ಮಹಿಳಾ ವಿಮೋಚನೆಯ ಹೋರಾಟದ ನೂರು ವರ್ಷಗಳು

ಬೃಂದಾ ಕಾರಟ್

Communist Part 100 copyಸ್ವಾತಂತ್ರ್ಯ ಹೋರಾಟದೊಳಗೆ ಮಹಿಳಾ ಸಮಾನತೆಗಾಗಿ ಹೋರಾಟಕ್ಕಿರುವ ಮೂರು ಕಠಿಣ ಸಮಸ್ಯೆಗಳಿಗೆ ಕಮ್ಯುನಿಷ್ಟರು ಹೊಸ ದೃಷ್ಟಿಕೋನವನ್ನು ತಂದರು. ಮೊದಲನೆಯದು: ಕಾರ್ಮಿಕ ವರ್ಗದ ಸದಸ್ಯರಾಗಿ ಮಹಿಳೆಯರ ಮೇಲಿನ ಶೋಷಣೆ ಮತ್ತು  ಉಳಿಗಮಾನ್ಯ ಪದ್ಧತಿ ಮತ್ತು ಬಂಡವಾಳಶಾಹಿಗಳ ವಿರುದ್ಧದ ಹೋರಾಟ ಮತ್ತು ಮಹಿಳೆಯರ ವಿಮೋಚನೆಗಾಗಿನ ಹೋರಾಟದ ನಡುವಿನ ಆಂತರಿಕ ಸಂಬಂಧ; ಎರಡನೆಯದು: ಮಹಿಳಾ ನಾಗರಿಕತ್ವದ ಸಮಸ್ಯೆಗಳು ಮತ್ತು  ಹೆಚ್ಚು ನಿರ್ದಿಷ್ಟವಾಗಿ ಹೇಳಬೇಕೆಂದರೆ ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿಯೂ ಸಹ ಹೋರಾಟ ಮಾಡುವುದು; ಮೂರನೆಯದು: ಸಂಪ್ರದಾಯ, ಧಾರ್ಮಿಕ ಗ್ರಂಥಗಳು ಮತ್ತು ಚಾಲ್ತಿಯಲ್ಲಿರುವ ಬಂಡವಾಳಶಾಹಿ ಸಂಸ್ಕೃತಿಗಳು ಅನುಮೋದಿಸಿರುವ ಮಹಿಳೆಯರ ಮೇಲಿನ ಹಿಂಸಾಚಾರದ ಪ್ರಶ್ನೆ.

1920ರಲ್ಲಿ ಸ್ಥಾಪನೆಯಾದ ಕಮ್ಯುನಿಸ್ಟ್ ಪಕ್ಷ ಭಾರತದಲ್ಲಿನ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳ ನಿರ್ದಿಷ್ಟ ಸಂದರ್ಭದ ಜೊತೆ ಮಾರ್ಕ್ಸ್ ವಾದಿ ಸಿದ್ಧಾಂತವನ್ನು ಜೊತೆಗೂಡಿಸಿ ಮಹಿಳೆಯರ ವಿಮೋಚನಾ ಹೋರಾಟವನ್ನು ಮುಂದೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದೆ. “ಮಹಿಳೆಯರ ಪ್ರಶ್ನೆ” ಕುರಿತು ಪಕ್ಷದ ತಿಳುವಳಿಕೆ ತನ್ನದೇ ಆದ ನೇರ ಕೆಲಸದ ಮೂಲಕ ವಿಕಸನಗೊಂಡಿದೆ, ಇದು ವಿಶೇಷವಾಗಿ ಮಹಿಳಾ ಕಮ್ಯುನಿಸ್ಟರ ಕೆಲಸ ಅನುಭವದಿಂದ ವಿಕಸನಗೊಂಡಿದೆ. ಇಂದು ಬಿಜೆಪಿ-ಆರೆಸ್ಸೆಸ್ ಪ್ರತಿಗಾಮಿ ಆಡಳಿತದಡಿಯಲ್ಲಿ

ಆರಂಭದ ವರ್ಷಗಳು

ಸ್ವಾತಂತ್ರ್ಯ ಹೋರಾಟದೊಳಗೆ ಮಹಿಳಾ ಸಮಾನತೆಗಾಗಿ ಹೋರಾಟಕ್ಕಿರುವ ಮೂರು ಕಠಿಣ ಸಮಸ್ಯೆಗಳಿಗೆ ಕಮ್ಯುನಿಷ್ಟರು ಹೊಸ ದೃಷ್ಟಿಕೋನವನ್ನು ತಂದರು. ಮೊದಲನೆಯದು: ಕಾರ್ಮಿಕ ವರ್ಗದ ಸದಸ್ಯರಾಗಿ ಮಹಿಳೆಯರ ಮೇಲಿನ ಶೋಷಣೆ ಮತ್ತು  ಉಳಿಗಮಾನ್ಯ ಪದ್ಧತಿ ಮತ್ತು ಬಂಡವಾಳಶಾಹಿಗಳ ವಿರುದ್ಧದ ಹೋರಾಟ ಮತ್ತು ಮಹಿಳೆಯರ ವಿಮೋಚನೆಗಾಗಿನ ಹೋರಾಟದ ನಡುವಿನ ಆಂತರಿಕ ಸಂಬಂಧ; ಎರಡನೆಯದು:  ಮಹಿಳಾ ನಾಗರಿಕತ್ವದ ಸಮಸ್ಯೆಗಳು ಮತ್ತು ಹೆಚ್ಚು ನಿರ್ದಿಷ್ಟವಾಗಿ ಹೇಳಬೇಕೆಂದರೆ ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿಯೂ ಸಹ ಹೋರಾಟ ಮಾಡುವುದು; ಮೂರನೆಯದು: ಸಂಪ್ರದಾಯ, ಧಾರ್ಮಿಕ ಗ್ರಂಥಗಳು ಮತ್ತು ಚಾಲ್ತಿಯಲ್ಲಿರುವ ಬಂಡವಾಳಶಾಹಿ ಸಂಸ್ಕೃತಿಗಳು ಅನುಮೋದಿಸಿರುವ ಮಹಿಳೆಯರ ಮೇಲಿನ ಹಿಂಸಾಚಾರದ ಪ್ರಶ್ನೆ.

