ಕೇಂದ್ರ ಸರಕಾರ ಒಂದು ಆಧಿಸೂಚನೆಯ ಮೂಲಕ ಎಲ್ಲ ಡಿಜಿಟಲ್ ಮಾಧ್ಯಮ ವೇದಿಕೆಗಳನ್ನು ಮತ್ತು ಆನ್ಲೈನ್ ವಿಷಯ ಒದಗಿಸುವ ತಾಣಗಳನ್ನು ಸೂಚನಾ ಮತ್ತು ಪ್ರಸಾರಣ ಮಂತ್ರಾಲಯದ ವ್ಯಾಪ್ತಿಯೊಳಕ್ಕೆ ತಂದಿದೆ. ಇವು ಈ ಮೊದಲು ಮಾಹಿತಿ ಮತ್ತು ಇಲೆಕ್ಟ್ರೋನಿಕ್ ತಂತ್ರಜ್ಞಾನ ಮಂತ್ರಾಲಯದ ಅಡಿಯಲ್ಲಿದ್ದವು ಮತ್ತು ಡಿಜಿಟಲ್ ವೇದಿಕೆಗಳು ಮತ್ತು ಮಧ್ಯಂತರ ವ್ಯವಸ್ಥೆಗಳನ್ನು ನಿರ್ವಹಿಸುವ ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆಯ ಅಡಿಯಲ್ಲಿ ಇದ್ದವು.
ಈ ಅಧಿಸೂಚನೆ ಕೇಂದ್ರ ಸರಕಾರ ಈ ಡಿಜಿಟಲ್ ಮಾಧ್ಯಮಗಳಲ್ಲಿ ಏನು ಪ್ರಕಟವಾಗಬೇಕು ಎಂಬುದನ್ನು “ನಿಯಂತ್ರಿಸು’ವತ್ತ ಸಾಗುತ್ತಿದೆ ಎಂಬುದರ ಒಂದು ಸ್ಪಷ್ಟ ಅಭಿವ್ತಕ್ತಿಯಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಗಮನಾರ್ಹ ಮಟ್ಟದ ವರೆಗೆ ಪ್ರಿಂಟ್ ಮತ್ತು ಇಲೆಕ್ಟ್ರೋನಿಕ್ /ದೃಶ್ಯ ಮಾಧ್ಯಮಗಳ ಬಾಯಿ ಮುಚ್ಚಿಸಿದ ನಂತರ, ಸರಕಾರ ಈಗ ಡಿಜಿಟಲ್ ಮಾಧ್ಯಮವನ್ನು ಹತೋಟಿಯಲ್ಲಿಡುವತ್ತ ಸಾಗಿದೆ ಎಂದಿದೆ.
ಒಂದು ಸರಕಾರೀ ಇಲಾಖೆ ಡಿಜಿಟಲ್ ಮಾಧ್ಯಮದ ಮೇಲೆ ಹತೋಟಿಯಿಡುವುದನ್ನು ಸಿಪಿಐ(ಎಂ) ವಿರೋಧಿಸುತ್ತದೆ, ಈಗಿರುವ ಕಾಯ್ದೆಗಳು ಮತ್ತು ಐಟಿ ಕಾಯ್ದೆ ಒಂದು ಆರೋಗ್ಯಕರ ಡಿಜಿಟಲ್ ಮಾಧ್ಯಮವನ್ನು ಹೊಂದಲು ಸಾಕಷ್ಟಾಗುತ್ತದೆ ಎಂದು ಪೊಲಿಟ್ ಬ್ಯುರೊ ಹೇಳಿದೆ.