ಕದಡುತ್ತಿದೆ ಕೈಗಾರಿಕಾ ಶಾಂತಿ

ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (TKM) ಕಾರ್ಖಾನೆ ಕಾರ್ಮಿಕರು ನವಂಬರ್ 9 ರಿಂದ ಉತ್ಪಾದನೆಯನ್ನು ನಿಲ್ಲಿಸಿ ಮುಷ್ಕರ ಮಾಡುತ್ತಿದ್ದಾರೆ. ಬಹುತೇಕ ಅಷ್ಟೇ ದಿನಗಳಿಂದ ಈ ಬಹುರಾಷ್ಟ್ರೀಯ ಕಂಪನಿಯ ಆಡಳಿತ ವರ್ಗ ಕಾರ್ಖಾನೆಗೆ ಬೀಗಮುದ್ರೆ ಘೋಷಿಸಿದೆ. ಕಂಪನಿಯ ಆಡಳಿತ ವರ್ಗ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳನ್ನು ಅಮಾನತುಗೊಳಿಸಿದ್ದರಿಂದ ಮುಷ್ಕರ ಆರಂಭವಾಯಿತು. ಇದುವರೆಗೆ ಅಮಾನತುಗೊಂಡ ಕಾರ್ಮಿಕರ ಸಂಖ್ಯೆ 66ಕ್ಕೆ ಏರಿದೆ. ಕಾರ್ಮಿಕ ಇಲಾಖೆಯು ಈ ಕೈಗಾರಿಕಾ ವಿವಾದವನ್ನು ಇತ್ಯರ್ಥಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಮಾನತ್ತಾದ ಕಾರ್ಮಿಕರನ್ನು ಸೇವೆಗೆ ಹಿಂಪಡೆಯಲು ಆಡಳಿತ ವರ್ಗ ಸಮ್ಮತಿಸುತ್ತಿಲ್ಲ. ಈ ಬೇಡಿಕೆ ಈಡೇರದ ಹೊರತು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಕಾರ್ಮಿಕರು ಪಟ್ಟುಹಿಡಿದಿದ್ದಾರೆ.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಹೊಂದಿವೆ. ಆ ಪೈಕಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯೇ ಅತಿ ದೊಡ್ಡದು. 432 ಹೆಕ್ಟೇರ್ ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕಾರ್ಖಾನೆಯಲ್ಲಿ ಇನೋವಾ, ಫಾರ್ಚುನರ್ ಅಂತಹ ದೊಡ್ಡ ಕಾರುಗಳನ್ನು ಜೋಡಣೆ ಮಾಡಲಾಗುತ್ತಿದೆ. ಇಲ್ಲಿ ಸುಮಾರು 20 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರಲ್ಲಿ ಕೇವಲ 3500 ಮಂದಿ ಖಾಯಂ ಕೆಲಸಗಾರರು. ಉಳಿದವರು ಗುತ್ತಿಗೆ ಕಾರ್ಮಿಕರು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಕಾರ್ಮಿಕ ಸ್ನೇಹಿ ವಾತಾವರಣ ಇಲ್ಲಿಲ್ಲ. ವೇತನ ಪರಿಷ್ಕರಣೆ ಮುಂತಾದ ಬೇಡಿಕೆಗಳನ್ನು ಇಲ್ಲಿನ ಕಾರ್ಮಿಕರು ಮುಷ್ಕರ ಮಾಡಿಯೇ ಪಡೆಯಬೇಕಾಗುತ್ತದೆ. ತಮ್ಮ ಕೆಲವು ಬೇಡಿಕೆಗಳಿಗಾಗಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾಗ ಕಾರ್ಮಿಕರನ್ನು ಬೆದರಿಸುವ ತಂತ್ರವಾಗಿ ಹಳೆಯ ಕೆಲವು ಪ್ರಕರಣಗಳನ್ನು ಎತ್ತಿಕೊಂಡು ಆಡಳಿತ ವರ್ಗ ಹಲವರನ್ನು ಸೇವೆಯಿಂದ ವಜಾ ಮಾಡಿತು. ಸತತವಾಗಿ ಸೇವೆಗೆ ಗೈರಗುತ್ತಿರುವುದು ಮತ್ತು ದುರ್ನಡತೆಯ ಆರೋಪದ ಮೇಲೆ ಕಾರ್ಮಿಕರನ್ನು ವಜಾ ಮಾಡಲಾಗಿದೆ ಎಂದು ಆಡಳಿತ ವರ್ಗದ ವಾದವಾಗಿದೆ. ಯಡಿಯೂರಪ್ಪನವರ ಸರ್ಕಾರ ಯಥಾ ಪ್ರಕಾರ ಕಾರ್ಮಿಕರ ಪರ ನಿಲ್ಲದೆ ಮಾಲೀಕರನ್ನೇ ಸಮರ್ಥಿಸುತ್ತದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಸಾವಿರಾರು ಕಾರ್ಮಿಕ ಕುಟುಂಬಗಳು ಬೀದಿಪಾಲಾಗುವ ಆತಂಕವಿದೆ.

