ಅವಳಿ ವಿಪತ್ತುಗಳ ಎದುರು

Prakash_karat
                         ಪ್ರಕಾಶ ಕಾರಟ್

ಕೆಲವೇ ದಿನಗಳ ಅಂತರದಲ್ಲಿ ಮಹಾಸೋಂಕು ಮತ್ತು ಅರ್ಥವ್ಯವಸ್ಥೆಗೆ ಸಂಬಂಧಪಟ್ಟಂತೆ ಎರಡು ಬೆಳವಣಿಗೆಗಳು ಗಾಬರಿ ಉಂಟುಮಾಡುವಂತವು. ಕೋವಿಡ್-೧೯ ಸೋಂಕಿತರ ಸಂಖ್ಯೆಯಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದ ಬ್ರೆಝಿಲನ್ನು ಹಿಂದೆ ಹಾಕಿ, ಆ ಎರಡನೇ ಸ್ಥಾನಕ್ಕೆ ತಾನೇರಿದೆ. ಇದಕ್ಕೆ ಮೊದಲು ಮೊದಲ ತ್ರೈಮಾಸಿಕದಲ್ಲಿ(ಎಪ್ರಿಲ್-ಜೂನ್೨೦೨೦) ಜಿಡಿಪಿ ಶೇ.೨೪ಕ್ಕೆ ಕುಸಿದಿರುವ ಸುದ್ದಿ ಬಂದಿತ್ತು. ಇದು ಜಗತ್ತಿನ ೨೫ ದೇಶಗಳ ಪೈಕಿ ಅತಿ ಹೆಚ್ಚಿನ ಪತನ.

ಮಹಾಸೋಂಕು ವೇಗವಾಗಿ ಹರಡುತ್ತಿದೆ, ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೂ ತಲುಪುತ್ತಿದೆ. ದೈನಂದಿನ ಸೋಂಕುಗಳ ಸಂಖ್ಯೆಯಲ್ಲಿ ಭಾರತ ಎಲ್ಲ ದೇಶಗಳನ್ನೂ ಹಿಂದಕ್ಕೆ ಹಾಕಿದೆ. ಪ್ರತಿದಿನ ದಾಖಲಾಗುತ್ತಿರುವ ಸಾವುಗಳ ಸಂಖ್ಯೆಯೂ ಭಾರತದಲ್ಲೇ ಅತಿ ಹೆಚ್ಚು. ಈ ದರದಲ್ಲಿ, ಆರೋಗ್ಯ ಪರಿಣಿತರ ಪ್ರಕಾರ, ಭಾರತ ಅಕ್ಟೋಬರ್ ಎರಡನೇ ವಾರದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನೂ ಹಿಂದೆ ಹಾಕಿ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೇರಬಹುದು.

ಆದರೆ ಇವೆರಡೂ ವಿಪತ್ತುಗಳಿಂದ ಪ್ರಧಾನ ಮಂತ್ರಿಗಳಿಗೇನೂ ಗಾಬರಿಯಾದಂತಿಲ್ಲ. ಮೋದಿ ಸರಕಾರ, ಈ ಸಾಂಕ್ರಾಮಿಕವನ್ನು ತನ್ನ ದಾರಿಯಲ್ಲಿ ಹಾಗೆಯೇ ಸಾಗುವಂತೆ ಬಿಟ್ಟು ಬಿಡುವುದೇ ಏಕೈಕ ಮಾರ್ಗ ಎಂದು ನಿರ್ಧರಿಸಿರುವಂತೆ ಕಾಣುತ್ತದೆ. ಈ ಆರೋಗ್ಯಪಾಲನೆಯ ಬಿಕ್ಕಟ್ಟನ್ನು ಹೇಗೋ ದಬಾಸಿ ಬಿಡಲು ಏನೇನೋ ದಾವೆಗಳನ್ನು ಹೂಡಲಾಗುತ್ತಿದೆ-ಲಾಕ್‌ಡೌನ್‌ನಿಂದಾಗಿ ಅದೆಷ್ಟೋ ಜೀವಗಳು ಉಳಿದವು ಮತ್ತು ಭಾರತದಲ್ಲಿನ ಮರಣ ದರ ಜಗತ್ತಿನಲ್ಲಿಯೇ ಅತಿ ಕಡಿಮೆ ಎಂದು ಹೇಳಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹಿಡಿದಿರುವ ಇನ್ನೊಂದು ದಾರಿಯೆಂದರೆ, ಸರಕಾರ ಈ ಸವಾಲನ್ನು ಎದುರಿಸಲು ತ್ವರಿತವಾಗಿಯೇ ಸಿದ್ಧಗೊಳ್ಳುವುದು ಸಾಧ್ಯವಾಯಿತು ಎಂಬುದು. ಮೋದಿಯವರು ತಮ್ಮ ಇತ್ತೀಚಿನ ಒಂದು ಭಾಷಣದಲ್ಲಿ, ಭಾರತ ವೈಯಕ್ತಿಕ ಸುರಕ್ಷತಾ ಸಾಧನ(ಪಿಪಿಇ)ಗಳ ಎರಡನೇ ಅತಿ ದೊಡ್ಡ ತಯಾರಕಾ ಎಂದು ಹೇಳಿಕೊಂಡರು.

