ಭಾರತೀಯ ಜನತಾ ಪಕ್ಷ ಗುರುವಾರ(ಡಿ.10) ರಾಜ್ಯಾದ್ಯಂತ ಗೋವುಗಳ ಪೂಜೆ ಮಾಡಿ ಸಂಭ್ರಮಿಸಿದೆ. `ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕ- 2020 ಬುಧವಾರ ರಾಜ್ಯ ವಿಧಾನಸಭೆಯಲ್ಲಿ, ಯಾವುದೇ ಚರ್ಚೆ ಇಲ್ಲದೆ ಧ್ವನಿ ಮತದ ಮೂಲಕ ಅಂಗೀಕಾರವಾಗಿರುವುದು ಈ ಸಂಭ್ರಮಕ್ಕೆ ಕಾರಣ. ಗೋಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಪಶುಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ಅವರು ವಿಧಾನಸೌಧದ ಆವರಣದಲ್ಲಿ ಗೋಪೂಜೆ ನೆರವೇರಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ತಮ್ಮ ನಿವಾಸದಲ್ಲಿ ಗೋಪೂಜೆ ಮಾಡಿ ಸಂತಸ ವ್ಯಕ್ತಪಡಿಸಿದರು ಎನ್ನಲಾಗಿದೆ. ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾಗುತ್ತಿದ್ದಂತೆ ಬಿಜೆಪಿ ಶಾಸಕರು ಮತ್ತು ಸಚಿವರು `ಗೋ ಮಾತೆಗೆ ಜೈ’ `ಜೈ ಶ್ರೀರಾಮ’ ಮೊದಲಾದ ಘೋಷಣೆಗಳನ್ನು ಕೂಗಿದರು.
ವಿಧೇಯಕಕ್ಕೆ ವಿಧಾನ ಪರಿಷತ್ನಲ್ಲೂ ಅಂಗೀಕಾರ ದೊರೆತು ನಂತರ ರಾಜ್ಯಪಾಲರ ಸಹಿ ಬಿದ್ದರೆ ಅದು ಕಾನೂನು ಆಗಲಿದೆ. ವಿಧಾನ ಪರಿಷತ್ನಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಬಿಜೆಪಿ ಜೊತೆಯಲ್ಲಿ ಜೆಡಿ(ಎಸ್) ಕೈ ಜೋಡಿಸಿದರೆ ಮಾತ್ರ ಈ ವಿಧೇಯಕವನ್ನು ವಿಧಾನ ಪರಿಷತ್ತಿನಲ್ಲಿ ಪಾಸ್ ಮಾಡಲು ಸಾಧ್ಯವಿತ್ತು. ಜೆಡಿ(ಎಸ್) ನಿಂದ ಭೂಸುಧಾರಣಾ ತಿದ್ದುಪಡಿ ವಿಧೇಯಕವನ್ನು ಪಾಸ್ ಮಾಡಲು ಬೆಂಬಲ ದೊರೆತಂತೆ ಗೋಹತ್ಯೆ ನಿಷೇಧ ಮಸೂದೆಗೆ ಜೆಡಿ(ಎಸ್) ಬೆಂಬಲ ದೊರೆಯದಿರಬಹುದು ಎಂಬ ಅನುಮಾನದಿಂದ ವಿಧಾನ ಪರಿಷತ್ತಿನಲ್ಲಿ ಮಸೂದೆ ಮಂಡನೆ ಆಗುವ ಮೊದಲೇ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅನಿರ್ಧಿಷ್ಟಾವಧಿಗೆ ವಿಧಾನ ಪರಿಷತ್ ಕಲಾಪಗಳನ್ನು ಮುಂದೂಡಿದರು.
