿ ಆಗಸ್ಟ್‌ ೨೪ ರಿಂದ ೨೯ರವರೆಗೆ ಪ್ರತಿಭಟನಾ ಆಂದೋಲನವನ್ನು ನಡೆಸಲು ಕರೆ ನೀಡಿದ್ದು, ರಾಜ್ಯದ ವಿವಿದೆಡೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನಡೆಸಿದ ಪ್ರಚಾರದ ಆಂದೋಲನದ ವರದಿಗಳು…..

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಂದೋಲನ

ಕೇಂದ್ರ ಸರಕಾರ ಘೋಷಿಸಿದ ೨೦ ಲಕ್ಷ ಕೋಟಿ ಕೊರೊನಾ ಪರಿಹಾರ ಯಾರ ಜೇಬು ಸೇರಿದೆ? ಕೋವಿಡ್ ಸಂಕಷ್ಟ ಸಮಯದಲ್ಲಿ ಸರಕಾರಗಳು ಜನರಿಗೆ ಸಹಾಯ ಮಾಡುವ ಬದಲು ಖಾಸಗಿಯವರಿಗೆ ಇನ್ನಷ್ಟು ಸುಲಿಗೆಗೆ ಅವಕಾಶ ಕೊಟ್ಟು ಜನವಿರೋಧಿಯಾಗಿದೆ ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ಸಿಪಿಐ(ಎಂ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನಾ ಸಪ್ತಾಹದ ಭಾಗವಾಗಿ ಆಗಸ್ಟ್‌ 28ರ ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಪಂಜಿನಮೊಗರು ಪ್ರದೇಶದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಂದುವರಿಸುತ್ತಾ ಅವರು, ಕೇಂದ್ರ ಸರಕಾರ ಘೋಷಿಸಿದ್ದ ೨೦ ಲಕ್ಷ ಕೋಟಿ ಪ್ಯಾಕೇಜ್ ಕೇವಲ ಘೋಷಣೆಯಾಗಿ ಉಳಿದಿದೆ ಹೊರತು ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗಿಲ್ಲ. ಆ ಹಣವು ಯಾರ ಜೇಬು ಸೇರಿದೆ? ಕೊರೊನಾ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಬಳಕೆ ಹಾಗೂ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ, ಆಹಾರ ವಸ್ತುಗಳ ವಿತರಣೆಯಾಗಬೇಕು. ಬಡ ಕುಂಟುಂಬಗಳಿಗೆ ಆರ್ಥಿಕ ಸಹಾಯ ನೀಡುವುದರಿಂದ ಅವರ ಬದುಕಿಗೆ ಸಹಾಯದ ಜೊತೆಗೆ ಅವರ ಕೊಳ್ಳುವಿಕೆ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಚಕ್ರ ತಿರುಗಲು ಸಹಾಯವಾಗುತ್ತದೆ. ರಾಜ್ಯ ಸರಕಾರ ಘೋಷಿಸಿದ ಐದು ಸಾವಿರ ರೂಪಾಯಿಗಳು ಇನ್ನೂ ಕೂಡ ರಿಕ್ಷಾ ಚಾಲಕರಿಗೆ, ಕಟ್ಟಡ ಕಾರ್ಮಿಕರಿಗೆ ಸರಿಯಾಗಿ ತಲುಪಿಲ್ಲ, ಪ್ಯಾಕೇಜ್‌ಗಳು ಕೇವಲ ಘೋಷಣೆಗೆ ಸೀಮಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐಎಂ ನಿಕಟಪೂರ್ವ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ ಕೇಂದ್ರ ಸರಕಾರ ಬಡವರ ಹಿತ ಕಾಯುವ ಬದಲು ಅದಾನಿ, ಅಂಬಾನಿಯ ಹಿತ ಕಾಯುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಹೆಸರಲ್ಲಿ ಜನರಿಂದ ಲಕ್ಷಾಂತರ ಹಣ ಲೂಟಿಯಾಗುತ್ತಿದ್ದರೂ ಆಧಾರ್ ಕಾರ್ಡ್ ತೋರಿಸಿದರೆ ಉಚಿತ ಚಿಕಿತ್ಸೆ ದೊರೆಯುತ್ತದೆ ಎಂದು ಸುಳ್ಳು ಭರವಸೆಗಳೊಂದಿಗೆ ಜನರಿಗೆ ವಂಚಿಸಲಾಗಿದೆ ಎಂದು ಆಪಾದಿಸಿದರು.