wistron_violence1ಇನ್ನೊಂದು ಆತಂಕದಾಯಕ ಘಟನೆ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಐಫೋನ್ ತಯಾರಿಕಾ ಘಟಕದಲ್ಲಿ ನಡೆದಿದೆ. ಇಲ್ಲಿ ಸುಮಾರು 10 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರಲ್ಲಿ ಶೇಕಡ 80ರಷ್ಟು ಮಂದಿ ಗುತ್ತಿಗೆ ಕಾರ್ಮಿಕರು. ಇಲ್ಲಿ ತೈವಾನ್ ಮೂಲದ ಬಹುರಾಷ್ಟ್ರೀಯ ಕಂಪನಿಯ ಆಪಲ್ ಕಂಪನಿಗಾಗಿ ಐಫೋನ್ ಗಳು ತಯಾರಾಗುತ್ತಿದ್ದವು. ಆದರೆ ಈ ಪ್ರತಿಷ್ಠಿತ ವಿದೇಶಿ ಕಂಪನಿಯಲ್ಲಿ ಯಾವುದೇ ಕಾರ್ಮಿಕ ಕಾನೂನುಗಳು ಅನುಷ್ಠಾನದಲ್ಲಿ ಇರಲಿಲ್ಲ. ಗುತ್ತಿಗೆದಾರರು ನಾಲ್ಕೈದು ತಿಂಗಳುಗಳಿಂದ ಕಾರ್ಮಿಕರಿಗೆ ಸಂಬಳ ಕೊಟ್ಟಿರಲಿಲ್ಲ. ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ದುಡಿಸಿಕೊಂಡು ಓವರ್ ಟೈಮ್ ವೇತನ ನೀಡುತ್ತಿಲ್ಲ. ಅನಾರೋಗ್ಯಕರ ಪರಿಸರದಲ್ಲಿ ದುಡಿಯಬೇಕಾಗುತ್ತಿತ್ತು. ಸಂಬಳದಲ್ಲಿ ಅಕ್ರಮ ಕಡಿತ ಮಾಡಿ ಪೀಡಿಸಲಾಗುತ್ತಿತ್ತು. ರಜೆ ಸಹ ಕೊಡುತ್ತಿರಲಿಲ್ಲ. ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿ ಕಾರ್ಮಿಕರ ಶೋಷಣೆ ಮಾಡಲಾಗುತ್ತಿತ್ತು. ಮಾನವ ಸಂಪನ್ಮೂಲ ಇಲಾಖೆಯನ್ನು ಸರಿಯಾಗಿ ರೂಪಿಸಲಾಗಿಲ್ಲ. ಕಾರ್ಮಿಕರ ಗೋಳು ಕೇಳುವವರಿಲ್ಲ ಕಾರ್ಮಿಕರ ಆಕ್ರೋಶ ಸ್ಪೋಟಗೊಂಡ ಪರಿಣಾಮವಾಗಿ ಇದೇ ಡಿಸೆಂಬರ್ 12ರ ಬೆಳಗಿನ ಜಾವ ಏಕಾಏಕಿಯಾಗಿ ಬಾರೀ ಪ್ರಮಾಣದ ದಾಂಧಲೆ ನಡೆಯಿತು.

