ಭಾರತ ರಿಸರ್ವ್ ಬ್ಯಾಂಕಿನ ಆಂತರಿಕ ಕಾರ್ಯನಿರತ ಗುಂಪು (ಇಂಟರ್ನಲ್ ವರ್ಕಿಂಗ್ ಗ್ರೂಪ್ – ಐ.ಡಬ್ಲ್ಯೂ.ಜಿ.) ದೊಡ್ಡ ಕಾರ್ಪೊರೇಟ್ ಕಂಪನಿಗಳು ಮತ್ತು ಕೈಗಾರಿಕಾ ಮನೆತನಗಳು ತಮ್ಮದೇ ಆದ ಬ್ಯಾಂಕುಗಳನ್ನು ಪ್ರಾರಂಭಿಸಲು ಬ್ಯಾಂಕುಗಳ ನೋಂದಾವಣೆ ಕಾಯಿದೆ, 1949(ಬ್ಯಾಂಕಿಂಗ್ ರಿಜಿಸ್ಟ್ರೇಷನ್ ಆಕ್ಟ್, 1949) ಯನ್ನು ತಿದ್ದುಪಡಿ ಮಾಡಬೇಕೆಂದು ಶಿಫಾರಸು ಮಾಡಿರುವ ಪ್ರಸ್ತಾವವನ್ನು ಸಲ್ಲಿಸಿದೆ. ಮತ್ತೊಂದು ಪ್ರಸ್ತಾವದ ಮೂಲಕ ರೂ.50,000 ಕೋಟಿಗೂ ಹೆಚ್ಚು ಗಾತ್ರದ ಆಸ್ತಿ ಹೊಂದಿರುವ ಮತ್ತು ಒಂದು ದಶಕ ಕಾಲದ ವ್ಯವಹಾರದ ದಾಖಲೆ ಹೊಂದಿರುವ (ಕಾರ್ಪೊರೇಟ್ ಮನೆತನಗಳ ನಿಯಂತ್ರಣದಲ್ಲಿರುವ ಕಂಪನಿಗಳನ್ನೂ ಒಳಗೊಂಡಂತೆ) ದೊಡ್ಡ ಬ್ಯಾಂಕಿಂಗೇತರ ಹಣಕಾಸು ಕಂಪನಿ(ಎನ್.ಬಿ.ಎಫ್.ಸಿ.)ಗಳನ್ನು ಬ್ಯಾಂಕುಗಳಾಗಿ ಪರಿವರ್ತಿಸಬೇಕೆಂದೂ ಶಿಫಾರಸು ಮಾಡಿದೆ.
ವಾಸ್ತವದಲ್ಲಿ ಈ ಶಿಫಾರಸುಗಳು ಬ್ಯಾಂಕಿಂಗ್ ವಲಯವನ್ನು ದೊಡ್ಡ ವಾಣಿಜ್ಯ ಮನೆತನಗಳಿಗೆ ತೆರೆಯಬೇಕೆಂಬ ಮೋದಿ ಸರ್ಕಾರದ ಇಂಗಿತವನ್ನು ಸೂಚಿಸುತ್ತವೆ. ಇವು ಅಪಾಯಕಾರಿ ಪ್ರಸ್ತಾವಗಳಾಗಿದ್ದು ಹಣಕಾಸು ವ್ಯವಸ್ಥೆಯನ್ನು ಹಾಳುಗೆಡವಲಿವೆ ಮತ್ತು ಜನರ ಉಳಿತಾಯದ ಹಣವನ್ನು ಅಪಾಯಕ್ಕೆ ಒಡ್ಡಲಿವೆ.