ಪ್ರತಿಭಟನೆ ನೇತೃತ್ವವನ್ನು ಸಿಪಿಐಎಂ ಪಂಜಿನಮೊಗರು ಶಾಖೆ ಕಾರ್ಯದರ್ಶಿ ನೌಶಾದ್, ಬಶೀರ್, ಅನಿಲ್ ಡಿಸೋಜ, ಚರಣ್, ಜಯ, ನವೀನ್, ಮುಸ್ತಫಾ, ಸೌಮ್ಯ, ಸರಿತ, ಪ್ರಮೀಳಾ, ಆಶಾ ವಹಿಸಿದ್ದರು. ಇಬ್ರಾಹಿಂ ಖಲೀಲ್ ಸ್ವಾಗತಿಸಿ ಸಂತೋಷ್ ವಂದಿಸಿದರು.

ಗಂಗಾವತಿಯಲ್ಲಿ ಕೇಂದ್ರ ಸರಕಾರದ ಜನವಿರೋಧಿ ನಡೆ ವಿರುದ್ಧ ಪ್ರಚಾರಾಂದೋಲನ

ಗಂಗಾವತಿ: ದೇಶದಲ್ಲಿ ಕೋವಿಡ್ – ೧೯ ರ ಹಾವಳಿ ತೀವ್ರವಾಗುತ್ತದೆ. ಈಗಾಗಲೇ ದೇಶದಲ್ಲಿ ಸಾವಿರಾರು ಅಮಾಯಕ ಪ್ರಜೆಗಳು ಸಾವನ್ನಪ್ಪುತ್ತಿದ್ದಾರೆ. ಸುಮಾರು ೫೦ ಲಕ್ಷದಷ್ಟು ಜನ ಈ ಭಯಂಕರ ಸಾಂಕ್ರಾಮಿಕ ಪಿಡುಗಿನ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯ ದಿನಗಳ ಭವಿಷ್ಯ ನುಡಿಯುತ್ತಿದ್ದ ಜಾದುಗಾರ ಮೋದಿ ತನ್ನ ವೈಫಲ್ಯವನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ಒಂದೆಡೆ ಗಡಿಯಲ್ಲಿ ಯುದ್ಧೋನ್ಮಾನವನ್ನು ಹುಟ್ಟುಹಾಕಿ ಜನರಲ್ಲಿ ಆತಂಕವನ್ನು ಉಂಟು ಮಾಡುತ್ತಿದ್ದಾರೆ ಎಂದು ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ನಿರುಪಾದಿ ಬೆಣಕಲ್ ಹೇಳಿದರು.

ಅವರು ಸ್ಥಳೀಯ ಪಕ್ಷದ ಬಜಾರ ಹಮಾಲರು ಮತ್ತು ಗಂಜ್ ಶಾಖೆ ವತಿಯಿಂದ ಪಕ್ಷದ ಕೇಂದ್ರ ಮತ್ತು ರಾಜ್ಯ ಸಮಿತಿ ಕರೆಯ ಮೇರೆಗೆ ಪ್ರಚಾರಾಂದೋಲನದ ಭಾಗವಾಗಿ ನಗರದ ಸಿಬಿಎಸ್ ಸರ್ಕಲ್, ಗಂಜನಲ್ಲಿ ಮಹಾರಾಣ ಪ್ರತಾಪ ಸರ್ಕಲ್, ಎಪಿಎಂಸಿ, ಕೊಪ್ಪಳ ರಸ್ತೆಯಲ್ಲಿ ಸಾರ್ವಜನಿಕರಿಗೆ ಕೇಂದ್ರದ ಜನವಿರೋಧಿ ನೀತಿ ಕುರಿತು ಮಾಹಿತಿ ಕೊಟ್ಟರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಹಾಗೂ ಒಬಿಸಿ ಮತ್ತು ವಿಕಲಾಂಗರಿಗೆ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ತಕ್ಷಣದಿಂದಲೇ ಅಗತ್ಯವಿರುವ ಎಲ್ಲರಿಗೂ ಮುಂದಿನ ಆರು ತಿಂಗಳವರೆಗೆ ಪ್ರತಿಯೊಬ್ಬ ವ್ಯಕ್ತಿಗೆ ೧೦ ಕೆ.ಜಿ.ಯಂತೆ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಬೇಕು ಹಾಗೂ ಕೂಲಿ ದರವನ್ನು ಹೆಚ್ಚಿಸಬೇಕು ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ಪ್ರಕಟಿಸಬೇಕು. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ವಿರುದ್ಧ ಎಲ್ಲ ಪ್ರಸ್ತಾವನೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾತು. ಪಕ್ಷದ ಪ್ರಮುಖರಾದ ಹನುಮಂತಪ್ಪ, ನಾಗೇಶ ನಾಯ್ಕ, ಕೃಷ್ಣಪ್ಪ ನಾಯಕ, ಇಬ್ರಾಹಿಂ ಮೈಬು ಸಾಬ್, ಮಂಜುನಾಥ ನಾಯಕ, ಬಸವರಾಜ, ಚಂದುಸಾಬ ಇತರರು ಇದ್ದರು.

