ಈಗ ತಾನೆ ಅಂತ್ಯಗೊಂಡ 2020ರ ವರ್ಷವನ್ನು ‘ಭೀಕರ ವರ್ಷ’ ಎಂದು ವ್ಯಾಪಕವಾಗಿ ಹಾಗೂ ಅರ್ಥವಾಗುವಂತೆ ವರ್ಣಿಸಲಾಗುತ್ತಿದೆ. ಇದು ಅರ್ಥವಾಗುವಂತದ್ದೇ. ಈ ಅಭೂತಪೂರ್ವ ವರ್ಷಕ್ಕೆ ಇದು ಸರಿಯಾದ ಸಹಜವಾದ ವಿವರಣೆಯೇ ಆಗಿದೆ; ಜಾಗತಿಕ ಮಹಾರೋಗವನ್ನು – ಕೊರೊನಾ ವೈರಾಣು ಮಹಾರೋಗವನ್ನು – ಕಂಡ ವರ್ಷ ಇದಾಗಿದೆ. ಇದಕ್ಕೆ ಸರಿಸಾಟಿಯಾಗಿ ಒಂದು ಶತಮಾನದ ಹಿಂದೆ 1918-19ರಲ್ಲಿ ಕಂಡ “ಸ್ಪಾನಿಶ್ ಫ್ಲು” ಜಗತ್ತಿನಾದ್ಯಂತ ಒಂದು ದೊಡ್ಡ ಅನಾಹುತವನ್ನೇ ಉಂಟುಮಾಡಿತ್ತು.
ಕೋವಿಡ್-19 ಮಹಾರೋಗವು ಈ ವರ್ಷದ ಕೊನೆಯ ಹೊತ್ತಿಗೆ 8.1 ಕೋಟಿ ಜನರನ್ನು ಬಾಧಿಸಿದೆ ಮತ್ತು 18 ಲಕ್ಷ ಜನರನ್ನು ಕೊಂದುಹಾಕಿದೆ. ಅದು ದೊಡ್ಡ ಮಟ್ಟದಲ್ಲಿ ನರಳಾಟ ಉಂಟುಮಾಡಿದೆ, ಮುಖ್ಯವಾಗಿ ಆಪ್ತರನ್ನು ಕಳೆದುಕೊಂಡ ಕುಟುಂಬದವರನ್ನು ನರಳುವಂತೆ ಮಾಡಿದೆ, ಹಲವರು ಬದುಕುಳಿದವರಿಗೆ ಆರೋಗ್ಯದ ಸಮಸ್ಯೆಯನ್ನು ಉಂಟುಮಾಡಿದೆ.
ಈ ಮಹಾರೋಗದ ಏಕಾಏಕಿ ಆರಂಭ ಹಾಗೂ ಆ ಮಹಾರೋಗವನ್ನು ತಡೆಯಲು ಜಗತ್ತಿನಾದ್ಯಂತ ಸರ್ಕಾರಗಳು ಕೈಗೊಂಡ ಲಾಕ್ಡೌನ್ ಮತ್ತಿತರ ಕ್ರಮಗಳು ಹಿಂದೆಂದೂ ಕಾಣದ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ – ಉತ್ಪಾದನೆಗಳನ್ನು ನಿಲ್ಲಿಸುವ, ಉತ್ಪನ್ನಗಳ ತೀವ್ರ ಕಡಿತ ಹಾಗೂ ಲಕ್ಷಾಂತರ ಜನರ ಉದ್ಯೋಗ ನಷ್ಟಕ್ಕೆ – ಕಾರಣವಾಗಿದೆ.
- 2020 ಭೀಕರ ವರ್ಷವಾಗಿದ್ದಾಗ್ಯೂ, ಕೊರೊನಾ ಮಹಾಸೋಂಕು ನಮ್ಮ ದೇಶದಲ್ಲೇ ಒಂದೂವರೆ ಲಕ್ಷ ಸಾವುಗಳನ್ನು ತಂದರೂ, ಕಪ್ಪು ಮೋಡಗಳ ನಡುವೆ ಬೆಳಕಿನ ಕಿರಣಗಳೂ ಕಾಣಿಸಿವೆ. ಮೊದಲ ಮೂರು ತಿಂಗಳಲ್ಲಿ ಸಿಎಎ-ಎನ್ಆರ್ಸಿ ವಿರೋಧಿ ಚಳುವಳಿ ದೇಶದೆಲ್ಲೆಡೆ ಹಬ್ಬಿ ಹಿಂದುತ್ವ ಕಾರ್ಯಸೂಚಿಯ ವಿರುದ್ಧ ಮೊಟ್ಟ ಮೊದಲ ಸಾಮೂಹಿಕ ಚಳುವಳಿಯಾಗಿ ಮಾರ್ಪಟ್ಟರೆ, ವರ್ಷದ ಕೊನೆಯ ಎರಡು ತಿಂಗಳಲ್ಲಿ ಎರಡನೆಯ ಸಾಮೂಹಿಕ ಚಳುವಳಿಯನ್ನು ದೇಶ ಕಂಡಿದೆ. ಅದು ಹೊಸ ವರ್ಷದಲ್ಲೂ ಮುಂದುವರಿಯುತ್ತಿದೆ. ಹೊಸ ವರ್ಷವು ಆಶಾದಾಯಕ ಕಥನದೊಂದಿಗೆ ಆರಂಭವಾಗುತ್ತಿದೆ.
