ಪಶ್ಚಿಮ ಬಂಗಾಲದಲ್ಲಿ ಜುಲೈ ೧೩, ೧೯೫೯ರಂದು ಪ್ರಾರಂಭವಾಗಿ ಸೆಪ್ಟೆಂಬರ್‌ವರೆಗೂ ಮುಂದುವರಿಯಿತು. ಆ ಹೋರಾಟವು ಬಂಗಾಳದ ಇಡೀ ಜನಸಮೂಹದ ಮಹಾ ಉಬ್ಬರದ ಸ್ವರೂಪವನ್ನು ತಳೆಯಿತು. ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಕೇರಳದಲ್ಲಿ ಮಾತ್ರವಲ್ಲ, ಅದೇ ವೇಳೆಯಲ್ಲಿ ಪಶ್ಚಿಮ ಬಂಗಾಲದಲ್ಲಿ ನಡೆದ ಆಹಾರ ಆಂದೋಲನದ ದಮನದಲ್ಲೂ ಬಯಲಾಯಿತು. ಅದಕ್ಕೆ ವ್ಯತಿರಿಕ್ತವಾಗಿ ಅದಕ್ಕೂ ಮತ್ತು ಕಮ್ಯುನಿಸ್ಟ್ ಪಕ್ಷಕ್ಕೂ ಇದ್ದ ವ್ಯತ್ಯಾಸ ಹಿಂದೆಂದಿಗಿಂತಲೂ ಹೆಚ್ಚಾಗಿ ಎಲ್ಲರ ಕಣ್ಣಿಗೆ ರಾಚುವಂತಾಯಿತು. ಇದು ಭಾರತ ಕಮ್ಯುನಿಸ್ಟ್ ಪಕ್ಷದೊಳಗಿನ ಆಂತರಿಕ ಚರ್ಚೆಯ, ಬಹು ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಬಗೆಗಿನ ಧೋರಣೆಯ ಕುರಿತ ಚರ್ಚೆಯ ಮೇಲೂ ಪ್ರಭಾವ ಬೀರಿತು.
ಪಶ್ಚಿಮ ಬಂಗಾಳದ ಜನರು ನಡೆಸಿದ ಆಹಾರಕ್ಕಾಗಿನ ಹೋರಾಟವು ರಕ್ತದಲ್ಲಿ ಬರೆದ ಅಮರ ಸಾಹಸಗಾಥೆ: ತಮ್ಮ ಬದುಕುವ ಹಕ್ಕಿನ ರಕ್ಷಣೆಗಾಗಿ ಸಂಕಟಪಡುತ್ತಿದ್ದ ಜನರು ಸಿಡಿದೆದ್ದ ವೀರಗಾಥೆಯದು. ಆಹಾರಕ್ಕಾಗಿನ ಹೋರಾಟ ಜುಲೈ ೧೩, ೧೯೫೯ರಂದು ಪ್ರಾರಂಭವಾಗಿ ಸೆಪ್ಟೆಂಬರ್‌ವರೆಗೂ ಮುಂದುವರಿತು, ಕಾಂಗ್ರೆಸ್ ಸರ್ಕಾರದ ನಿರ್ದಯ ದಬ್ಬಾಳಿಕೆಗಳಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಹತರಾದರು, ನೂರಾರು ಜನರು ಗಾಯಗೊಂಡರು ಮತ್ತು ಸಾವಿರಾರು ಜನ ಬಂಧಿಸಲ್ಪಟ್ಟರು. ಆ ಹೋರಾಟವು ಬಂಗಾಳದ ಇಡೀ ಜನಸಮೂಹದ ಮಹಾ ಉಬ್ಬರದ ಸ್ವರೂಪವನ್ನು ತಳೆಯಿತು. ಲಕ್ಷಾಂತರ ಜನರು ಬೀದಿಗೆ ಬಂದರು – ಕೊಲ್ಕೊತ್ತಾ ಮತ್ತು ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗದ ಆ ಹೋರಾಟ ಹಳ್ಳಿಗಳ ಮೂಲೆ ಮೂಲೆಗೂ ಹರಡಿತು. ನೂರಾರು ಸಾವಿರಾರು ಸಂಖ್ಯೆಯ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಮಧ್ಯಮವರ್ಗದ ನೌಕರರು, ವೃತ್ತಿನಿರತರು ಹಾಗೂ ಇತರ ವಿಭಾಗದ ಜನರು ಹೋರಾಟದಲ್ಲಿ ಧುಮುಕಿದರು.