ಕರ್ನಾಟಕದಲ್ಲಿ 1964 ರಿಂದಲೇ `ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಅವುಗಳ ರಕ್ಷಣೆ’ ಎಂಬ ಒಂದು ಕಾನೂನು ಜಾರಿಯಲ್ಲಿದೆ. 1964ರ ಕಾಯ್ದೆ ಗೋವುಗಳನ್ನು ಹೊರತುಪಡಿಸಿ ಹೋರಿಗಳು, ಎತ್ತುಗಳು, ಎಮ್ಮೆಗಳು ಮತ್ತು ಕೋಣಗಳನ್ನು ಮಾಂಸಕ್ಕಾಗಿ ವಧಿಸಲು ಅನುಮತಿ ನೀಡುತ್ತದೆ. ಆದರೆ ಆ ಜಾನುವಾರುಗಳಿಗೆ 12 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿರಬೇಕು ಅಥವ ಅವುಗಳು ಸಾಕಲು ಯೋಗ್ಯವಲ್ಲದವು ಅಥವ ಹಾಲು ಕೊಡದಿರುವ ಜಾನುವಾರುಗಳಾಗಿರಬೇಕು. 2010 ರಲ್ಲಿ ಯಡಿಯೂರಪ್ಪ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ `ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಅವುಗಳ ರಕ್ಷಣೆ’ ಎಂಬ ಮಸೂದೆಯನ್ನು ಮಂಡಿಸಿ ಅಂಗೀಕರಿಸಿತು. ಆದರೆ ರಾಷ್ಟ್ರಪತಿ ಅವರಿಂದ ಅಗತ್ಯ ಅನುಮೋದನೆ ದೊರೆಯಲಿಲ್ಲ. ನಂತರ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದನ್ನು ಬದಿಗಿಟ್ಟು 1964 ರ ಕಾಯ್ದೆಯನ್ನು ಜಾರಿಯಲ್ಲಿ ಉಳಿಸಿತು. ಈಗ ಜಾರಿಯಲ್ಲಿರುವ 1964 ರ ಕಾಯ್ದೆಗಿಂತ ಕಠಿಣವಾದ ಕಾಯ್ದೆಯನ್ನು ತರುವುದು ಯಡಿಯೂರಪ್ಪ ನೇತೃತ್ವದ ಬಿಜೆಪಿಯ ಉದ್ದೇಶವಾಗಿದೆ. 2010 ರ ಮಸೂದೆಯನ್ನು ಇನ್ನಷ್ಟು ಬಿಗಿಗೊಳಿಸುವುದು ಪ್ರಸಕ್ತ ತಿದ್ದುಪಡಿ ವಿಧೇಯಕದ ಉದ್ದೇಶವಾಗಿದೆ. ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಅನುಷ್ಠಾನಗೊಂಡಿರುವ ಕಾಯ್ದೆಗಳಲ್ಲಿ ಇರುವ ಅಂಶಗಳನ್ನು ಇದರಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗುತ್ತದೆ.
ಬಿಜೆಪಿಯ ಪ್ರಸಕ್ತ ವಿಧೇಯಕ ಹಸು, ಕರು, ಹೋರಿ, ಎತ್ತು, ಎಮ್ಮೆ, ಕೋಣ, ಎಮ್ಮೆ ಕರುಗಳ ಹತ್ಯೆ ಹಾಗೂ ಹತ್ಯೆಗೆ ನೀಡುವುದನ್ನು ನಿಷೇಧಿಸುತ್ತದೆ. ಈ ಜಾನುವಾರುಗಳ ಮಾಂಸ ಮಾರಾಟ, ಸೇವನೆ ಹಾಗೂ ಅದನ್ನು ಹೊಂದಿರುವುದು ಸಹ ನಿಷಿದ್ದ. ಹತ್ಯೆಗಾಗಿ ಜಾನುವಾರುಗಳ ಸಾಗಣೆ ನಿಷೇಧಿಸಲ್ಪಡಲಿದೆ. ತಪ್ಪಿತಸ್ಥರಿಗೆ 3 ರಿಂದ 7 ವರ್ಷ ಜೈಲು, 50 ಸಾವಿರ ರೂ. ಯಿಂದ 5 ಲಕ್ಷ ರೂ. ವರೆಗೆ ದಂಡ ಅಥವ ಎರಡನ್ನೂ ವಿಧಿಸಲು ಅವಕಾಶವಿದೆ. ಪುನರಾವರ್ತಿತ ಅಪರಾಧಕ್ಕೆ 1 ಲಕ್ಷ ರೂ. ಯಿಂದ 5 ಲಕ್ಷ ರೂ. ವರೆಗೆ ದಂಡ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವಿಧೇಯಕವು ಇನ್ನೂ ಹಲವಾರು ಕಠಿಣ ನಿಯಮಗಳನ್ನು ಒಳಗೊಂಡಿದೆ.