ಕೋಲಾರ: ಗ್ರಾಮ ಪಂಚಾಯತಿ ಮುಂಭಾಗ ಪ್ರತಿಭಟನೆ

ಸಿಪಿಐ(ಎಂ) ನ ದೇಶವ್ಯಾಪಿ ಪ್ರತಿರೋಧ ಸಪ್ತಾಹದ ಭಾಗವಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಪಕ್ಷದ ಶಾಖೆಗಳ ವತಿಯಿಂದ ೨೬ ಆಗಸ್ಟ್ ೨೦೨೦ರಂದು ಕಾರಹಳ್ಳಿ ಮತ್ತು ದೊಡ್ಡೂರುಕರಪನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ಮಂದೆ ಪ್ರತಿಭಟನೆಗಳನ್ನು ನಡೆಸಿ ೧೬ ಅಂಶಗಳ ಬೇಡಿಕೆಗಳಿಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಮನವಿ ಪತ್ರಗಳನ್ನು ಸಲ್ಲಿಸಲಾಯಿತು.

ಮಂಡ್ಯ:  ಕೋವಿಡ್ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನಾ ಸಪ್ತಾಹ

ಕೋವಿಡ್ ಮತ್ತು ಲಾಕ್ ಡೌನ್ ನಿಂದಾಗಿ ಅನೇಕ ಬಡಜನರು, ನಿವೇಶನ ರಹಿತರು, ಬೀದಿಬದಿ ವ್ಯಾಪಾರಸ್ಥರು, ವ್ಯಾಪಾರಿಗಳು, ರೈತರು, ವಿದ್ಯಾರ್ಥಿಗಳು ಹೀಗೆ ಹಲವಾರು ಕುಟುಂಬಗಳು ಸಂಕಷ್ಟದಲ್ಲಿದ್ದಾರೆ. ಇವರಿಗೆ ಕೋವಿಡ್ ಪರಿಹಾರವನ್ನು ಒದಗಿಸಲು ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಿಪಿಐಎಂನ ಮಂಡ್ಯ ಜಿಲ್ಲೆಯ ಮಳವಳ್ಳಿಯ ಪುರಸಭೆ ಕಛೇರಿ ಎದುರು ಪ್ರತಿಭಟನಾ ಸಪ್ತಾಹ ನಡೆಸಿದರು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಮಳವಳ್ಳಿ ತಾಲ್ಲೂಕು ಸಮಿತಿ ಕಾರ್ಯದರ್ಶಿ ದೇವಿ ರವರು ಮಾತನಾಡುತ್ತಾ ದೇಶದಲ್ಲಿ ಕೋವಿಡ್-೧೯ರ ಹಾವಳಿ ತೀವ್ರವಾಗುತ್ತಲೇ ಇದೆ. ಈಗಾಗಲೇ ಐವತ್ತು ಸಾವಿರ ಭಾರತೀಯರು ಕೊರೊನ ಸೋಂಕಿಗೆ ಬಲಿಯಾಗಿದ್ದಾರೆ. ೫೦ ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯ ದಿನಗಳ ಭವಿಷ್ಯ  ನುಡಿಯುತ್ತಿದ್ದ ಜಾದೂಗಾರ ಮೋದಿ ತನ್ನ ವೈಫಲ್ಯವನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ.