ಆಹಾರಕ್ಕಾಗಿನ ಹೋರಾಟ ಆರಂಭವಾದಾಗ ಪಶ್ಚಿಮ ಬಂಗಾಳದ ಮೊಟ್ಟ ಮೊದಲ ಮುಖ್ಯಮಂತ್ರಿ ಡಾ.ಬಿ.ಸಿ.ರಾಯ್ ಅವರ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ, ಆಹಾರ ಬಿಕ್ಕಟ್ಟು ಮತ್ತು ಬರಗಾಲದ ರೀತಿಯ ಪರಿಸ್ಥಿತಿ ರಾಜ್ಯದ ಆರ್ಥಿಕತೆಯ ಶಾಶ್ವತ ಲಕ್ಷಣಗಳಾಗಿದ್ದವು. ಬಂಗಾಳದ ಆಹಾರ ಪರಿಸ್ಥಿತಿ ೧೯೫೫ ರಿಂದಲೇ ಗಂಭೀರ ಸ್ವರೂಪಕ್ಕೆ ತಿರುಗಿತ್ತು. ಮುಖ್ಯವಾಗಿ ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳುಗಳ ನಡುವಿನ ಅವಧಿಯಲ್ಲಿ ಅದು ಇನ್ನೂ ಹದಗೆಟ್ಟ ಸ್ಥಿತಿ ತಲುಪಿತು. ಅಕ್ಕಿಯ ಬೆಲೆ ಸೂಚ್ಯಾಂಕವು ಡಿಸೆಂಬರ್ ೧೯೫೫ ರ ಹೊತ್ತಿಗೆ ಒಂದು ಟನ್ನಿಗೆ ರೂ.೩೮೨/- ಇದ್ದದ್ದು ಡಿಸೆಂಬರ್ ೧೯೫೬ರ ಹೊತ್ತಿಗೆ ರೂ.೫೩೨/- ಆಗಿತ್ತು. ೧೯೫೯ರ ಆದಿಯಲ್ಲಿ ಪರಿಸ್ಥಿತಿ ತೀರ ಹದಗೆಟ್ಟಿತು. ಇಡೀ ಜನಸಮೂಹವೇ ಹಸಿವಿನಿಂದ ನರಳುವಂತಾಗಿ ಸಾವು, ಆತ್ಮಹತ್ಯೆಗಳು ಮತ್ತು ನೂರಾರು ಸಾವಿರಾರು ಸಂಖ್ಯೆಯ ಜನರು ಹಳ್ಳಿಗಳಿಂದ ನಗರಗಳತ್ತ ಗುಳೆ ಹೋಗುವ ದುರಂತ ಸ್ಥಿತಿ ತಲುಪಿತ್ತು.
ಮುಖ್ಯವಾಗಿ ಆಹಾರ ಮತ್ತು ಉದ್ಯೋಗಗಳ ಹುಡುಕಾಟ ಮಾಡುತ್ತಾ ಕೊಲ್ಕತ್ತಾಕ್ಕೆ ತೆರಳುವ ಚಿತ್ರಣ ಸಾಮಾನ್ಯವಾಗಿತ್ತು. ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಬದಲು ದೊಡ್ಡ ಮಟ್ಟದಲ್ಲಿ ರೈತರು ಜಮೀನುಗಳನ್ನು ಮತ್ತು ಉದ್ಯೋಗಗಳನ್ನು ಕಳೆದುಕೊಂಡು ದಿವಾಳಿ ಏಳುವ ಸನ್ನಿವೇಶ ಉಂಟಾಯಿತು.
ಈ ಹೋರಾಟದುದ್ದಕ್ಕೂ ಕಮ್ಯುನಿಸ್ಟ್ ಪಕ್ಷವು ಮಹತ್ವದ ಪಾತ್ರವನ್ನು ವಹಿಸಿತು. ಪಕ್ಷವು ಮುತುವರ್ಜಿ ವಹಿಸಿ ಅಪಾರ ಸಂಖ್ಯೆಯ ಜನರನ್ನು ಸಂಘಟಿಸಿ ‘ಬೆಲೆ ಏರಿಕೆ ಮತ್ತು ಬರಗಾಲ ಪ್ರತಿರೋಧ ಸಮಿತಿ'(ಪ್ರೈಸ್ ಇನ್ಕ್ರೇಸ್ ಅಂಡ್ ಫ್ಯಾಮಿನ್ ರೆಸಿಸ್ಟೆನ್ಸ್ ಕಮಿಟಿ – ಪಿಐಎಫ್‌ಆರ್‌ಸಿ)ಗಳೆಂಬ ವಿಶಾಲವಾದ ವೇದಿಕೆಯನ್ನು ರಚಿಸಿತು. ಈ ಪಿಐಎಫ್‌ಆರ್‌ಸಿ ಮೂಲಕ, ಆ ಸಮಿತಿಯ ತೀರ್ಮಾನಗಳನ್ನು ರೂಪಿಸುವಲ್ಲಿ ಮತ್ತು ಜಾರಿಮಾಡುವಲ್ಲಿ ಅದು ಭಾರಿ ಪ್ರಮಾಣದಲ್ಲಿ ಸಹಾಯ ಮಾಡಿತು ಮತ್ತು ಅತ್ಯಂತ ಕಷ್ಟದ ಸ್ಥಿತಿಯಲ್ಲೂ, ಪರಿಸ್ಥಿತಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಲಾಠಿ ಚಾರ್ಜು ಹಾಗೂ ಗೋಲಿಬಾರ್‌ಗಳ ನಟ್ಟನಡುವಿನಲ್ಲೂ, ಗೂಂಡಾಗಳು ಮತ್ತು ಬಾಡಿಗೆ ಪ್ರಚೋದಕರ ವಿರುದ್ಧದ ಕಾದಾಟಗಳಲ್ಲೂ, ಕೋಪೋದ್ರಿಕ್ತ ಜನರ ದ್ವೇಷ ಹಾಗೂ ಕೋಪ ಅನಪೇಕ್ಷಣೀಯ ವಿಷಯಗಳತ್ತ ಹರಿಯದಂತೆ ಮನವೊಲಿಸುವಲ್ಲೂ ಹೀಗೆ ಯಾವಾಗಲೂ ಮತ್ತು ಎಲ್ಲಾ ಕಡೆಗಳಲ್ಲೂ ಪಕ್ಷದ ಕಾರ್ಯಕರ್ತರು ಜನರೊಂದಿಗೆ ಇದ್ದರು.
