ವಿಧಾನ ಪರಿಷತ್ ಗದ್ದಲ, ರಾಜ್ಯ ಸರಕಾರವೇ ನೇರ ಹೊಣೆ

ವಿಧಾನ ಪರಿಷತ್ ಕಲಾಪ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಘೋರವಾಗಿ ವಿಫಲವಾಗಿದೆ. ದೇಶದ ಮುಂದೆ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಿಸಿದೆ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.

ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ ಉಂಟಾಗಲು, ಬಿಜೆಪಿ ಮತ್ತು ರಾಜ್ಯ ಸರಕಾರವೂ ಕಲಾಪಕ್ಕೆ ಸಭಾಪತಿಗಳು ಬಾರದಂತೆ ತಡೆದುದೇ, ಇಂತಹದೊಂದು ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಲು ಮೂಲ ಕಾರಣವಾಯಿತು.

ಸಭಾಪತಿಗಳು ಕಲಾಪಕ್ಕೆ ಬರಲು ಬಿಟ್ಟು, ನಂತರವೇ ಅವಿಶ್ವಾಸ ಮಂಡನೆ ಮತ್ತು ಮುಂದಿನ ನಡೆಯ ಕುರಿತು ನಿಯಮಾವಳಿಯಂತೆ ಕ್ರಮವಹಿಸಲು ಮುಂದಾಗಬೇಕಿತ್ತು. ಹಾಗೇ ಶಾಂತಿಯುತವಾಗಿಯೇ ನಿರ್ವಹಿಸಬಹುದಾಗಿದ್ದ ಪ್ರಸಂಗವನ್ನು ಯಾಕೆ ಈ ರೀತಿಯ ಗದ್ದಲದ ವಾತಾವರಣಕ್ಕೆ ತಿರುಗಿಸಲಾಯಿತೆಂಬ ಕಡೆ ರಾಜ್ಯದ ಜನತೆ ಗಮನ ಹರಿಸಬೇಕಿದೆ.

ಇಂತಹ ಗದ್ದಲ ಉಂಟಾಗಲು ಬೇಕಾದ ಪರಿಸ್ಥಿತಿಯನ್ನು ನಿರ್ಮಿಸುವ ಮೂಲಕ,  ಬಿಜೆಪಿ ತನ್ನ ಜನ ವಿರೋಧಿ ನೀತಿಗಳನ್ನು ಮುಚ್ಚಿಟ್ಟುಕೊಳ್ಳಲು ಮತ್ತು  ಜನಗಳ ಗಮನವನ್ನು ಬೇರೆಡೆ  ಸೆಳೆಯಲು  ಆ ಮೂಲಕ ರಾಜಕೀಯ ಲಾಭ ಪಡೆಯಲು ಅದು ಯತ್ನಿಸಿದೆ.

ಯಾಕೆಂದರೇ ಕಳೆದ ಐದು ದಿನಗಳ ಹಿಂದೆ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ  ತೀವ್ರ ವಿರೋಧದ ನಡುವೆ, ರೈತರ, ನಾಗರೀಕರ ಮತ್ತು ಜನತೆಯನ್ನು ಒಡೆದಾಳುವ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾದ ಭೂ ಸುಧಾರಣೆ ತಿದ್ದುಪಡಿ ಮಸೂದೆ-2020 ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆ-2020 ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಮಸೂದೆ- 2020 ನ್ನು ಅಂಗೀಕರಿಸಿ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.

ವಿರೋಧ ಪಕ್ಷ ಕಾಂಗ್ರೆಸ್ ಕೂಡ ವಿಧಾನ ಪರಿಷತ್ ಕಲಾಪದ ಸದರಿ ಪರಿಸ್ಥಿತಿಯನ್ನು ಪ್ರಬುದ್ಧತೆಯಿಂದ ನಿಭಾಯಿಸುವ ಬದಲು, ಬಿಜೆಪಿಯ ತಾಳಕ್ಕೆ ಸರಿಯಾಗಿ ಕುಣಿದಿದೆ.  ಹೀಗಾಗಿ, ರಾಜ್ಯದ ಘನತೆಗೆ ಕುಂದುಂಟಾಗುವಂತಾಗಿದೆ. ಇಂತಹ ಎಲ್ಲಾ ಕುತಂತ್ರಗಳು ಬಿಜೆಪಿಯ ಹಾಗೂ ರಾಜ್ಯ ಸರಕಾರದ ಜನ ವಿರೋಧಿ ನಡೆಗಳನ್ನು ಎಂದಿಗೂ ಮುಚ್ಚಿಡಲಾರವು.

ಯು. ಬಸವರಾಜ
ಕಾರ್ಯದರ್ಶಿ

Leave a Reply

Your email address will not be published. Required fields are marked *