ಡಾ. ಕಫೀಲ್ ಖಾನ್ ಮತ್ತು ದೇವಾಂಗನಾ ಕಲಿತಾ ಪ್ರಕರಣಗಳಲ್ಲಿನ ಎರಡು ಹೈಕೋರ್ಟ್ ತೀರ್ಪುಗಳಲ್ಲಿ ವ್ಯತ್ಯಾಸವಿದೆ. ಆದರೆ ಕಲಿತಾ ಅವರ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವಾಲಯ ನಿರ್ದೇಶಿಸಿದಂತೆ ದೆಹಲಿ ಪೋಲೀಸ್‌ನ ಮತ್ತು ಡಾ ಖಾನ್ ಅವರ ಪ್ರಕರಣದಲ್ಲಿ ಉತ್ತರ ಪ್ರದೇಶದ ಸರಕಾರದ ಉದ್ದೇಶಗಳಲ್ಲಿ ಮತ್ತು ಅವು ಬಳಸಿದ ಅನೀತಿಯುತ ವಿಧಾನಗಳಲ್ಲಿ ಸಾಮ್ಯತೆಗಳಿವೆ. ಈ ಎರಡು ತೀರ್ಪುಗಳಲ್ಲಿ ಮೂರು ವಿಷಯಗಳು ಎದ್ಸು ಕಾಣುತ್ತವೆ. ನ್ಯಾಯಾಲಯಗಳ ಜೊತೆಗೆ ಪ್ರತಿಪಕ್ಷಗಳ ರಾಜಕೀಯ ನಾಯಕರು ಸಹ ಈ ತೀರ್ಪುಗಳನ್ನು ಗಮನಿಸಬೇಕಾಗಿದೆ.
ಅಲಹಾಬಾದ್ ಹೈಕೋರ್ಟ್ ಡಾ.ಕಫಿಲ್ ಖಾನ್ ಅವರನ್ನು ಎನ್.ಎಸ್.ಎ. ಅಡಿಯಲ್ಲಿ ನಿರ್ಬಂಧದಲ್ಲಿ ಇಟ್ಟಿರುವುದನ್ನು ರದ್ದು ಮಾಡಿದ ತೀರ್ಪು ಒಬ್ಬ ವ್ಯಕ್ತಿಗಷ್ಟೇ ನ್ಯಾಯ ಒದಗಿಸಿಲ್ಲ ಅದರ ವ್ಯಾಪ್ತಿ ಇನ್ನೂ ವಿಶಾಲವಾಗಿದೆ. ಅದು ನೀಡಿರುವ ಪರಿಹಾರ ಕೂಡ ಬಹಳಷ್ಟು ದೂಷಣೆಗಳಿಗೆ, ಕಿರುಕುಳಗಳಿಗೆ ಒಳಗಾದ ಈ ಭಾರತದ ನಾಗರಿಕನಿಗಷ್ಟೇ ಅಲ್ಲ, ಇನ್ನೂ ವ್ಯಾಪಕವಾಗಿದೆ. ಈ ತೀರ್ಪನ್ನು ಇನ್ನು ಮುಂದೆ ಇಂತಹ ಹಲವು ಪ್ರಕರಣಗಳಲ್ಲಿ ನ್ಯಾಯಾಂಗ ನಿಲುವಿನ ಒಂದು ಮಾದರಿಯಾಗಿ ಕಾಣಬಹುದು.
ಕಾಕತಾಳೀಯವಾಗಿ, ಅದೇ ದಿನ ದೆಹಲಿ ಹೈಕೋರ್ಟ್ ಮೇ ತಿಂಗಳಿನಿಂದ ಜೈಲಿನಲ್ಲಿದ್ದ ಪಿಂಜರಾ ತೋಡ್(ಪಂಜರ ಮುರಿ) ಗುಂಪಿನ ಸದಸ್ಯರಾದ ದೇವಾಂಗನಾ ಕಲಿತಾ ಅವರಿಗೆ ಜಾಮೀನು ನೀಡಿತು. ಕಲಿತಾ ಅವರನ್ನು ಒಟ್ಟು ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿ ಮಾಡಲಾಗಿದೆ, ಈ ನಾಲ್ಕು ಪ್ರಕರಣಗಳು ಪೌರತ್ವ ತಿದ್ದುಪಡಿ ಕಾಯ್ದೆ/ರಾಷ್ಟ್ರೀಯ ಪೌರತ್ವ ರಿಜಿಸ್ಟರ್(ಸಿಎಎ/ಎನ್‌ಆರ್‌ಸಿ)-ವಿರೋಧಿ ಪ್ರತಿಭಟನೆಗಳಿಗೆ ಮತ್ತು ಈಶಾನ್ಯ ದೆಹಲಿಯಲ್ಲಿನ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣಗಳು. ಇದು ಅವರಿಗೆ ಜಾಮೀನು ನೀಡಿದ ಮೂರನೇ ಪ್ರಕರಣವಾಗಿದೆ, ಜಾಮೀನು ಸಿಕ್ಕರೂ ಅವರು ಜೈಲಿನಲ್ಲಿಯೇ ಇರಬೇಕಾಗುತ್ತದೆ ಏಕೆಂದರೆ ಅವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ) ಅಡಿಯಲ್ಲಿ ನಾಲ್ಕನೇ ಪ್ರಕರಣ ಇನ್ನೂ ಇದೆ.