ವಿಧಾನಸಭೆಗೆ ಚುನಾತರಾದ ಕಮ್ಯುನಿಸ್ಟ್ ಪಕ್ಷದ ಮುಖಂಡರು ರಾಜ್ಯದ ಆಹಾರ ಬಿಕ್ಕಟ್ಟನ್ನು ಹೋಗಲಾಡಿಸಲು ಪಿಐಎಫ್‌ಆರ್‌ಸಿ ನೀಡಿದ್ದ ಸಲಹೆಗಳನ್ನು ವಿಧಾನಸಭೆಯಲ್ಲಿ ಫೆಬ್ರವರಿಯ ಬಜೆಟ್ ಅಧಿವೇಶನದಲ್ಲಿ ಚರ್ಚೆಗೆ ಎತ್ತಿಕೊಂಡರು. ಆದರೆ ಸರ್ಕಾರ ಕ್ರಮ ಕೈಗೊಳ್ಳಲು ನಿರಾಕರಿಸಿತು ಮತ್ತು ಬದಲಿಗೆ ವರ್ತಕರ ಲಾಭದ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಂಡಿತು. ದುರ್ಭಿಕ್ಷದ ತಿಂಗಳುಗಳು ಶುರುವಾದಾಗ ಸರ್ಕಾರವು ಬೆಲೆ ನಿಯಂತ್ರಣ ಆದೇಶವನ್ನು ಅಮಾನತುಗೊಳಿಸಿತು. ಲಾಭಬಡುಕತನವನ್ನು ಮತ್ತು ಕಾಳಸಂತೆ ಬೆಲೆಗಳನ್ನು ಕಾನೂನುಬದ್ಧಗೊಳಿಸಿತು. ಸಾಕಷ್ಟು ಪ್ರಮಾಣದ ಭತ್ತ ಮತ್ತು ಅಕ್ಕಿಯನ್ನು ರೈತರಿಂದ ನೇರವಾಗಿ ಸಂಗ್ರಹಿಸಲು ನಿರಾಕರಿಸಿತು ಮತ್ತು ಅಕ್ಕಿ ಗಿರಣಿಗಳ ಉತ್ಪಾದನೆಗಳ ಮೇಲೆ ಲೆವಿ ಹೆಚ್ಚು ಮಾಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿತು. ಸರ್ಕಾರದ ವಿರುದ್ಧ ಕಮ್ಯುನಿಸ್ಟ್ ಪಕ್ಷವು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯು ಸರ್ಕಾರದ ಜನ-ವಿರೋಧಿ ಹಾಗೂ ಕಳ್ಳ ದಾಸ್ತಾನುಗಾರರ ಪರವಾದ ಆಹಾರ ನೀತಿಯನ್ನು ಸಂಪೂರ್ಣವಾಗಿ ಬಯಲು ಮಾಡಿತು.