ಗೋಮಾಂಸ ಸೇವನೆಯನ್ನು ನಿಷೇಧಿಸುವುದು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯ ಭಾಗವಾಗಿತ್ತು ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ವಾಸ್ತವವಾಗಿ ಗೋಹತ್ಯೆ ನಿಷೇಧ ಆರೆಸ್ಸೆಸ್ ನ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಪಟ್ಟ ಸಂವಿಧಾನದ 370ನೇ ಕಲಂ ರದ್ದುಗೊಳಿಸುವುದು, ಬಾಬರಿ ಮಸೀದಿಯನ್ನು ಧ್ವಂಸಮಾಡಿ ಅಲ್ಲಿ ದೇವಸ್ಥಾನ ಕಟ್ಟುವುದು, ಮಥುರಾ ಹಾಗೂ ವಾರಾಣಾಸಿಯಲ್ಲಿ ಮಸೀದಿಗಳನ್ನು ನಾಶಮಾಡುವುದು, ಸಾಮಾನ್ಯ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು, ಮೂರು ಬಾರಿ ತಲಾಖ್ ಕೂಗಿ ವಿವಾಹ ವಿಚ್ಛೇಧನ ಪಡೆಯುವುದು ಮುಂತಾದವುಗಳು ಆರೆಸ್ಸೆಸ್ ನ ಕೆಲವು ಅಜೆಂಡಾಗಳು. ಅವುಗಳಲ್ಲಿ ಕೆಲವು ಅಜೆಂಡಾಗಳು ಈಗಾಗಲೇ ಜಾರಿಗೆ ಬಂದು ಬಿಟ್ಟಿವೆ.
ಆರೆಸ್ಸೆಸ್ ತನ್ನನ್ನು ಒಂದು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಳ್ಳುತ್ತದೆ. ದೇಶವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವುದು ಮತ್ತು ಆ ಮೂಲಕ ಸನಾತನ ಸಂಸ್ಕೃತಿಯನ್ನು ರಕ್ಷಿಸುವುದು ತನ್ನ ಉದ್ದೇಶವಾಗಿದೆ ಎಂದು ಅದು ಹೇಳುತ್ತದೆ. ಹೀಗೆ ಹೇಳುತ್ತಾ ಈ ದೇಶದ ಮುಗ್ಧ ಯುವಜನರನ್ನು ಅದು ದಾರಿತಪ್ಪಿಸುತ್ತಾ ಬಂದಿದೆ. ಈ ದೃಷ್ಟಿಯಿಂದ ಆರೆಸ್ಸೆಸ್ ಪಕ್ಕಾ ಒಂದು ರಾಜಕೀಯ ಸಂಘಟನೆಯಾಗಿದೆ.
ಹಿಂದೂ ರಾಷ್ಟ್ರ ಕಟ್ಟುವ ಗುರಿ ಸ್ವಷ್ಟವಾಗಿ ರಾಜಕೀಯ ಗುರಿಯಾಗಿದೆ. ಆ ಹಿಂದೂ ರಾಷ್ಟ್ರದಲ್ಲಿ ಹಿಂದುಯೇತರರಿಗೆ ಅವಕಾಶವಿಲ್ಲ. ಅದೊಂದು ಫ್ಯಾಸಿಸ್ಟ್ ಮಾದರಿಯ ರಾಷ್ಟ್ರವನ್ನು ಪ್ರತಿಪಾದಿಸುತ್ತದೆ. ಅದು ಪ್ರತಿಪಾದಿಸುವ ಸಂಸ್ಕೃತಿ ನಮ್ಮ ನೆಲದ ಬಹುಸಂಸ್ಕೃತಿಯನ್ನು ನಿರಾಕರಿಸುತ್ತದೆ. ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಅದನ್ನು ಅವರ ರಾಜಕೀಯವನ್ನು ಬಲಪಡಿಸಲು ಅದು ಬಳಸುತ್ತಾ ಬಂದಿದೆ.
