ಬಿಹಾರ ಚುನಾವಣಾ ಆದೇಶ ಮತ್ತು ಕೆಲವು ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳ ಫಲಿತಾಂಶವು ಎನ್ಡಿಎ ಸರ್ಕಾರದ ಅಭಿವೃದ್ಧಿ ಪರ ನೀತಿಗಳಿಗೆ ಜನತೆಯಿಂದ ದೊರೆತ ಅನುಮೋದನೆಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದು ಮೇಲ್ನೋಟಕ್ಕೆ ಸರಿಯಾಗಿಯೇ ಕಾಣುತ್ತದೆ. ಬಹುತೇಕ ಎಲ್ಲಾ ಲೆಕ್ಕಾಚಾರಗಳನ್ನು, ಸಮೀಕ್ಷೆಗಳನ್ನು ಸುಳ್ಳು ಮಾಡಿ ಮೋದಿ ನೇತೃತ್ವದ ಎನ್ಡಿಎ ಕೂಟಕ್ಕೆ ಅದ್ಭುತವಾದ ಚುನಾವಣಾ ಜಯ ಪ್ರಾಪ್ತವಾಗಿದೆ. ಇದು ಜನಮನ್ನಣೆಯ ದ್ಯೋತಕವಾಗಿದೆ ಎಂದು ಅವರು ಪ್ರತಿಪಾದಿಸುತ್ತಿರುವುದು ಆಶ್ಚರ್ಯಕರವಲ್ಲ. ಆದರೆ ಈ ನೆಲದ ಗರ್ಭದೊಳಗೆ ಹುದುಗಿರುವ ಸತ್ಯ ಬೇರೆಯೇ ಇದೆ.
ದೇಶಕ್ಕೆ ಅನ್ನವನ್ನು ಬೆಳೆದು ಕೊಡುವ ರೈತರು ಇದೇ ನವೆಂಬರ್ 26ರಂದು ಪೊಲೀಸ್ ಅನುಮತಿ ಇಲ್ಲದೆ ಸಂಸತ್ತಿಗೆ ಮುತ್ತಿಗೆ ಹಾಕುವ ಹೋರಾಟವನ್ನು ಯಶಸ್ವಿಗೊಳಿಸಲು ಸಜ್ಜಾಗುತ್ತಿದ್ದಾರೆ. ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ತಾವು ಸಿದ್ಧರಿಲ್ಲ ಎಂದು ಅವರ ಸಂಘಟನೆಗಳು ಈಗಾಗಲೇ ಸ್ವಷ್ಟಪಡಿಸಿವೆ. ದೇಶಕ್ಕೆ ಬೇಕಾಗುವ ಕೈಗಾರಿಕಾ ಸರಕುಗಳನ್ನು ಉತ್ಪಾದಿಸುವುದರಲ್ಲಿ ನಿರತರಾಗಿರುವ ಕಾರ್ಮಿಕರು ಅಂದು ತಮ್ಮ ವೇತನವನ್ನು ಕಳೆದುಕೊಂಡು ಮುಷ್ಕರ ಮಾಡಲು ಅವರ ಆಡಳಿತ ವರ್ಗಗಳ ಪ್ರತಿನಿಧಿಗಳಿಗೆ ನೋಟಿಸ್ ನೀಡಿದ್ದಾರೆ. ಈ ಐತಿಹಾಸಿಕ ಮುಷ್ಕರದಲ್ಲಿ ಆಡಳಿತ ಪಕ್ಷ ಬಿಜೆಪಿಯ ಭಾಗವಾಗಿರುವ ಬಿಎಂಎಸ್ ಸಹ ಸೇರ್ಪಡೆಯಾಗಲು ಮುಂದೆ ಬಂದರೆ ಆಶ್ಚರ್ಯಪಡಬೇಕಾಗಿಲ್ಲ.