ಕಮ್ಯುನಿಸ್ಟ್ ಪಕ್ಷವು ಪಿಐಎಫ್‌ಆರ್‌ಸಿ ಮೂಲಕ ಒಂದು ಸಮಗ್ರವಾದ ಪರ್ಯಾಯ ನೀತಿಯನ್ನು ಸರ್ಕಾರದ ಮುಂದೆ ಪರಿಗಣನೆಗಾಗಿ ಮಂಡಿಸಿತು. ರಾಜ್ಯದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಅಳವಡಿಸಬೇಕಾದ ಕ್ರಮಗಳನ್ನು, ರೈತರಿಂದ ನೇರವಾಗಿ ಖರೀದಿಸಿದ ಧಾನ್ಯಗಳನ್ನು ಸರಿಯಾಗಿ ವಿತರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಮತ್ತು ಹಿರಿಯ, ದುರ್ಬಲ ಹಾಗು ನಿರುದ್ಯೋಗಿಗಳಿಗೆ ಒದಗಿಸಬೇಕಾದ ಕೆಲವು ಪರಿಹಾರ ಕ್ರಮಗಳನ್ನೂ ಈ ಪರ್ಯಾಯ ನೀತಿಯು ಸೂಚಿಸಿತ್ತು. ಅದೇ ಸಮಯದಲ್ಲಿ ಕೇರಳದಲ್ಲಿನ ಕಮ್ಯುನಿಸ್ಟ್ ಪಕ್ಷ ನೇತೃತ್ವದ ಸರ್ಕಾರವು ಅನುಸರಿಸುತ್ತಿರುವಂತೆ ಎಲ್ಲಾ ಹಂತಗಳ್ಲೂ ಆಹಾರ ಸಲಹಾ ಸಮಿತಿಗಳನ್ನು ರಚಿಸಬೇಕೆಂದು ಪಕ್ಷವು ಸಲಹೆ ನೀಡಿತು. ಮುಂದುವರಿದು ಹೆಚ್ಚುವರಿ ಜಮೀನುಗಳನ್ನು ಭೂಹೀನ ಕೃಷಿ ಕೂಲಿಕಾರರಿಗೆ ಮತ್ತು ಬಡ ರೈತರಿಗೆ ಹಂಚಬೇಕೆಂದು, ನೆರವಿನ ಅಗತ್ಯವಿರುವ ಎಲ್ಲ ಜನರನ್ನು ಒಳಗೊಳ್ಳುವಂತೆ ಸುಧಾರಿತ ಪಡಿತರ ಯೋಜನೆಯನ್ನು ವಿಸ್ತರಿಸಬೇಕೆಂದು, ಅಗತ್ಯವಿರುವಷ್ಟು ಆಹಾರ ದಾಸ್ತಾನು ಸಂಗ್ರಹಿಸಬೇಕೆಂದು, ಬೆಲೆಗಳನ್ನು ಇಳಿಸಬೇಕೆಂದು ಮತ್ತು ಕಳ್ಳದಾಸ್ತಾನು ಹಾಗೂ ಸಟ್ಟಾ ವ್ಯಾಪಾರವನ್ನು ತಡೆಹಿಡಿಯಬೇಕೆಂದು ಪಕ್ಷವು ಒತ್ತಾಯಿಸಿತು.
ಈ ಬೇಡಿಕೆಗಳನ್ನು ಒಪ್ಪುವ ಬದಲು ರಾಜ್ಯದ ಕಾಂಗ್ರೆಸ್ ಸರ್ಕಾರವು ಕಮ್ಯುನಿಸ್ಟ್ ಪಕ್ಷ ಹಾಗೂ ಪಿಐಎಫ್‌ಆರ್‌ಸಿ ಒಟ್ಟುಗೂಡಿ ಮುಂದಿಟ್ಟಿದ್ದ ಪ್ರತಿಯೊಂದು ಬೇಡಿಕೆಯನ್ನೂ ಮೊಂಡುತನದಿಂದ ತಿರಸ್ಕರಿಸಿತು. ಆಹಾರ ಪರಿಸ್ಥಿತಿ ಹದಗೆಟ್ಟಾಗ, ಕಮ್ಯುನಿಸ್ಟ್ ಪಕ್ಷವು ಪಿಐಎಫ್‌ಆರ್‌ಸಿ ಮೂಲಕ ಜನರನ್ನು ಅಣಿನೆರೆಸಲು ಕರೆ ಕೊಟ್ಟಿತು. ಅತ್ಯಂತ ಕಡಿಮೆ ಅವಧಿಯಲ್ಲಿ, ರಾಜ್ಯಾದ್ಯಂತ ಪ್ರತಿಭಟನಾ ಸಭೆಗಳು ಮತ್ತು ಮತಪ್ರದರ್ಶನಗಳು ನಡೆದವು, ಚಳುವಳಿಯು ರಾಜ್ಯ ಮಟ್ಟದ ಸ್ವರೂಪ ಪಡೆಯಿತು. ಇದಾದ ಕೂಡಲೇ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಡಲಾಯಿತು, ಇದಕ್ಕೆ ಕಾರ್ಮಿಕ ವರ್ಗದಿಂದ ಪ್ರಚಂಡ ಸ್ಪಂದನೆ ದೊರೆಯಿತು. ಈ ಯಾವ ಪ್ರತಿಭಟನೆಗಳು ಕಾಂಗ್ರೆಸ್ ಸರ್ಕಾರದ ಮೊಂಡುತನವನ್ನು ಅಲುಗಾಡಿಸಲಾಗಲಿಲ್ಲ.
