ಕಾರ್ಪೊರೇಟ್ ಲೂಟಿಗೆ ಹಾಗೂ ಹಿಂದು ಮತಾಂಧತೆಯನ್ನು ವಿಸ್ತರಿಸುವ ರಾಜ್ಯ ಸರಕಾರದ ಮತ್ತೆರಡು ನಿರ್ಲಜ್ಯ ನಡೆಗಳು, ಎಪಿಎಂಸಿ ತಿದ್ದುಪಡಿ ಮಸೂದೆ – 2020 ಹಾಗೂ ಗೋಹತ್ಯೆ ನಿಷೇಧ ಮಸೂದೆ – 2020 ಗಳು ವಾಪಾಸು ಪಡೆಯಲು ಸಿಪಿಐ(ಎಂ) ಒತ್ತಾಯ
ರಾಜ್ಯ ಸರಕಾರ ನೆನ್ನೆ ದಿನ ಮತ್ತರೆಡು ನಿರ್ಲಜ್ಯ ನಡೆಗಳನ್ನು ಎಪಿಎಂಸಿ ತಿದ್ದುಪಡಿ ಮಸೂದೆ – 2020 ಹಾಗೂ ಗೋಹತ್ಯೆ ನಿಷೇಧ ಮಸೂದೆ- 2020 ಗಳನ್ನು ವಿಧಾನ ಮಂಡಲದಲ್ಲಿ ಮಂಡಿಸಿ ಅಂಗೀಕರಿಸಲು ಮುಂದಾಗಿದೆ.
ದೇಶದ ಮತ್ತು ರಾಜ್ಯದ ರೈತರು ಕೃಷಿ ಉತ್ಪನ್ನಗಳಿಗೆ ಖಚಿತವಾದ ಮಾರುಕಟ್ಟೆ ಹಾಗೂ ನ್ಯಾಯಯುತವಾದ ಬೆಲೆಗಳು ದೊರೆಯುವಂತಾಗಲು, ರಾಷ್ಟ್ರೀಯ ಕೃಷಿ ಆಯೋಗದ ಅಧ್ಯಕ್ಷರಾದ ಡಾ. ಎಂ.ಎಸ್. ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ, ಕೃಷಿ ಉತ್ಪನ್ನಗಳ ಸಮಗ್ರವಾದ ಉತ್ಪಾದನಾ ವೆಚ್ಚಕ್ಕೆ ಶೇಕಡಾ 50ರಷ್ಟು ಲಾಭಾಂಶ ಸೇರಿಸಿ ನಿಗದಿಸಲಾಗುವ ಕನಿಷ್ಟ ಬೆಂಬಲ ಬೆಲೆಯು ಖಾತರಿಯಾಗಿ ದೊರೆಯುವಂತಹ ಬೆಂಬಲ ಬೆಲೆ ಖಾತರಿ ಕಾಯ್ದೆಯನ್ನು ಅಂಗೀಕರಿಸಲು ಒತ್ತಾಯಿಸಿ ಪ್ರಬಲ ಚಳುವಳಿಯಲ್ಲಿ ತೊಡಗಿದ್ದರೂ, ಆ ವಿಚಾರವನ್ನು ಕಿವಿಯೊಳಗೆ ಹಾಕಿಕೊಳ್ಳದೇ ಜಾಣ ಕಿವುಡುತನವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೋರುತ್ತಿವೆ. ಬದಲಿಗೆ, ಕಾರ್ಪೋರೇಟ್ ಲೂಟಿಗೆ ನೆರವಾಗುವ ಸಾರ್ವಜನಿಕ ಮಾರುಕಟ್ಟೆಯ ವ್ಯವಸ್ಥೆಯನ್ನೇ ಕಳಚಿ ಹಾಕುವ ವಂಚನೆಯನ್ನು ಮಾಡುತ್ತಿವೆ. ಈ ನೆಲೆಯಲ್ಲಿ ರಾಜ್ಯ ಸರಕಾರ ಪ್ರತಿರೋಧದ ನಡುವೆ ಏಪಿಎಂಸಿ ತಿದ್ದುಪಡಿ ಮಸೂದೆ- 2020 ಅಂಗೀಕರಿಸಿದೆ.
ಅದೇ ರೀತಿ ಯಾವುದೇ ಚರ್ಚೆಗಳಿಲ್ಲದೇ ಧಿಢೀರನೇ, ಪ್ರಜಾಪ್ರಭುತ್ವ ವಿರೋಧಿಯಾದ ಮತ್ತು ಆಹಾರದ ಹಕ್ಕನ್ನು ಕಸಿಯುವ, ಹೈನುಗಾರರ ಹಾಗೂ ಹೈನು ಆಧಾರಿತ ಉತ್ಪನ್ನ ಘಟಕಗಳನ್ನು ನಾಶ ಮಾಡುವ, ಅಲ್ಪಸಂಖ್ಯಾತರ ಹಾಗೂ ದಲಿತರ ಮೇಲೆ ದಬ್ಬಾಳಿಕೆ ನಡೆಸುವ ಕ್ರಿಮಿನಲ್ ಪುಂಡಾಟಿಕೆಗೆ ಕುಮ್ಮಕ್ಕು ನೀಡುವ, ಜನತೆಯನ್ನು ವಿಭಜಿಸಿ ಆಳಲು ನೆರವಾಗುವ ಮತ್ತು ಕಾರ್ಪೋರೇಟ್ ಲೂಟಿಗೆ ನೆರವಾಗುವ ಗೋಹತ್ಯೆ ನಿಷೇದ ಮಸೂದೆ- 2020 ನ್ನು ಜನವಿರೋಧಿಯಾಗಿ ದಬ್ಬಾಳಿಕೆ ಮೂಲಕ ಅಂಗೀಕರಿಸಿದೆ.
ಈ ಎರಡು ಜನವಿರೋಧಿ ಹಾಗೂ ಕಾರ್ಪೋರೇಟ್ ಲೂಟಿಗೆ ನೆರವಾಗುವ ಮತ್ತು ಮತಾಂಧತೆಯನ್ನು ಹರಡುವ ಕೋಮುವಾದಿಕರಣದ ಈ ಎರಡು ತಿದ್ದುಪಡಿ ಕಾಯ್ದೆಗಳನ್ನು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ ಹಾಗೂ ತಕ್ಷಣವೇ ಅವುಗಳನ್ನು ವಾಪಾಸು ಪಡೆಯುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ) ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.
ರಾಜ್ಯದ ರೈತರು ಮತ್ತು ಎಲ್ಲ ಕೃಷಿಕರು, ಅಲ್ಪಸಂಖ್ಯಾತರು, ದಲಿತರು ಮತ್ತು ಪ್ರಗತಿಪರರು ರಾಜ್ಯ ಸರಕಾರದ ಈ ಹೇಯವಾದ ದುರ್ನಡೆಯನ್ನು ಬಲವಾಗಿ ಪ್ರತಿರೋಧಿಸಿ ಹಿಮ್ಮೆಟ್ಟಿಸಲು ಕರೆ ನೀಡುತ್ತದೆ.
ಯು. ಬಸವರಾಜ
ಕಾರ್ಯದರ್ಶಿ