ಅಂದು ಗ್ರಾಮೀಣ ಭಾರತವು ಸ್ತಬ್ಧಗೊಳ್ಳಲಿದೆ. ಗ್ರಾಮೀಣ ಸಾರಿಗೆ ಬಂದ್ ಆಗಲಿದೆ. ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಲಿದೆ. ಗಣ್ಯರು ನಿಧನರಾದಾಗ ಆಚರಿಸುವ ರೀತಿಯಲ್ಲಿ ಎಲ್ಲೆಲ್ಲೂ ಹರತಾಳ ಆಚರಿಸಲಾಗುವುದು. ಎಲ್ಲಾ ರಾಜ್ಯಗಳಿಂದ ರೈತರು, ಕಾರ್ಮಿಕರು, ಇತರ ದುಡಿಯುವ ವರ್ಗದ ಜನಗಳು ರೈಲುಗಳಲ್ಲಿ, ಬಸ್ಸುಗಳಲ್ಲಿ ಪ್ರಯಾಣ ಮಾಡಿ ದೇಶದ ರಾಜಧಾನಿಯನ್ನು ತಲುಪಿ ಜಂತರ್ ಮಂತರ್ನಲ್ಲಿ ಪ್ರತಿಭಟಿಸುವರು. ಬಿಹಾರದಲ್ಲಿ ಎನ್ಡಿಎ ಕೂಟಕ್ಕೆ ದೊರೆತ ಚುನಾವಣಾ ಗೆಲುವಿನಿಂದ ಮೋದಿಯವರ ಜನವಿರೋಧಿ ನೀತಿಗಳ ವಿರುದ್ಧ ಈಗಾಗಲೇ ತೀರ್ಮಾನವಾಗಿರುವ ನವೆಂಬರ್ 26 ರ ಮುಷ್ಕರ ಮತ್ತು 27, 2020 ರಂದು ನಡೆಯಲಿರುವ ಗ್ರಾಮೀಣ ಹರತಾಳ ಯಾವ ಬದಲಾವಣೆ ಇಲ್ಲದೆ ನಡೆಯಲಿದೆ.
ಬಿಹಾರದಲ್ಲಿ ಮೋದಿ-ನಿತೀಶ್ ನೇತೃತ್ವದಲ್ಲಿ ಎನ್ಡಿಎ ಕೂಟಕ್ಕೆ ಬಹುಮತ ದೊರಕಿದ್ದರು ದೊಡ್ಡ ಪ್ರಮಾಣದಲ್ಲಿ ಎನ್ಡಿಎ ಕೂಟಕ್ಕೆ ವಿರುದ್ಧವಾಗಿ ಮತ ಚಲಾಯಿಸಿದವರೂ ಅಲ್ಲಿ ಇದ್ದಾರೆ. ಎನ್ಡಿಎ ಕೂಟವನ್ನು ಸೋಲಿಸಲು ಅವರು ಹಗಲು-ರಾತ್ರಿ ಶ್ರಮಿಸಿದ್ದಾರೆ. ಆದರೆ ಈ ದುಷ್ಟಕೂಟದ ತಂತ್ರ ಕುತಂತ್ರಗಳಿಂದಾಗಿ ಮಹಾ ಮೈತ್ರಿಗೆ ಗೆಲ್ಲಲಾಗಲಿಲ್ಲ. ಭಾರೀ ಪ್ರಮಾಣದ ಕಪ್ಪು ಹಣ, ಜಾತಿ ಬಲ, ತೋಳ್ಬಲ ಬಳಸಿಕೊಂಡು ಇಲ್ಲಿ ಚುನಾವಣೆಯನ್ನು ಗೆಲ್ಲಲಾಗಿದೆ. ಮತಯಂತ್ರಗಳ ಬಳಕೆ, ಮತ ಎಣಿಕೆಯಲ್ಲಿ ಸಾಕಷ್ಟು ಮೋಸಮಾಡಿ ಮುಕ್ತವಾದ ಮತದಾನ ಹಾಗೂ ಮತಎಣಿಕೆ ಆಗದಂತೆ ತಡೆಯಲಾಗಿದೆ ಎಂದು ಹೇಳಲಾಗುತ್ತದೆ.
ಮತದಾರರಿಗೆ ಮಾಡಲಾದ ಎಲ್ಲಾ ವಾಗ್ದಾನಗಳನ್ನು ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಜಾರಿಮಾಡಲಿದೆ ಎಂದು ಹೇಳಲು ಮೋದಿಜಿ ಮರೆಯಲಿಲ್ಲ. ಜಾರಿಯಾಗದಿದ್ದರೆ ನಿತೀಶ್ ಕುಮಾರ್ ಜವಾಬ್ದಾರರೇ ಹೊರತು ಮೋದಿಯವರಲ್ಲ! ಮೋದಿಯವರು ಜಾರಿಮಾಡುವುದಾದರೂ ಏನನ್ನು? ಅದು ಕೇವಲ ನವ ಉದಾರೀಕರಣ ನೀತಿಗಳು, ದೇಶದ ಅಭಿವೃದ್ಧಿಯ ಹೊಣೆಯನ್ನು ಲಾಭಕೋರ ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡುವುದು! ಇಂತಹ ವಿನಾಶಕಾರಿ ನೀತಿಗಳನ್ನು ಇಂದಲ್ಲ ನಾಳೆ ದೇಶದ ಜನತೆ ತಿರಸ್ಕರಿಸದೆ ಇರಲಾರದು.