ಗತ್ಯಂತರವಿಲ್ಲದೇ ಪಿಐಎಫ್‌ಆರ್‌ಸಿ ನೇರ ಕಾರ್ಯಾಚರಣೆಗೆ ಕರೆ ನೀಡಿತು. ಈ ಹೋರಾಟವನ್ನು ಜುಲೈ ೧೩ರಂದು ಮಿಡ್ನಾಪುರದಲ್ಲಿ ಪ್ರಾರಂಭಿಸಲಾಯಿತು ಮತ್ತು ಹತ್ತು ದಿನಗಳೊಳಗೆ ಎಲ್ಲಾ ಜಿಲ್ಲೆಗಳಿಗೆ ಹಬ್ಬಿತು. ಆಗಸ್ಟ್ ೮ ರಂದು ರಾಜ್ಯ ಆಹಾರ ಸಮಾವೇಶವನ್ನು ಸಂಘಟಿಸಲಾಯಿತು, ಆಗಸ್ಟ್ ೨೦ ರಿಂದ ರಾಜ್ಯಾದ್ಯಂತ ನೇರ ಕಾರ್ಯಾಚರಣೆಗೆ ಅದು ಕರೆ ನೀಡಿತು. ಅವತ್ತಿನ ನಂತರ, ಚಳುವಳಿಯು ವೇಗ ಪಡೆದುಕೊಂಡು ಘಟನೆಗಳು ತ್ವರಿತಗತಿಯಲ್ಲಿ ಮುಂದುವರಿದವು.
ಬಿ.ಸಿ.ರಾಯ್ ಸರ್ಕಾರವು ಈ ಚಳುವಳಿಯ ವಿರುದ್ಧ ಕ್ರಮಕೈಗೊಳ್ಳಲು ಮುಂದಾಯಿತು; ಮೊದಲು ಎಡಪಕ್ಷಗಳ, ಕಾರ್ಮಿಕ ಸಂಘಗಳ, ಕಿಸಾನ್ ಸಭಾದ ಮತ್ತಿತರ ಸಾಮೂಹಿಕ ಸಂಘಟನೆಗಳ ೧೦೦ಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಿತು. ಚಳುವಳಿಯನ್ನು ದುರ್ಬಲಗೊಳಿಸಲು ಮಾಡಿದ ಮಿಂಚಿನದಾಳಿ ಎಂದು ಅದನ್ನು ಬಿಂಬಿಸಲಾಯಿತು, ಆದರೆ ಅವರ ಉದ್ದೇಶ ಫಲಿಸಲಿಲ್ಲ. ಆಗಸ್ಟ್ ೨೦ರಂದು, ಮುಂಚೆಯೇ ನಿರ್ಧಾರ ಮಾಡಿದ ನೇರ ಕಾಯಾಚರಣೆಯ ದಿನ, ಸಾವಿರಾರು ಜನರು ಅಣಿನೆರೆದು ಚಳುವಳಿಗೆ ಹಿಂದೆಂದೂ ಕಂಡಿರದ ಸಾಮೂಮಿಕ ಸ್ವರೂಪವನ್ನು ನೀಡಿತು. ಕಲ್ಕತ್ತಾದಲ್ಲಿ ೩೦,೦೦೦ ಕ್ಕೂ ಹೆಚ್ಚು ಜನ ಸೇರಿ ಆಹಾರ ಸಚಿವರ ಮನೆಯ ಮುಂದೆ ಮತಪ್ರದರ್ಶನ ಮಾಡಲು ಮುಂದಾದರು.