1929ರ ಮೀರಟ್ ಪಿತೂರಿ ಪ್ರಕರಣದಲ್ಲಿ ಆರೋಪಿಸಲ್ಪಟ್ಟ 18 ಕಮ್ಯುನಿಸ್ಟರ ರಕ್ಷಣಾ ಹೇಳಿಕೆಯು ಭಾರತೀಯ ಕಮ್ಯುನಿಸ್ಟರನ್ನು  ಪ್ರತಿಬಿಂಬಿಸುವ ಪ್ರಮುಖ ಆರಂಭಿಕ ಹೇಳಿಕೆಯಾಗಿದೆ.  “ಕುಟುಂಬವನ್ನು ಸುತ್ತುವರೆದಿರುವ ಭಾವನಾ ಕವಚವನ್ನು ಸದಾ  ಶೋಷಣೆಯ ಸಾಧನವಾಗಿ ಬಳಸಿಕೊಳ್ಳಲಾಗುತ್ತದೆ.  ಸಮಾಜವಾದಿ ವ್ಯವಸ್ಥೆ ಮಾತ್ರವೇ,  ಈ ಭಾವನಾ ಕವಚದಡಿಯಲ್ಲಿ ನಡೆಯುವ ಮಹಿಳೆಯರ ಮತ್ತು ಮಕ್ಕಳ  ಮೇಲಿನ ಕೌಟುಂಬಿಕ ದೌರ್ಜನ್ಯಗಳನ್ನು ನಿಲ್ಲಿಸುತ್ತದೆ” ಎಂದು ನಾವು ಹೇಳುತ್ತೇವೆ.  ಸಾಂಪ್ರದಾಯಿಕವಾಗಿ ಮಹಿಳೆಯರ ಸ್ಥಾನಮಾನವನ್ನು ಪುರುಷರಿಗಿಂತ ಕೆಳಗೆ ಮತ್ತು ಕೆಲವೊಮ್ಮೆ ಗುಲಾಮರ ಸ್ಥಿತಿಯಲ್ಲಿ ಇಡಲಾಗಿದೆ. ಸೋವಿಯತ್ ಒಕ್ಕೂಟದಲ್ಲಿ ನಡೆಯುತ್ತಿರುವ ಮಹಿಳೆಯರ ವಿಮೋಚನೆಯೇ…. ನಮ್ಮ ಮುಂದಿರುವ ದಾರಿ. ವರ್ಗ ಶೋಷಣೆಯ ವಿರುದ್ಧ ಯುದ್ಧ ಘೋಷಿಸಿರುವಾಗಲೂ ಕಮ್ಯುನಿಸ್ಟರು ಪುರುಷಪ್ರಧಾನ ಕುಟುಂಬದ ರಚನೆಗಳ ಬಗ್ಗೆ ಬಲವಾದ ಟೀಕೆ ಮಾಡುತ್ತಾರೆ.

ವರ್ಗಹೋರಾಟ ಮತ್ತು ಲಿಂಗ-ಆಧಾರಿತ ತಾರತಮ್ಯದ ವಿರುದ್ಧದ ಹೋರಾಟದಲ್ಲಿ ಮಹಿಳೆಯರು ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸುವುದು.

ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ, ಮಹಿಳೆಯರನ್ನು ಸಾಮಾಜಿಕ ಅಸಹಕಾರದತ್ತ, ಉಪ್ಪಿನ ಸತ್ಯಗ್ರಹ ಮುಂತಾದ ಕೆಲಸಗಳಲ್ಲಿ ಅಣಿ ನೆರೆಸಲಾಯಿತು. ಕಾರ್ಮಿಕ ಸಂಘಗಳಲ್ಲಿ ಕೆಲಸ ಮಾಡುವ ಕಮ್ಯುನಿಸ್ಟರು ಮುಂಬೈನ ಕಾರ್ಖಾನೆಗಳಲ್ಲಿ, ಸೋಲಾಪುರ್ ನ ಬೀಡಿ ಉದ್ಯಮದಲ್ಲಿ ಮಹಿಳಾ ಕಾರ್ಮಿಕರನ್ನು ದೊಡ್ಡ ಹೋರಾಟಗಳಿಗೆ ಅಣಿ ನೆರೆಸುತ್ತಿದ್ದರು. ವೇತನ, ಭೂಮಿ, ಘನತೆ ಮುಂತಾದ ಮೂಲ ವಿಷಯಗಳ ಸುತ್ತ, ಬಿಹಾರದ ಮತ್ತು ಬಂಗಾಳದ ಕೃಷಿ ಕಾರ್ಮಿಕರು ಮತ್ತು ಬಡ ರೈತ ಮಹಿಳೆಯರನ್ನು ಕಮ್ಯುನಿಸ್ಟರು ಸಂಘಟಿಸುತ್ತಿದ್ದರು. ಕೆಲವು ಕಾರ್ಮಿಕ ಸಂಘಟನೆಗಳ ನೇತೃತ್ವವನ್ನು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ವಹಿಸಿತ್ತು.

1920ರಲ್ಲಿ ರೂಪುಗೊಂಡ ಅಖಿಲ ಭಾರತ ಟ್ರೇಡ್ ಯುನಿಯನ್ ಕಾಂಗ್ರೆಸ್ ಶೀಘ್ರದಲ್ಲೇ ಕಮ್ಯುನಿಸ್ಟರ ಪ್ರಭಾವಕ್ಕೆ ಒಳಗಾಯಿತು. ಸಂಘಟನೆಯ ಮೊದಲ ಸಂಘಟಕರಲ್ಲಿ ಒಬ್ಬರಾದ ಸಂತೋಷ್ ದೇವಿ ಅವರು ಎಐಟಿಯುಸಿ ರಚನೆಯಾದ ಕೂಡಲೇ ಅದನ್ನು ಸೇರಿಕೊಂಡರು ಮತ್ತು ಬಂಗಾಳದಲ್ಲಿ ಸಣಬು ಕಾರ್ಮಿಕರು ಮತ್ತು ಅವರ ಕುಟುಂಬಗಳ ನಡುವೆ ತಮ್ಮ ಕೆಲಸ ಪ್ರಾರಂಭಿಸಿದರು. ಬಾಂಬೆಯ ಪಾರ್ವತಿ ಭೋರೆ ಮತ್ತು ನಂತರ ಮೂವತ್ತರ ಹಾಗೂ ನಲವತ್ತರ ದಶಕದಲ್ಲಿ ಅಹಲ್ಯ ರಂಗ್ನೇಕರ್, ಉಷತಾಯಿ ದಾಂಗೆ, ವಿಮಲ ರಣದಿವೆ ಮತ್ತು  ಅನೇಕ ಸಂಘಟಕರು ಭಾಗಿಯಾಗಿದ್ದರು. 1936 ರಲ್ಲಿ ಆದ ಅಖಿಲ ಭಾರತ ಕಿಸಾನ್ ಸಭೆಯ ರಚನೆ ಮತ್ತು ಕಮ್ಯುನಿಸ್ಟರು ವಹಿಸಿದ ಪ್ರಮುಖ ಪಾತ್ರದೊಂದಿಗೆ, ರೈತ ಮಹಿಳೆಯರನ್ನು ಭೂಮಿ ಮತ್ತು ಘನತೆಯ ವಿಷಯಗಳ ಹೋರಾಟಕ್ಕೆ  ಅಣಿ ನೆರೆಸಲಾಯಿತು.  ತೆಭಾಗಾ, ತೆಲಂಗಾಣ, ಸುರ್ಮಾ ಕಣಿವೆ ಹೋರಾಟ, ಇವೆಲ್ಲವೂ ಆರ್ಥಿಕ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಭಾರತದ ದುಡಿಯುವ ಜನರ ಹೋರಾಟಗಳಲ್ಲಿ ಹೆಗ್ಗುರುತುಗಳಾಗಿವೆ. ಈ ಮಹಾನ್  ಹೋರಾಟಗಳಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆ ಇದ್ದಿದ್ದು ಮಾತ್ರವಲ್ಲದೆ ಅನೇಕ ಸಲ  ಕೈಯಲ್ಲಿ ಕೆಂಪು ಧ್ವಜ ಹಿಡಿದು ಪೂರ್ತಿ ಹೋರಾಟದ ನೇತೃತ್ವವನ್ನು ವಹಿಸಿದ್ದರು.

