ಕಳೆದ ಒಂದೆರಡು ವಾರಗಳಿಂದ ರಾಜ್ಯದಾದ್ಯಂತ ಸುರಿದ ಭಾರೀ ಮಳೆ ಹಾಗೂ ಪ್ರವಾಹಗಳಿಂದ ರಾಜ್ಯದಾದ್ಯಂತ ಅಪಾರ ಹಾನಿಯಾಗಿದೆ. ಮನೆಗಳು ಬಿದ್ದು ಹೋಗಿವೆ. ಬೆಳೆಗಳು ಹಾಳಾಗಿವೆ. ಕೈಗೆ ಬಂದ ಬೆಳೆಗಳು ಮನೆಗೆ ತರಲಾಗದೇ ಕಣದಲ್ಲಿಯೇ ಮೊಳೆತು ಹೋಗಿವೆ. ಪ್ರವಾಹದಿಂದಾಗಿ ಜಮೀನುಗಳು ಹಲವೆಡೆ ಕೊಚ್ಚಿ ಹೋಗಿವೆ. ಪಂಪ್ ಸೆಟ್ ಗಳು ಹಾನಿಗೀಡಾಗಿವೆ.
ಜನತೆ ತೀವ್ರತೆರನಾದ ಕೋವಿಡ್ ಸಂಕಷ್ಠ ದಲ್ಲಿರುವಾಗಲೇ ಈ ಅತೀವೃಷ್ಠಿ ಯು ಮೇಲಿಂದ ಮೇಲೆ ದಾಳಿಯನ್ನು ನಡೆಸಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಳೆದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲೂ ಗಂಭೀರ ಖಾಳಜಿ ವಹಿಸದೇ ನಿರ್ಲಕ್ಷ್ಯ ತೋರಿದ್ದು ತೀವ್ರ ಖಂಡನೀಯವಾಗಿದೆ.
ಈಗಲಾದರೂ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನತೆಯ ಜೊತೆ ನಿಲ್ಲುವಂತೆ ಸಿಪಿಐಎಂ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.
ಗಣತಿ ಕಾರ್ಯವನ್ನು ವೇಗಗೊಳಿಸಿ ಅಗತ್ಯ ನೆರವನ್ನು ನಿಜ ಪರಿಹಾರದ ರೀತಿಯಲ್ಲಿ ಘೋಷಿಸ ಬೇಕು. ಹಳೆಯ ಕಾಲ ಬಾಧಿತ ಪರಿಹಾರದ ನಿಯಮಗಳನ್ನು ಬದಲಿಸಿ ಸಮಕಾಲೀನಗೊಳಿಸಬೇಕು.
ರಾಜ್ಯದಾದ್ಯಂತ ಮನೆಕಳೆದುಕೊಂಡು ನಿರಾಶ್ರಿತರಾದವರಿಗೆ ಸುಸಜ್ಜಿತ ಮನೆಗಳನ್ನು ಕಟ್ಟಿಕೊಡಲು, ಕೊರಕಲು ಬಿದ್ದ ಜಮೀನುಗಳಿಗೆ, ಹಾನಿಗೀಡಾದ ಪಂಪ್ ಸೆಟ್ ಗಳಿಗೆ, ಬೆಳೆನಷ್ಠಕ್ಕೆ ವಿಮೆ ಸೇರಿದಂತೆ ಎಲ್ಲಾ ರೀತಿಯ ಪರಿಹಾರಗಳನ್ನು ಒದಗಿಸಬೇಕು. ಅದೇ ರೀತಿ, ರಾಜ್ಯದಾದ್ಯಂತ ಎಲ್ಲಾ ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಕುಟುಂಬಗಳಿಗೆ ಮಾಸಿಕ 7,500 ರೂ ಹಾಗು ತಲಾ ವ್ಯಕ್ತಿಗೆ ಮಾಸಿಕ 15 ಕೇಜಿ ಆಹಾರಧಾನ್ಯ ಮತ್ತು ಪಟ್ಟಣ ಪ್ರದೇಶವೂ ಸೇರಿದಂತೆ ಎಲ್ಲೆಡೆ ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಗಳ ಕಾಲ ಕನಿಷ್ಟ ವೇತನವನ್ನು 750 ರೂಗಳಿಗೆ ಹೆಚ್ಚಿಸಿ ಒದಗಿಸಬೇಕು. ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಗುಂಪುಗಳ ಮತ್ತು ಬೆಳೆ ಸಾಲ ಮನ್ನಾ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಸಿಪಿಐಎಂ ಆಗ್ರಹಿಸಿದೆ.
ಯು. ಬಸವರಾಜ
ಕಾರ್ಯದರ್ಶಿ
23.10.2020