ಲಾಕ್‌ಡೌನ್ ದೇಶದ ಬಹುಪಾಲು ಜನಗಳ ಮೇಲೆ, ಅದರಲ್ಲೂ ದಲಿತರು, ಬುಡಕಟ್ಟು ಜನರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ವಿಕಲಾಂಗರ ಮೇಲೆ ಹೇಳ ತೀರದ ಸಂಕಷ್ಟಗಳನ್ನು ಹೇರಿತು. ಕೇಂದ್ರ ಬಿಜೆಪಿ ಸರ್ಕಾರ ಅವರ ನೆರವಿಗೆ ಧಾವಿಸಲಿಲ್ಲ ಅಂತಹ ಕುಟುಂಬಗಳಿಗೆ ನಗದು ವರ್ಗಾವಣೆ ಮತ್ತು ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಬೇಕೆಂಬ ಬೇಡಿಕೆಯನ್ನು ಈಡೇರಿಸುವುದನ್ನು  ನಿರಾಕರಿಸುತ್ತಲೇ ಬಂದಿದೆ. ಸೋಂಕು ಹರಡುವುದನ್ನು ತಡೆಯುವಲ್ಲಿ ವಿಫಲವಾದ ಮೋದಿ ಸರಕಾರ ಈಗ ಅಷ್ಟೇ ಬೇಜವಾಬ್ದಾರಿಂದ ಲಾಕ್‌ಡೌನ್ ತೆರವು ಮಾಡುತ್ತಾ ತಾನು ಉಂಟುಮಾಡಿದ ಸಮಸ್ಯೆಯನ್ನು ಎದುರಿಸುವ ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ ಎಂದು ಕೇಂದ್ರ ಸರ್ಕಾರದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸಂಕಷ್ಟ ಆರಂಭವಾಗುವುದಕ್ಕಿಂತಲೂ ಮೊದಲೇ ಕೇಂದ್ರದ ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಜಾರತೊಡಗಿತ್ತು. ಕೊರೊನಾ ಸಂಕಷ್ಟ ಗಾಯದ ಮೇಲೆ ಬರೆ ಎಳೆದಂತೆ ಇನ್ನಷ್ಟು ಭೀಕರಗೊಳಿಸಿದೆ ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಿ ಸಾರ್ವಜನಿಕ ರಂಗವನ್ನು ಬಲಪಡಿಸಿ, ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಅವರ ಆದಾಯವನ್ನು ಹೆಚ್ಚಿಸಿ, ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸಬಹುದಾಗಿತ್ತು. ಆದರೆ ಮೋದಿ ಸರ್ಕಾರ ರೈಲ್ವೆ, ವಿದ್ಯುತ್, ಬಿಎಸ್‌ಎನ್‌ಎಲ್, ಕಲ್ಲಿದ್ದಲು, ಪೆಟ್ರೋಲಿಯಂ, ಬ್ಯಾಂಕಿಂಗ್ ವಿಮೆ ಮೊದಲಾದ ಹಣಕಾಸು ವಲಯವನ್ನು ಖಾಸಗೀಕರಣ ಮಾಡಿ  ದೇಶದ ಆಸ್ತಿಯನ್ನು ಖಾಸಗಿಯವರು ಲೂಟಿ ಮಾಡಲು ಲಾಭಕೋರ ಕಾರ್ಪೋರೆಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ.

ಕೋವಿಡ್ ೧೯ರ ಹಾವಳಿ ಮತ್ತು ಅದು ಸೃಷ್ಟಿಸಿರುವ ಆತಂಕಕ್ಕೆ ಒಳಗಾಗಿ ಕಂಗೆಟ್ಟು ದೇಶದ ಜನಸಾಮಾನ್ಯರಿಗೆ ಅಗತ್ಯ ಆರ್ಥಿಕ ನೆರವು ಮಾನವೀಯ ನೆರವನ್ನು ಒದಗಿಸಬೇಕಾದ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಜನರ ಮೇಲೆ ಹೊರಲಾಗದ ಹೊರೆಗಳನ್ನು ಹೇರುತ್ತಿದೆ. ಇದನ್ನು ಖಂಡಿಸಿ ದೇಶವ್ಯಾಪಿಯಾಗಿ ಸಿಪಿಐಎಂ ವತಿಯಿಂದ ದೇಶಾದ್ಯಂತ ಪ್ರತಿಭಟನಾ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಸಿಪಿಐ(ಎಂ) ನ ಮುಖಂಡರಾದ ಹೆಚ್.ಕೆ.ತಿಮ್ಮೇಗೌಡ ತಿಳಿಸಿದರು.

