ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ

ಈ ಸಂಸತ್ ಅಧಿವೇಶನ ಕಾರ್ಪೊರೇಟ್‌ಗಳು ಮತ್ತು ದೊಡ್ಡ ಬಂಡವಳಿಗರ ಪ್ರಯೋಜನಕ್ಕಾಗಿ ರೈತರು ಮತ್ತು ಕಾರ್ಮಿಕರ ಮೇಲೆ ಒಂದು ನಗ್ನ ದಾಳಿಯನ್ನು ಕಂಡಿದೆ. ದೇಶದಲ್ಲಿ ಎಲ್ಲ ಪ್ರಜಾಸತ್ತಾತ್ಮಕ ಅವಕಾಶಗಳನ್ನು ಮುಚ್ಚಿ ಬಿಡಲಾಗುತ್ತಿದೆ. ಪ್ರಜಾಪ್ರಭುತ್ವ ಸಾಯುವುದು ಹೀಗೆಯೇ. ಆದರೆ ಪ್ರಜಾಪ್ರಭುತ್ವದ ಈ ಸಾವನ್ನು ಪ್ರತಿರೋಧಿಸಲು, ನಿಲ್ಲಿಸಲು ಸಾಧ್ಯವಿದೆ. ಇದಕ್ಕೆ ಜನತೆಯನ್ನು, ಮುಖ್ಯವಾಗಿ ದುಡಿಯುವ ಜನಗಳನ್ನು ಅವರು ಕಷ್ಟಪಟ್ಟು ಗಳಿಸಿಕೊಂಡಿರುವ ಹಕ್ಕುಗಳ ರಕ್ಷಣೆಗಾಗಿ ಅಣಿನೆರೆಸಬೇಕು. ಜನಗಳು ಈ ಕ್ರಮಗಳ ವಿರುದ್ಧ ಎದ್ದು ಚಲಿಸಲಾರಂಭಿಸಿದಾಗ, ತಮ್ಮ ಹಕ್ಕುಗಳ ರಕ್ಷಣೆಗೆ ಒಟ್ಟುಗೂಡ ತೊಡಗಿದಾಗ, ಅದು ಎಲ್ಲ ಪ್ರಜಾಪ್ರಭುತ್ವ ಶಕ್ತಿಗಳ ಒಂದು ಸಂಯೋಜಿತ ಮತ್ತು ಐಕ್ಯ ಆಂದೋಲನಕ್ಕೆ ದಾರಿ ತೆರೆಯುತ್ತದೆ.

Prakash_karat
ಪ್ರಕಾಶ ಕಾರಟ್

ಸಂಸತ್ತಿನ ಮೊಟಕುಗೊಂಡ ಮಳೆಗಾಲದ ಅಧಿವೇಶನ, ಪ್ರತಿಯೊಂದು ಅರ್ಥದಲ್ಲೂ, ಇದುವರೆಗೆ ನಡೆದ ಸಂಸತ್ತಿನ ಅತ್ಯಂತ ಕೆಟ್ಟ ಅಧಿವೇಶನ. ಬಹುಶಃ ೧೯೭೬ರಲ್ಲಿ ತುರ್ತು ಪರಿಸ್ಥಿತಿ ಅವಧಿಯಲ್ಲಿ ನಡೆದ ಅಧಿವೇಶನವನ್ನು ಬಿಟ್ಟು- ೪೨ನೇ ಸಂವಿಧಾನ ತಿದ್ದುಪಡಿಯನ್ನು ಅಂಗೀಕರಿಸಿದ ಅಧಿವೇಶನ ಅದು. ಒಂದು ಸರ್ವಾಧಿಕಾರಶಾಹಿ ಆಡಳಿತಕ್ಕೆ ಅನುಕೂಲ ಕಲ್ಪಿಸಿಕೊಟ್ಟಿರುವ ತಿದ್ದುಪಡಿ ಅದು.