covid health crisisಕಳೆದ ಆರು ತಿಂಗಳಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸರಕಾರದ ವೆಚ್ಚದಲ್ಲಿ ಯಾವುದೇ ಗಣನೀಯ ಹೆಚ್ಚಳ ಮಾಡಿಲ್ಲ; ಹಣಕಾಸು ಪ್ಯಾಕೇಜಿನಲ್ಲಿ ಆರೋಗ್ಯ ವಲಯಕ್ಕೆಂದು ೧೫,೦೦೦ ಕೋಟಿ ರೂ.ಗಳನ್ನು ಎತ್ತಿಡುವುದು ಬಿಟ್ಟು ಬೇರೇನನ್ನೂ ಮಾಡಿಲ್ಲ. ಇದರಲ್ಲೂ ಈ ಆರೋಗ್ಯ ಬಿಕ್ಕಟ್ಟನ್ನು ನಿಭಾಸುತ್ತಿರುವ ರಾಜ್ಯಗಳಿಗೆ ಕೊಟ್ಟಿರುವುದು ಒಂದು ಸಣ್ಣ ಭಾಗವನ್ನಷ್ಟೇ.  ನಿಜ ಹೇಳಬೇಕೆಂದರೆ, ಕೇಂದ್ರ ಸರಕಾರ ರಾಜ್ಯಗಳಿಗೆ ಹಣ ಇಲ್ಲದಂತೆ ಮಾಡಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ, ವಿಸ್ತರಿಸುವ ರಾಜ್ಯ ಸರಕಾರಗಳ ಪ್ರಯತ್ನಗಳಿಗೆ ಅಡ್ಡಿಯುಂಟು ಮಾಡುತ್ತಿದೆ.

ಇದಕ್ಕೆ ಮಾನವ ಜೀವಗಳ ದೃಷ್ಟಿಯಿಂದ ತೆರಬೇಕಾದ ಬೆಲೆಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಅಗತ್ಯ ವೈದ್ಯಕೀಯ ಸೌಕರ್ಯಗಳಿಲ್ಲದ್ದರಿಂದ ಹಲವರು ಸಾಯುವ ಸ್ಥಿತಿ ಬರುತ್ತಿದೆ. ಖಾಸಗಿ ಅಸ್ಪತ್ರೆಗಳಲ್ಲಿ ಮತ್ತು ನರ್ಸಿಂಗ್ ಹೋಂಗಳಲ್ಲಿ ಶುಶ್ರೂಷೆಯಲ್ಲಿ ನಡೆಯುತ್ತಿರುವ ಸುಲಿಗೆಗಳಿಂದಾಗಿ ಸಾವಿರ-ಸಾವಿರ ಮಧ್ಯಮ ವರ್ಗದ ಕುಟುಂಬಗಳು ಸಾಲಶೂಲೆಕ್ಕೆ ಒಳಗಾಗುತ್ತಿವೆ. ಆರೋಗ್ಯ ಬಿಕ್ಕಟ್ಟು ಆರ್ಥಿಕ ಚಟುವಟಿಕೆಗಳನ್ನು ತಟ್ಟಲಿದೆ ಮತ್ತು ಬೆಳವಣಿಗೆಯ ಪುನಶ್ಚೇತನವನ್ನು ನಿಧಾನಗೊಳಿಸಲಿದೆ.

