ರೈತ ವಿರೋಧಿ ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆ, ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆ, ಕಾರ್ಮಿಕ ವಿರೋಧಿ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಸುಗ್ರೀವಾಜ್ಞೆಗಳ ವಿಧೇಯಕಗಳು ಕರ್ನಾಟಕ ರಾಜ್ಯದ ಶಾಸನ ಸಭೆಯಲ್ಲಿ ಅಂಗೀಕಾರ ಪಡೆಯದೆ ಇರುವುದರಿಂದ ಮರು ಸುಗ್ರೀವಾಜ್ಞೆ ಹೊರಡಿಸುವುದು ಸಂವಿಧಾನ ವಿರೋಧಿ ಎಂದು ರಾಜ್ಯಪಾಲರಿಗೆ ಎಡಪಕ್ಷಗಳು ಒತ್ತಾಯಿಸಿದ ಮನವಿ ಪತ್ರದ ಪೂರ್ಣ ವಿವರ ಈ ಕೆಳಗಿನಂತಿವೆ:
ದಿನಾಂಕ: 15.10.2020
ಇವರಿಗೆ,
ಸನ್ಮಾನ್ಯ ಶ್ರೀ ರಾಜ್ಯಪಾಲರು
ಕರ್ನಾಟಕ ಸರಕಾರ, ರಾಜಭವನ, ಬೆಂಗಳೂರು.
ಮಾನ್ಯರೇ,
ವಿಷಯ: ಶಾಸನ ಸಭೆ ಅಂಗೀಕಾರ ಪಡೆಯದ ವಿಧೇಯಕಗಳ ಮರು ಸುಗ್ರೀವಾಜ್ಞೆ ಹೊರಡಿಸುವುದು ಸಂವಿಧಾನ ವಿರೋಧಿ – ಎಡಪಕ್ಷಗಳ ಒತ್ತಾಯ
ರೈತ ವಿರೋಧಿ ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆ, ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆ, ಕಾರ್ಮಿಕ ವಿರೋಧಿ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಸುಗ್ರೀವಾಜ್ಞೆ ಗಳ ವಿಧೇಯಕಗಳು ಕಳೆದ ವಿಧಾನ ಮಂಡಲದ ಅಧಿವೇಶನದಲ್ಲಿ ಶಾಸನ ಸಭೆಯ ಅನುಮೋದನೆ ಪಡೆಯಲು ವಿಫಲವಾಗಿವೆ. ಮಾತ್ರವಲ್ಲಾ, ರಾಜ್ಯದಾದ್ಯಂತ ರೈತರು, ಕೂಲಿಕಾರರು, ಕಾರ್ಮಿಕರು, ಪ್ರಗತಿಪರ ನಾಗರೀಕರು, ವಿರೋದ ಪಕ್ಷಗಳು ತೀವ್ರವಾಗಿ ಬೀದಿಗಿಳಿದು ಪ್ರತಿರೋಧಿಸಿವೆ. ಅಲ್ಲೂ ಜನಗಳ ವಿಶ್ವಾಸ ಗಳಿಸುವಲ್ಲಿ ಅವು ತೀವ್ರವಾಗಿ ಸೋತಿವೆ.
ಈ ಹಿನ್ನೆಲೆಯಲ್ಲಿ ಮತ್ತೆ ಸದರಿ ವಿಧೇಯಕಗಳನ್ನು ಪುನಃ ಹಿಂಬಾಗಿಲಿನಿಂದ ಮರಳಿ ಸುಗ್ರೀವಾಜ್ಞೆಗಳಾಗಿ ಜಾರಿಗೆ ತರಲು ಮಂತ್ರಿಮಂಡಲ ಕ್ರಮವಹಿಸಿರುವುದು ತೀವ್ರ ಖಂಡನೀಯವಾಗಿದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯದ ಸಂವಿಧಾನ ಪೀಠವು ೨೦೧೭ರಲ್ಲಿ `ಕೃಷ್ಣಕುಮಾರ್ ಸಿಂಗ್ ಮತ್ತು ಬಿಹಾರ ಸರ್ಕಾರ’ ಪ್ರಕರಣದಲ್ಲಿ ಶಾಸನ ಸಭೆಯ ಅನುಮೋದನೆ ಪಡೆಯದ ಸುಗ್ರೀವಾಜ್ಞೆಗಳನ್ನು ಪುನರ್ ಸುಗ್ರೀವಾಜ್ಞೆಯಾಗಿ ಹೊರಡಿಸುವುದು `ಸಂವಿಧಾನಕ್ಕೆ ಎಸಗುವ ವಂಚನೆಯಾಗಿದೆ’ ಎಂದಿದೆ.
ಆದಾಗಲೂ, ರಾಜ್ಯ ಸರಕಾರ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ವಿರುದ್ದವಾಗಿ ಕ್ರಮವಹಿಸಲು ಮುಂದಾಗಿದೆ.
ಆದ್ದರಿಂದ, ಯಾವುದೇ ಕಾರಣಕ್ಕೂ ರಾಜ್ಯ ಸಚಿವ ಸಂಪುಟದ ೧.೧೦.೨೦೨೦ ರ ಶಿಫಾರಸ್ಸಿನಂತೆ ರೈತ ವಿರೋಧಿ, ಕಾರ್ಮಿಕ ವಿರೋಧಿ ತ್ರಿವಳಿ ಸುಗ್ರೀವಾಜ್ಞೆಗಳನ್ನು ಸಂವಿಧಾನ ವಿರೋಧಿಯಾಗಿ, ಮರಳಿ ಹೊರಡಿಸಬಾರದೆಂದು ಮತ್ತು ಅವುಗಳನ್ನು ತಡೆ ಹಿಡಿಯಬೇಕೆಂದು ನಾವು ಆಗ್ರಹಿಸುತ್ತೇವೆ.
ವಂದನೆಗಳೊಂದಿಗೆ,
ಯು. ಬಸವರಾಜ, ಕಾರ್ಯದರ್ಶಿ
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)
ಸಾತಿ ಸುಂದರೇಶ್, ಕಾರ್ಯದರ್ಶಿ
ಭಾರತ ಕಮ್ಯೂನಿಸ್ಟ್ ಪಕ್ಷ
ಶಿವಶಂಕರ್ ಜಿ.ಆರ್., ಕಾರ್ಯದರ್ಶಿ
ಆಲ್ ಇಂಡಿಯಾ ಫಾರ್ವಡ್ ಬ್ಲಾಕ್
ಕ್ಲಿಪ್ಟನ್, ಕಾರ್ಯದರ್ಶಿ
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ-ಲೆನಿನ್‌ವಾದಿ)ಲೆಬರೇಷನ್