-ರಾಷ್ಟ್ರಪತಿಗಳಿಗೆ ಪ್ರತಿಪಕ್ಷಗಳ ಮನವಿ ಪತ್ರ
ಡಿಸೆಂಬರ್ 9 ರಂದು, ಈಗ ನಡೆಯುತ್ತಿರುವ ಭಾರತೀಯ ರೈತಾಪಿ ಜನಗಳ ಚಾರಿತ್ರಿಕ ಹೋರಾಟಕ್ಕೆ ತಮ್ಮ ಸೌಹಾರ್ದವನ್ನು ವ್ಯಕ್ತಪಡಿಸಿರುವ ಇಪ್ಪತ್ತಕ್ಕೂ ಹೆಚ್ಚು ಪಕ್ಷಗಳ ಪರವಾಗಿ ರಾಷ್ಟ್ರಪತಿಗಳಿಗೆ ಒಂದು ಮನವಿ ಪತ್ರವನ್ನು ಸಲ್ಲಿಸಲಾಯಿತು. ಕೊವಿಡ್ ನಿರ್ಬಂಧಗಳಿಂದಾಗಿ ಈ ಪಕ್ಷಗಳ ಪರವಾಗಿ ಐವರು ಹಿರಿಯ ಮುಖಂಡರ ನಿಯೋಗ ರಾಷ್ಟ್ರಪತಿ ಭವನಕ್ಕೆ ಹೋಗಿ ಈ ಮನವಿ ಪತ್ರವನ್ನು ಸಲ್ಲಿಸಿತು, ‘ಅವರ ಸರಕಾರ’, “ಭಾರತದ ಅನ್ನದಾತರು ಎತ್ತಿರುವ ಬೇಡಿಕೆಗಳನ್ನು ಸ್ವೀಕರಿಸುವಂತೆ ಮನವೊಲಿಸಬೇಕು” ಎಂದು ಪತ್ರದಲ್ಲಿ ರಾಷ್ಟ್ರಪತಿಗಳನ್ನು ಮನವಿ ಮಾಡಲಾಗಿದೆ.
ರಾಹುಲ್ ಗಾಂಧಿ (ಕಾಂಗ್ರೆಸ್), ಶರದ್ ಪವಾರ್(ಎನ್.ಸಿ.ಪಿ.). ಸೀತಾರಾಂ ಯೆಚುರಿ (ಸಿಪಿಐ(ಎಂ)), ಡಿ.ರಾಜ (ಸಿಪಿಐ) ಮತ್ತು ಟಿ ಕೆ ಎಸ್ ಇಳಂಗೋವನ್(ಡಿಎಂಕೆ) ಈ ನಿಯೋಗದಲ್ಲಿದ್ದರು. ಅವರು ಸಲ್ಲಿಸಿದ ಮನವಿ ಪತ್ರದ ಪೂರ್ಣ ಪಾಠವನ್ನು ಸಿಪಿಐ(ಎಂ)ನ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು. ಅದನ್ನು ಈ ಮುಂದೆ ಕೊಡಲಾಗಿದೆ:
ಪ್ರಿಯ ರಾಷ್ಟ್ರಪತಿಗಳೇ,
ಇಪ್ಪತ್ತಕ್ಕೂ ಹೆಚ್ಚು ರಾಜಕೀಯ ಪಕ್ಷಗಳು, ರಾಜ್ಯ ಸರಕಾರಗಳನ್ನು ನಡೆಸುವ ಹಲವು ಪಕ್ಷಗಳನ್ನೂ ಸೇರಿ, ಈಗ ನಡೆಯುತ್ತಿರುವ ಭಾರತೀಯ ರೈತಾಪಿ ಜನಗಳ ಚಾರಿತ್ರಿಕ ಹೋರಾಟಕ್ಕೆ ತಮ್ಮ ಸೌಹಾರ್ದವನ್ನು ವ್ಯಕ್ತಪಡಿಸಿವೆ ಮತ್ತು ನಿನ್ನೆಯ, ಪ್ರತಿಗಾಮಿ ಕೃಷಿ ಕಾನೂನುಗಳನ್ನು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸುವ ಡಿಸೆಂಬರ್ 8ರ ಭಾರತ ಬಂದ್ ಕರೆಗೆ ಹೃದಯಾಂತರಾಳದ ಬೆಂಬಲವನ್ನು ಕೊಟ್ಟಿವೆ.
ಸಂಸತ್ತಿನಲ್ಲಿ ಪ್ರಜಾಪ್ರಭುತ್ವ-ವಿರೋಧಿ ರೀತಿಯಲ್ಲಿ ಒಂದು ಸಂರಚನಾತ್ಮಕ ಚರ್ಚೆ ಮತ್ತು ಮತದಾನ ನಡೆಯದಂತೆ ತಡೆದು ಪಾಸು ಮಾಡಿಕೊಂಡ ಈ ಹೊಸ ಕೃಷಿ ಕಾಯ್ದೆಗಳು ಭಾರತ ಆಹಾರ ಭದ್ರತೆಗೆ ಬೆದರಿಕೆ ಒಡ್ಡಿವೆ, ಭಾರತೀಯ ಕೃಷಿ ಮತ್ತು ನಮ್ಮ ರೈತರನ್ನು ಧ್ವಂಸ ಮಾಡುತ್ತವೆ, ಕನಿಷ್ಟ ಬೆಂಬಲ ಬೆಲೆ(ಎಂ.ಎಸ್.ಪಿ.)ಯ ನಿರ್ಮೂಲನಕ್ಕೆ ಬುನಾದಿ ಹಾಕಿ ಕೊಡುತ್ತವೆ ಮತ್ತು ಭಾರತೀಯ ಕೃಷಿಯನ್ನು ಹಾಗೂ ನಮ್ಮ ಮಾರುಕಟ್ಟೆಗಳನ್ನು ಬಹುರಾಷ್ಟ್ರೀಯ ಕೃಷಿ ವ್ಯಾಪಾರೀ ಕಾರ್ಪೊರೇಟ್‌ಗಳ ಮತ್ತು ದೇಶೀ ಕಾರ್ಪೊರೇಟ್ ಗಳ ಚಪಲಗಳಿಗೆ ಒತ್ತೆ ಇಡುತ್ತವೆ.
‘ನಿಮ್ಮ ಸರಕಾರ’ ಮೊಂಡುತನ ಬಿಟ್ಟು, ಭಾರತದ ಅನ್ನದಾತರು ಎತ್ತಿರುವ ಬೇಡಿಕೆಗಳನ್ನು ಸ್ವೀಕರಿಸುವಂತೆ ಮನವೊಲಿಸಬೇಕು ಎಂದು ಭಾರತೀಯ ಸಂವಿಧಾನದ ಸಂರಕ್ಷರಾಗಿರುವ ತಮ್ಮನ್ನು ಆಗ್ರಹಿಸುತ್ತೇವೆ.