ಕೃಷಿಗೆ ಸಂಬಂಧಪಟ್ಟ ಎರಡು ಮಸೂದೆಗಳನ್ನು ಪರಿಶೀಲಿಸುವಾಗ ರಾಜ್ಯಸಭೆಯಲ್ಲಿ ನಡೆದಿರುವಂತದ್ದು ಸಂಸದೀಯ ಪ್ರಜಾಪ್ರಭುತ್ವದ ಅಪಹಾಸ್ಯ. ಕಡಿತಗೊಂಡ ಚರ್ಚೆಯ ನಂತರ ಉಪಸಭಾಪತಿಗಳು ಎಲ್ಲ ಸಂಸದೀಯ ವಿಧಾನಗಳನ್ನು ಮತ್ತು ನಿಯಮಗಳನ್ನು ಉಲ್ಲಂಘಿಸಿ ಈ ಎರಡು ಮಸೂದೆಗಳನ್ನು ಬಲವಂತದಿಂದ ಪಾಸು ಮಾಡಿಸಿದರು.

ಸುಗ್ರೀವಾಜ್ಞೆಗಳಿಗೆ ಮಂಜೂರಾತಿ ನೀಡಬಾರದು ಎಂಬ ಶಾಸನಾತ್ಮಕ ಠರಾವುಗಳನ್ನು ಮತಕ್ಕೆ ಹಾಕಬೇಕು ಎಂಬ ಆಗ್ರಹವನ್ನು ಉಪೇಕ್ಷಿಸಲಾಯಿತು. ಈ ಮಸೂದೆಗಳನ್ನು ಆಯ್ಕೆ ಸಮಿತಿಗೆ ವಹಿಸಿ ಕೊಡಬೇಕು ಎಂಬ ನಿರ್ಣಯಗಳನ್ನು ಮಂಡಿಸಲು ಮತ್ತು ಮತಕ್ಕೆ ಹಾಕಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಪ್ರತಿಪಕ್ಷಗಳ ಸದಸ್ಯರು ಮಂಡಿಸಿದ್ದ ವಿವಿಧ ತಿದ್ದುಪಡಿಗಳನ್ನು ಮತಕ್ಕೆ ಹಾಕಬೇಕು ಎಂಬ ಬೇಡಿಕೆಯನ್ನೂ ತಿರಸ್ಕರಿಸಲಾಯಿತು ಮತ್ತು ಮಸೂದೆಗಳನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಈ ಶಾಸನಗಳನ್ನು ಪಾಸು ಮಾಡಿಸಿಕೊಳ್ಳಲು ತನಗೆ ಬಹುಮತ ಇಲ್ಲ ಎಂಬುದು ಸರಕಾರದ ಅರಿವಿಗೆ ಬಂದುದರಿಂದಲೇ ಅದು ಇಂತಹ ಸ್ವೇಚ್ಛಾಚಾರಕ್ಕೆ ಇಳಿಯಿತು; ಒಬ್ಬರೇ ಒಬ್ಬ ಸದಸ್ಯರೂ ಮತಕ್ಕೆ ಹಾಕಬೇಕು ಎಂದು ಅಗ್ರಹಿಸಿದರೆ ಹಾಗೆ ಮಾಡಲೇಬೇಕು ಎಂಬ ಒಂದು ಮೂಲಭೂತ ನಿಯಮವನ್ನು ಉಲ್ಲಂಘಿಸಿತು.