mor- changa si
ಸಬ್ ಚಂಗಾ ಸೀ-ಎಲ್ಲವೂ ಚೆನ್ನಾಗಿದೆ   –  ವ್ಯಂಗ್ಯಚಿತ್ರ ಕೃಪೆ: ಸತೀಶ್ ಆಚಾರ್ಯ

ಅರ್ಥವ್ಯವಸ್ಥೆ ತೀವ್ರ ರೀತಿಯಲ್ಲಿ ಸಂಕುಚನಗೊಳ್ಳಲು ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೇರಿದ ಎರಡು ತಿಂಗಳ ಸಂಪೂರ್ಣ ಲಾಕ್‌ಡೌನೇ ಪ್ರಾಥಮಿಕ ಕಾರಣ. ಸಮಯಕ್ಕೆ ಸರಿಯಾಗಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು, ಬಡವರಿಗೆ ನಗದು ವರ್ಗಾವಣೆ ಮಾಡಲು, ಆಹಾರಧಾನ್ಯಗಳ ಭಾರಿ ದಾಸ್ತಾನನ್ನು ಅಗತ್ಯವಿರುವ ಕುಟುಂಬಗಳಿಗೆ ಉಚಿತವಾಗಿ ಹಂಚಲು ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಹಣಕಾಸು ಬೆಂಬಲ ಒದಗಿಸಲು ಕ್ರಮಗಳನ್ನು ಕೈಗೊಂಡಿದ್ದರೆ, ಬಿಕ್ಕಟ್ಟಿನ ದುಷ್ಪರಿಣಾಮಗಳನ್ನು ತಗ್ಗಿಸಬಹುದಾಗಿತ್ತು. ಆದರೆ ಸರಕಾರ ಇವನ್ನು ಮಾಡಲು ನಿರಾಕರಿಸಿತು. ಹಣಕಾಸು ಉತ್ತೇಜನಾ ಪ್ಯಾಕೇಜಿನಲ್ಲಿ ಪ್ರಕಟಿಸಿದ ಸಾರ್ವಜನಿಕ ವೆಚ್ಚಗಳ ಮೊತ್ತ ಕೇವಲ ಜಿಡಿಪಿಯ ೧ ಶೇಕಡಾ ಮಾತ್ರ.

ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಕೃಷ್ಣಮೂರ್ತಿ ಸುಬ್ರಮಣ್ಯಂ, ಜಿಡಿಪಿ ಇಳಿಕೆ ಕೇವಲ ಕೊವಿಡ್-೧೯ರಿಂದಾಗಿ ಮಾತ್ರ, ಲಾಕ್‌ಡೌನನ್ನು ತೆರವು ಮಾಡುವ ಘಟ್ಟಗಳಲ್ಲಿ ಅರ್ಥವ್ಯವಸ್ಥೆ ಬಲಿಷ್ಟ ರೀತಿಯಲ್ಲಿ ಪುನಶ್ಚೇತನಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಅವರು V  ಆಕಾರದ ಪುನಶ್ಚೇತನವನ್ನು ನಿರೀಕ್ಷಿಸುತ್ತಿದ್ದಾರೆ. ೨೪ ಶೇಕಡಾ ನಕಾರಾತ್ಮಕ ಬೆಳವಣಿಗೆ ಎಂದರೆ, ಉದ್ಯೋಗದಲ್ಲಿ, ಆದಾಯಗಳಲ್ಲಿ ಮತ್ತು ಬಳಕೆಯಲ್ಲಿ ಬೃಹತ್ ಪ್ರಮಾಣದ ಇಳಿಕೆಯಾಗಿದೆ ಎಂದರ್ಥ. ಸಿ.ಎಂ.ಐ.ಇ. ಪ್ರಕಾರ ೨.೧ ಕೋಟಿ ಸಂಬಳದಾರ ಉದ್ಯೋಗಗಳು ಎಪ್ರಿಲ್‌ನಿಂದ ಆಗಸ್ಟ್ ನಡುವೆ ಕಾಣೆಯಾಗಿವೆ. ಇನ್ನೂ ಎಷ್ಟೋ ಕೋಟಿ ಜನರು ಅನೌಪಚಾರಿಕ ವಲಯದಲ್ಲಿ ತಮ್ಮ ಜೀವನಾಧಾರಗಳನ್ನು ಕಳಕೊಂಡಿದ್ದಾರೆ. ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗುತ್ತಿರುವಂತೆ ಈ ಎಲ್ಲ ಉದ್ಯೋಗಗಳು ಮತ್ತೆ ಬರುವುದಿಲ್ಲ. ಕೊವಿಡ್‌ಗಿಂತ ಹಿಂದಿನ ಅವಧಿಯಲ್ಲೇ ಅರ್ಥವ್ಯವಸ್ಥೆ ಸಾಕಷ್ಟು ನಿಧಾನಗೊಂಡಿತ್ತು. ಈಗ ಕೊವಿಡ್-ಪೂರ್ವ ಮಟ್ಟಕ್ಕೆ ಹಿಂದಿರುಗಲೂ ಕೂಡ ಸಾಧ್ಯವಾಗದು. ಅರ್ಥವ್ಯವಸ್ಥೆಯಲ್ಲಿ ‘ಹಸಿರು ಗೆಲ್ಲುಗಳು’ ಕಾಣಿಸಿಕೊಳ್ಳುತ್ತಿವೆ ಎನ್ನುವುದು, V  ಆಕಾರದ ಪುನಶ್ಚೇತನದ ಮಾತಾಡುವುದು ಎಲ್ಲವೂ ಕಟು ವಾಸ್ತವತೆಗಳನ್ನು  ಮಬ್ಬುಗೊಳಿಸುವ ಪ್ರಯತ್ನಗಳಷ್ಟೇ.

economic crisisಸರಕಾರ ಸಾರ್ವಜನಿಕ ವೆಚ್ಚಗಳನ್ನು ಮತ್ತು ಸಾರ್ವಜನಿಕ ಹೂಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದೆ ಎಂಬ ಲಕ್ಷಣಗಳೇನೂ ಇಲ್ಲ. ಆದರೆ ಹೀಗೆ ಮಾಡಿದರೆ ಮಾತ್ರವೇ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲು, ಬಳಕೆಗೆ ಉತ್ತೇಜನೆ ನೀಡಲು ಮತ್ತು ಖಾಸಗಿ ಹೂಡಿಕೆಗಳಿಗೆ ಆಧಾರಗಳನ್ನು ಹೆಚ್ಚಿಸಲು, ಆ ಮೂಲಕ ಉತ್ಪಾದನೆಯ ಪುನಶ್ಚೇತನ ಸಾಧ್ಯ. ಮೋದಿ ಸರಕಾರ ಅನುಸರಿಸಿರುವ ದಾರಿ ಭಿನ್ನವಾಗಿದೆ: “ದೇಶಿ ನೇರ ಹೂಡಿಕೆಗಳನ್ನು ಮೆಚ್ಚಿಸುವುದು, ಖನಿಜ ಸಂಪತ್ತುಗಳನ್ನು ಲೂಟಿ ಹೊಡೆಯಲು ಕಾರ್ಪೊರೇಟ್‌ಗಳಿಗೆ ಪರವಾನಿಗೆ, ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ, ಎಲ್ಲ ವಲಯಗಳಲ್ಲೂ ಖಾಸಗೀಕರಣಕ್ಕೆ ಉತ್ತೇಜನೆ ಮತ್ತು ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿ ಕಾರ್ಮಿಕರನ್ನು ‘ಶಿಸ್ತಿ’ಗೆ ಒಳಪಡಿಸುವುದು. ಇದು ನವ-ಉದಾರವಾದಿ ದಾರಿ, ದೊಡ್ಡ ಭಾರತೀಯ ಬಂಡವಳಿಗರು ಮತ್ತು ವಿದೇಶಿ ಬಂಡವಾಳ ಜನತೆಯನ್ನು ಹಾಗೂ ದೇಶದ ಸಂಪನ್ಮೂಲಗಳ ಸೂರೆಯನ್ನು ತೀವ್ರಗೊಳಿಸಲು ಅನುಕೂಲ ಮಾಡಿಕೊಡುವ ದಾರಿ.