ಯುಎಪಿಎ ಮತ್ತು ಎನ್‌ಎಸ್‌ಎ ಅಡಿಯಲ್ಲಿ ಬಂಧನಕ್ಕೊಳಗಾದ ಆರೋಪಿಗಳ ಹಕ್ಕುಗಳಿಗೆ ಸಂಬAಧಿಸಿದಂತೆ ಸಾಮಾನ್ಯ ನ್ಯಾಯಾಂಗ ಪ್ರಕ್ರಿಯೆಗಳು ಅಮಾನತುಗೊಳ್ಳುತ್ತವೆ. ಉತ್ತರ ಪ್ರದೇಶದ ಸರಕಾರವು ಡಾ ಖಾನ್ ಅವರ ಪ್ರಕರಣದಲ್ಲಿ ಮತ್ತು ಮಹಾರಾಷ್ಟçದಲ್ಲಿ ಬೀಮಾ ಕೋರೇಗಾಂನ ಎಲ್ಲ ಪ್ರಕರಣಗಳಲ್ಲಿ ಆರೋಪ ಪಟ್ಟಿಗಳನ್ನು ಸಲ್ಲಿಸಲು ಬಹಳಷ್ಟು ಸಮಯಾವಕಾಶ ನೀಡಲಾಗಿದೆ. ಹೀಗೆ ಮಾಡುವುದರಿಂದ ಆರೋಪಿಗಳನ್ನು ‘ಕಾನೂನಾತ್ಮಕವಾಗಿಯೇ ಅನಿರ್ದಿಷ್ಟ ಕಾಲದ ವರೆಗೆ ಮತ್ತು ಯಾವುದೇ ಹಕ್ಕುಗಳಿಲ್ಲದೇ ಬಂಧಿಸಿ ಇಡಬಹುದಾಗಿದೆ.
ದ್ವೇಷಭರಿತ ಭಾಷಣ
ಈ ಎರಡು ಪ್ರಕರಣಗಳಲ್ಲಿನ ನ್ಯಾಯಾಲಯದ ತೀರ್ಪುಗಳಲ್ಲಿ ವ್ಯತ್ಯಾಸವಿದೆ. ಆದರೆ ಕಲಿತಾ ಅವರ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವಾಲಯ ನಿರ್ದೇಶಿಸಿದಂತೆ ದೆಹಲಿ ಪೋಲೀಸ್‌ನ ಮತ್ತು ಡಾ ಖಾನ್ ಅವರ ಪ್ರಕರಣದಲ್ಲಿ ಉತ್ತರ ಪ್ರದೇಶದ ಸರಕಾರದ ಉದ್ದೇಶಗಳಲ್ಲಿ ಮತ್ತು ಅವು ಬಳಸಿದ ಅನೀತಿಯುತ ವಿಧಾನಗಳಲ್ಲಿ ಸಾಮ್ಯತೆಗಳಿವೆ. ಈ ಎರಡು ತೀರ್ಪುಗಳನ್ನು ನೋಡಿದ ಮೇಲೆ ನನ್ನ ಗಮನಕ್ಕೆ ಬಂದಂತೆ ಒಟ್ಟು ಮೂರು ವಿಷಯಗಳು ಇಲ್ಲಿ ಎದ್ಸು ಕಾಣುತ್ತವೆ.
