ದಿನಾಂಕ : 22.09.2020
ಬೆಂಗಳೂರು.
ಕೇಂದ್ರ ಸರಕಾರ ಸಂಸತ್ ನಲ್ಲಿ ದೇಶದ ಕೃಷಿಯನ್ನು ಮತ್ತು ಕೃಷಿ ಮಾರುಕಟ್ಟೆಯನ್ನು ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ವಹಿಸುವ ಕೃಷಿ ಸಂಬಂಧಿ ಕಾಯ್ದೆಗಳನ್ನು ಪ್ರತಿರೋಧಿಸಿ ಹಾಗೂ ಈ ಕುರಿತಂತೆ ರಾಜ್ಯ ಸರಕಾರ ಈಗಾಗಲೇ ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ವಾಪಾಸು ಪಡೆಯಲು ಮತ್ತು ಅವುಗಳನ್ನು ವಿಧಾನ ಸಭಾ ಅಧಿವೇಶನದಲ್ಲಿ ಕಾಯ್ದೆಗಳನ್ನಾಗಿಸುವ ಪ್ರಸ್ತಾಪಗಳನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಿ, ಸೆಪ್ಟಂಬರ್ ೨೫, ೨೦೨೦ ರಂದು ನಡೆಯುವ ರಾಜ್ಯದ ರೈತರ ಚಳುವಳಿಯನ್ನು ಬೆಂಬಲಿಸಿ, ಯಶಸ್ವಿಗೊಳಿಸಲು ಎಡಪಕ್ಷಗಳ ರಾಜ್ಯ ಘಟಕಗಳು ನಿರ್ಧರಿಸಿವೆ.
ಇವು ಕೇವಲ ಕೃಷಿ ಮತ್ತು ಕೃಷಿ ಮಾರುಕಟ್ಟೆಯನ್ನು ಮಾತ್ರವೇ ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡುತ್ತಿಲ್ಲ. ಬದಲಿಗೆ, ಇವುಗಳ ಜೊತೆ ಆಹಾರದ ಭದ್ರತೆಗೆ ಧಕ್ಕೆಯುಂಟು ಮಾಡಲಿವೆ ಮತ್ತು ಸಣ್ಣ ಹಾಗೂ ಮಧ್ಯಮ ಕೃಷಿ ಆಧಾರಿತ ಕೈಗಾರಿಕೆಗಳ ಭದ್ರತೆಗೂ ಬೆದರಿಕೆಯಾಗಿವೆ. ದೇಶದ ಹಾಗೂ ರಾಜ್ಯದ ಗ್ರಾಹಕ ಮಾರುಕಟ್ಟೆಯನ್ನು ಲೂಟಿಗೆ ತೆರೆಯಲಿವೆ.
ಇದರಿಂದ ರಾಜ್ಯದ ಎಲ್ಲಾ ೬೫ ಲಕ್ಷ ರೈತ ಕುಟುಂಬಗಳು, ಕೋಟ್ಯಾಂತರ ಕೃಷಿಕೂಲಿಕಾರರು, ಕಸುಬುದಾರರು, ಸಣ್ಣ ವ್ಯಾಪಾರಿಗಳು, ಎಪಿಎಂಸಿಗಳ ವರ್ತಕರು, ಕಮಿಷನ್ ಎಜೆಂಟರು, ನೌಕರರು, ಅಲ್ಲಿನ ಹಮಾಲರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ಅಲ್ಲಿ ದುಡಿಯುವ ಕಾರ್ಮಿಕರು, ಬೀದಿಗೆ ತಳ್ಳಲ್ಪಡಲಿದ್ದಾರೆ.
ಆದ್ದರಿಂದ ರೈತರ ಈ ಹೋರಾಟವನ್ನು ರಾಜ್ಯದ ಎಲ್ಲ ನಾಗರಿಕರ ಹೋರಾಟವಾಗಿ ಪರಿಗಣಿಸಿ, ಭಾಗಿಯಾಗಿ ಯಶಸ್ವಿಗೊಳಿಸಲು ರಾಜ್ಯದ ನಾಗರೀಕರಲ್ಲಿ, ಪ್ರಗತಿಪರ ಸಂಘ ಸಂಸ್ಥೆಗಳಲ್ಲಿ ಎಡಪಕ್ಷಗಳಾದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ), ಭಾರತ ಕಮ್ಯೂನಿಸ್ಟ್ ಪಕ್ಷ-ಸಿಪಿಐ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್-ಎಐಎಫ್ಬಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ, ಲೆನಿನ್ವಾದಿ) ಲಿಬರೇಷನ್-ಸಿಪಿಐ(ಎಂಎಲ್)ಲಿಬರೇಷನ್ ರಾಜ್ಯ ಘಟಕಗಳು ಮನವಿ ಮಾಡುತ್ತವೆ.
ಸಹಿ/-
ಯು. ಬಸವರಾಜ, ಕಾರ್ಯದರ್ಶಿ – ಸಿಪಿಐ(ಎಂ)
ಸಾತಿ ಸುಂದರೇಶ್, ಕಾರ್ಯದರ್ಶಿ – ಸಿಪಿಐ
ಶಿವಶಂಕರ್ ಜಿ.ಆರ್., ಕಾರ್ಯದರ್ಶಿ – ಎಐಎಫ್ಬಿ
ಕ್ಲಿಪ್ಟನ್, ಕಾರ್ಯದರ್ಶಿ – ಸಿಪಿಐ(ಎಂಎಲ್)-ಲಿಬರೇಷನ್