ಜನವಿರೋಧಿ ನಿಲುವೇ ದೇಶ ಎದುರಿಸುತ್ತಿರುವ ಮೂರನೇ ಬಿಕ್ಕಟ್ಟಿನಲ್ಲಿ ಪ್ರತಿಫಲನಗೊಳ್ಳುತ್ತಿದೆ. ಅದೆಂದರೆ ಪ್ರಜಾಪ್ರಭುತ್ವದ ಬಿಕ್ಕಟ್ಟು. ಮಾರ್ಚ್ ೨೪ ರಂದು ಲಾಕ್‌ಡೌನ್ ಆರಂಭವಾದಾಗಿನಿಂದ ಕಳೆದ ಆರೂವರೆ ತಿಂಗಳಲ್ಲಿ ಪ್ರಜಾಪ್ರಭುತ್ವದ ಮೇಲೆ ಮತ್ತು ಹಲವಾರು ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಯೋಜಿತ ದಾಳಿಗಳು ನಡೆಯುತ್ತಿವೆ.; ಸಿ.ಎ.ಎ.-ವಿರೋಧಿ ಪ್ರತಿಭಟನಾಕಾರರ ಮೇಲೆ, ಭೀಮ-ಕೊರೆಗಾಂವ್ ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಿರುವ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರ ಮೇಲೆ ಯು.ಎ.ಪಿ.ಎ. ಮತ್ತು ರಾಜದ್ರೋಹದ ಅಂಶಗಳಂತಹ ಕರಾಳ ಕ್ರಮಗಳ ಪ್ರಯೋಗ; ಎಲ್ಲ ಪ್ರಜಾಸತ್ತಾತ್ಮಕ ಚಟುವಟಿಕೆಗಳನ್ನು ದಮನ ಮಾಡಲು ಸಾಂಕ್ರಾಮಿಕ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಬಳಕೆ; ಜಮ್ಮು ಮತ್ತು ಕಾಶ್ಮೀರದಲ್ಲಿ ನಿವಾಸಿ ಕಾಯ್ದೆಯನ್ನು ಮುಂದೊತ್ತುವುದು, ಮತ್ತು ಅಂತಿಮವಾಗಿ ಸಂಸತ್ತನ್ನು ಕತ್ತರಿಸುವುದು.

ಸಂಸದೀಯ ಸ್ಥಾಯಿ ಸಮಿತಿಗಳ ನಿರ್ವಹಣೆಗಳನ್ನು ಕಡಿತ ಮಾಡಲಾಗಿದೆ, ಆನ್‌ಲೈನ್ ಸಭೆಗಳಿಗೆ ಅವಕಾಶ ನೀಡಲಾಗಿಲ್ಲ. ಮುಂಬರುವ ಸಂಸತ್ ಅಧಿವೇಶದಲ್ಲಿ ‘ಪ್ರಶ್ನೋತ್ತರ ಗಂಟೆ’ಯನ್ನು ರದ್ದು ಮಾಡಲಾಗಿದೆ, ಈ ಮೂಲಕ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳುವ ಸದಸ್ಯರ ಪ್ರಾಥಮಿಕ ಹಕ್ಕನ್ನೂ ವಂಚಿಸಲಾಗಿದೆ. ರಾಜ್ಯಗಳ ಹಕ್ಕುಗಳನ್ನು ತುಳಿದು ಹಾಕಲಾಗುತ್ತಿದೆ. ಈ ಪಟ್ಟಿ ಹೀಗೆ ಸಾಗುತ್ತಿದೆ.