PARLIAMENT LOCK DOWN
ವ್ಯಂಗ್ಯಚಿತ್ರ ಕೃಪೆ: ಸುರೇಂದ್ರನ್, ದಿ ಹಿಂದು

ವಿಧಿ-ವಿಧಾನಗಳು ಮತ್ತು ನಿಯಮಗಳನ್ನು ಈ ರೀತಿ ಕಣ್ಣಿಗೆ ರಾಚುವಂತೆ ಉಲ್ಲಂಘಿಸಿರುವುದನ್ನು ಸಹಜವಾಗಿಯೇ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟಿಸಿದ್ದಾರೆ. ಇದಕ್ಕೆ ಸರಕಾರದ ಪ್ರತಿಕ್ರಿಯೆಯೆಂದರೆ ಎಂಟು ಸದಸ್ಯರನ್ನು ಒಂದು ವಾರದ ಕಾಲ ಸದನದಿಂದ ಅಮಾನತುಗೊಳಿಸಿದ್ದು. ಅಮಾನತುಗೊಂಡ ಹೆಚ್ಚಿನ ಸದಸ್ಯರು ಮತಕ್ಕೆ ಹಾಕಬೇಕು ಎಂದು ಕೇಳುವ ತಮ್ಮ ಹಕ್ಕನ್ನು ಒತ್ತಾಸಿದ ಸಿಪಿಐ(ಎಂ)ನ ಎಳಮಾರಂ ಕರೀಮ್ ಮತ್ತು ಕೆ.ಕೆ.ರಾಗೇಶ್ ರಂತವರು.

ಇಂತಹ ಸಂಸತ್ ಸದಸ್ಯರ ಬಾಯಿ ಮುಚ್ಚಿಸುವ ಪ್ರಯತ್ನದಿಂದಾಗಿ ಸಂಸತ್ತಿನ ಆವರಣದೊಳಗೇ, ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಅಮಾನತುಗೊಂಡ ಎಂಟು ಸದಸ್ಯರು ಹಗಲು-ರಾತ್ರಿ ಧರಣಿ ನಡೆಸುವ ಅಭೂತಪೂರ್ವ ಘಟನೆ ಸಂಭವಿಸುವಂತಾಯಿತು. ಪ್ರತಿಪಕ್ಷಗಳು ಅಧಿವೇಶನದ ಉಳಿದ ಅವಧಿಯನ್ನು ಬಹಿಷ್ಕರಿಸಿದವು. ಅದು ಸಪ್ಟಂಬರ್ ೨೩ರಂದು ಮುಗಿದಿದೆ.

ಸಂಸತ್ತನ್ನು ಕುರಿತಂತೆ ಸರ್ವಾಧಿಕಾರಶಾಹಿ ವರ್ತನೆ ಈ ಮೊದಲು ಈ ಅಧಿವೇಶನದಲ್ಲಿ ಪ್ರಶ್ನೋತ್ತರ ಕಾಲವನ್ನು ರದ್ದು ಮಾಡಿದಾಗಲೇ ಕಂಡುಬಂದಿತ್ತು. ಸಾಂಕ್ರಾಮಿಕದಿಂದಾಗಿ ಕುಳಿತುಕೊಳ್ಳುವಲ್ಲಿ ದೈಹಿಕ ಅಂತರ ಮತ್ತು ಮುಖಗವಸು ಧರಿಸುವುದರಿಂದ ಸಂಬಂಧಪಟ್ಟ ಮಂತ್ರಿಗಳಿಗೆ ಪ್ರಶ್ನೆ ಹಾಕಲು ಸದಸ್ಯರಿಗೆ ಏನು ತೊಂದರೆಯಾಗುತ್ತದೆ ಎಂದು ವಿವರಿಸುವುದು ಸರಕಾರಕ್ಕೆ ಆಗಲಿಲ್ಲ. ಪ್ರಶ್ನೆ ಹಾಕಿ ಸರಕಾರವನ್ನು ಜವಾಬುದಾರನಾಗಿಸುವ ಸದಸ್ಯರ ಪ್ರಾಥಮಿಕ ಹಕ್ಕನ್ನೂ ನಿರಾಕರಿಸಲಾಯಿತು. ಲಿಖಿತ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿಯೂ ಸಂಸತ್ತನ್ನು ಬದಿಗೆ ತಳ್ಳುವ ನಿಲುವು ಕಾಣಿಸಿದೆ. ಕೋವಿಡ್ ಸಮಯದಲ್ಲಿ ತಮ್ಮ ಊರುಗಳಿಗೆ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕರಲ್ಲಿ ಸಾವುಗಳ ದತ್ತಾಂಶ ತನ್ನ ಬಳಿ ಇಲ್ಲ ಎಂದು ಸರಕಾರ ಸಾರಿತು. ಅಸ್ಸಾಂನಲ್ಲಿ ನಿರ್ಬಂಧ ಕೇಂದ್ರಗಳಲ್ಲಿ ಎಷ್ಟು ವ್ಯಕ್ತಿಗಳಿದ್ದಾರೆ ಎಂಬ ದತ್ತಾಂಶವೂ ಇಲ್ಲ ಎಂದಿತು. ಕಳೆದ ವರ್ಷ ಚಳಿಗಾಲದ ಅಧಿವೇಶನದಲ್ಲಿ ಅದು ಈ ಅಂಕಿ-ಅಂಶವನ್ನು ಕೊಟ್ಟಿತ್ತು.