ಈ ಜಾಗತಿಕ ಮಹಾರೋಗವು ನಮ್ಮ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವೈರುಧ್ಯಗಳು ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗಳನ್ನು ಎದ್ದು ಕಾಣುವಂತೆ ಎತ್ತಿ ತೋರಿಸಿತು. ಆರ್ಥಿಕ ಹಿಂಜರಿತದ ನಡುವೆ, ಶ್ರೀಮಂತರು ಇನ್ನೂ ಶ್ರೀಮಂತರಾದರು. ಹಣಕಾಸು ಕಾರ್ಪೊರೇಟುಗಳ ಲಾಭಗಳು ಗಗನಕ್ಕೇರಿದವು, ಅದೇ ಸಮಯದಲ್ಲಿ ಕೋಟ್ಯಾಂತರ ಜನರು ನಿರುದ್ಯೋಗ, ಬಡತನ ಮತ್ತು ಹಸಿವಿನಿಂದ ನರಳಿದರು.
ಭಾರತದ ಸ್ಥಿತಿ ಭಿನ್ನವಾಗಿರಲಿಲ್ಲ. ಅಮೆರಿಕದ ನಂತರ ಅತ್ಯಂತ ಹೆಚ್ಚು ಕೋವಿಡ್ ಬಾಧಿತರನ್ನು ಹೊಂದಿದ ದೇಶವೆಂದು ಭಾರತ ಕುಖ್ಯಾತಿಯನ್ನು ಪಡೆದಿದೆ. ಭಾರತದಲ್ಲಿ ಕೋವಿಡ್ ಬಾಧಿತರು 1 ಕೋಟಿಗಿಂತಲೂ ಹೆಚ್ಚಿದ್ದರು. ಸರಿಸುಮಾರು 1,50,000 ಜನರು ಆ ವೈರಾಣುವಿನಿಂದ ಸಾವನ್ನಪ್ಪಿದ್ದಾರೆ. ಪೂರ್ವಯೋಜಿತವಲ್ಲದ ಹಾಗೂ ಆತುರಾತುರದ ಲಾಕ್ಡೌನ್ ಹೇರಿಕೆಯಿಂದ ಮೋದಿ ಸರ್ಕಾರವು ಆರ್ಥಿಕತೆಯನ್ನು ತೀವ್ರ ಬಿಕ್ಕಟ್ಟಿಗೆ ತಳ್ಳಿತು. ಆರ್ಥಿಕತೆಯ ನಾಶವು ಕೋಟ್ಯಾಂತರ ವಲಸೆ ಕಾರ್ಮಿಕರು ಹಸಿವು ಹಾಗೂ ರೋಗಗಳಿಂದ ತತ್ತರಿಸಿ ದೂರದಲ್ಲಿರುವ ತಮ್ಮ ಹಳ್ಳಿಗಳಿಗೆ ಪ್ರಯಾಸದಿಂದ ನಡೆದುಕೊಂಡೇ ಹೋಗಬೇಕಾದುದನ್ನು ಕಂಡಿತು. ಒಂದು ತಾತ್ಸಾರ ಭರಿತ ಸರ್ಕಾರದಿಂದಾಗಿ ಸಾಮೂಹಿಕ ದುರವಸ್ಥೆಯನ್ನು ಜನರು ಅನುಭವಿಸಬೇಕಾಯಿತು.
ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇಕಡಾ (-)23.9ಕ್ಕೆ ಮತ್ತು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ (-)7.5 ಕ್ಕೆ ಕುಸಿಯಿತು. ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡರು. ಇದು ಅನೌಪಚಾರಿಕ ವಲಯದಲ್ಲಿ ಹೆಚ್ಚಾಗಿತ್ತು. ಏಪ್ರಿಲ್ ತಿಂಗಳಲ್ಲಿ ನಿರುದ್ಯೋಗದ ದರವು ಆಘಾತಕಾರಿ ಶೇಕಡಾ 24 ರಷ್ಟಾಗಿತ್ತು ಮತ್ತು ಆರ್ಥಿಕತೆಯನ್ನು ಮತ್ತೆ ತೆರೆದಮೇಲೆ ಅದು ಸ್ವಲ್ಪ ಕಡಿಮೆಯಾದರೂ, ಡಿಸೆಂಬರ್ನಲ್ಲಿ ಅದು ಶೇಕಡಾ 8.5 ರಷ್ಟಾಗಿ ಹೆಚ್ಚಾಗಿಯೇ ಇತ್ತು.
ಮಹಾಸೋಂಕು ಹಾಗೂ ಸರ್ವಾಧಿಕಾರಿ ಆಳ್ವಿಕೆಯು ಜನರ ಬದುಕನ್ನು ಹಿಪ್ಪಿಹಿಂಡೆ ಮಾಡಿದೆ. ನಾಡನ್ನು ಹಸಿವು ಕದ್ದು ಬೆನ್ನಟ್ಟಿದೆ. 2020ರ ಜಾಗತಿಕ ಹಸಿವು ಸೂಚ್ಯಾಂಕದ ಪ್ರಕಾರ ಭಾರತವು 107 ದೇಶಗಳಲ್ಲಿ 94ನೇ ಸ್ಥಾನಕ್ಕೆ ಜಾರಿದೆ. ಅದು ಕೂಡ ಭಾರತದ ಆಹಾರ ನಿಗಮದ ಉಗ್ರಾಣಗಳಲ್ಲಿ 7 ಕೋಟಿ ಆಹಾರ ಧಾನ್ಯಗಳು ದಾಸ್ತಾನಾಗಿರುವ ಸಮಯದಲ್ಲಿ!
ಈ ಕೋವಿಡ್ ಬಿಕ್ಕಟ್ಟನ್ನು ಜಗತ್ತಿನ ಇತರ ಸರ್ವಾಧಿಕಾರಿ ಆಡಳಿತಗಳು ಬಳಸಿದಂತೆ ಮೋದಿ ಸರ್ಕಾರವು ತನ್ನ ಸರ್ವಾಧಿಕಾರಿ ಆಡಳಿತವನ್ನು ಇನ್ನೂ ಬಿಗಿಗೊಳಿಸಲು ಬಳಸಿಕೊಂಡಿದೆ. ಮೊದಲನೆಯದಾಗಿ, 20 ಲಕ್ಷ ಕೋಟಿ ರೂಪಾಯಿ ಕಂತೆಯ ಅಬ್ಬರದ ಘೋಷಣೆ ಮಾಡಿದ್ದರೂ ಕಷ್ಟದಲ್ಲಿರುವ ಜನರಿಗೆ ಅಗತ್ಯ ನೆರವು ನೀಡಲು ಸರ್ಕಾರ ನಿರಾಕರಿಸಿತು. ಆದರೆ ನಿಜವಾಗಿಯೂ ಸರ್ಕಾರದ ವೆಚ್ಚವು 2.5 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿರಲಿಲ್ಲ ಮತ್ತು ಜಿಡಿಪಿಯ ಶೇಕಡಾ ಎರಡಕ್ಕಿಂತಲೂ ಕಡಿಮೆ ಇತ್ತು. ನವ-ಉದಾರವಾದಿ ಆರ್ಥಿಕತಜ್ಞರ ಬುದ್ಧಿವಾದವನ್ನು ಕೂಡ– ಆರ್ಥಿಕತೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಜನರಿಗೆ ಹಣ ಸಹಾಯ ಮಾಡಬೇಕೆಂಬ ಪ್ರತಿಪಾದನೆಯನ್ನು – ಕೇಳಲೂ ಅದು ಸಿದ್ಧವಿಲ್ಲ. ಪುನಶ್ಚೇತನದ ಪ್ಯಾಕೇಜು ಕಾರ್ಪೊರೇಟ್ ಕಂಪನಿಗಳ ಲಾಭಗಳನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡಿತಷ್ಟೆ. ದೇಶದ ಡಾಲರ್ ಬಿಲಿಯಾಧಿಪತಿಗಳ ಪಟ್ಟಿಯು ಇನ್ನೂ ಉದ್ದವಾಗಿ 90ನ್ನು ತಲುಪಿತು, 2019ರ ಡಿಸೆಂಬರ್ ತಿಂಗಳಲ್ಲಿ ಅದು 80 ಇತ್ತು. ಮುಖೇಶ್ ಅಂಬಾನಿಯ ಸಂಪತ್ತು ರೂ.6.43 ಟ್ರಿಲಿಯನ್ ಆಗಿ ಶೇಕಡಾ 37.2 ರಷ್ಟು ಹೆಚ್ಚಾಗಿದ್ದರೆ, ಅದಾನಿಯ ಸಂಪತ್ತು ರೂ.3.02 ಟ್ರಿಲಿಯನ್ ಆಗಿ ಶೇಕಡಾ 113 ರಷ್ಟು ಹೆಚ್ಚಾಗಿತ್ತು.
ಸಂಸದೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಹಾಗೂ ಕಾನೂನುಗಳ ಸರಮಾಲೆಯನ್ನೇ ಸುಗ್ರೀವಾಜ್ಞೆಗಳ ಮೂಲಕ ತಳ್ಳುವ ಯತ್ನ ತೀವ್ರಗೊಳಿಸಲಾಯಿತು. ಮೂರು ಕೃಷಿ ಕಾನೂನುಗಳು ಹಾಗೂ ಮೂರು ಕಾರ್ಮಿಕ ಕಾನೂನುಗಳು(ಮುಂಚೆಯೇ ಅಂಗೀಕರಿಸಿದ್ದ ಒಂದನ್ನು ಹೊರತುಪಡಿಸಿ) ಕಾರ್ಮಿಕರ ಹಾಗೂ ರೈತರ ಹಕ್ಕುಗಳ ಮೇಲೆ ನಡೆಸಿದ ಗಂಭೀರ ದಾಳಿಗಳಾಗಿವೆ. ಆ ಎರಡು ಜೊತೆ ಕಾನೂನುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಾಗೂ ಅಂತರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಪ್ರಯೋಜನವಾಗುವಂತೆ ರೂಪಿಸಲಾಗಿದೆ.
ಗಣಿ ಕಾನೂನುಗಳ(ತಿದ್ದುಪಡಿ) ಕಾಯಿದೆಯನ್ನು ತೂರಿಸುವ ಮೂಲಕ ಖಾಸಗಿ ಕಲ್ಲಿದ್ದಲು ಗಣಿ ಮತ್ತು ಇತರ ಗಣಿಗಾರಿಕೆಗೆ ಅನುವು ಮಾಡಿಕೊಡಲಾಗುತ್ತಿದೆ. ಪರಿಸರ ಪ್ರಭಾವ ತಿದ್ದುಪಡಿ ನಿಯಮಗಳ ಕರಡನ್ನು ಹಲವಾರು ನಿಯಂತ್ರಣಗಳನ್ನು ಹಾಗೂ ತೀವ್ರವಾಗಿ ಬಾಧಿತರಾದ ಸ್ಥಳೀಯ ಜನರ ಅಕ್ಷೇಪಣೆಗಳನ್ನು ಬದಿಗೊತ್ತಿ ಪರಿಯೋಜನೆಗಳಿಗೆ ಅವಕಾಶ ಕಲ್ಪಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ಬಹಳವಾಗಿ ತಟ್ಟುತ್ತದೆ.
ಮಹಾಸೋಂಕಿನ ಅವಧಿಯು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ವ್ಯಾಪಕ ದಾಳಿಯನ್ನೂ ಕಂಡಿದೆ. ಯುಎಪಿಎ(ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ) ಮತ್ತು ದೇಶದ್ರೋಹ ಕಾನೂನುಗಳ ಬಳಕೆ ಮಿತಿಮೀರಿದೆ. ಹಲವಾರು ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ವಾಂಸರುಗಳು ಬಹಳವಾಗಿದ್ದ ಬಹು ಸಂಖ್ಯೆಯ ಸಿಎಎ-ವಿರೋಧಿ ಪ್ರತಿಭಟನಾಕಾರರ ಮೇಲೆ ಈಶಾನ್ಯ ದೆಹಲಿಯ ಕೋಮು ಗಲಭೆಯಲ್ಲಿ ಪಾಲ್ಗೊಂಡಿದ್ದಾರೆಂದು ಅವರ ಮೇಲೆ ಯುಎಪಿಎ ಅಡಿಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಅಂತರ್ಜಾತಿಯ ಮದುವೆಗಳು ಹಾಗೂ ದಂಪತಿಗಳನ್ನು ಗುರಿಯಾಗಿಸಿ ‘ಲವ್-ಜಿಹಾದ್’ ಸುಗ್ರೀವಾಜ್ಞೆಯನ್ನು ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ಹೊರಡಿಸಲಾಗಿದೆ. ಕಾಶ್ಮೀರದಲ್ಲಿ, ಪ್ರಜಾಸತ್ತಾತ್ಮಕ ