ನಿರ್ಭೀತ ಮತ್ತು ಸಮರಧೀರ ಮುಖಂಡರನ್ನು ಕಳಕೊಂಡಿದ್ದೇವೆ-ಎಐಕೆಎಸ್

ಅಖಿಲ ಭಾರತ ಕಿಸಾನ್‍ ಸಭಾ ಒಬ್ಬ ನಿರ್ಭೀತ ಮತ್ತು ರೈತಾಪಿ ಜನಗಳ ಹಕ್ಕುಗಳಿಗಾಗಿ ದೃಢಹೋರಾಟ ನಡೆಸುತ್ತಿದ್ದ ಮುಖಂಡರನ್ನು ಕಳಕೊಂಡಿದೆ ಎಂದು ಎಂದು ಮಾರುತಿ ಮಾನ್ಪಡೆಯವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಹೇಳಿದೆ. ಮಾನ್ಪಡೆಯವರು ಅಖಿಲ ಭಾರತ ಕಿಸಾನ್ ಮಂಡಳಿಯ ಸದಸ್ಯರಾಗಿದ್ದರು. ಇದಕ್ಕೆ ಮೊದಲು ದೀರ್ಘಕಾಲ ಕೇಂದ್ರೀಯ ಕಿಸಾನ್‍ ಮಂಡಳಿಯ ಸದಸ್ಯರೂ ಆಗಿದ್ದರು. ಅವರೊಬ್ಬ ಸಮರಧೀರ ಮುಖಂಡ ಎಂದು ಎಐಕೆಎಸ್‍ ನೆನಪಿಸಿಕೊಂಡಿದೆ.

ಅವರು ಜನಗಳ ಪ್ರಶ್ನೆಗಳನ್ನು ಗುರುತಿಸುವ  ಒಂದು ವಿಶೇಷ ಕೌಶಲ ಹೊಂದಿದ್ದರು, ಅದರಿಂದ ಜನಗಳೊಡನೆ ಸಂಪರ್ಕ ಸಾಧಿಸುತ್ತಿದ್ದರು ಮತ್ತು ಹೋರಾಟಗಳನ್ನು ಕಟ್ಟಿ ಬೆಳೆಸುತ್ತಿದ್ದರು. ಹೋರಾಟಗಳಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಿದ್ದರು. ಬಗರ್‍ ಹುಕುಂ ಸಾಗುವಳಿದಾರರು ಮತ್ತು ಬಡವರಿಗೆ ನಿವೇಶನಕ್ಕಾಗಿ ಪಾದಯಾತ್ರೆಗಳಲ್ಲಿ ಅವರ ಹಾಜರಿ ಖಂಡಿತಾ ಸದಾ ಇರುತ್ತಿತ್ತು.

ಅವರು ಬೆಳೆ ಆಧಾರಿತ ಸಾಗುವಳಿದಾರರ ಸಂಘಟನೆಗಳನ್ನು ಕಟ್ಟುವುದರ ಮೇಲೆ ಒತ್ತು ನೀಡುತ್ತಿದ್ದರು. ತೊಗರಿ ಮತ್ತು ಕಬ್ಬು ಬೆಳೆಗಾರರನ್ನು ಸಂಘಟಿಸಿದ್ದರು ಎಂದು ಎಐಕೆಎಸ್‍ ನೆನಪಿಸಿಕೊಂಡಿದೆ.

ದಲಿತ ಕೃಷಿ ಕೂಲಿಕಾರ ಕುಟುಂಬದಿಂದ ಬಂದಿದ್ದ ಇವರು ಒಬ್ಬ ಆಜೀವನ ಹೋರಾಟಗಾರರು, ಸಾಮಾಜಿಕ ದಮನದ ವಿರುದ್ಧ, ಕೋಮುವಾದಿ ಶಕ್ತಿಗಳ ವಿರುದ್ಧ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯಲ್ಲಿಯೂ ಮುಂದಿರುತ್ತಿದ್ದರು. ಅವರ ನಿಧನ ಕಾರ್ಮಿಕರು ಮತ್ತು ರೈತರ ಆಂದೋಲನಕ್ಕೆ ಬಹು ದೊಡ್ಡ ನಷ್ಟ ಎಂದು ಎಐಕೆಎಸ್ ಕೆಂಪುನಮನ ಸಲ್ಲಿಸುತ್ತ ಹೇಳಿದೆ.

ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಜನನಾಯಕ- ಸಿಐಟಿಯು

ಕರ್ನಾಟಕದ ರೈತ ಆಂದೋಲನದ ಮತ್ತು ಕಾರ್ಮಿಕ  ಆಂದೋಲನದ ಮುಖಂಡ ಮಾರುತಿ ಮಾನ್ಪಡೆಯವರ ನಿಧನ ಆಘಾತ ಮತ್ತು ಶೋಕ ತಂದಿದೆ ಎಂದು ಸಿಐಟಿಯು ಪರವಾಗಿ ಹೇಳಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ತಪನ್‍ ಸೆನ್‍ ಹೇಳಿದ್ದಾರೆ.

ಅವರೊಬ್ಬ ಜನನಾಯಕರಾಗಿದ್ದರು, ಭೂಮಿ ಹೋರಾಟಗಳು, ಕಬ್ಬು ಮತ್ತು ಇತರ ರೈತರ ಬೇಡಿಕೆಗಳ ಮೇಲೆ ಹಲವಾರು  ಹೋರಾಟಗಳ ಮುಂಚೂಣಿಯಲ್ಲಿದ್ದವರು. ಕರ್ನಾಟಕದಲ್ಲಿ ರೈತರ ಸಂಘಟನೆಯಲ್ಲದೆ ಪಂಚಾಯತು ನೌಕರರು, ಮನರೇಗ ಕಾರ್ಮಿಕರನ್ನು ಸಂಘಟಿಸಲು ನೆರವಾದರು, ಅಂಗನವಾಡಿ ನೌಕರರನ್ನು ಸಂಘಟಿಸುವಲ್ಲಿಯೂ ಆರಂಭಿಕ ಹಂತಗಳಲ್ಲಿ ನೆರವಾದರು. ಪ್ರಸಕ್ತ ಕೃಷಿ ಮಸೂದೆಗಳು ಮತ್ತು ಕಾರ್ಮಿಕ ಸಂಹಿತೆಗಳ ವಿರುದ್ಧ ಹೋರಾಟಗಳಲ್ಲಿ ಸಕ್ರಿಯರಾಗಿದ್ದುದನ್ನು ನೆನಪಿಸಿಕೊಳ್ಳುತ್ತ ಸಿಐಟಿಯು ಅವರಿಗೆ ಗೌರವಾರ್ಪಣೆ ಮಾಡಿದೆ.

Leave a Reply

Your email address will not be published. Required fields are marked *