ಕೋವಿಡ್ ಸಂಕಷ್ಟದಲ್ಲಿರುವವರಿಗೆ ನಗದು ಪರಿಹಾರ, ಆಹಾರ ಸಾಮಗ್ರಿ, ನಿವೇಶನ ರಹಿತರಿಗೆ ನಿವೇಶನ, ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯಗಳನ್ನು ಒದಗಿಸಲು ಕಿರುಕುಳ ತಪ್ಪಿಸಿ ಸೂಕ್ತ ರಕ್ಷಣೆಗಾಗಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಬಡ್ಡಿ ಸಮೇತ ಸಾಲವನ್ನು ಒಳಗೊಂಡಂತೆ ೧೭ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಗೌರಮ್ಮ, ನಂಜಮಣಿ, ಕೃಷ್ಣ, ಹರೀಶ್, ಶಂಕರ್, ಖಾಲಿಕ್ ಮುಂತಾದವರು ಭಾಗವಹಿಸಿದರು.

ಯಾದಗಿರಿ:

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ವಾರಚರಣೆ ಪ್ರಚಾರಾಂದೋಲನ ೨ನೇ ದಿನ ಗುಂಡಳ್ಳಿ ಗ್ರಾಮ ಕೂಲಿಕಾರರು ಕೆಲಸದ ನಂತರ ಸಭೆಯನ್ನು ನಡೆಸಿದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನಿತ್ಯಾನಂದಸ್ವಾಮಿ ಮಾತನಾಡುತ್ತಾ, ಕೇಂದ್ರದ ಬಿಜೆಪಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳು ಖಾಸಗೀಕರಣ ಮಾಡುತ್ತಿದ್ದು, ರಾಜ್ಯ ಬಿಜೆಪಿ ಸರ್ಕಾರ, ಭೂಸುಧಾರಣೆ ಕಾನೂನು ತಿದ್ದುಪಡಿ, ವಿದ್ಯುತ್, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದು ರೈತರನ್ನು ದಿವಾಳಿ ಮಾಡಲು ಹೊರಟಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾರ್ಯದರ್ಶಿ ದಾವಲಸಾಬ್ ನದಾಫ್ ಗುಂಡಳ್ಳಿ ಗ್ರಾಮದ ಬಾಬು, ಮೈಬುಸಾಬ, ಸಾಲರಸಾಬ ಭಾಗವಹಿಸಿದ್ದರು.

ಬೆಂಗಳೂರು:

ಪರಿಹಾರ ಮತ್ತು ಪರ್ಯಾಯ ಸಪ್ತಾಹದ ಅಂಗವಾಗಿ, ಬೆಂಗಳೂರು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಮನೆ ಕೆಲಸ ಮಾಡುವ ಮಹಿಳೆಯರಿಗೆ, ಮೇಯರ್ ವಿವೇಚನಾ ನಿಧಿಯಿಂದ ಪರಿಹಾರ ನೀಡಬೇಕೆಂದು ಬಿಬಿಎಂಪಿ ಮೇಯರ್ ಹಾಗೂ ಆಯುಕ್ತಕರಿಗೆ ಮನವಿ ಸಲ್ಲಿಸಲಾಯಿತು. ಕಾಮ್ರೇಡ್ ಕೆ.ಎನ್.ಉಮೇಶ್, ನಾಗರಾಜ ನಂಜುಂಡಯ್ಯ, ಸೆಲ್ವಿ ಇನ್ನಿತರರು ನಿಯೋಗದಲ್ಲಿದ್ದರು. ಆಗಸ್ಟ್‌ ೨೬ ರಂದು ನಡೆದ ಮೌನ ಪ್ರತಿಭಟನೆಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಮಹಿಳೆಯರು ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲೆಗಳಿಂದ ಭಾಗವಹಿಸಿದ್ದರು.

Leave a Reply

Your email address will not be published. Required fields are marked *