ಪಕ್ಷದ ನೇತೃತ್ವದಲ್ಲಿ ಮಹಿಳೆಯರ ವರ್ಗ ಆಧಾರಿತ ಕೆಲಸಗಳು ಪ್ರಭುತ್ವದ ಸಾಮಾಜಿಕ ನಿಯಮಗಳಿಗೆ ಸವಾಲು ಒಡ್ಡುವಂತಿದ್ದವು. ಪುರುಷಪ್ರಧಾನ ಸಂಸ್ಕೃತಿಗಳಿಗೆ, ವರ್ಗ ಮತ್ತು ಸಾಮಾಜಿಕ ಕೋನದಿಂದ ದುಪ್ಪಟ್ಟು ಸವಾಲಾಗಿತ್ತು.

1945ರಲ್ಲಿ ಪ್ರಾರಂಭವಾದ ಥಾಣೆ, ಮಹಾರಾಷ್ಟ್ರದ ವಾರಲಿ ಆದಿವಾಸಿಗಳ ನಡುವಿನ ಗೋದಾವರಿ ಪರುಳೇಕರ್ ಅವರ ಕೆಲಸದಲ್ಲಿ ಈ ವಿಷಯವು (ಪ್ರಭುತ್ವಕ್ಕೆ ಸವಾಲೊಡ್ಡುವುದು) ತೀವ್ರವಾಗಿ ಕಂಡುಬಂದಿದೆ. ಭೂಮಾಲೀಕರ ಕ್ರೂರ ಶೋಷಣೆಯ ವಿರುದ್ಧದ ಹೋರಾಟದಲ್ಲಿ,  ವರ್ಗ ಹೋರಾಟದಲ್ಲಿ ಭಾಗವಹಿಸಿದ ಆದಿವಾಸಿ ಮಹಿಳೆಯರು ತಮ್ಮ ವಿಮೋಚನೆಯ ಭಾವನೆಯನ್ನು ವಿವರಿಸುತ್ತಾ, ತಮ್ಮ ಹಾಗೂ ಪ್ರಭುತ್ವದ ನಡುವಿನ ಸಂಬಂಧಗಳ  ಬದಲಾವಣೆ ಆದದ್ದು ಸಾಮೂಹಿಕ ಸಂಘಟನೆಗಳಲ್ಲಿ ಭಾಗವಹಿಸುವ ಮೂಲಕ ಎಂದರು.  ಸಾಮೂಹಿಕ ಸಂಘಟನೆಗಳಲ್ಲಿನ ಭಾಗವಹಿಸುವಿಕೆ ಭೂಮಾಲೀಕರ ಕೈಯಲ್ಲಿ ಅವರು ಎದುರಿಸಿದ ಭಯಾನಕ ವ್ಯವಸ್ಥಿತ ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡಲು ಅವರಿಗೆ ಅನುವು ಮಾಡಿಕೊಟ್ಟಿತು.

ತ್ರಿಪುರದಲ್ಲಿ, ದಸರತ್ ದೇಬ್ ಬರ್ಮಾ ಅವರ ನೇತೃತ್ವದಲ್ಲಿ, ಕಮ್ಯುನಿಸ್ಟ್ ಪಕ್ಷವೇ, ಹೆಚ್ಚು ಶೋಷಿತ ಬುಡಕಟ್ಟು ಸಮುದಾಯಗಳಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಬುಡಕಟ್ಟು ಮಹಿಳೆಯರಲ್ಲಿ ಸಾಕ್ಷರತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತಂದಿದೆ.  ಈ ಸಾಮಾಜಿಕ ಪ್ರಜ್ಞೆಯ ಪರಿಣಾಮವಾಗಿ,  ಮೂರು ಬುಡಕಟ್ಟು ಮಹಿಳೆಯರು  ಹುತಾತ್ಮರಾದ ಪಾಳೇಗಾರಿ “ಟಿಟುನ್” ಬಲವಂತ ವಸೂಲಿಯ ದೊಡ್ಡ ದಂಗೆ ನಡೆಯಿತು.

Godavari parulekar
ವಾರಲಿ ಹೋರಾಟದಲ್ಲಿ ಗೋದಾವರಿ ಪರಳೇಕರ್

ವರ್ಗದೊಳಗೆ

ವರ್ಗದೊಳಗಿನ ಪುರುಷ ಮತ್ತು ಮಹಿಳೆಯರ ನಡುವಿನ ಅಸಮಾನ ಸಂಬಂಧಗಳ ಸವಾಲುಗಳನ್ನು ಮೊದಲು ಮಹಿಳೆಯರೇ ಎದುರಿಸಬೇಕಾಯಿತು. ತೆಲಂಗಾಣದ ರೈತರ  ಸಶಸ್ತ್ರ ಹೋರಾಟದಲ್ಲಿ ಭಾಗವಹಿಸಿದವರ ಬರಹಗಳು ಇಂತಹ ಅನೇಕ ವಿಷಯಗಳನ್ನು ಎತ್ತಿದವು.  ಕುಟುಂಬದ ಅಸ್ತಿತ್ವದಲ್ಲಿರುವ ಸಾಮಾಜಿಕ ಸಮೀಕರಣಗಳನ್ನು ಮಹಿಳೆಯರು ಪ್ರಶ್ನಿಸಿ, ‘ಕುಟುಂನ ನಿರ್ಧಾರಿತ” ಅವರ ಸಂಗಾತಿಗಳು ಹೋರಾಟಕ್ಕೆ ಬೆಂಬಲಿಸದ ಕಾರಣ ಅನೇಕ ವಿವಾಹಗಳು ವಿಚ್ಛೇದನೆಯ ಅಂಗಳದಲ್ಲಿ ಕೊನೆಗೊಂಡವು.  ಪಿ ಸುಂದರಯ್ಯ ಅವರು ತಮ್ಮ  ಬರವಣಿಗೆಗಳಲ್ಲಿ ಇಂತಹ ಅನೇಕ ಉದಾಹರಣೆಗಳನ್ನು ಬರೆದಿದ್ದಾರೆ. ಸಶಸ್ತ್ರ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮಲ್ಲು ಸ್ವರಾಜ್ಯಂ ಅವರ ಹೇಳಿಕೆಗಳು, ಪಕ್ಷವು ಹೇಗೆ  ಮಹಿಳೆಯರನ್ನು ಮಾತನಾಡಲು, ಮುಂಚೂಣಿಯಲ್ಲಿ ರಲು ಪ್ರೋತ್ಸಾಹಿಸುತ್ತದೆ ಎಂಬುದನ್ನು ತೋರಿಸುತ್ತದೆ.  ಚಳುವಳಿಯಲ್ಲಿನ  ಪುರುಷರಿಗೆ ಹಿತಕರ ಅನಿಸದಿದ್ದರೂ,  ಸಂಗಾತಿಗಳಿಬ್ಬರೂ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಾಗ, ಪುರುಷ ಸಂಗಾತಿ ಗಳು ಏಕೆ ಮನೆಕೆಲಸದಲ್ಲಿ  ಸಹಕಾರ ನೀಡಬಾರದು ಎಂಬುವ  ಪ್ರಶ್ನೆಗಳನ್ನು ಮಹಿಳಾ ಸಂಗಾತಿಗಳು ಎತ್ತಿದರು.  ಹೀಗೆ ಪಕ್ಷದ ಸಹಾಯದಿಂದ ಪುರುಷರನ್ನು ಮತ್ತು ಮಹಿಳೆಯರನ್ನು ಒಗ್ಗೂಡಿಸಿದ ಚಳುವಳಿಗಳಲ್ಲಿ ಕಮ್ಯುನಿಸ್ಟ್ ಮಹಿಳೆಯರು, ಚಳುವಳಿಗಳೊಳಗೆ ಹಾಗೂ ಹೊರಗೆ ಮಹಿಳಾ ಸಮಾನತೆಗಾಗಿ ಹೋರಾಟದ ಮುಂಚೂಣಿಯಲ್ಲಿದ್ದರು.

ಪ್ರಮುಖ ಪಾಠವೆಂದರೆ,  ವರ್ಗ ಹೋರಾಟವು ಮಹಿಳೆಯರ ಪ್ರಜ್ಞೆಯನ್ನು ಪರಿವರ್ತಿಸುತ್ತದೆ.  ಲಿಂಗ ಆಧಾರಿತ ತಾರತಮ್ಯದ ಎಲ್ಲಾ ಅಂಶಗಳನ್ನು ಚಳುವಳಿಯೊಳಗೆ ಸೇರಿಸುವುದರ ಮೂಲಕ ಅದು ಹೋರಾಟದ ಸ್ವರೂಪವನ್ನು ಸಮಾನವಾಗಿ ವಿಸ್ತರಿಸುತ್ತದೆ. ಇದು ವರ್ಗ ಹೋರಾಟವನ್ನು ಬಲಪಡಿಸುತ್ತದೆ. ಹಲವಾರು ದಶಕಗಳ ನಂತರ, ಬಿ.ಟಿ.ರಣದೀವೆ ಅವರು ಟ್ರೇಡ್ ಯೂನಿಯನ್ ಚಳವಳಿಯೊಳಗೆ ಪ್ರತ್ಯೇಕ ಕಾರ್ಯನಿರತ ಮಹಿಳಾ ಸಮಿತಿಗಳು ಮತ್ತು ವೇದಿಕೆಗಳನ್ನು ನಿರ್ಮಿಸಿದರು, ಇದು ಆರಂಭಿಕ ಹಂತಗಳಲ್ಲಿ ಹೆಚ್ಚಿನ ಪ್ರತಿರೋಧವನ್ನು ಎದುರಿಸಿತು.   “ವಿಶ್ವದ ಕಾರ್ಮಿಕರೇ ಒಂದಾಗಿ” ಎಂದು ಮಾರ್ಕ್ಸ್ ಹೇಳಿದಾಗ ಅವರು ಕೇವಲ ಪುರುಷ ಕಾರ್ಮಿಕರ ಬಗ್ಗೆ ಮಾತನಾಡುತ್ತಿಲ್ಲ” ಎಂಬುದು ಅವರ ಪ್ರಸಿದ್ಧ ಹೇಳಿಕೆ.  ಬೇರೆ ರೀತಿಯಲ್ಲಿ ಹೇಳುವುದಾದರೆ, ಬಂಡವಾಳಶಾಹಿ ಯಿಂದ ಆಗುವ  ಲಿಂಗ ಆಧಾರಿತ ವಿರುದ್ಧ ವರ್ಗವೇ ಹೋರಾಡಬೇಕಾಗುತ್ತದೆ.

ಮಹಿಳಾ ವಿಮೋಚನೆಯಲ್ಲಿ ಅಂತರ್ಗತವಾಗಿರುವ ಜಾತಿ ವಿರುದ್ಧದ ಹೋರಾಟ

ಆರಂಭದಲ್ಲಿ ಕಮ್ಯುನಿಸ್ಟರ ಹೆಚ್ಚಿನ ಕೆಲಸಗಳು ಸಾಮಾಜಿಕ ಸುಧಾರಣೆಗಾಗಿ ಮತ್ತು ದಲಿತರ ವಿಮೋಚನೆಗಾಗಿ ಜಾತಿ ವಿರೋಧಿ ಹೋರಾಟಗಳ ಕ್ಷೇತ್ರದಲ್ಲಿದ್ದವು. ಇದು ಹೆಚ್ಚು ತುಳಿತಕ್ಕೊಳಗಾದ ಜಾತಿಗಳ ಮಹಿಳೆಯರ ಮೇಲೆ ದೊಡ್ಡ ಪರಿಣಾಮ ಬೀರಿತು. ಅದೇ ಸಮಯದಲ್ಲಿ ಮೇಲ್ಜಾತಿ ಮಹಿಳೆಯರ ಕೆಳಮಟ್ಟದ ಸ್ಥಾನಮಾನವನ್ನು ಕೇರಳದ ನಂಬೂದಿರಿಗಳ ನಡುವೆ ಇಎಂಎಸ್ ನೇತೃತ್ವದಲ್ಲಿ ಚಳವಳಿಯಂತೆ ಕೈಗೆತ್ತಿಕೊಳ್ಳಲಾಯಿತು ಮತ್ತು ಇದು ಅವರಲ್ಲಿ ಶಾಶ್ವತ ಪರಿಣಾಮ ಬೀರಿತು. ಆದ್ದರಿಂದ ಇದು ಒಂದು ತಾರ್ಕಿಕ ಬೆಳವಣಿಗೆಯಾಗಿದ್ದು, ಹಿಂದೂ ಸಂಹಿತೆ ಸುಧಾರಣಾ ಮಸೂದೆ ಚರ್ಚೆ ಮತ್ತು ಹೋರಾಟಗಳ ಸಮಯದಲ್ಲಿ, ಕಮ್ಯುನಿಸ್ಟ್ ಮಹಿಳೆಯರು ಸುಧಾರಣೆಗೆ ಬೆಂಬಲ ನೀಡುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಕಮ್ಯುನಿಸ್ಟ್ ಮಹಿಳೆಯರ ನೇತೃತ್ವದ ಚಳುವಳಿಗಳಿಗೆ ಸಂಬಂಧಪಟ್ಟಂತೆ ಹಿಂದೂ ಸಂಹಿತೆ ಸುಧಾರಣಾ ಮಸೂದೆಯ ಹೋರಾಟವು ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟದೊಂದಿಗೆ ಹೆಣೆದುಕೊಂಡಿದೆ. ನಲವತ್ತರ ದಶಕದಿಂದ ಐವತ್ತರ ದಶಕದ ತನಕ, ಹಿಂದೂ ಕಾನೂನುಗಳಲ್ಲಿ ಸುಧಾರಣೆಗಾಗಿ ಮಹಿಳೆಯರ ದೊಡ್ಡ ಹೋರಾಟಗಳನ್ನು ಕಂಡಿತು. ಹಿಂದಿನ ಕಮ್ಯುನಿಸ್ಟರು ಕೈಗೆತ್ತಿಕೊಂಡ ಜಾತಿ ದಬ್ಬಾಳಿಕೆಯ ವಿರುದ್ಧದ ಹೋರಾಟ ಮತ್ತು ಜನನ ಆಧಾರಿತ ಜಾತಿ ಅಸಮಾನತೆ, ವರ್ಗ ಶೋಷಣೆ ಮತ್ತು ಲಿಂಗ ದಬ್ಬಾಳಿಕೆಯ ಮೂರು ದಮನಗಳ ಸಂಗಮವನ್ನು ಎದುರಿಸುವ ದಲಿತ ಮಹಿಳೆಯರ ಹೋರಾಟವನ್ನು ಕಮ್ಯುನಿಸ್ಟ್ ಮಹಿಳೆಯರು ಸತತವಾಗಿ ಆಯೋಜಿಸಿದ್ದಾರೆ. ಜಾತಿ ವಿರುದ್ಧ ಕಮ್ಯುನಿಸ್ಟರ ತಿಳುವಳಿಕೆ ಮತ್ತು ಕೆಲಸ ಹಿಂದೆನೂ ಇಂದಿಗೂ ಎಷ್ಟು ಪ್ರಸ್ತುತವಾಗಿದೆ ಎಂಬುದಕ್ಕೆ ಹತ್ರಾಸ್ ಪ್ರಕರಣ ಈಗಲೂ ಒಂದು ಉದಾಹರಣೆಯಾಗಿದೆ.