ಈ ಪ್ರಸ್ತಾವಗಳನ್ನು ಜಾರಿ ಮಾಡಿದ್ದೇ ಆದರೆ, ಅಂಬಾನಿಗಳು ಮತ್ತು ಅದಾನಿಗಳು ಬ್ಯಾಂಕುಗಳನ್ನು ತೆರೆಯಲು ನೇರ ಅರ್ಜಿ ಸಲ್ಲಿಸಬಹುದು ಮತ್ತು ಕಾರ್ಪೊರೇಟ್‌ಗಳು ನಡೆಸುತ್ತಿರುವ ಎನ್.ಬಿ.ಎಫ್.ಸಿ.ಗಳನ್ನು ಬ್ಯಾಂಕುಗಳಾಗಿ ಪರಿವರ್ತಿಸಬಹುದು. ಈಗ ಅಸ್ತಿತ್ವದಲ್ಲಿರುವ ಟಾಟಾ, ಆದಿತ್ಯ ಬಿರ್ಲಾ ಮತ್ತು ಬಜಾಜ್‌ಗಳ ಒಡೆತನದ ಎನ್.ಬಿ.ಎಫ್.ಸಿ.ಗಳು ಬ್ಯಾಂಕುಗಳಾಗಿ ಮಾರ್ಪಾಟಾಗಲಿವೆ. ಕಾರ್ಪೊರೇಟ್‌ಗಳು ಮತ್ತು ಕೈಗಾರಿಕಾ ಮನೆತನಗಳು ನಡೆಸಬಹುದಾದ ಬ್ಯಾಂಕುಗಳು ಠೇವಣಿದಾರರ ಉಳಿತಾಯದ ಹಣದ ಮೇಲೆ ಹತೋಟಿ ಹೊಂದಿ ಅದನ್ನು ತಮ್ಮ ಇತರ ಉದ್ಯಮಗಳಿಗೆ ಮತ್ತಿತರ ವ್ಯವಹಾರಗಳಿಗೆ ಬಳಕೆ ಮಾಡಬಹುದು. ಈಗಿರುವ ಹಣಕಾಸು ವಲಯದ ನಿಯಂತ್ರಣದ ಸ್ಥಿತಿಯಲ್ಲಿ, ಬ್ಯಾಂಕುಗಳ ಪ್ರವರ್ತಕರು ಸುಲಭವಾಗಿ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ಮತ್ತು ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಂಪನ್ಮೂಲಗಳನ್ನು ತಮ್ಮದೇ ಆದ ಹಣಕಾಸೇತರ ವ್ಯವಹಾರಗಳ ಹಿತಾಸಕ್ತಿಗೆ ಬಾಚಿಕೊಳ್ಳುವ ಸಾಧ್ಯತೆಗಳೇ ಹೆಚ್ಚು.
ರಿಸರ್ವ್ ಬ್ಯಾಂಕಿನ ಐ.ಡಬ್ಲ್ಯೂ.ಜಿ. ಸಮಾಲೋಚನೆ ಮಾಡಿದ ಬ್ಯಾಂಕಿಂಗ್ ಕ್ಷೇತ್ರದ ಹತ್ತು ಪರಿಣಿತರಲ್ಲಿ ಒಬ್ಬರ ಹೊರತಾಗಿ ಉಳಿದೆಲ್ಲರೂ ಬ್ಯಾಂಕುಗಳನ್ನು ಪ್ರಾರಂಭಿಸಲು ಕಾರ್ಪೊರೇಟ್‌ಗಳು ಹಾಗೂ ಕೈಗಾರಿಕಾ ಮನೆತನಗಳಿಗೆ ಅವಕಾಶ ನೀಡುವುದರ ವಿರುದ್ಧ ಇದ್ದಾಗ್ಯೂ ಐ.ಡಬ್ಲ್ಯೂ.ಜಿ. ಈ ನಿಲುವು ತಳೆದಿರುವುದು ಆಶ್ಚರ್ಯವೇ ಸರಿ. ಹಾಗಾಗಿ ಸರ್ಕಾರದ ಪ್ರೇರೇಪಣೆಯಿಂದಲೇ ಐ.ಡಬ್ಲ್ಯೂ.ಜಿ.ಯು ಈ ಪ್ರಸ್ತಾವಗಳನ್ನು ನೀಡಿರಬಹುದೆ ಎಂಬ ಸಂದೇಹ ಬರುತ್ತಿದೆ.