ಸಂಸದೀಯ ನಡವಳಿಕೆಯನ್ನು ಮೊಟಕುಗೊಳಿಸುವಲ್ಲಿನ ಇನ್ನೊಂದು ಅಂಶವೆಂದರೆ, ಒಂದು ಅಧಿವೇಶನದಲ್ಲಿ ಮಂಡಿಸಿದ ಮಸೂದೆಗಳ ಮೇಲೆ ಆಳವಾದ ಚರ್ಚೆ ಮತ್ತು ಪರೀಕ್ಷಣೆ ಅಗತ್ಯವಿದ್ದಲ್ಲಿ ಅವನ್ನು ಸ್ಥಾಯಿ ಸಮಿತಿಗೆ ಕಳಿಸುವುದು ಅಥವಾ ಒಂದು ಆಯ್ಕೆ ಸಮಿತಿಗೆ ವಹಿಸಿಕೊಡುವುದು ಶಾಸನಗಳನ್ನು ಕುರಿತಾದ ಸಾಮಾನ್ಯ ವಿಧಾನ.

ಕಳೆದ ಆರು ತಿಂಗಳಲ್ಲಿ ಸರಕಾರ ಹೊರಡಿಸಿದ ೧೧ ಸುಗ್ರೀವಾಜ್ಞೆಗಳನ್ನು ಮಸೂದೆಗಳಾಗಿ ಮಂಡಿಸಿ ಈ ಅಧಿವೇಶನದಲ್ಲಿ ಪಾಸು ಮಾಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಒಂದನ್ನು ಬಿಟ್ಟು ಉಳಿದ ಯಾವ ಮಸೂದೆಗಳೂ ಕೋವಿಡ್ ಪಿಡುಗಿನಿಂದಾಗಿ ಉಂಟಾದ ವಿಶೇಷ ಪರಿಸ್ಥಿತಿಗೆ ಸಂಬಂಧಪಟ್ಟ ತುರ್ತಿನ ವಿಷಯಗಳೇನಲ್ಲ. ಸರಕಾರಕ್ಕೆ ಸಂಸತ್ತನ್ನು ಬದಿಗೊತ್ತಲು ಸುಗ್ರೀವಾಜ್ಞೆಗಳ ಮಾರ್ಗ ಅನುಕೂಲಕರವಾಗಿ ಕಂಡಿದೆ. ಸುಗ್ರೀವಾಜ್ಞೆಯನ್ನು ಹೊರಡಿಸಿದ ಆರು ತಿಂಗಳ ಒಳಗೆ ಇಂತಹ ಮಸೂದೆಯನ್ನು ಅಂಗೀಕರಿಸಬೇಕಾಗುತ್ತದೆ ಎಂಬ ಕಾರಣ ಕೊಟ್ಟು ಸ್ಥಾಯಿ ಸಮಿತಿಗೆ ಕಳಿಸಿಲ್ಲ.

three bills
ತ್ರಿಶೂಲ ಮಸೂದೆಗಳ ವಿರುದ್ಧ ರೈತರ ಆಕ್ರೋಶ

ಸಂಸತ್ತಿನ ಬಾಯಿ ಮುಚ್ಚಿಸುವುದು  ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಒಟ್ಟು ಪ್ರಹಾರಗಳ ಭಾಗವಾಗಿದೆ. ನಾಗರಿಕರ ಹಕ್ಕುಗಳ ಮೇಲೆ ವ್ಯಾಪಕ ಹಲ್ಲೆಗಳು ನಡೆಯುತ್ತಿವೆ; ಯುಎಪಿಎ ಮತ್ತು ಎನ್‌ಎಸ್‌ಎ ಯಂತಹ ಕರಾಳ ಕಾಯ್ದೆಗಳ ಬಳಕೆ; ರಾಜದ್ರೋಹದ ಕಲಮನ್ನು ಎತ್ತಿ ಭಿನ್ನಮತವನ್ನು ದಮನ ಮಾಡುವುದು; ಅಲ್ಪಸಂಖ್ಯಾತರು, ಬುದ್ಧಿಜೀವಿಗಳು ಮತ್ತು ಸಕ್ರಿಯ ಕಾರ್ಯಕರ್ತರನ್ನು ‘ರಾಷ್ಟ್ರ-ವಿರೋಧಿಗಳು’ ಎಂದು ಗುರಿ ಮಾಡುವುದು; ಮತ್ತು ಮಾಧ್ಯಮಗಳನ್ನು ಹೆದರಿಸುವುದು. ಈಗ ಅಂಗೀಕರಿಸಿರುವ ಹೊಸ ಕಾರ್ಮಿಕ ಕಾನೂನುಗಳು ಕಾರ್ಮಿಕ ವರ್ಗಕ್ಕೆ ಅದರ ಮೂಲಭೂತ ಹಕ್ಕುಗಳೇ ಇಲ್ಲದಂತೆ ಮಾಡುತ್ತವೆ, ಕೆಲಸದ ಭದ್ರತೆ ಇಲ್ಲವಾಗುತ್ತದೆ ಮತ್ತು ಮುಷ್ಕರಗಳ ಮೇಲೆ ನಿರ್ಬಂಧಗಳು ಬರುತ್ತವೆ. ದೇಶದಲ್ಲಿ ಎಲ್ಲ ಪ್ರಜಾಸತ್ತಾತ್ಮಕ ಅವಕಾಶಗಳನ್ನು ಮುಚ್ಚಿ ಬಿಡಲಾಗುತ್ತಿದೆ. ಪ್ರಜಾಪ್ರಭುತ್ವ ಸಾಯುವುದು ಹೀಗೆಯೇ.