ಮಹಿಳಾ ಸಮೂಹದಲ್ಲಿ ಕಮ್ಯುನಿಸ್ಟ್ ಕೆಲಸ

ಎಲ್ಲಾ ವರ್ಗದ ಮಹಿಳೆಯರನ್ನು ಬ್ರಿಟಿಷ್ ಆಡಳಿತದ ವಿರುದ್ಧ ಸಜ್ಜುಗೊಳಿಸುವ ಉದ್ದೇಶದಿಂದ, ಮುಂಚಿನ ವರ್ಷಗಳಲ್ಲಿ ಕಮ್ಯುನಿಸ್ಟ್ ಮಹಿಳೆಯರು ಎ.ಐ.ಡಬ್ಲ್ಯೂ.ಸಿಯಂತಹ ಮಹಿಳೆಯರ ಜಂಟಿ ಸಂಸ್ಥೆಗಳಲ್ಲಿ ಕೆಲಸ ಮಾಡಿದರು, ಇದರಲ್ಲಿ ಕಾಂಗ್ರೆಸ್ ಮಹಿಳೆಯರೂ ಒಳಗೊಂಡಿದ್ದರು. ಆದಾಗ್ಯೂ ಅವರ ಒತ್ತು ಮಹಿಳೆಯರ ಬಡ ವರ್ಗಗಳನ್ನು ತಲುಪುವುದು ಮತ್ತು ವಿಶಾಲ ಚಳವಳಿಯ ಭಾಗವಾಗಿ ಅವರ ಬೇಡಿಕೆಗಳನ್ನು ಎತ್ತುವುದು ಆಗಿತ್ತು. ಜಾತಿ ವಿರುದ್ಧ ಮತ್ತು ಜಾತ್ಯತೀತ ಮೌಲ್ಯಗಳ ಪರವಾಗಿ ರಾಜಿಯಾಗದ ಹೋರಾಟವು ಸಂಘಟನೆಯ ಮೇಲೆ ಪ್ರಭಾವ ಬೀರಿತು ಮತ್ತು ಶೀಘ್ರದಲ್ಲೇ ಎಡ-ಆಧಾರಿತ ಮಹಿಳಾ ಸಂಘಟನೆಗಳನ್ನು ರಚಿಸುವುದು ಅಗತ್ಯವಾಯಿತು. ಇದೇ ಸಂದರ್ಭದಲ್ಲಿ ಕಮ್ಯುನಿಸ್ಟ್ ಮನಸ್ಸಿನ ವಿದ್ಯಾರ್ಥಿಗಳ ಸಮೂಹವು ಎ,ಐ.ಎಸ್.ಎಫ್ ಹೆಸರಿನಡಿಯಲ್ಲಿ 1936 ರಲ್ಲಿ ರೂಪುಗೊಂಡ ವಿಶಾಲ ವಿದ್ಯಾರ್ಥಿ ಸಂಘಟನೆಯ ಭಾಗವಾಗಿ ಒಂದು ಹೊಸ ಕೆಲಸ ಆರಂಭಿಸಿತ್ತು. ಇದಾದ ಮೂರು ವರ್ಷಗಳ ನಂತರ, 1939 ರಲ್ಲಿ ವಿದ್ಯಾರ್ಥಿನಿಯರನ್ನು ಉತ್ತಮವಾಗಿ ಸಂಘಟಿಸುವ ಸಲುವಾಗಿ, ವಿದ್ಯಾರ್ಥಿನಿ ಯರ ಸಮಿತಿಯನ್ನು ರಚಿಸಲಾಯಿತು, ಈ ಸಮಿತಿಯ ಪ್ರಥಮ ಸಂಚಾಲಕರಲ್ಲಿ ಕನಕ್ ಮುಖರ್ಜಿ ಯವರೂ ಒಬ್ಬರು  ಮತ್ತು ಸಮಿತಿಯಲ್ಲಿ ಚಿತ್ತಗಾಂಗ್ ಶಸ್ತ್ರಾಗಾರ ದಾಳಿಯ ನಾಯಕಿ ಕಲ್ಪನಾ ದತ್ ಕೂಡ ಇದ್ದರು. ನಲವತ್ತರ ದಶಕದಲ್ಲಿ ಕೇರಳ, ಪಂಜಾಬ್, ಉತ್ತರ್ ಪ್ರದೇಶ, ತಮಿಳು ನಾಡು ಹೀಗೆ ಅನೇಕ ರಾಜ್ಯಗಳಲ್ಲಿ ಕಮ್ಯುನಿಸ್ಟ ಮಹಿಳೆಯರು ಮಹಿಳಾ ಸಮಿತಿಗಳನ್ನು ರಚಿಸಲು ಸನ್ನದ್ಧರಾದರು.  ಬಂಗಾಳದಲ್ಲಿ 1942 ರಲ್ಲಿ  ಕಮ್ಯುನಿಸ್ಟ್ ಮಹಿಳೆಯರು, ಬಡ ಮಹಿಳೆಯರ ಮಧ್ಯೆ  ಮಹಿಳಾ ಆತ್ಮ ರಕ್ಷಾ ಸಮಿತಿ ಯನ್ನು ರಚಿಸಲು ಮುಂದಾಗಿರುವುದು ಗಮನಾರ್ಹವಾಗಿ ಕಂಡಿತು. ರೇಣು ಚಕ್ರವರ್ತಿ ಅವರು “ಕಮ್ಯುನಿಸ್ಟ್ಸ್ ಇನ್ ಇಂಡಿಯನ್ ವುಮೆನ್ಸ್ ಮೂವ್ಮೆಂಟ್ಸ್ ” ಎಂಬ ತನ್ನ ಪ್ರಮುಖ ಪುಸ್ತಕದಲ್ಲಿ ಈ ಮುಂಚೂಣಿ ಮಹಿಳಾ ಸಂಘಟಕರ ಕೆಲಸವನ್ನು ವಿವರಿಸಿದ್ದಾರೆ.