7thcartoon-2
ಪ್ರಜಾಪ್ರಭುತ್ವಕ್ಕೆ ಗರಗಸ – ವ್ಯಂಗ್ಯಚಿತ್ರ ಕೃಪೆ: ಸಾತ್ವಿಕ್ ಗಡೆ, ದಿ ಹಿಂದು

ರಾಜ್ಯಗಳಿಗೆ ಸಲ್ಲಬೇಕಾದ ಜಿಎಸ್‌ಟಿ ಪರಿಹಾರವನ್ನು ಕೊಡಲು ಹಣ ಇಲ್ಲ ಎಂದು ಸರಕಾರ ನೆವ ಒಡ್ಡುತ್ತಿರುವಾಗ, ಕೇಂದ್ರ ಗೃಹ ಮಂತ್ರಾಲಯ ೫೦,೦೦೦ ಕೋಟಿ ರೂ.ಗಳ ನಿಧಿಯೊಂದಿಗೆ ಒಂದು ರಾಷ್ಟ್ರೀಯ ಆಂತರಿಕ ಭದ್ರತಾ ನಿಧಿ(ಎನ್‌ಐಎಸ್‌ಎಫ್)ನ್ನು ರಚಿಸಬೇಕು ಎಂದು ಹಣಕಾಸು ಆಯೋಗಕ್ಕೆ ಹೇಳಿದೆ. ಇದು ಬಂಡವಾಳ ಖರ್ಚನ್ನು ಸರಿದೂಗಿಸಲಿಕ್ಕಾಗಿ. ಇದರಲ್ಲಿ ಬಹುಪಾಲು ಗುಪ್ತಚಾರ ಮತ್ತು ಗುಪ್ತಮಾಹಿತಿಗಳನ್ನು ಸಂಗ್ರಹಿಸುವ ತಂತ್ರಜ್ಞಾನಕ್ಕಾಗಿ. ಮಹತ್ವದ ಸಂಗತಿಯೆಂದರೆ ಅಂತರಿಕ ಭದ್ರತೆಗೆ ನಿಧಿ ನೀಡಿಕೆಯನ್ನು ಹಣಕಾಸು ಆಯೋಗದ ವಿಷಯವ್ಯಾಪ್ತಿಗೆ ಸೇರಿಸಲಾಗಿದೆ. ಇದು ಕೇಂದ್ರ ಮತ್ತು ರಾಜ್ಯಗಳು ಹಂಚಿಕೊಳ್ಳಬೇಕಾದ ಹೊಣೆಗಾರಿಕೆ ಎಂದು ಹೇಳುತ್ತ ಈ ಪ್ರತ್ಯೇಕ ನಿಧಿಯ ರಚನೆಯನ್ನು ಗೃಹಮಂತ್ರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಂದರೆ ಈ ಮೂಲಕ ರಾಜ್ಯಗಳಿಗೆ ಸಲ್ಲಬೇಕಾದ ಕೆಲವು ಸಂಪನ್ಮೂಲಗಳನ್ನು ಆಂತರಿಕ ಭದ್ರತೆ ಮತ್ತು ಗುಪ್ತಚಾರಿಕೆಯ ಪ್ರಭುತ್ವದತ್ತ ತಿರುಗಿಸಲಾಗುತ್ತದೆ.

ನ್ಯಾಯಾಂಗ ಸುಮಾರಾಗಿ, ಹೇಳಿದಂತೆ ಕೇಳುವ ಸ್ಥಿತಿಯಲ್ಲಿದ್ದು ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲೆ ದಾಳಿಗಳ ವಿಷಯದಲ್ಲಿ ಕಾರ್ಯಾಂಗದ ಪರವಾಗಿ ಹೋಗುವುದರಿಂದ, ಮಹಾಸೋಂಕಿನ ಅವಧಿಯಲ್ಲಿ ಸರ್ವಾಧಿಕಾರಶಾಹಿ ರಚನೆ ಗಟ್ಟಿಗೊಂಡಿದೆ. ಇದಕ್ಕೆ ಬಲಿಯಾಗಿರುವುದು ಜನಗಳ ಆರೋಗ್ಯ ಮತ್ತು ಆರ್ಥಿಕ ಒಳಿತು. ಇದು ಕೋವಿಡ್ ಕಾಲದಲ್ಲಿ ಮೋದಿ ಆಳ್ವಿಕೆಯ ನಿಜವಾದ ಮುಖ.

Leave a Reply

Your email address will not be published. Required fields are marked *