ಆಗಸ್ಟ್ ೩೧ರಂದು ಕಲ್ಕತ್ತಾದಲ್ಲಿ ಭಾರಿ ಬಹಿರಂಗ ಸಭೆಯನ್ನು, ರಾಜ್ಯವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಮತ್ತು ಸೆಪ್ಟೆಂಬರ್ ೩ರಂದು ಹರತಾಳವನ್ನು ಸಂಘಟಿಸಲು ಪಿಐಎಫ್‌ಆರ್‌ಸಿ ಕರೆ ಕೊಟ್ಟಿತು. ಪಿಐಎಫ್‌ಆರ್‌ಸಿಯ ಈ ತೀರ್ಮಾನಗಳು ಮತ್ತು ಅದಕ್ಕೆ ಬಂಗಾಳದ ಜನರು ನೀಡಿದ ಸ್ಪಂದನೆ ಸರ್ಕಾರದ ರೋಷಾವೇಶಕ್ಕೆ ಕಾರಣವಾಯಿತು. ಅದು ಆಗಸ್ಟ್ ೨೫ ರಿಂದ ರಾಜ್ಯಾದ್ಯಂತ ಕ್ರೂರ ದಬ್ಬಾಳಿಕೆಯನ್ನು ಶುರುಮಾಡಿತು. ಸೆಪ್ಟೆಂಬರ್ ೧ ರಿಂದ ವಿದ್ಯಾರ್ಥಿಗಳು ಈ ಹೋರಾಟದ ಕಣಕ್ಕೆ ಇಳಿದರು ಮತ್ತು ಕಲ್ಕತ್ತಾದಲ್ಲಿನ ಕಾಲೇಜ್ ರಸ್ತೆಯು ಒಂದು ರಣರಂಗವಾಗಿ ಮಾರ್ಪಟ್ಟಿತು. ಆಗಸ್ಟ್ ೩೧ ಮತ್ತು ಸೆಪ್ಟೆಂಬರ್ ೪ ರ ನಡುವೆ, ಪೋಲಿಸ್ ಗೋಲಿಬಾರ್ ಮತ್ತು ಲಾಠಿ ಚಾರ್ಜಿನಿಂದ ೮೦ ಕ್ಕೂ ಹೆಚ್ಚು ಜನರು ಸಾವಿಗೀಡಾದರು ಮತ್ತು ೩೦೦೦ ಕ್ಕೂ ಹೆಚ್ಚು ಜನರು ಗಾಯಗೊಂಡರು. ಕನಿಷ್ಠಪಕ್ಷ ೨೦೦ ಕ್ಕೂ ಹೆಚ್ಚು ಜನ ಕಾಣೆಯಾದರು, ಸಾವಿರಾರು ಜನರನ್ನು ಬಂಧಿಸಿದರು.
ಜನರ ಐಕ್ಯತೆಯನ್ನು ಮುರಿಯುವ ಸಲುವಾಗಿ, ಪೋಲಿಸರು ಕಾರ್ಮಿಕ ವರ್ಗದ ವಸತಿ(ಬಸ್ತಿ) ಪ್ರದೇಶಗಳ ಮೇಲೆ ದಾಳಿ ಮಾಡಿ ಮನೆಯಲ್ಲಿದ್ದವರನ್ನು ತೀವ್ರವಾಗಿ ಹೊಡೆದರು. ಇದರಿಂದ ತೃಪ್ತರಾಗದ ಅವರು, ಈ ಬಸ್ತಿಗಳ ಮೇಲೆ ಅಶ್ರುವಾಯು ಶೆಲ್ಲುಗಳ ದಾಳಿ ಮಾಡಿದರು. ಇವ್ಯಾವುದರಿಂದಲೂ ವಿಚಲಿತರಾಗದ ಇಡೀ ಕಾರ್ಮಿಕ ವರ್ಗ ಸಾರ್ವತ್ರಿಕ ಮುಷ್ಕರದಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿತು. ಪ್ರತಿಯೊಂದು ಕೈಗಾರಿಕಾ ಪ್ರದೇಶಗಳು ಕಾರ್ಮಿಕರು ಸೆಟೆದು ನಿಂತ ತಾಣಗಳಾದವು. ಕಾರ್ಮಿಕ ವರ್ಗದ ಐಕ್ಯತೆಯನ್ನು ಮುರಿಯಲು ಬಂಗಾಲಿ-ಬಿಹಾರಿ ಎಂಬ ಹೆಸರಿನಲ್ಲಿ ಒಡಕನ್ನು ಉಂಟು ಮಾಡಲು ಸಹ ಸರ್ಕಾರ ಪ್ರಯತ್ನಿಸಿತು. ಸರ್ಕಾರ ಅಳವಡಿಸಿದ ಇವ್ಯಾವ ಕ್ರಮಗಳೂ ರೈತರೊಂದಿಗಿನ ಕಾರ್ಮಿಕ ವರ್ಗದ ಸಖ್ಯತೆಯನ್ನು ಒಡೆಯಲಾಗಲಿಲ್ಲ; ಇದು ಈ ಚಳುವಳಿಯ ಅತ್ಯಂತ ಮುಖ್ಯವಾದ ಮತ್ತು ಗಮನಾರ್ಹ ಅಂಶ.
ಬಂಧಿತರಾದವರ ಬಗ್ಗೆ ಅಧ್ಯಯನ ಮಾಡಿದಾಗ ತಿಳಿದಿದ್ದೇನೆಂದರೆ ಅದರಲ್ಲಿ ಶೇಕಡಾ ೭೫ರಷ್ಟು ಜನ ರೈತರಾಗಿದ್ದರು ಮತ್ತು ಉಳಿದವರು ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ನೌಕರರಾಗಿದ್ದರು. ಬಂಧನಕ್ಕೊಳಗಾದ ಈ ವಿಭಾಗಗಳಲ್ಲಿ ಸಾವಿರಾರು ಮಹಿಳೆಯರೂ ಅದರ ಭಾಗವಾಗಿದ್ದರು.
