ರೈತ ಹಾಗೂ ದೇಶ ವಿರೋಧಿ ಎಲ್ಲಾ ಕೃಷಿ ಮಸೂದೆಗಳನ್ನು ತಿರಸ್ಕರಿಸಲು ರಾಷ್ಟ್ರಪತಿ-ರಾಜ್ಯಪಾಲರಿಗೆ ಮನವಿ

ಕೇಂದ್ರ ಸರ್ಕಾರವು ಅತ್ಯಂತ ತುರ್ತಾಗಿ ಪ್ರಸಕ್ತ ಅಧಿವೇಶನದಲ್ಲಿ ರೈತ ಹಾಗೂ ದೇಶ ವಿರೋಧಿಯಾದ ಕೃಷಿ ಮಸೂದೆಗಳನ್ನು ಅಂಗೀಕರಿಸಿದ್ದು ಅದನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಸಲ್ಲಿಸಿರುವ ಮನವಿ ಪತ್ರದ ಪೂರ್ಣ ವಿವರ ಕೆಳಗಿನಿಂತಿದೆ:

ಇವರಿಗೆ,
ಮಾನ್ಯ ರಾಷ್ಟ್ರಪತಿಗಳು,
ಭಾರತ ಸರಕಾರ, ರಾಷ್ಟ್ರಪತಿಗಳ ಭವನ, ನವದೆಹಲಿ.

ಮತ್ತು

ಮಾನ್ಯ ರಾಜ್ಯಪಾಲರು,
ಕರ್ನಾಟಕ ಸರಕಾರ, ರಾಜಭವನ, ಬೆಂಗಳೂರು.

ಮಾನ್ಯರೇ,

ವಿಷಯ ; ರೈತ ಹಾಗೂ ದೇಶ ವಿರೋಧಿ ಎಲ್ಲಾ ಕೃಷಿ ಮಸೂದೆಗಳನ್ನು ತಿರಸ್ಕರಿಸಲು ಕೋರಿ ಮನವಿ.

ಗೌರವಾನ್ವಿತರೇ,

ಕಳೆದ ಪಾರ್ಲಿಮೆಂಟ್ ಅಧಿವೇಶನದಲ್ಲಿ ಕೇಂದ್ರ ಸರಕಾರ ದೌರ್ಜನ್ಯದಿಂದ ಮತ್ತು ಪಾರ್ಲಿಮೆಂಟ್ ನಡಾವಳಿಯ ನೀತಿನಿಯಮಗಳನ್ನು ಗಾಳಿಗೆ ತೂರಿ,  ಮಾತ್ರವಲ್ಲಾ, ಬಾಧಿತ ಯಾವುದೇ ಜನ ಸಮುದಾಯದ ಜೊತೆ ಚರ್ಚಿಸದೇ,   ದೇಶದ ರೈತರ ಹಾಗೂ ಶೇ 90 ರಷ್ಟು ಜನರನ್ನು ತೀವ್ರವಾಗಿ ಬಾಧಿಸುವ, ಸರ್ವನಾಶಕ್ಕೆ ಕಾರಣವಾಗುವ ಕೃಷಿ ಹಾಗೂ ಕಾರ್ಮಿಕ ವಿರೋಧಿ ಮಸೂದೆಗಳನ್ನು ಅಂಗೀಕರಿಸಿದೆ.

ಅದೇ ರೀತಿ, ಕರ್ನಾಟಕ ಸರಕಾರವು ಹಾಲಿ ವಿಧಾನ ಸಭಾ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸದೇ, ಬಾಧಿತ ಜನರ ನಡುವೆಯು ಚರ್ಚಿಸದೇ, ಕೇಂದ್ರ ಸರಕಾರದ ಮಸೂದೆಗಳಿಗೆ ಪೂರಕವಾಗಿ, ಕಾರ್ಪೋರೇಟ್ ಕಂಪನಿಗಳ ಲೂಟಿಗೆ ನೆರವಾಗುವ  ಭೂಸುಧಾರಣೆ ತಿದ್ದುಪಡಿ ಮಸೂದೆ – 2020, ಎಪಿಎಂಸಿ ತಿದ್ದುಪಡಿ ಮಸೂದೆ -2020, ಅಗತ್ಯ ವಸ್ತುಗಳ ತಿದ್ದುಪಡಿ  ಮಸೂದೆ – 2020 ಮತ್ತು ವಿದ್ಯುತ್ ಚ್ಛಕ್ತಿ ತಿದ್ದುಪಡಿ ಮಸೂದೆ ಮುಂತಾಗಿ ತರಾತುರಿಯಲ್ಲಿ ಜನತೆ ಮತ್ತು  ವಿರೋದ ಪಕ್ಷಗಳ ತೀವ್ರವಾದ ವಿರೋಧದ ನಡುವೆ ಅಂಗೀಕರಿಸಿದೆ.