ಮೊದಲನೆಯದು ದ್ವೇಷಭರಿತ ಮಾತುಗಳು ಮತ್ತು ಹಿಂಸಾಚಾರಕ್ಕೆ ಪ್ರಚೋದನೆ. ಎರಡೂ ಪ್ರಕರಣಗಳಲ್ಲಿ, ಸಿಎಎ/ಎನ್‌ಆರ್‌ಸಿ-ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಪಟ್ಟ ಕಾನೂನಿನ ಅಂಶಗಳ ಅಡಿಯಲ್ಲಿ ಇಂತಹ ಅಪರಾಧಗಳು ನಡೆದಿವೆ ಎಂದು ಆರೋಪ ಹೊರಿಸಲಾಗಿದೆ.
ಅಲಹಾಬಾದ್ ನ್ಯಾಯಾಲಯದ ಆದೇಶದಲ್ಲಿ ಡಾ ಖಾನ್ ಅವರ ಭಾಷಣವನ್ನು ಸಂಪೂರ್ಣವಾಗಿ ನಮೂದಿಸಲಾಗಿದೆ. “ದ್ವೇಷ ಅಥವಾ ಹಿಂಸೆಯನ್ನು ಉತ್ತೇಜಿಸಲು ಇದು ಯಾವುದೇ ಪ್ರಯತ್ನವನ್ನು ಬಹಿರಂಗಪಡಿಸುವುದಿಲ್ಲ. ಇದು ಎಲ್ಲಿಯೂ ಅಲಿಘಡ್ ನಗರದ ಶಾಂತಿ ಮತ್ತು ಪ್ರಶಾಂತತೆಗೆ ಧಕ್ಕೆ ತರುವುದಿಲ್ಲ” ಎಂದು ಅಲಹಾಬಾದ್ ಹೈಕೋರ್ಟಿನ ಆದೇಶ ಹೇಳುತ್ತದೆ. ದೆಹಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ದೆಹಲಿ ಪೋಲೀಸ್ “ಆಕೆ ತನ್ನ ಭಾಷಣದಲ್ಲಿ ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ಪ್ರಚೋದಿಸಿದ ಅಥವಾ ದ್ವೇಷದ ಭಾಷಣವನ್ನು ನೀಡಿದ ಮತ್ತು ಯುವ ಸಮುದಾಯದ ಅಮೂಲ್ಯ ಜೀವನಕ್ಕೆ ಮತ್ತು ಆಸ್ತಿಪಾಸ್ತಿಗೆ ಹಾನಿ ಮಾಡಿದ ಯಾವುದೇ ಸಾಕ್ಷಿಗಳನ್ನು ನೀಡುವಲ್ಲಿ ವಿಫಲವಾಗಿದೆ” ಎಂದಿದೆ.
ಇದಲ್ಲದೆ ಅಲಹಾಬಾದ್ ಹೈಕೋರ್ಟ್, ಆಡಳಿತ “ಭಾಷಣದಲ್ಲಿನ ಕೆಲವು ಪದಗುಚ್ಛಗಳನ್ನು ತಮಗೆ ಬೇಕಾದಂತೆ ಆಯ್ದುಕೊಂಡು ಅವುಗಳ ನಿಜವಾದ ಆಶಯವನ್ನು ನಿರ್ಲಕ್ಷಿಸಿ ಅದನ್ನು ಉಲ್ಲೇಖಿಸಿದೆ” ಎಂದು ದೂಷಿಸಿದೆ. ದಿಲ್ಲಿ ಹೈಕೋರ್ಟ್ ಜಾಮೀನು ನೀಡುವುದರಿಂದ ಆರೋಪಿಗೆ “ಮತ್ತಷ್ಟು ಅನಗತ್ಯ ಕಿರುಕುಳ, ಅಪಮಾನ ಮತ್ತು ಅಸಮರ್ಥನೀಯ ಬಂಧನದ ನೋವನ್ನು” ತಡೆಯಬಹುದು ಎಂದು ಹೇಳಿದೆ.