ಮುಖ್ಯಮಂತ್ರಿ ಬಿ.ಸಿ.ರಾಯ್ ಅವರು ಸ್ವತಃ ನಿಂತು ನಿರ್ದೇಶನ ಮಾಡಿ ನಡೆದ ಪೋಲಿಸ್ ಕ್ರೌರ್ಯಗಳು ಹಿಂದೆಂದೂ ಈ ಮಟ್ಟಕ್ಕೆ ತಲುಪಿರಲಿಲ್ಲ. ಅನೇಕ ಸಂದರ್ಭಗಳಲ್ಲಿ, ಹಿಂತಿರುಗಬಹುದಾದ ಎಲ್ಲಾ ದಾರಿಗಳನ್ನು ಮುಚ್ಚಿದ ಪೋಲಿಸರು, ಮತಪ್ರದರ್ಶನ ಮಾಡುತ್ತಿದ್ದವರನ್ನು ಸುತ್ತುವರಿದು ಅತ್ಯಂತ ಭೀಕರವಾಗಿ ಸದೆಬಡಿದರು. ಜನರಿಗಾದ ಗಾಯಗಳನ್ನು ನೋಡಿದಾಗ, ಪೋಲಿಸರು ಪ್ರತಿಭಟನಾಕಾರರನ್ನು ಕೊಲ್ಲಲೆಂದೇ ಹಾಗೂ ಗಂಭೀರ ಗಾಯ ಮಾಡಲೆಂದೇ ಹೊಡೆದಿದ್ದು ಎಂಬುದು ಸ್ಪಷ್ಟವಾಗಿತ್ತು. ಬಂಧಿಸಲ್ಪಟ್ಟವರನ್ನೂ ಜೈಲಿನಲ್ಲಿ ಅಮಾನುಷ ಕಿರುಕುಳ ಕೊಟ್ಟು ಹಿಂಸಿಸಿದರು. ಇನ್ನೂ ತೀರಾ ಅಸಹ್ಯಕರವಾದದ್ದು, ತಮ್ಮ ಸಾಮೂಹಿಕ ಹತ್ಯೆಯ ಪುರಾವೆಗಳನ್ನು ಅಳಿಸಿಹಾಕಲು ಪೋಲಿಸರು ಬಹಳಷ್ಟು ಹುತಾತ್ಮರ ಶವಗಳನ್ನು ಮಧ್ಯರಾತ್ರಿ ಸುಟ್ಟುಹಾಕಿದರು. ಇಡೀ ಕಲ್ಕತ್ತಾ ಹಾಗೂ ಹೌರಾದ ಪ್ರದೇಶಗಳು ಇಂತಹ ಘೋರ ‘ಸ್ವಚ್ಛಗೊಳಿಸುವ’ ಕಾರ್ಯಾಚರಣೆಗಳ ದೃಶ್ಯಗಳಿಂದ ತುಂಬಿಹೋಗಿದ್ದವು.
ಈ ಎಲ್ಲಾ ಹೋರಾಟಗಳ ಉದ್ದಕ್ಕೂ ಕಮ್ಯುಸ್ಟ್ ಪಕ್ಷವು ವೀರೋಚಿತ ಪಾತ್ರವನ್ನು ವಹಿಸಿತು. ವಿಶೇಷವಾಗಿ ಗಮನಾರ್ಹ ಪಾತ್ರ ವಹಿಸಿದ್ದು ಪಕ್ಷದ ಪತ್ರಿಕೆ ಸ್ವಾಧೀನತಾ. ಪತ್ರಿಕೆಯಲ್ಲಿ ಮತ್ತು ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಂಗಾತಿಗಳು ಪತ್ರಿಕೆಯನ್ನು ನಿಜವಾದ ಜನರ ಮುಖವಾಣಿಯಾಗಿ ಮತ್ತು ಹೋರಾಟದ ಅತ್ಯಂತ ಶಕ್ತಿಯುತವಾದ ಆಯುಧವನ್ನಾಗಿ ಮಾರ್ಪಾಟು ಮಾಡಿದ್ದರು. ಗಂಭೀರ ಅಪಾಯಗಳನ್ನು ಎದುರಿಸುತ್ತಾ ಆಘಾತಕಾರಿ ವರದಿಗಳನ್ನು ಹಾಗೂ ಪೋಲಿಸರ ಭೀಕರ ದೌರ್ಜನ್ಯದ ಫೋಟೋಗಳನ್ನು ಅವರು ಸಂಗ್ರಹಿಸಿದರು ಮತ್ತು ಪತ್ರಿಕೆಯಲ್ಲಿ ಮುದ್ರಿಸಿ ಜನರನ್ನು ಕಾರ್ಯಾಚರಣೆಗೆ ಹುರಿದುಂಬಿಸುತ್ತಿದ್ದರು.