ಕೈಗೆ ಸಿಕ್ಕ ಪೀಠೋಪಕರಣಗಳನ್ನು, ಯಂತ್ರೋಪಕರಣಗಳನ್ನು ಧ್ವಂಸಗೊಳಿಸಲಾಯಿತು. ಕಂಪೆನಿ ಆವರಣದಲ್ಲಿದ್ದ ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಕಲ್ಲು ತೂರಾಟ, ಬೆಂಕಿ ಹಚ್ಚಿದ್ದು ಮೊದಲಾದ ಅಹಿತಕರ ಘಟನೆಗಳಿಂದ ರೂ. 100 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತದೆ. ಸ್ಥಳಕ್ಕೆ ಬಂದ ಪೊಲೀಸರು ಮನಬಂದಂತೆ ಕಾರ್ಮಿಕರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಮಹಿಳಾ ಕಾರ್ಮಿಕರ ಮೇಲೆಯೂ ಲಾಠಿ ಪ್ರಯೋಗಿಸಿದ್ದಾರೆ. ಗಾಬರಿಯಾದ ಕಾರ್ಮಿಕರು ದಿಕ್ಕಾಪಾಲಾಗಿ ಓಡಾಡಿದಾಗ ನೂಕುನುಗ್ಗಲು ಉಂಟಾಗಿ ಹಲವರು ಗಾಯಗೊಂಡರು. ನೂರಾರು ಕಾರ್ಮಿಕರನ್ನು ಬಂಧಿಸಲಾಗಿದೆ.

ಕೋಲಾರದಲ್ಲಿ ಸಂಭವಿಸಿದ ಈ ಅಹಿತಕರ ಘಟನೆಯನ್ನು ಎಲ್ಲರೂ ಖಂಡಿಸುತ್ತಾರೆ. ಆದರೆ ಆ ಬಹುರಾಷ್ಟ್ರೀಯ ಕಂಪೆನಿಯಲ್ಲಿ ನಡೆಯುತ್ತಾ ಬಂದಿರುವ Unfair Labour Practices ಕುರಿತು ಸರ್ಕಾರವಾಗಲಿ, ಸಮಾಜವಾಗಲಿ ಆಕ್ಷೇಪ ಎತ್ತುತ್ತಿಲ್ಲ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕಾರ್ಮಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಕೋಲಾರದ ಸಂಸದ ಮುನಿಸ್ವಾಮಿ ವಿದೇಶಿ ಕಂಪನಿಯ ಎಂಜಲಿಗೆ ಕೈಚಾಚಿದಂತೆ ಕಾಣುತ್ತದೆ. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಕಾರ್ಮಿಕರಿಗೇ ಬೆದರಿಕೆ ಹಾಕಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೊಂದ ಕಾರ್ಮಿಕರ ಪರ ನಿಲುವು ತೆಗೆದುಕೊಳ್ಳದೇ ವಿಸ್ಟ್ರಾನ್ ಕಂಪೆನಿಗೆ ಬೆಂಬಲ ಸೂಚಿಸಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಯಥಾಪ್ರಕಾರ ಪೊಲೀಸ್ ಗಿರಿ ನಡೆಸಲು ಆದೇಶ ನೀಡಿದ್ದಾರೆ. ಇಂತಹ ಅಹಿತಕರ ಘಟನೆಗಳು ನಡೆಯುವುದನ್ನು ಬೆಂಬಲಿಸಕ್ಕಾಗದು ನಿಜ. ಆದರೂ ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಸೇರಿ ದೇಶದ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರಿಗೆ ಸರ್ಕಾರ ಮತ್ತು ಸಮಾಜದ ರಕ್ಷಣೆ ಅಗತ್ಯವಾಗಿ ಬೇಕು. ಕಂಪೆನಿ ಕೆಲಸವನ್ನು ಅವಲಂಭಿಸಿರುವ ಕಾರ್ಮಿಕರು ಕಾರ್ಖಾನೆಯನ್ನು ಯಾಕೆ ಧ್ವಂಸ ಮಾಡಲು ಮುಂದಾಗುತ್ತಾರೆ?

ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುವ ಮಾಲೀಕರಿಗೆ ಬೆಂಬಲ ನೀಡುವುದಾಗಲಿ, ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡುವ ಅಥವ ಬದಲಾಯಿಸುವ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡೆಯನ್ನು ಕಾರ್ಮಿಕರು ಸಹಜವಾಗಿ ವಿರೋಧಿಸುತ್ತಾರೆ. ಕಾರ್ಮಿಕ ಸ್ನೇಹಿ ವಾತಾವರಣದಲ್ಲಿ, ಕಾರ್ಮಿಕರ ಹಕ್ಕುಗಳ ರಕ್ಷಣೆಯ ಪರಿಸರದಲ್ಲಿ ಉತ್ಪಾದನೆ ಹೆಚ್ಚಾಗುತ್ತದೆಯೇ ಹೊರತು Hire and Fire ನೀತಿಯಲ್ಲಿ ಅಲ್ಲ. ಸರಕಾರಗಳು ಕೈಗಾರಿಕೋದ್ಯಮಿಗಳಿಗೆ ಮಾದರಿಯಾಗಿರಬೇಕು. ಸರ್ಕಾರವೇ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುವುದನ್ನು ಸಹಿಸಲಾಗಿದಿತೆ?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ನಡುವೆ ಕುದಿಯುತ್ತಿರುವ ಅಸಮಾಧಾನ ಇತ್ತೀಚೆಗೆ ದಿಡೀರನೆ ಸ್ಪೋಟಗೊಂಡದ್ದನ್ನು ನೋಡಿದ್ದೇವೆ. ಅಧಿಕಾರಿಗಳ ಕಿರುಕುಳವನ್ನು ಸಹಿಸಲಾಗದೆ ನೌಕರರು ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಆಗ್ರಹಿಸಿ ಬಸ್ ಬಂದ್ ಮಾಡಿ ಪಟ್ಟು ಹಿಡಿದರು. ಎಸ್ಮಾ ಜಾರಿ ಮಾಡುವ ಬೆದರಿಕೆ ಹಾಕಲಾಯಿತು. ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಯಿತು. ಕೊನೆಗೆ, ಕಾರ್ಮಿಕ ಸಂಘಟನೆಗಳೊಂದಿಗೆ ಹಲವು ಸುತ್ತುಗಳ ಮಾತುಕತೆಗಳ ನಂತರ ನೌಕರರ 10 ಬೇಡಿಕೆಗಳಲ್ಲಿ ಒಂಬತ್ತನ್ನು ಸರ್ಕಾರ ಒಪ್ಪುವ ಮೂಲಕ 5 ದಿನಗಳಿಂದ ನಡೆಸುತ್ತಿದ್ದ ಮುಷ್ಕರ ಅಂತ್ಯವಾಯಿತು. ಆದರೆ ಹಲವಾರು ಕಾರ್ಮಿಕರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದು ಅಲ್ಲದೆ ವೇತನ ಕಡಿತದ ಶಿಕ್ಷೆಯನ್ನು ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ನೌಕರರು ನಡೆಸಿದ ಅನೇಕ ಹೋರಾಟಗಳ ಪರಿಣಾಮವಾಗಿ ಕೊನೆಗೂ ಕಾರ್ಮಿಕ ಇಲಾಖೆ ಅವರಿಗೆ ವಾರಕ್ಕೆ ಒಂದು ರಜೆ, ರಾಷ್ಟ್ರೀಯ ರಜೆಗಳು ಹಾಗೂ ಹಬ್ಬದ ದಿನಗಳ ರಜೆ ನೀಡುವ ನಿಟ್ಟಿನಲ್ಲಿ ಶೇ. 16 ರಷ್ಟು ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳುವಂತೆ ಸ್ಪಷ್ಟೀಕರಣ ನೀಡಿದೆ. ಇದೇ ರೀತಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ `ಡಿ’ ವರ್ಗದ ಸಾವಿರಾರು ನೌಕರರು ವಾರದ ರಜೆ ಇಲ್ಲದೆ, ಹಾಗೂ ಹಬ್ಬದ ರಜೆಗಳಿಲ್ಲದೆ ಪರದಾಡುತ್ತಿದ್ದಾರೆ. ಅವರ ನಡುವೆ ಹೊಗೆಯಾಡುತ್ತಿರುವ ಅತೃಪ್ತಿ ಮುಂದೆ ಒಂದು ದಿನ ಸ್ಪೋಟಗೊಳ್ಳದೆ ಇರಲಾರದು.

ಅರೆ ಸರ್ಕಾರಿ ನೌಕರರಾಗಿ ಆದರೆ ಸ್ಕೀಮ್ ವರ್ಕರ‍್ಸ್‌ ಎಂದು ಕರೆಯಲ್ಪಡುವ ಅಂಗನವಾಡಿ, ಅಕ್ಷರದಾಸೋಹ, ಆಶಾ ಮೊದಲಾದ ನೌಕರರು ಕನಿಷ್ಠ ವೇತನ ಇಲ್ಲದೆ, ಕಾನೂನು ಸೌಲಭ್ಯಗಳಿಂದ ವಂಚಿತರಾಗಿ ದುಡಿಯುತ್ತಿದ್ದಾರೆ. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ `ಡಿ’ ವರ್ಗದ ನೌಕರರಿಗೆ ಕನಿಷ್ಠ ವೇತನ ನಿಗಧಿಯಾಗಿದ್ದರೂ, ಅವರು ಅದನ್ನು ಹೋರಾಟ ಮಾಡಿ ಪಡೆದಿದ್ದರೂ ಅದನ್ನು ಜಾರಿ ಮಾಡದೆ ಸತಾಯಿಸಲಾಗುತ್ತದೆ. ಈ ಎಲ್ಲ ಅರೆ ಸರ್ಕಾರಿ ಕಾರ್ಮಿಕರ ಬೃಹತ್ ಸೈನ್ಯದಲ್ಲಿ ಸ್ಪೋಟಕ ಪರಿಸ್ಥಿತಿ ಇದೆ. ಖಾಸಗಿ ರಂಗದಲ್ಲಿ ಗಾರ್ಮೆಂಟ್ ಮೊದಲಾದ ಕಾರ್ಖಾನೆಗಳಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುತ್ತಾ ಹಲವು ಬಗೆಯ ಕಿರುಕುಳ ಅನುಭವಿಸುತ್ತಾ ದಿನದೂಡುತ್ತಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿರುವುದರಿಂದ ಕ್ರಮೇಣ ಎಪಿಎಂಸಿಗಳು ಬಂದ್ ಆಗಿ ಅಲ್ಲಿ ಕೆಲಸ ಮಾಡುತ್ತಿರುವ ಹಮಾಲಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ. ಹೋರಾಟ ಅವರಿಗೆ ಅನಿವಾರ್ಯವಾಗಲಿದೆ. ಹೀಗೆ ಯಡಿಯೂರಪ್ಪನ ಆಡಳಿತದಲ್ಲಿ ಕಾರ್ಮಿಕರ ಅತೃಪ್ತಿ ತೀವ್ರಗೊಳುತ್ತಿದೆ. ಸ್ಪೋಟಗೊಳ್ಳುವ ಎಲ್ಲಾ ಸಾಧ್ಯತೆಗಳು ವ್ಯಕ್ತವಾಗುತ್ತಿವೆ.

ಉದಾರೀಕರಣದ ನೀತಿಗಳನ್ನು ಅಪ್ಪಿಕೊಂಡಿರುವ ಬಿಜೆಪಿಗರಿಗೆ ಕಾರ್ಮಿಕರ ಸಂಕಟ ಅರ್ಥವಾಗುತ್ತಿಲ್ಲ. ಕಾರ್ಮಿಕ ಹೋರಾಟಗಾರರನ್ನು ಭಯೋತ್ಪಾದಕರಂದು ಬಿಂಬಿಸಲಾಗುತ್ತದೆ. ಸರ್ಕಾರದ ನೀತಿಗಳನ್ನು ಖಂಡಿಸುವವರನ್ನು ದೇಶ ದ್ರೋಹಿಗಳೆಂದು ಚಿತ್ರಿಸಲಾಗುತ್ತದೆ. ಕರ್ನಾಟಕದಲ್ಲಂತೂ ಕೈಗಾರಿಕಾ ಶಾಂತಿ ಕದಡುತ್ತಿದ್ದು ಕಾರ್ಮಿಕರು ನಡೆಸುವ ಹೋರಾಟಗಳಿಗೆ ಸಾರ್ವಜನಿಕರು ದೃಢವಾದ ಬೆಂಬಲ ನೀಡುವುದು ದೇಶಪ್ರೇಮಿ ಕರ್ತವ್ಯವಾಗಿದೆ.

 

Leave a Reply

Your email address will not be published. Required fields are marked *