ಅಲ್ಲದೆ ಈ ನಡೆಗೆ ಹಣಕಾಸು ಪರಿಣಿತರು ಮತ್ತು ಮಾಜಿ ಬ್ಯಾಂಕರುಗಳು ಹಾಗೂ ಅರ್ಥಶಾಸ್ತ್ರಜ್ಞರಿಂದ ಪ್ರಬಲ ವಿರೋಧ ಬರುತ್ತಿದೆ. ಮುಖ್ಯವಾಗಿ ಮಾಜಿ ಆರ್.ಬಿ.ಐ. ಗೌವರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಡೆಪ್ಯುಟಿ ಗೌವರ್ನರ್ ವಿರಲ್ ಆಚಾರ್ಯ ಇಬ್ಬರೂ ಈ ನಡೆಯ ವಿರುದ್ಧ ಮಾತನಾಡಿರುವುದು ಗಮನಾರ್ಹವಾದುದು. ಏಕೆಂದರೆ ಅವರಿಬ್ಬರೂ ಖಾಸಗಿ ವಲಯದ ಬ್ಯಾಂಕಿಂಗನ್ನು ಪ್ರತಿಪಾದಿಸುವವರು.
ಕಾರ್ಪೊರೇಟ್ ಮನೆತನಗಳಿಂದ ಬ್ಯಾಂಕುಗಳನ್ನು ನಡೆಸುವುದು ಇನ್ನೂ ಕೆಲವು ನೈತಿಕ ಅಪಾಯಗಳನ್ನು ಮತ್ತು ಸಾಲ ನೀಡುವಲ್ಲಿ ಸಂಪೂರ್ಣ ವಿರೂಪಗಳನ್ನು ಆಹ್ವಾನಿಸುತ್ತದೆ. ರೈತರು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸಾಲ ನೀಡಿಕೆಯಿಂದ ಹೊರಗಿಡಲಾಗುತ್ತದೆ. ಹಣಕಾಸು-ಕೈಗಾರಿಕಾ ಸಂಘ-ಸಂಸ್ಥೆಗಳಿಗೆ ಸೇರಿದ ದೊಡ್ಡ ದೊಡ್ಡ ಕಂಪನಿಗಳು ಸಾಲ ಪಡೆಯುವಲ್ಲಿ ಆದ್ಯತೆ ಮತ್ತು ಅನುಕೂಲಕರ ನಿಬಂಧನೆಗಳಡಿಯಲ್ಲಿ ಪಡೆಯುತ್ತವೆ.
1969ರ ಬ್ಯಾಂಕ್ ರಾಷ್ಟ್ರೀಕರಣದ ಪ್ರಮುಖ ಉದ್ದೇಶಗಳಲ್ಲಿ ದೊಡ್ಡ ವಾಣಿಜ್ಯ ಮನೆತನಗಳು ಮತ್ತು ಬ್ಯಾಂಕುಗಳ ನಡುವಿನ ಅಪವಿತ್ರ ಮೈತ್ರಿಯನ್ನು ಕಡಿದುಹಾಕಬೇಕೆಂಬುದು ಒಂದಾಗಿತ್ತು; ಆ ಮೈತ್ರಿಯು ಸಾಲ ನೀಡಿಕೆಯಲ್ಲಿ ಗಂಭೀರ ಲೋಪಗಳಿಗೆ ಕಾರಣವಾಗುತ್ತಿತ್ತು ಮತ್ತು ಮುಖ್ಯ ವಲಯಗಳಾದ ಕೃಷಿ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊರಗಿಡುತ್ತಿತ್ತು; ಆ ಮೂಲಕ ಆರ್ಥಿಕ ಬೆಳವಣಿಗೆಯ ದರವನ್ನು ಕುಂಠಿತಗೊಳಿಸಿತ್ತು ಹಾಗೂ ಬಡತನ ನಿರ್ಮೂಲನೆಯಲ್ಲಿ ದೊಡ್ಡ ತೊಡಕಾಗಿ ಪರಿಣಮಿಸಿತ್ತು.
ರಾಷ್ಟ್ರೀಕರಣದ ಮುಂಚಿನ ದಿನಗಳಲ್ಲಿ, ದಿ ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ ಬಿರ್ಲಾ ಕಂಪನಿಗಳ ಬಗ್ಗೆ ಒಲವನ್ನು ಹೊಂದಿದ್ದರೆ, ದಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ – ಥಾಪರ್ ಕಂಪನಿಗಳಿಗೆ, ದಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ – ಟಾಟಾ ಕಂಪನಿಗಳತ್ತ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿವರ್ಸಲ್ ಬ್ಯಾಂಕ್ ಆಫ್ ಇಂಡಿಯಾಗಳು ಸಾಹು-ಜೈನ್ ಗುಂಪಿನ ನಿಯಂತ್ರಣದಲ್ಲಿದ್ದವು.
ಮೋದಿ ಸರ್ಕಾರದ ಅಡಿಯಲ್ಲಿ, ಆರ್ಥಿಕ ಏಕಚಕ್ರಾಧಿಪತ್ಯವು ಬಹುತೇಕ ವಾಣಿಜ್ಯ ಪ್ರದೇಶಗಳನ್ನು ನಿಯಂತ್ರಣ ಮಾಡುತ್ತಿರುವಾಗ ಮತ್ತು ಚಮಚಾ ಬಂಡವಾಳವಾದವು ಅಭಿವೃದ್ಧಿ ಹೊಂದುತ್ತಿರುವಾಗ, ಕಾರ್ಪೊರೇಟ್ ಮನೆತನಗಳಿಗೆ ಬ್ಯಾಂಕುಗಳ ನಿಯಂತ್ರಣ ನೀಡುವುದು ಹಿಮ್ಮುಖವಾದ ಹಾಗೂ ಅಪಾಯಕಾರಿಯಾದ ಕ್ರಮವಾಗುತ್ತದೆ. ಅದು ಬಂಡವಾಳದ ಸಾಂದ್ರೀಕರಣಕ್ಕೆ ಕಾರಣವಾಗುತ್ತದೆ ಮತ್ತು ಅಸಮಾನತೆಯನ್ನು ಹೆಚ್ಚಿಸುತ್ತದೆ.
ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳಿಗೆ ಪರವಾನಗಿ ನೀಡುವುದು 1993ರಲ್ಲಿ ಪ್ರಾರಂಭವಾಯಿತು. ಆದರೆ 2013ರಲ್ಲಿ ಮಾತ್ರವೇ, ಯುಪಿಎ ಸರ್ಕಾರದಡಿಯಲ್ಲಿ, ಬ್ಯಾಂಕುಗಳಿಗೆ ಪರವಾನಿಗೆ ಅನ್ವಯಿಸುವಂತೆ ಆರ್.ಬಿ.ಐ. ಮಾರ್ಗದರ್ಶಿ ಸೂತ್ರಗಳು ಬದಲಾದವು, ಬ್ಯಾಂಕೇತರ ಕಾರ್ಪೊರೇಟ್ ಕಂಪನಿಗಳೂ ಅರ್ಹತೆ ಪಡೆದವು. ಅವರ ಪ್ರವೇಶಕ್ಕೆ ಅನುಮತಿ ದೊರಕಿದಾಗ ನಿಯಮಗಳಿಗೆ ಒಳಗಾಗಬೇಕಾಗಿತ್ತು: ಹಣಕಾಸಿನ ಚಟುವಟಿಕೆಗಳಿಗೆ ಅಥವಾ ಈ ಸಂಸ್ಥೆಗಳ ಬ್ಯಾಂಕೇತರ ವ್ಯವಹಾರಗಳಿಂದ ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ಸುತ್ತ ಬೇಲಿ ಹಾಕುವ ಸಲುವಾಗಿ ನಿರ್ವಹಣೆಯನ್ನು ‘ಕಾರ್ಯನಿರ್ವಹಿಸದ ಹಣಕಾಸು ಹಿಡುವಳಿ ಕಂಪನಿ(ನಾನ್-ಆಪರೇಟಿವ್ ಫೈನಾನ್ಶಿಯಲ್ ಹೋಲ್ಡಿಂಗ್ ಕಂಪನಿ)ಯ ಮೂಲಕ ಕಾರ್ಯನಿರ್ವಹಿಸಬೇಕಾದ ನಿಯಮಗಳಿಗೆ ಒಳಗಾಗಬೇಕಿತ್ತು. ಆದರೆ, ಈ ಮಾರ್ಗದರ್ಶಿ ಸೂತ್ರಗಳ ಹೊರತಾಗಿಯೂ, ಪರವಾನಿಗೆ ಪಡೆದ 14ರಲ್ಲಿ ಯಾವುದೂ ಇಲ್ಲಿಯವರೆಗೂ ಕಾರ್ಪೊರೇಟ್‌ಗಳಿಗೆ ಹೋಗಿಲ್ಲ. 2013ರ ನಂತರ ಎರಡು ಪರವಾನಿಗೆಗಳನ್ನು ಮಾತ್ರ ಐಡಿಎಫ್‌ಸಿ ಮತ್ತು ಬಂಧನ್ ಬ್ಯಾಂಕ್‌ಗೆ ನೀಡಲಾಗಿದೆ. ಅವು ಹಣಕಾಸು ಸಂಸ್ಥೆಗಳಾಗಿವೆ, ಹಣಕಾಸೇತರ ಕಾರ್ಪೊರೇಟ್‌ಗಳಲ್ಲ.
ಪರವಾನಿಗೆ ಪಡೆದ ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳ ಸಾಧನೆ 1993 ರಿಂದ ಉತ್ಸಾಹದಾಯಕವಾಗಿಲ್ಲ, ಇಲ್ಲಿಯವರೆಗೆ ಕೇವಲ 9 ಮಾತ್ರ ಅಸ್ತಿತ್ವದಲ್ಲಿವೆ. ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್‌ಗಳಂತಹ ಕೆಲವು ಅದ್ಭುತ ವೈಫಲ್ಯಗಳನ್ನು ಕಂಡಿವೆ; ಎರಡನೆಯದರ ಪ್ರವರ್ತಕರು ವಂಚನೆ ಮತ್ತು ಹಣ ವರ್ಗಾವಣೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಸಾಲ ನೀಡಿಕೆಯಲ್ಲಿ ಖಾಸಗಿ ಬ್ಯಾಂಕುಗಳು 2015 ರಿಂದ ತಮ್ಮ ಪಾಲನ್ನು ಹೆಚ್ಚು ಮಾಡಿಕೊಂಡಿವೆ, ಏಕೆಂದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಎನ್.ಪಿ.ಎ.(ಹಿಂತಿರುಗಿ ಬರಲಾರದ ಸಾಲ) ಹೆಚ್ಚಾಗುತ್ತಿದೆ. ಸರ್ಕಾರದ ಸೂಚನೆಯಿಂದಾಗಿ, ಮುಖ್ಯವಾಗಿ ಮೂಲಸೌಕರ್ಯ ವಲಯದಲ್ಲಿ, ಕಾರ್ಪೊರೇಟ್‌ಗಳಿಗೆ ತೋರಿದ ಅನುಗ್ರಹದಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಎನ್.ಪಿ.ಎ. ತೀವ್ರವಾಗಿ ಏರಿತು.
ಕಾರ್ಪೊರೇಟ್‌ಗಳನ್ನು ಬ್ಯಾಂಕ್ ನಡೆಸುವಲ್ಲಿ ಒಳಗೊಳ್ಳಬಾರದೆನ್ನುವ ಬ್ಯಾಂಕ್ ರಾಷ್ಟ್ರೀಕರಣದ ನಂತರದ ಎಚ್ಚರಿಕೆಯ ನಡೆಯು 2013 ರ ಮಾರ್ಗದರ್ಶಿ ಸೂತ್ರದಿಂದಾಗಿ ಸಡಿಲವಾಗತೊಡಗಿತು. ಈ ಮೇಲೆ ಹೇಳಿದಂತೆ ಐ.ಡಬ್ಲ್ಯೂ.ಜಿ. ವರದಿಯು ಇದನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ ಮತ್ತು ಕಾರ್ಪೊರೇಟ್‌ಗಳು ಮತ್ತು ಕೈಗಾರಿಕಾ ಮನೆತನಗಳು ಬ್ಯಾಂಕುಗಳನ್ನು ನಡೆಸಲು ಒಂದು ತತ್ವಾಧಾರವನ್ನು ಒದಗಿಸುತ್ತಿದೆ: “ಅವರು ಬಂಡವಾಳದ ಬಹುಮುಖ್ಯ ಮೂಲಾಧಾರ ಮತ್ತು ಅವರು ಬ್ಯಾಂಕಿಂಗಿಗೆ ಅವರ ಅನುಭವಗಳನ್ನು, ನಿರ್ವಹಣಾ ಪರಿಣತಿಯನ್ನು ಮತ್ತು ಕಾರ್ಯತಂತ್ರದ ದಿಕ್ಕುದೆಸೆಗಳನ್ನು ತರುತ್ತಾರೆ.” ಈ ಕಾರ್ಯಕಾರಿ ಗುಂಪು ಸಮಾಲೋಚನೆ ಮಾಡಿದ ಆ ಕ್ಷೇತ್ರದ ಹತ್ತು ಪರಿಣಿತರಲ್ಲಿ ಒಬ್ಬರ ಹೊರತಾಗಿ ಉಳಿದೆಲ್ಲರೂ ಬ್ಯಾಂಕುಗಳನ್ನು ಪ್ರಾರಂಭಿಸಲು ಕಾರ್ಪೊರೇಟ್‌ಗಳು ಹಾಗೂ ಕೈಗಾರಿಕಾ ಮನೆತನಗಳಿಗೆ ಅವಕಾಶ ನೀಡುವುದರ ವಿರುದ್ಧ ಇದ್ದಾಗ್ಯೂ ಐ.ಡಬ್ಲ್ಯೂ.ಜಿ. ಈ ನಿಲುವು ತಳೆದಿರುವುದು ಆಶ್ಚರ್ಯವೇ ಸರಿ. ಹಾಗಾಗಿ ಸರ್ಕಾರದ ಪ್ರೇರೇಪಣೆಯಿಂದಲೇ ಐ.ಡಬ್ಲ್ಯೂ.ಜಿ.ಯು ಈ ಪ್ರಸ್ತಾವಗಳನ್ನು ನೀಡಿರಬಹುದೆ ಎಂಬ ಸಂದೇಹ ಬರುತ್ತಿದೆ.
ಆರ್.ಬಿ.ಐ.ನ ಈ ನಡೆಗೆ ಹಣಕಾಸು ಪರಿಣಿತರು ಮತ್ತು ಮಾಜಿ ಬ್ಯಾಂಕರುಗಳು ಹಾಗೂ ಅರ್ಥಶಾಸ್ತ್ರಜ್ಞರಿಂದ ಪ್ರಬಲ ವಿರೋಧ ಬರುತ್ತಿದೆ. ಮಾಜಿ ಆರ್.ಬಿ.ಐ. ಗೌವರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಡೆಪ್ಯುಟಿ ಗೌವರ್ನರ್ ವಿರಲ್ ಆಚಾರ್ಯ ಇಬ್ಬರೂ ಈ ನಡೆಯ ವಿರುದ್ಧ ಮಾತನಾಡಿದ್ದಾರೆ. “ಭಾರಿ ದೊಡ್ಡ ಆರ್ಥಿಕ ಹಾಗೂ ರಾಜಕೀಯ ಅಧಿಕಾರ ಕೇಂದ್ರೀಕರಣಗೊಳ್ಳುವ” ಅಪಾಯವಿದೆ ಎಂದು ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ. ಮುಂದುವರಿದು ಶಂಕೆ ವ್ಯಕ್ತಪಡಿಸಿದ ಅವರು ಅದು ಚಮಚಾ ಬಂಡವಾಳದಿಂದ ಪ್ರೇರಿತವಾದದ್ದು ಎಂದರು. ಈ ಇಬ್ಬರು ಮಾಜಿ ಬ್ಯಾಂಕರುಗಳ ವಿರೋಧವು ಗಮನಾರ್ಹವಾದುದು. ಏಕೆಂದರೆ ಅವರಿಬ್ಬರೂ ಖಾಸಗಿ ವಲಯದ ಬ್ಯಾಂಕಿಂಗನ್ನು ಪ್ರತಿಪಾದಿಸುವವರಾಗಿದ್ದಾರೆ.
ಮೋದಿ ಸರ್ಕಾರವು ಬಹಳ ಜೋರಾಗಿ ಹಣಕಾಸು ವಲಯದ ಖಾಸಗೀಕರಣವನ್ನು ಬೆಂಬತ್ತಿ ಹೋಗುತ್ತಿದೆ. ಅದಕ್ಕಾಗಿ, ಶೇರು ಮಾರಾಟದ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ದುರ್ಬಲಗೊಳಿಸಲು ಮತ್ತು ಆನಂತರ ಸಹಜವಾಗಿಯೇ ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಕೆಲಸ ಮಾಡುತ್ತಿದೆ. ಸೋಲುತ್ತಿದ್ದ ಲಕ್ಷ್ಮೀ ವಿಲಾಸ ಬ್ಯಾಂಕ್ ವಿಚಾರದಲ್ಲಿ ಅದನ್ನು ವಶಪಡಿಸಿಕೊಳ್ಳಲು ಆರ್.ಬಿ.ಐ. ಒಂದು ವಿದೇಶಿ ಬ್ಯಾಂಕ್, ಡಿಬಿಎಸ್ ಬ್ಯಾಂಕಿಗೆ ಪರವಾನಿಗೆ ನೀಡಿದೆ. ಕೆಲವು ದುರ್ಬಲ ಸಾರ್ವಜನಿಕ ಬ್ಯಾಂಕುಗಳನ್ನು ಕಾರ್ಪೊರೇಟ್ ಅಧೀನದಲ್ಲಿರುವ ಖಾಸಗಿ ಬ್ಯಾಂಕಿಗೆ ವಹಿಸಿಕೊಡಬಹುದಾದ ಸಮಯ ಬರಬಹುದು.
ಮೋದಿ ಸರ್ಕಾರವು ಕಾರ್ಪೊರೇಟ್ ಹಾಗೂ ಕೈಗಾರಿಕಾ ಮನೆತನಗಳಿಗೆ ಬ್ಯಾಂಕುಗಳ ಒಡೆತನ ಮತ್ತು ಅವುಗಳನ್ನು ನಡೆಸುವ ಅವಕಾಶ ನೀಡುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಾಶಮಾಡಲು ಯಾವುದೇ ಕಾರಣಕ್ಕೂ ಬಿಡಬಾರದು.