ಇದು ಯಾವ ಸಂದರ್ಭದಲ್ಲಿ ಪದಗಳನ್ನು ಉಚ್ಚರಿಸಲಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾದುದರ ಮಹತ್ವವನ್ನು ಎತ್ತಿ ತೋರಿಸುತ್ತದೆ. ಆದರೂ ಇಂದು ಹಲವಾರು ಕಾರ್ಯಕರ್ತರನ್ನು ಅವರು ‘ದ್ವೇಷಭಾಷಣ’ ಮಾಡಿದ್ದಾರೆಂದು ಕುತ್ಸಿತ ದೂಷಣೆಗಳಿಗೆ, ಕಿರುಕುಳಗಳಿಗೆ ಮತ್ತು ಅಪಮಾನಕ್ಕೆ ಒಳಪಡಿಸಲಾಗುತ್ತಿದೆ. ಇಂಥವುಗಳನ್ನು ಕೆಲವು ನ್ಯಾಯಾಲಯಗಳು ಕೂಡ “ಗಂಭೀರ ಆರೋಪಗಳು” ಎಂದು ಪರಿಗಣಿಸುವಂತೆಯೂ ಕಾಣುತ್ತದೆ. ಸುಪ್ರೀಂ ಕೋರ್ಟ್ ನಲ್ಲಿಯೂ ಸಹ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ ಮಂದರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿರೋಧಿಸಿದರು. ಮಂದರ್ ಅವರ ಒಂದು ಭಾಷಣದ ಆಧಾರದ ಮೇಲೆ ಅವರು “ಸುಪ್ರೀಂ ಕೋರ್ಟಿನ ಬಗ್ಗೆ ನಂಬಿಕೆಯ ಕೊರತೆಯನ್ನು” ತೋರಿಸಿದ್ದಾರೆ ಎಂದರು. ಮತ್ತು ಸುಪ್ರಿಂ ಕೋರ್ಟ್ ಶ್ರೀ ಮೆಹತಾ ಅವರ ವಾದವನ್ನು ಒಪ್ಪಿಕೊಂಡಿತಷ್ಟೇ ಅಲ್ಲ, ಹರ್ಷ ಮಂದರ್ ಅವರ ಭಾಷಣವನ್ನೇ ಕೇಳದೆ ಅವರ ವಿರುದ್ಧ ಪ್ರತಿಕೂಲ ಟಿಪ್ಪಣಿಗಳನ್ನು ಮಾಡಿತು. ನಂತರ ಹರ್ಷ ಮಂದರ್ ಅವರ ಆ ಭಾಷಣವನ್ನು ಪೂರ್ಣವಾಗಿ ಸಾರ್ವಜನಿಕಗೊಳಿಸಲಾಯಿತು. ಕಫಿಲ್ ಖಾನ್‌ರವರ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟಿನ “ತಮಗೆ ಬೇಕಾದಂತೆ ಆಯ್ದುಕೊಳ್ಳಲಾಗಿದೆ” ಎಂಬ ಟಿಪ್ಪಣಿ ಶ್ರೀ ಮೆಹತಾ ಮಾಡಿರುವ ಕೃತ್ಯದ ಸಂದರ್ಭದಲ್ಲಿಯೂ ಅಷ್ಟೇ ಪ್ರಸ್ತುತ ಎಂದು ಪರಿಗಣಿಸಬಹುದು.
“ವ್ಯಕ್ತಿನಿಷ್ಟ ತೃಪ್ತಿ”
ಎರಡನೆಯ ವಿಷಯವೆಂದರೆ “ಬಂಧಿಸುವ ಅಧಿಕಾರಿಯ ವ್ಯಕ್ತಿನಿಷ್ಟ ತೃಪ್ತಿ”. ಸಿಎಎ/ಎನ್‌ಆರ್‌ಸಿ-ವಿರೋಧಿ ಕಾರ್ಯಕರ್ತರ ವಿರುದ್ಧದ ಹೆಚ್ಚಿನ ಪ್ರಕರಣಗಳಲ್ಲಿ, ಆರೋಪಿಗಳನ್ನು ಬಿಡುಗಡೆ ಮಾಡಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಮತ್ತು ಅವರು ರಾಷ್ಟ್ರವಿರೋಧಿ ಪಿತೂರಿಯ ಭಾಗವಾಗಿದ್ದಾರೆ ಎನ್ನುವ ವಾದಗಳನ್ನು ಬಳಸಿಕೊಂಡು ಅವರ ಜಾಮೀ£ನ ಮನವಿಯನ್ನು ನಿರಾಕರಿಸಲಾಗಿದೆ. ಇದಕ್ಕೆ “ಬಂಧಿಸುವ ಅಧಿಕಾರಿಯ ವ್ಯಕ್ತಿನಿಷ್ಟ ತೃಪ್ತಿ” ಮಾತ್ರ ಅಗತ್ಯವಿರುತ್ತದೆ. ಡಾಕ್ಟರ್ ಖಾನ್ ಅವರ ಪ್ರಕರಣದಲ್ಲಿಯೂ ಸಹ ಇದನ್ನು ವಾದಿಸಲಾಗಿದೆ. ಅಲಹಾಬಾದ್ ಹೈಕೋರ್ಟ್ ಇದೊಂದು ಆಧಾರವಾಗಬಹುದು ಮತ್ತು ಪೂರ್ವ ನಿದರ್ಶನವಾಗಬಹುದು ಎಂದು ಒಪ್ಪಿಕೊಳ್ಳುತ್ತಲೇ “ವ್ಯಕ್ತಿನಿಷ್ಟ ತೃಪ್ತಿ ಎಂದರೆ ಒಬ್ಬ ತರ್ಕಬದ್ಧ ಮನುಷ್ಯನ ತೃಪ್ತಿ, ಇದನ್ನು ಒಬ್ಬ ವಿವೇಚನಾಶೀಲ ವ್ಯಕ್ತಿಯನ್ನು ತೃಪ್ತಿಪಡಿಸಬಲ್ಲ ಕೆಲವು ವಿಷಯಗಳ ಆಧಾರದಲ್ಲಿ ತಲುಪಬಹುದು. ಇದು ಸಂಬಂಧಪಟ್ಟ ಅಧಿಕಾರಿಯ ಹುಚ್ಚು ಕಲ್ಪನೆಗಳು ಮತ್ತು ವಿಕಾರಗಳಿಗೆ ಸಂಬಂಧಪಟ್ಟಿರುವುದಿಲ್ಲ” ಎಂದು ಹೇಳಿದೆ. ದೆಹಲಿ ಬಂಧನಗಳು ಮತ್ತು ಎಲ್ಗರ್ ಪರಿಷತ್ ಪ್ರಕರಣಗಳಲ್ಲಿಯೂ ‘ಒಬ್ಬ ವಿವೇಚನಾಶೀಲ ವ್ಯಕ್ತಿಯನ್ನು ತೃಪ್ತಿಪಡಿಸಬಲ್ಲ ವಿಷಯಗಳ’ ಮಾನದಂಡಗಳು ಅನ್ವಯವಾಗಬೇಕು. ಇವು ನಾಗರಿಕ ಸ್ವಾತಂತ್ರ‍್ಯ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆಗೆ ಬಹಳಷ್ಟು ಪ್ರಸ್ತುತವಾಗಿರುವ ಮಾನದಂಡಗಳು. ಕನಿಷ್ಟ ಪಕ್ಷ ಇದು ದೆಹಲಿಯ ಪ್ರಕರಣದಲ್ಲಿ ದ್ವೇಷ ಭಾಷಣ ಮಾಡಿದ ಭಾರತೀಯ ಜನತಾ ಪಕ್ಷದ ನಾಯಕರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ದಾರಿ ಮಾಡಿಕೊಡುತ್ತದೆ. ಈಗ, ಎಲ್ಗರ್ ಪರಿಷದ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರಿಗೆ ಜಾಮೀನು ನಿರಾಕರಿಸಲು ಸಾಧ್ಯವಾಗುತ್ತದೆಯೇ?
“ಸಾಕ್ಷಿ” ಗಳನ್ನು ಕರೆಯುವುದು
ಮೂರನೆಯ ವಿಷಯ ಸಾಕ್ಷಿಗಳದಾಗಿದೆ. ದೆಹಲಿ ಹೈಕೋರ್ಟ್ ಜಾಮೀನು ಆದೇಶದಲ್ಲಿ “ಅರ್ಜಿದಾರರು (ದೇವಾಂಗನಾ ಕಲಿತ) ಮಾಡಿದ ಕೃತ್ಯದಿಂದ ಆರೋಪಿತ ಅಪರಾಧ ನಡೆದಿದೆ ಎಂದು ಸಾಬೀತುಪಡಿಸಲು ಯಾವುದೇ ರೀತಿಯ ಪುರಾವೆಗಳಿಲ್ಲ, ಅಪರಾಧ ಸಂಹಿತೆಯ ಸೆಕ್ಷನ್ 164 ರ ಅಡಿಯಲ್ಲಿ ದಾಖಲಿಸಲಾದ ಹೇಳಿಕೆಗಳನ್ನು ಹೊರತುಪಡಿಸಿ, ಅದೂ ಸಹ ತಡವಾಗಿ ದಾಖಲಿಸಲಾದ ಹೇಳಿಕೆಗಳು…” ಎಂದು ವಿಶೇಷವಾಗಿ ಉಲ್ಲೇಖಿಸಿದೆ. ಇಂತಹ ಅನೇಕ ಪ್ರಕರಣಗಳು ಮುಖ್ಯವಾಗಿ ಸಾಕ್ಷಿಗಳು ಎಂದು ಹೇಳಲಾಗುವವರನ್ನೇ ಅವಲಂಬಿಸಿರುತ್ತವೆ.