ಕರ್ನಾಟಕದಲ್ಲಿ ವಿವಿಧ ಹಂತದ ಚುನಾವಣೆಗಳು ಸಮೀಪಿಸುತ್ತಿವೆ. ಗೋಹತ್ಯೆ ನಿಷೇದ ಕಾಯ್ದೆಯನ್ನು ತರುವ ಮೂಲಕ ಆರೆಸ್ಸೆಸ್ ತನ್ನ ಹಿಂದು ಓಟ್ ಬ್ಯಾಂಕ್ನ್ನು ಬಲಪಡಿಸಲು ಹೊರಟಿದೆ. ನಮ್ಮ ದೇಶದ ಹಿಂದೂಗಳಲ್ಲಿ ಬಹುಸಂಖ್ಯಾತರು ಮುಗ್ಧರು. ಅವರಿಗೆ ಗೋವಿನ ಮೇಲೆ ಭಕ್ತಿ ಇದೆ. ಅವರು ಗೋವನ್ನು ಮಾತೆ ಎಂತಲೂ ದೇವರು ಎಂತಲೂ ಪೂಜ್ಯವಾಗಿ ಕಾಣುತ್ತಾರೆ. ಹಿಂದುಗಳ ಈ ನಂಬಿಕೆಯನ್ನು, ಈ ಮುಗ್ಧ ಭಕ್ತಿಯನ್ನು ಆರೆಸ್ಸೆಸ್ ಚುನಾವಣೆಗೆ ಬಳಕೆ ಮಾಡಲು ಬಯಸುತ್ತದೆ. ಆರೆಸ್ಸೆಸ್/ಬಿಜೆಪಿ ಜನರ ನಡುವೆ ಪ್ರಭಾವವನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. ಬಿಜೆಪಿಗಾಗಲಿ, ಆರೆಸ್ಸೆಸ್ಗಾಗಲಿ ದೇಶದಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರದಂತಹ ಜ್ವಲಂತ ಪ್ರಶ್ನೆಗಳ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿ ಹೆಚ್ಚು ಹೆಚ್ಚಾಗಿ ಉದಾರೀಕರಣ, ಖಾಸಗೀಕರಣ ನೀತಿಗಳನ್ನು ಅನುಸರಿಸುವಂತೆ ಆರೆಸ್ಸೆಸ್ ನಿರ್ದೇಶನ ನೀಡುತ್ತಿದೆ. ಗೋಹತ್ಯೆ ನಿಷೇಧ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಲು ಆರೆಸ್ಸೆಸ್ ಆದೇಶವೇ ಕಾರಣವಾಗಿದೆ. ತನ್ನ ರಾಜಕೀಯ ಪ್ರಭಾವವನ್ನು ಹೆಚ್ಚಿಸುವುದೇ ಅವರ ಉದ್ದೇಶವಾಗಿದೆ.
ಗೋಹತ್ಯೆ ನಿಷೇಧದ ಹಿಂದಿನ ರಾಜಕೀಯ ಲೆಕ್ಕಾಚಾರಗಳನ್ನು ನಾವು ತಿಳಿಯುವುದು ಅಗತ್ಯವಾಗಿದೆ. ರಾಜಸ್ತಾನ ಮತ್ತು ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ಈ ಕಾಯ್ದೆಯನ್ನು, ಈಗ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಹೊರಟಿರುವ ಕಾಯ್ದೆಯನ್ನು ಗೋವಾ, ಅಸ್ಸಾಂ, ವಿಜೋರಾಮ್ ಮೊದಲಾದ ರಾಜ್ಯಗಳಲ್ಲಿ ಬಿಜೆಪಿ ಏಕೆ ಜಾರಿ ಮಾಡಲು ಮುಂದಾಗುತ್ತಿಲ್ಲ? ಅಲ್ಲಿಯೂ ಬಿಜೆಪಿ ಸರ್ಕಾರಗಳಿವೆಯಲ್ಲ? ಇದರ ಒಳಗುಟ್ಟು ನಿಗೂಢವಾದದ್ದು ಅಲ್ಲ. ಅಲ್ಲಿ ಬಹುಸಂಖ್ಯಾತರು ಗೋಮಾಂಸ ಸೇವನೆ ಮಾಡುತ್ತಾರೆ. ಅವರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಅಲ್ಲಿ ಇದೇ ಕಾಯ್ದೆಯನ್ನು ಜಾರಿಗೆ ತರಲಾಗುವುದಿಲ್ಲ. ಆರೆಸ್ಸೆಸ್ ಮಾಡುತ್ತಿರುವುದು ಹಿಂದೂ ಸಂಕುಚಿತ ರಾಜಕೀಯ. ಅಧಿಕಾರ ಗಿಟ್ಟಿಸಿಕೊಳ್ಳುವುದಕ್ಕೇ ಅದರ ತಂತ್ರಗಾರಿಕೆ.
ದನದ ಮಾಂಸ ರಫ್ತು ಮಾಡುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಬಿಜೆಪಿ ಅಧಿಕಾರಕ್ಕೆ ಬಂದು ವರ್ಷಗಳೇ ಕಳೆದವು. ಆರೆಸ್ಸೆಸ್ ದನದ ಮಾಂಸ ರಫ್ತು ಮಾಡುವುದನ್ನು ನಿಲ್ಲಿಸಲಿಲ್ಲ. ಇಲ್ಲಿಯೂ ಆರೆಸ್ಸೆಸ್/ಬಿಜೆಪಿಯ ಓಟಿನ ರಾಜಕೀಯ ಕೆಲಸ ಮಾಡುತ್ತದೆ. ಈ ಮಸೂದೆಯನ್ನು ಅಂಗೀಕರಿಸುವ ಮೂಲಕ ಆರೆಸ್ಸೆಸ್ ಜನರನ್ನು ಧರ್ಮದ ಆಧಾರದಲ್ಲಿ ಒಡೆಯಲು ಬಯಸುತ್ತದೆ. ಬಹುಸಂಖ್ಯಾತ ಹಿಂದುಗಳು ಒಂದಾಗಬೇಕು. ಹಿಂದುಯೇತರರಲ್ಲಿ ಗೋಮಾಂಸ ಸೇವನೆ ಮಾಡುವವರನ್ನು ಶತ್ರುಗಳಾಗಿ ಕಾಣುವಂತೆ ಮಾಡಿ ಪರಸ್ಪರ ದ್ವೇಷವನ್ನು ಬೆಳೆಸುವುದು ಆರೆಸ್ಸೆಸ್ ಉದ್ದೇಶವಾಗಿದೆ.
ಗೋಮಾಂಸ ಸೇವನೆಯಿಂದ ಹಿಂದೂಗಳ ಭಾವನೆಗಳಿಗೆ ನೋವಾಗುತ್ತಿದೆ ಎಂದು ಹೇಳಲಾಗುತ್ತದೆ. ಅದು ಕೆಲಮಟ್ಟಿಗೆ ನಿಜವಿರಬಹುದು. ಆದರೆ ಗೋಮಾಂಸ ಸೇವನೆ ಮಾಡುವವರ ಮೇಲೆ ಹಲ್ಲೆ ಮಾಡಿ, ಅವರನ್ನು ಹತ್ಯೆ ಮಾಡುವುದು ಎಷ್ಟು ಸರಿ? ಇಲ್ಲಿ ಮನುಷ್ಯರಿಗಿಂತ ಪಶುಗಳೇ ಹೆಚ್ಚು ಸುರಕ್ಷಿತ ಎಂಬಂತೆ ಕಾಣುತ್ತಿಲ್ಲವೆ? ಗೋಮಾಂಸ ಸೇವನೆ ಮಾಡುವುದು ಅವರವರ ಹಕ್ಕು. ಅದನ್ನು ಕಾನೂನಿನ ಮೂಲಕ ಕಿತ್ತುಕೊಳ್ಳುವುದು ತಪ್ಪು. ದನದ ಮಾಂಸ ತಿನ್ನುವವರು ಮತ್ತು ತಿನ್ನದಿರುವವರು ಮೊದಲು ಪರಸ್ಪರ ಸ್ನೇಹ ಭಾವನೆಯಿಂದ ಉತ್ತಮ ನೆರೆಹೊರೆಯವರಾಗಿ ಬದುಕಲು ಸಾಧ್ಯವಾಗಬೇಕು. ಅವರ ಪೌಷ್ಠಿಕ ಆಹಾರ ಅಗತ್ಯತೆಯನ್ನು ಉಳಿದವರೂ ಅರ್ಥಮಾಡಿಕೊಳ್ಳಬೇಕು. ಪರ್ಯಾಯ ವ್ಯವಸ್ಥೆ ಅವರಿಗಾಗಿ ಮಾಡಬೇಕು. ಆಗ ಮಾತೆ ಎಂದು ಪೂಜಿಸಲ್ಪಡುವ ಗೋವಿನ ಮಾಂಸ ಸೇವನೆ ಮಾಡುವುದನ್ನು ಅವರು ಸ್ವಯಂ ಪ್ರೇರಣೆಯಿಂದ ನಿಲ್ಲಿಸಬಹುದು. ಈಗಾಗಲೇ ಸಮಾಜದಲ್ಲಿ ಗೋಮಾಂಸ ಸೇವಿಸುವ ಅನೇಕ ಜನ ಅದನ್ನು ಬಿಟ್ಟಿದ್ದಾರೆ. ಆದರೆ ಬಲವಂತದಿಂದ ಹಾಗೇ ಮಾಡುವುದು ಅವರ ಭಾವನೆಗಳಿಗೂ ನೋವು ಉಂಟುಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸೌಧದ ಆವರಣಕ್ಕೆ ಗೋವುಗಳನ್ನು ತರುವ ಅಗತ್ಯ ಇಲ್ಲ.