ರಾಜ್ಯ ಮೂಲದ ಮಹಿಳಾ ಸಮಿತಿಗಳು 1954 ರಲ್ಲಿ ರಾಷ್ಟ್ರೀಯ ಮಹಿಳಾ ಒಕ್ಕೂಟವನ್ನು (National Federation Of Indian Women : NFIW)  ರಚಿಸಿದರು, ಇದರಲ್ಲಿ ಕಮ್ಯುನಿಸ್ಟ್ ಮಹಿಳೆಯರು ಇತರರೊಂದಿಗೆ ಕೆಲಸ ಮಾಡಿದರು. ಸ್ವಾತಂತ್ರ್ಯ-ಪೂರ್ವ ಮಹಿಳಾ ಸಂಘಟನೆಗಳನ್ನು ಮುಂದಕ್ಕೆ ಒಯ್ದ NFIW ನಲ್ಲಿನ ಅನೇಕ ರಾಜ್ಯ ಘಟಕಗಳು ಅಥವಾ ಘಟಕಗಳ ವಿಭಾಗಗಳು NFIW ನಿಂದ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ನಂತರ 1981 ರಲ್ಲಿ, ಈ ಘಟಕಗಳು ಒಟ್ಟಿಗೆ ಸೇರಿಕೊಂಡು ಎಡ-ಆಧಾರಿತ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯನ್ನು ರಚಿಸಿದವು, ಒಂದು ಕೋಟಿಗೂ ಹೆಚ್ಚು ಮಹಿಳೆಯರ ಸದಸ್ಯತ್ವವನ್ನು ಹೊಂದಿದ ಈ ಸಂಘಟನೆಯು ಭಾರತದ ಅತಿದೊಡ್ಡ ಮಹಿಳಾ ಸಂಘಟನೆಯಾಗಿ ಹೊರಹೊಮ್ಮಿದೆ. ಆದರೆ ಕಮ್ಯುನಿಸ್ಟ್ ಮಹಿಳೆಯರು ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೂ ಇದನ್ನು ಕಮ್ಯುನಿಸ್ಟ್ ಮಹಿಳಾ ಸಂಘಟನೆ ಎಂದು ಹೇಳಲಾಗುವುದಿಲ್ಲ. ಈ ಸಂಘಟನೆಯು ಮಹಿಳಾ ವಿಮೋಚನೆಯ ಬಗ್ಗೆ ಒಂದು ನಿರ್ದಿಷ್ಟ ರಾಜಕೀಯ ಧೋರಣೆಯನ್ನು ಹೊಂದಿದ್ದರೂ, ಅದು ಕಮ್ಯುನಿಸ್ಟ್ ಸಂಘಟನೆಯಲ್ಲ ಅಥವಾ ಕೆಲವೊಮ್ಮೆ ತಪ್ಪಾಗಿ ವಿವರಿಸಿದಂತೆ ಕಮ್ಯುನಿಸ್ಟರ ‘ರಂಗ’ವಲ್ಲ. ಯಾವುದೇ ರಾಜಕೀಯ ಪಕ್ಷದಿಂದ ಸ್ವತಂತ್ರವಾಗಿರುವ ಹಾಗೂ ತನ್ನದೇ ಆದ ಸಂವಿಧಾನ ಮತ್ತು ಕಾರ್ಯಸೂಚಿಯನ್ನು ಹೊಂದಿರುವುದು ಮಾತ್ರವಲ್ಲದೇ ಅದರ ಬಹುಪಾಲು ಸದಸ್ಯರಿಗೆ ಯಾವುದೇ ಪಕ್ಷದ ಸಂಬಂಧವಿಲ್ಲ.

ಸಿಪಿಐ (ಎಂ) ಪಕ್ಷದ ಪಾತ್ರ

ಮಹಿಳೆಯರ ವಿಮೋಚನೆಗಾಗಿ ಹೋರಾಟವನ್ನು ಮುಂದುವರೆಸುವಲ್ಲಿ ಕಮ್ಯುನಿಸ್ಟರ ಪಾತ್ರವು 1964 ರಲ್ಲಿ ಸಿಪಿಐ(ಎಂ) ರಚನೆಯೊಂದಿಗೆ ಒಂದು ಮುಖ್ಯ ಮುನ್ನಡೆಯನ್ನು ಕಂಡಿತು. ಕಮ್ಯುನಿಸ್ಟ್ ಪಕ್ಷದ ಆರಂಭಿಕ ಪಾತ್ರವನ್ನು ಮುಂದಿಟ್ಟುಕೊಂಡು, ಸಿಪಿಐ (ಎಂ) 1964 ರಲ್ಲಿ ಜನತಾ ಪ್ರಜಾಪ್ರಭುತ್ವ ಕ್ರಾಂತಿಯ ಕಾರ್ಯಕ್ರಮದಲ್ಲಿ ಮತ್ತು ನಂತರ 2000 ರಲ್ಲಿ ನವೀಕರಿಸಿದ ಪಕ್ಷದ ಕಾರ್ಯಕ್ರಮದಲ್ಲಿ ಮಹಿಳಾ ವಿಮೋಚನೆಗೆ ವರ್ಗ ಆಧಾರಿತ ವಿಧಾನದ ಸೈದ್ಧಾಂತಿಕ ಸ್ಪಷ್ಟತೆಯನ್ನು ಒದಗಿಸಿದೆ.

2000 ನವೀಕರಿಸಿದ ಪಕ್ಷದ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ ಕ್ರಾಂತಿಯ ವಿಭಾಗದಲ್ಲಿ “ಕುಟುಂಬಗಳನ್ನು ಪ್ರಜಾಪ್ರಭುತ್ವ ಗೊಳಿಸುವ ದಿಕ್ಕಿನಲ್ಲಿ ಮಕ್ಕಳ ಲಾಲನೆ ಪಾಲನೆ ಮತ್ತು ಮನೆ ಕೆಲಸಗಳಿಗೆ ಅಗತ್ಯವಾದ ತಕ್ಕ ಬೆಂಬಲ ವ್ಯವಸ್ಥೆ ಒದಗಿಸುವುದು” ಎಂಬ ಗಮನಾರ್ಹ ಸೇರ್ಪ್ಪಡೆಯನ್ನು ಮಾಡಲಾಯಿತು. ಲಿಂಗ ಆಧಾರಿತ ಶ್ರಮ ವಿಭಜನೆಯ ವಿರುದ್ಧ ಮತ್ತು ‘ಪವಿತ್ರ’ ಕುಟುಂಬ ಕ್ಷೇತ್ರಕ್ಕೆ ಪ್ರಜಾಸತ್ತೀಕರಣವನ್ನು ವಿಸ್ತರಿಸುವ ಮಾರ್ಕ್ಸ್ವಾದಿ ಕಣ್ಣೋಟವನ್ನು ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ. ಕಾರ್ಷಿಕ ಕ್ರಾಂತಿಯ ಭಾಗವಾಗಿ ಜಾತಿ ಮತ್ತು ಲಿಂಗ ದಬ್ಬಾಳಿಕೆ ವಿರುದ್ಧದ ಹೋರಾಟದ ಬಗ್ಗೆ ನಿರ್ದಿಷ್ಟ ಉಲ್ಲೇಖವಿದೆ. ಪಕ್ಷದ ಕಾರ್ಯಕ್ರಮವು “ಐದು ದಶಕಗಳ ಬೂರ್ಜ್ವಾ ಭೂಮಾಲೀಕರ ಆಡಳಿತವು ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷಪ್ರಾಧಾನ್ಯವನ್ನು ಶಾಶ್ವತಗೊಳಿಸಿತು” ಎಂದು ಸೂಚಿಸುತ್ತದೆ. ಗಮನಾರ್ಹವಾಗಿ, ಸಿಪಿಐ (ಎಂ) ಕಾರ್ಯಕ್ರಮವು ವಿವಿಧ ಹಂತಗಳಲ್ಲಿ ಮಹಿಳೆಯರ ಶೋಷಣೆಯನ್ನು “ಮಹಿಳೆಯಾಗಿ, ಕಾರ್ಮಿಕಳಾಗಿ, ನಾಗರಿಕಳಾಗಿ” ಎಂದು ವಿವರಿಸುತ್ತದೆ.

ಡಿಸೆಂಬರ್ 2005 ರಲ್ಲಿ ಅಂಗೀಕರಿಸಲ್ಪಟ್ಟ “ಮಹಿಳಾ ಸಮಸ್ಯೆಗಳು ಮತ್ತು ಕಾರ್ಯಭಾರಗಳ” ಕುರಿತಾದ ಸಂಘಟನೆಯ ದೃಷ್ಟಿಕೋನದ ಕುರಿತ ಕೇಂದ್ರ ಸಮಿತಿಯ ದಾಖಲೆಯಲ್ಲಿ ಮತ್ತಷ್ಟು ವಿವರಿಸಲಾಗಿದೆ.  ಮನೆಗೆಲಸಕ್ಕೆ ಸಂಬಂಧಿಸಿದಂತಹ ಪ್ರಶ್ನೆಗಳ ಬಗ್ಗೆ ಮಾರ್ಕ್ಸ್ ವಾದಿ ಧೋರಣೆ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದಂತಹ ಪ್ರಶ್ನೆಗಳ ಕುರಿತು ಸಿಪಿಐಎಂನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಕೇಂದ್ರ ಸಮಿತಿಯ ದಾಖಲೆಗಳನ್ನು ಓದುವುದು ಸಮಂಜಸ  ಮತ್ತು ಅಗತ್ಯ.

ನೀತಿ ಸಮಸ್ಯೆಗಳು

ಈ ಚೌಕಟ್ಟಿನಲ್ಲಿಯೇ ಇಂದಿನ ಪರಿಸ್ಥಿತಿಗಳನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು ನೇರವಾಗಿ ಮಹಿಳೆಯರಿಗೆ ಸಂಬಂಧ ಪಡುವಂತಹ ವಿಷಯಗಳ  ಬಗ್ಗೆ ಪಕ್ಷ  ಹೋರಾಟ ನಡೆಸುತ್ತಿದೆ. ಸಿಪಿಐ (ಎಂ) ರಚನೆಯಾದ ನಂತರದ ದಶಕಗಳಲ್ಲಿ ನಡೆದ ಎಲ್ಲಾ  ಕಾರ್ಯಗಳನ್ನು ಉಲ್ಲೇಖಿಸಲು ಸಾಧ್ಯವಿಲ್ಲ,  ಆದರೆ ಮಹಿಳೆಯರ ಸ್ಥಾನಮಾನ,  ಸಮಾನತೆ,  ಅವರ  ಹಕ್ಕುಗಳಿಗಾಗಿ ಹೋರಾಟಗಳನ್ನು  ಮಾಡುವಲ್ಲಿ ಸಿಪಿಐ(ಎಂ) ಪಕ್ಷವು ಸದಾ ಮುಂಚೂಣಿಯಲ್ಲಿ ಇರುತ್ತದೆ ಎಂದು ಹೇಳಬಹುದು. ಪಕ್ಷದ ನವ-ಉದಾರವಾದಿ ನೀತಿಗಳ ವಿರುದ್ಧದ ಹೋರಾಟವು ಮಹಿಳೆಯರ ನಿರ್ದಿಷ್ಟ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಒಳಗೊಂಡಿದೆ. ಸಿಪಿಐ(ಎಂ) ಸಂಸತ್ತಿನ ಸದಸ್ಯರು ಮತ್ತು ವಿಧಾನ ಸಭೆಗಳ ಸದಸ್ಯರು ಸಮಾನ ಹಕ್ಕುಗಳ ಮತ್ತು ನ್ಯಾಯಕ್ಕಾಗಿ ಶಾಸನಗಳನ್ನು ಮುಂದೆ ತರಲು ಮಹಿಳಾ ಚಳುವಳಿಗಳ ದೃಢವಾದ ಸಹಚರರಾಗಿದ್ದಾರೆ

ಸಮಕಾಲೀನ ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ, ಯುವತಿಯರ ಹಕ್ಕುಗಳ ರಕ್ಷಣೆ ಮತ್ತು ಸಂಗಾತಿಗಳನ್ನು ಸ್ವಯಂ-ಆಯ್ಕೆ  ಮಾಡಲು ಸ್ವಾಯತ್ತತೆಯ ಬೇಡಿಕೆ, ಸಲಿಂಗ ಸಂಬಂಧಗಳನ್ನು ಅಪರಾಧ-ಮುಕ್ತಗೊಳಿಸುವ ಬೇಡಿಕೆಗೆ ಬೆಂಬಲ, ಅಲ್ಪಸಂಖ್ಯಾತ ಮಹಿಳೆಯರ ರಕ್ಷಣೆ ಮತ್ತು ಅವರ ಹಕ್ಕುಗಳು ಮತ್ತು ಹೀಗೆ, ಇತರ ಪಕ್ಷಗಳಿಗಿಂತ ಭಿನ್ನವಾಗಿ ಸಿಪಿಐ (ಎಂ) ಪಕ್ಷವು ಮಹಿಳೆಯರನ್ನು ಬೆಂಬಲಿಸುವಲ್ಲಿ ನಿಸ್ಸಂದಿಗ್ಧವಾದ ನಿಲುವನ್ನು ತೆಗೆದುಕೊಂಡಿದೆ.