ಆದರೆ ಪ್ರಜಾಪ್ರಭುತ್ವದ ಈ ಸಾವನ್ನು ಪ್ರತಿರೋಧಿಸಲು, ನಿಲ್ಲಿಸಲು ಸಾಧ್ಯವಿದೆ. ಇದಕ್ಕೆ ಜನತೆಯನ್ನು, ಮುಖ್ಯವಾಗಿ ದುಡಿಯುವ ಜನಗಳನ್ನು ಅವರು ಕಷ್ಟಪಟ್ಟು ಗಳಿಸಿಕೊಂಡಿರುವ ಹಕ್ಕುಗಳ ರಕ್ಷಣೆಗಾಗಿ ಅಣಿನೆರೆಸಬೇಕು. ಸಂಸತ್ತಿನಲ್ಲಿ ಕೃಷಿ-ಸಂಬಂಧಿತ ಕಾಯ್ದೆಗಳಿಗೆ ವಿರೋಧ ಪಂಜಾಬ್ ಮತ್ತು ಹರ್ಯಾಣದಲ್ಲಿ ರೈತರ ಸಾಮೂಹಿಕ ಪ್ರತಿಭಟನೆಗಳಿಂದಾಗಿ ಹುರುಪು ತುಂಬಿಕೊಂಡಿತು. ಬಿಜೆಪಿಯ ಒಂದು ದೀರ್ಘಕಾಲದ ಮಿತ್ರಪಕ್ಷವಾದ ಅಕಾಲಿ ದಳ ಕೂಡ ಈ ಪ್ರಶ್ನೆಯ ಮೇಲೆ ಸಂಪುಟವನ್ನು ತ್ಯಜಿಸಿತು. ಮೋದಿ ಸರಕಾರವನ್ನು ಹಲವು ಪ್ರಶ್ನೆಗಳಲ್ಲಿ ವಿರೋಧಿಸದೇ ಇರುವ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಕೂಡ ಬಹಿರಂಗವಾಗಿ ವಿರೋಧಿಸಿತು; ಬಿಜು ಜನತಾ ದಳ ಕೂಡ ಈ ಮಸೂದೆಗಳನ್ನು ಬೆಂಬಲಿಸಲಿಲ್ಲ, ಅವನ್ನು ಆಯ್ಕೆ ಸಮಿತಿಗೆ ಕಳಿಸಬೇಕು ಎಂದು ಬಯಸಿತು.

Joint CTU (1)
ತ್ರಿವಳಿ ಸಂಹಿತೆಗಳ ವಿರುದ್ಧ ಕಾರ್ಮಿಕರ ಆಕ್ರೋಶ

ಪ್ರತಿಪಕ್ಷಗಳ ಸದಸ್ಯರ ಗೈರುಹಾಜರಿಯಲ್ಲಿ ಸಂಸತ್ತಿನಲ್ಲಿ ಹೇಗೋ ಪಾಸು ಮಾಡಿಸಿಕೊಂಡಿರುವ ಕಾರ್ಮಿಕ-ವಿರೋಧಿ ಕಾಯ್ದೆಗಳೂ ದೃಢ ವಿರೋಧ ಮತ್ತು ಒಂದು ಐಕ್ಯ ಕಾರ್ಮಿಕ ವರ್ಗದ ಆಂದೋಲನವನ್ನು ಎದುರಿಸಬೇಕಾಗುತ್ತದೆ. ಈ ಸಂಸತ್ ಅಧಿವೇಶನ ಕಾರ್ಪೊರೇಟ್‌ಗಳು ಮತ್ತು ದೊಡ್ಡ ಬಂಡವಳಿಗರ ಪ್ರಯೋಜನಕ್ಕಾಗಿ ರೈತರು ಮತ್ತು ಕಾರ್ಮಿಕರ ಮೇಲೆ ಒಂದು ನಗ್ನ ದಾಳಿಯನ್ನು ಕಂಡಿದೆ. ಜನಗಳು ಈ ಕ್ರಮಗಳ ವಿರುದ್ಧ ಎದ್ದು ಚಲಿಸಲಾರಂಭಿಸಿದಾಗ, ತಮ್ಮ ಹಕ್ಕುಗಳ ರಕ್ಷಣೆಗೆ ಒಟ್ಟುಗೂಡ ತೊಡಗಿದಾಗ, ಅದು ಎಲ್ಲ ಪ್ರಜಾಪ್ರಭುತ್ವ ಶಕ್ತಿಗಳ ಒಂದು ಸಂಯೋಜಿತ ಮತ್ತು ಐಕ್ಯ ಆಂದೋಲನಕ್ಕೆ ದಾರಿ ತೆರೆಯುತ್ತದೆ. ಪ್ರಜಾಪ್ರಭುತ್ವದ ಕತ್ತು ಹಿಸುಕುವುದನ್ನು ವಿಫಲಗೊಳಿಸಬಹುದಾದ ಪರಿ ಇದು.

Leave a Reply

Your email address will not be published. Required fields are marked *