ದೆಹಲಿಯಲ್ಲಿ ಇಂತಹ ಉದಾಹರಣೆಗಳು ಹಲವಾರು ಸಿಗುತ್ತವೆ. ಡಿಸೆಂಬರ್ 2019 ಮತ್ತು ಫೆಬ್ರುವರಿ 2020 ರ ನಡುವೆ ಸಿಎಎ/ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭಗಳಲ್ಲಿನ ಸೌಹಾರ್ದ ಸಭೆಗಳಲ್ಲಿ ಭಾಗವಹಿಸಿದವರನ್ನು ಸಹ ದಿಲ್ಲಿ ಪೋಲಿಸಿನ ಸ್ಪೆಷಲ್ ಬ್ರಾಂಚಿನವರು ಪ್ರಶ್ನಿಸಲು ಕರೆಸಿಕೊಂಡು, ಪೋಲಿಸರು ಗುರಿಯಿಟ್ಟಿರುವವರ ಪಟ್ಟಿಯಲ್ಲಿನ ನಿರ್ದಿಷ್ಟ್ಟ ಕಾರ್ಯಕರ್ತರನ್ನು ಹೆಸರಿಸುವಂತೆ ಹೇಳಲಾಗುತ್ತಿದೆ.
ನ್ಯಾಯಾಲಯಗಳ ಜೊತೆಗೆ ಪ್ರತಿಪಕ್ಷಗಳ ರಾಜಕೀಯ ನಾಯಕರು ಸಹ ಈ ತೀರ್ಪುಗಳನ್ನು ಗಮನಿಸಬೇಕು. ದುರದೃಷ್ಟವಶಾತ್ ಎಡಪಕ್ಷಗಳನ್ನು ಹೊರತುಪಡಿಸಿ ಪ್ರತಿಭಟನಾಕಾರರ ಮೇಲಾಗುತ್ತಿರುವ ಅನ್ಯಾಯ, ಹಿಂಸಾಚಾರದ ವಿರುದ್ಧ, ಕೋಮು ಹಿಂಸಾಚಾರಕ್ಕೆ ಅವರನ್ನು ದೂಷಿಸುತ್ತಿರುವುದರ ವಿರುದ್ಧ ಮಾತನಾಡದೆ ಅನೇಕ ಪಕ್ಷಗಳು ಮೌನವನ್ನು ತಾಳಿವೆ. ಗೃಹ ಸಚಿವಾಲಯದ ತ£ಖಾ ಸಂಸ್ಥೆಗಳು ಆಳುವ ಪಕ್ಷದ ನಾಯಕರನ್ನು ನಾಚಿಕೆಯಿಲ್ಲದೆ ರಕ್ಷಿಸುತ್ತಿವೆ. ಡಾಕ್ಟರ್ ಖಾನ್ ಅವರಂತಹ ಮುಗ್ಧ ಜನಪರ ಕಾಳಜಿ ಉಳ್ಳಂತಹ ನಾಗರಿಕರನ್ನು ಬಂಧಿಸುತ್ತಿವೆ. ಇದೀಗ ಪ್ರತಿಪಕ್ಷಗಳು ಒಟ್ಟಾಗಿ ಯುಎಪಿಎ ಮತ್ತು ಎನ್‌ಎಸ್‌ಎ ಅಡಿಯಲ್ಲಿ ಜೈಲುಗಳಿಗೆ ಹಾಕಿರುವ ರಾಜಕೀಯ ಬಂಧಿತರನ್ನು ಬಿಡುಗಡೆ ಮಾಡಬೇಕೆಂದು, ಮತ್ತು ತಮ್ಮ ಭಾಷಣಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿರುವ ಆಳುವ ಪಕ್ಷದಲ್ಲಿರುವವರನ್ನು ಬಂಧಿಸಬೇಕು ಮತ್ತು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಬೇಕಾದ ಸಮಯವಲ್ಲವೇ?
ಲೇಖನ ಅನುವಾದ: ಲವಿತ್ರ ವಿ.