ಸಿಪಿಐಎA ಪಕ್ಷವು ಪಶ್ಚಿಮ ಬಂಗಾಳ, ಕೇರಳ, ತ್ರಿಪುರಗಳಲ್ಲಿ ಸರಕಾರ ನಡೆಸಿದಾಗ ಪಕ್ಷದ ನಿಜವಾದ ಬದ್ಧತೆ ಎಲ್ಲರಿಗೂ ತಿಳಿದುಬಂದಿತ್ತು. ಪಕ್ಷದ ಮಹಿಳಾ-ಪರ ನಿಲುವಿಗೆ ಕೇರಳದ ಎಲ್‌ಡಿಎಫ್ ಸರ್ಕಾರ ಇಂದು ಒಂದು ಉದಾಹರಣೆಯಾಗಿದೆ. ದೇಶದಲ್ಲಿಯೇ ವಿಶಿಷ್ಟವಾದ ಸ್ವ-ಸಹಾಯ ಗುಂಪುಗಳ ಕುಡುಂಬಶ್ರೀ ಚಳುವಳಿ ಮತ್ತು ಸಾಮಾಜಿಕ ಸುಧಾರಣೆಯನ್ನು ಮುಂದಕ್ಕೊಯ್ಯುವ ಶಬರಿಮಲದಂತಹ ವಿಷಯಗಳು ಸೇರಿದಂತೆ ಮಹಿಳಾ ಸ್ಥಾನಮಾನವನ್ನು ಹೆಚ್ಚಿಸಲು ಹಲವಾರು ನೀತಿ ಮಧ್ಯಪ್ರವೇಶಗಳ ಮೂಲಕ ಜನರಲ್ಲಿ ಭರವಸೆ ಮೂಡಿಸಿದೆ. ಈ ಹಿಂದೆ ಬಂಗಾಳ ಮತ್ತು ತ್ರಿಪುರದ ಎಡಪಂಥೀಯ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು ಇದು ಮಹಿಳೆಯರ ಜೀವನದ ಮೇಲೆ ಮಹತ್ತರ ವ್ಯತ್ಯಾಸವನ್ನುಂಟು ಮಾಡಿತು. ನಿರ್ದಿಷ್ಟವಾಗಿ ಬಂಗಾಳದಲ್ಲಿ ಭೂ ಸುಧಾರಣಾ ಆಂದೋಲನ ಮತ್ತು ಪುರುಷರು ಮತ್ತು ಮಹಿಳೆಯರ ಹೆಸರಿನಲ್ಲಿ ಜಂಟಿ ಪಟ್ಟಾಗಳ ಮತ್ತು ಒಂಟಿ ಮಹಿಳೆಯರಿಗೆ ಪಟ್ಟಾಗಳನ್ನು ವಿತರಣೆ ಮಾಡಲಾಗಿತ್ತು. ಆಸ್ತಿ ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡುವ ಮೊದಲೇ ಮಹಿಳೆಯರಿಗೆ ಭೂಮಿಯಲ್ಲಿ ಸಮಾನ ಹಕ್ಕುಗಳನ್ನು ನೀಡುವಲ್ಲಿ  ಎಡರಂಗದ ಸರ್ಕಾರಗಳು ಮುಂಚೂಣಿಯಲ್ಲಿದ್ದವು. ಸಂಸತ್ತಿನಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲಾತಿಗಾಗಿ ಪ್ರಸ್ತುತ ನಡೆಯುತ್ತಿರುವ ಚಳವಳಿಯ ದಶಕಗಳ ಹಿಂದೆ ಬಂಗಾಳದ ಐತಿಹಾಸಿಕ ವಿಕೇಂದ್ರೀಕೃತ ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದ ಪ್ರಾತಿನಿಧ್ಯ ನೀಡಿತು, ಅದರ ಮೂಲಕ ಪಕ್ಷದ ನೇತೃತ್ವದ ಚಳುವಳಿಗಳು ಬಡ ವರ್ಗದ ಮಹಿಳೆಯರು ನೀತಿ ನಿರ್ಧಾರ ತೆಗೆದುಕೊಳ್ಳುವ ಸಮಿತಿಗಳಲ್ಲಿ ಪ್ರಾತಿನಿಧ್ಯವನ್ನು ತೆಗೆದುಕೊಳ್ಳುವಂತೆ ಖಾತ್ರಿಪಡಿಸಿತು.

ಕಮ್ಯುನಿಸ್ಟ್ ಮಹಿಳೆಯರ ತ್ಯಾಗ

ಕಮ್ಯುನಿಸ್ಟ್ ಚಳುವಳಿಯ ಬೆಳವಣಿಗೆಯು ಅನೇಕ ಮಹಿಳಾ ಸಂಘಟನಾಕಾರರ ಕೆಲಸ ಮತ್ತು ತ್ಯಾಗಗಳನ್ನು ಕಂಡಿದೆ. ಪಕ್ಷವು ಆಡಳಿತ ವರ್ಗಗಳಿಂದ ತೀವ್ರ ದಾಳಿ ಮತ್ತು ದಬ್ಬಾಳಿಕೆಗೆ ಒಳಗಾದಾಗ, ಪುರುಷ ಸಂಗತಿಗಳೊಂದಿಗೆ ಸಂಘಟನಾಕಾರ ರೊಂದಿಗೆ ಭುಜಕ್ಕೆ ಭುಜ ನೀಡಿ ನಮ್ಮ ಕೆಲಸವನ್ನು ಮಾಡಿದ್ದಾರೆ, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ತ್ರಿಪುರದಲ್ಲಿ ಪ್ರಚಂಡ ಕೆಲಸ ಮತ್ತು ತ್ಯಾಗಗಳನ್ನು ಕಂಡಿದೆ. ಪಕ್ಷದ 100 ನೇ ವಾರ್ಷಿಕೋತ್ಸವದ ಐತಿಹಾಸಿಕ ಸಂದರ್ಭದಲ್ಲಿ ನಮ್ಮ ಹುತಾತ್ಮರನ್ನು ನಾವು ಸ್ಮರಿಸುತ್ತೇವೆ ಮತ್ತು ನಮಸ್ಕರಿಸುತ್ತೇವೆ. ಅಸಂಖ್ಯಾತ ಹುತಾತ್ಮರಲ್ಲಿ ಕೆಂಪು ಧ್ವಜಕ್ಕಾಗಿ ಮತ್ತು ಸಾಮಾಜಿಕ ಮತ್ತು ಆರ್ಥಿಕ ವಿಮೋಚನೆಗಾಗಿ ತಮ್ಮ ಅಮೂಲ್ಯವಾದ ಜೀವನವನ್ನು ತ್ಯಾಗ ಮಾಡಿದ ಧೈರ್ಯಶಾಲಿ ಮಹಿಳಾ ಹುತಾತ್ಮರೂ ಇದ್ದಾರೆ. ಅವರನ್ನೂ ಸಹ ನಾವು ನೆನಪಿಸಿಕೊಳ್ಳುತ್ತೇವೆ.

ಅನು: ಲವಿತ್ರ

One thought on “ಮಹಿಳಾ ವಿಮೋಚನೆಯ ಹೋರಾಟದ ನೂರು ವರ್ಷಗಳು

Leave a Reply

Your email address will not be published. Required fields are marked *