ಈ ಎರಡೂ ದೌರ್ಜನ್ಯದ ಕ್ರಮಗಳು ಜಾಗತಿಕ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ಮಾತ್ರವೇ ಸಹಾಯಕವಾಗಲಿವೆ.

ಈ ದುರ್ನಡೆ, ನಮ್ಮ ದೇಶದ ಸ್ವಾತಂತ್ರ್ಯ, ಸಾರ್ವ ಭೌಮತೆಗೆ, ಸ್ವಾವಲಂಬನೆಗೆ, ಆಹಾರ ಭದ್ರತೆಗಳಿಗೆ, ದೇಶೀಯ ಕೈಗಾರಿಕಾಭಿವೃದ್ಧಿಗೆ ಗಂಭೀರ ಅಪಾಯವನ್ನುಂಟು ಮಾಡಲಿವೆ.

ಸಾವಿರಾರು ವರ್ಷಗಳಿಂದ ದೇಶಕ್ಕೆ ಅನ್ನ ಒದಗಿಸುತ್ತಿದ್ದ ಅನ್ನದಾತರಾದ ರೈತ  ಹಾಗೂ ಕೃಷಿ ಸಂಬಂಧಿ ಉಪಕಸುಬುಗಳಲ್ಲಿ ತೊಡಗಿದ ಕುರಿ, ಕೋಳಿ, ಹಂದಿ, ಮೀನು ಸಾಕಾಣೆದಾರರು, ಮತ್ತಿತರೇ ಸಮುದಾಯಗಳ ಮತ್ತು ದಲಿತ ಸಂಕುಲಗಳು, ನಾಶವಾಗಲಿವೆ. ದೊಡ್ಡ ಸಂಖ್ಯೆಯ ಸಣ್ಣ ವ್ಯಾಪಾರಿಗಳು, ವರ್ತಕರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಕೋಟ್ಯಾಂತರ ಕಾರ್ಮಿಕರು ಬೀದಿಪಾಲಾಗಲಿದ್ದಾರೆ. ಸಹಕಾರಿ ಚಳುವಳಿಯು ನಾಶವಾಗಲಿದೆ. ದೇಶದ ಗ್ರಾಹಕ ಸಮುದಾಯ ವ್ಯಾಪಕವಾದ ಲೂಟಿಗೊಳಗಾಗಲಿದೆ.

ಇಂತಹದೊಂದು ಚಾರಿತ್ರಿಕ ದೌರ್ಜನ್ಯಕ್ಕೆ, ಪ್ರಮಾದಕ್ಕೆ ಈ ಪಾರ್ಲಿಮೆಂಟ್  ಹಾಗೂ ಕರ್ನಾಟಕ ವಿಧಾನ ಸಭೆಗಳು ಸಾಕ್ಷಿಯಾಗುತ್ತಿವೆ.

ಆದ್ದರಿಂದ, ಸಾಮೂಹಿಕ ವಿನಾಶಕ್ಕೆ ಕಾರಣವಾಗುತ್ತಿರುವ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳ ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ದೇಶವನ್ನು ಮತ್ತು ಜನತೆಯನ್ನು ಒತ್ತೆಯಿಟ್ಟು ಸಂಕಷ್ಠಕ್ಕೀಡು ಮಾಡಲಿರುವ ಈ ಮಸೂದೆಗಳನ್ನು ದೇಶದ ಸ್ವಾತಂತ್ರ್ಯ, ಸ್ವಾವಲಂಬನೆ, ಸಾರ್ವಭೌಮತೆ, ಪ್ರಜಾಪ್ರಭುತ್ವ ಹಾಗೂ ಆಹಾರ ಭದ್ರತೆಗಳನ್ನು ಮತ್ತು ರೈತ ಸಂಕುಲ ಸೇರಿದಂತೆ ಎಲ್ಲ ಬಾಧೆಗೊಳಗಾಗುವ  ಜನ ಸಮುದಾಯಗಳನ್ನು ಸಂರಕ್ಷಿಸಲು ಸದರಿ ಮಸೂದೆಗಳನ್ನು ತಿರಸ್ಕರಿಸುವ ತಮ್ಮ ಚಾರಿತ್ರಿಕ ಕರ್ತವ್ಯ ಮೆರೆಯಲು  ಮನವಿ ಮಾಡುತ್ತೇವೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿಗಳು

ಸಹಿ/- ಯು.ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *