ಜಾತಿ ಸಮುದಾಯಗಳ ಒಲೈಕೆಯ ಮತ್ತು ಮತ ಬ್ಯಾಂಕ್ ರಾಜಕಾರಣದ ಭಾಗವಾಗಿ ಸಮುದಾಯಗಳ ಅಭಿವೃದ್ಧಿ ಪ್ರಾಧಿಕಾರ ಅಥವಾ ನಿಗಮಗಳ ಸ್ಥಾಪನೆ ಮಾಡಲಾಗುತ್ತಿದೆಯೇ ಹೊರತು ಶೋಷಿತ ಜನತೆಯ ನೈಜ ಅಭಿವೃದ್ಧಿಗಾಗಿ ಅಲ್ಲ, ಇದೊಂದು ವಂಚನೆಯ ರಾಜಕಾರಣ ಎಂದು ಭಾರತ ಕಮ್ಯುನಿಷ್ಠ್ ಪಕ್ಷ ( ಮಾರ್ಕ್ಸ್‌ವಾದಿ) ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.
ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಜಾತಿ ಆಧಾರಿತ ಪ್ರಾಧಿಕಾರಗಳನ್ನು ಘೋಷಿಸುತ್ತಿದೆ ಇದರಿಂದ ಹೊಸ ಹೊಸ ಜಾತಿ ಪ್ರಾಧಿಕಾರಗಳ ಘೋಷಣೆಗೆ ಒತ್ತಾಯವು ಬೆಳೆದು ಬರುತ್ತಿದೆ ಇದು ಹೀಗೆ ಮುಂದುವರೆದಲ್ಲಿ ಆಡಳಿತ ವೆಚ್ಚದ ಹೆಚ್ಭಿನ ಭಾರವನ್ನು ಜನತೆ ಹೊರಬೇಕಾಗುತ್ತದೆ ಎಂದು ಸಿಪಿಐ(ಎಂ) ಎಚ್ಚರಿಸಿದೆ.
ಈಗಾಗಲೇ ಇರುವ ಅಭಿವೃದ್ಧಿ ಪ್ರಾಧಿಕಾರಗಳು ಮತ್ತು ನಿಗಮಗಳು ಅಗತ್ಯ ಅನುದಾನವಿಲ್ಲದೇ ಬಳಲುತ್ತಿವೆ ಮಾತ್ರವಲ್ಲಾ ಇರುವ ಅನುದಾನವನ್ನು ಲೂಟಿಗೊಳಪಡಿಸುವ ಬಹುತೇಕ ವ್ಯಾಪಕ ಭ್ರಷ್ಠಾಚಾರದ ಕೂಪಗಳಾಗಿವೆ. ಇದಕ್ಕೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ನಿಗಮಗಳು ಹೊರತಾಗಿಲ್ಲ.
ಇವು ಜನತೆಯ ನಡುವೆ ಅವರನ್ನು ಒಡೆದಾಳಲು ಅವರ ನಡುವೆ ಜಾತಿ ಭಾವನೆಯನ್ನು ಗಟ್ಟಿಗೊಳಿಸಲು ಮತ್ತು ಜಾತಿಗಳೊಳಗೆ ವಿಭಜನೆಗಳನ್ನುಂಟು ಮಾಡಿ ಆಳುವ ವರ್ಗಗಳ ಶೋಷಣೆಯನ್ನು ಬಲಗೊಳಿಸಲು ಸಹಕಾರಿಯಾಗುತ್ತವೆ ಎಂದು ಸಿಪಿಐ(ಎಂ) ವಿಶ್ಲೇಷಿಸುತ್ತದೆ.
ಉಳುವವನನ್ನು ಮತ್ತು ಉಳುವ ಅನುಭವ ಇರುವವನನ್ನು ಭೂ ಒಡೆಯನನ್ನಾಗಿಸುವ ಭೂ ಸುಧಾರಣೆಯು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೈಗಳಲ್ಲಿ ಕೇಂದ್ರೀಕೃತ ಗೊಂಡಿರುವ ಅಧಿಕಾರ ಮತ್ತು ಸಂಪನ್ಮೂಲಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವಿಕೇಂದ್ರೀಕರಿಸುವುದು ಸಾರ್ವಜನಿಕ ರಂಗದಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆಯನ್ನು ವ್ಯಾಪಕಗೊಳಿಸುವುದು. ಖಾಸಗೀಕರಣದ ನೀತಿಗಳನ್ನು ಕೈಬಿಡುವುದು ಮತ್ತು ಸರಕಾರದ ವಿವಿದ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲ ಉದ್ಯೋಗಗಳನ್ನು ತುಂಬುವುದು, ಭಾಷೆ ಹಾಗೂ ಸಂಸ್ಕೃತಿ ರಕ್ಷಣೆಗೆ ಕ್ರಮವಹಿಸುವುದು ಮುಂತಾದ ಕ್ರಮಗಳು ಮಾತ್ರವೇ ಎಲ್ಲ ಶೋಷಿತರ ನೈಜ ಅಭಿವೃದ್ದಿಗೆ ನೆರವಾಗುವ ಕ್ರಮಗಳಾಗುತ್ತವೆ ಎಂದು ಸಿಪಿಐ(ಎಂ) ವಿವರಿಸಿದೆ.
ವಿವಿಧ ಜನ ಸಮುದಾಯಗಳ ಅಭಿವೃದ್ಧಿಯ ಕುರಿತಂತೆ ನಿಜವಾದ ಕಾಳಜಿಯನ್ನು ರಾಜ್ಯ ಸರಕಾರ ಹೊಂದಿದ್ದರೇ, ಜನ ವಿಭಜನೆಗೆ ಕ್ರಮವಹಿಸುವ ಸಂಕುಚಿತ ರಾಜಕಾರಣವನ್ನು ಬಿಟ್ಟು, ಉಳುವವನನ್ನು ಭೂ ಒಡೆಯನನ್ನಾಗಿಸುವ, ಸಾರ್ವಜನಿಕ ರಂಗದಲ್ಲಿ ವ್ಯಾಪಕವಾಗಿ ಬಂಡವಾಳ ಹೂಡಿಕೆ ಮಾಡುವ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಸಂಪನ್ಮೂಲಗಳ ವಿಕೇಂದ್ರೀಕರಣಕ್ಕೆ ಕ್ರಮ ವಹಿಸಲಿ ಎಂದು ಸಿಪಿಐಎಂ ಒತ್ತಾಯಿಸಿದೆ.
ಮರಾಠಾ ಸಮುದಾಯದ ಪ್ರಾಧಿಕಾರದ ರಚನೆಯ ಹಿನ್ನೆಲೆಯು ರಾಜ್ಯದಲ್ಲಿ ಭಾಷಾ ಸಾಮರಸ್ಯ ಹಾಳಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರಕಾರದ ಮೇಲಿರುವಾಗ, ಅದಕ್ಕೆ ಕುಮ್ಮಕ್ಕು ಕೊಡುವ ರೀತಿಯ ಆಡಳಿತ ಪಕ್ಷದ ನಾಯಕರ, ಮಂತ್ರಿಗಳ ಹೇಳಿಕೆಗಳು ಖಂಡನಾರ್ಹವಾಗಿವೆ.
ಯು. ಬಸವರಾಜ
ಕಾರ್ಯದರ್ಶಿ