ಬಂಗಾಳದ ಜನರ ಹೋರಾಟವನ್ನು ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯು ಮೆಚ್ಚಿಕೊಂಡಿತು ಮತ್ತು ದೇಶಾದ್ಯಂತ ಸೌಹಾರ್ದ ಪ್ರಚಾರ ನಡೆಸಲು ಕರೆ ನೀಡಿತು. ಕಾಂಗ್ರೆಸ್ ಸರ್ಕಾರದ ದುಷ್ಕಾರ್ಯವು ದೇಶದೆಲ್ಲೆಡೆಯ ಜನರ ಖಂಡನೆಗೆ ತುತ್ತಾಯಿತು. ಅದೇ ಸಮಯದಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು ‘ಪ್ರಜಾಪ್ರಭುತ್ವದ ರಕ್ಷಣೆಗಾಗಿ’ ಎಂಬ ನೆಪವೊಡ್ಡಿ ವಜಾ ಮಾಡುವುದರ ಮೂಲಕ ಕಾಂಗ್ರೆಸ್ ತನ್ನ ವರ್ಗ ಗುಣವನ್ನು ಇನ್ನೂ ಬಹಿರಂಗಗೊಳಿಸಿ ಕೊಂಡಿತು. ಮತ್ತೊಂದೆಡೆ, ಬಂಗಾಳದಲ್ಲಿ, ಅದೇ ಕಾಂಗ್ರೆಸ್ ಸರ್ಕಾರವು ಜನರ ಹಕ್ಕುಗಳನ್ನು ನಿರ್ಭೀತಿಯಿಂದ ತುಳಿಯುವುದರ ಮೂಲಕ ಪ್ರಜಾಪ್ರಭುತ್ವ ತತ್ವಗಳನ್ನು ಉಲ್ಲಂಘಿಸಿತು.
ಕಾಂಗ್ರೆಸ್ಸಿನ ಬೂಟಾಟಿಕೆ ಬಯಲಾಗುವುದರೊಂದಿಗೆ, ಅದಕ್ಕೆ ವ್ಯತಿರಿಕ್ತವಾಗಿ ಅದಕ್ಕೂ ಮತ್ತು ಕಮ್ಯುನಿಸ್ಟ್ ಪಕ್ಷಕ್ಕೂ ಇದ್ದ ವ್ಯತ್ಯಾಸ ಹಿಂದೆಂದಿಗಿಂತಲೂ ಹೆಚ್ಚಾಗಿ ಎಲ್ಲರ ಕಣ್ಣಿಗೆ ರಾಚುವಂತಾಯಿತು. ೧೯೫೯ರ ಆಹಾರ ಚಳುವಳಿಯು ಭಾರತ ಕಮ್ಯುನಿಸ್ಟ್ ಪಕ್ಷದೊಳಗಿನ ಆಂತರಿಕ ಚರ್ಚೆಯ, ಬಹು ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಬಗೆಗಿನ ಧೋರಣೆಯ ಕುರಿತ ಚರ್ಚೆಯ, ಮೇಲೂ ಪ್ರಭಾವ ಬೀರಿತು.
ಸೆಪ್ಟೆಂಬರ್ ೨೬, ೧೯೫೯ ರಂದು ಆಹಾರ ಚಳುವಳಿಯನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಪಿಐಎಫ್‌ಆರ್‌ಸಿಯು ಔಪಚಾರಿಕವಾಗಿ ಪ್ರಕಟಿಸಿತು; ಅಂದು ಹುತಾತ್ಮರ ಶಾಶ್ವತ ಸ್ಥಂಭಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಒಂದು ಅವಿಸ್ಮರಣೀಯ ಮೌನ ಮೆರವಣಿಗೆಯನ್ನು ಕಲ್ಕತ್ತಾದಲ್ಲಿ ನಡೆಸಿ ಪೋಲಿಸ್ ದೌರ್ಜನ್ಯ ಕುರಿತು ಸಾರ್ವಜಕ ವಿಚಾರಣೆ ನಡೆಸಬೇಕೆಂದು, ಹುತಾತ್ಮರಿಗೆ ಸರಿಯಾದ ಪರಿಹಾರ ನೀಡಬೇಕೆಂದು ಮತ್ತು ರಾಜ್ಯದ ಆಹಾರ ಸಚಿವ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಯಿತು.
ಆಹಾರ ಚಳುವಳಿಯ ಕಲಿತನದ ಸತ್ವವು ಮತ್ತು ಅದರ ಮಾರ್ದನಿಯು ಇಂದಿಗೂ ಕೇಳಿಸುತ್ತಿದೆ.
ಕನ್ನಡಕ್ಕೆ: ಟಿ.ಸುರೇಂದ್ರ ರಾವ್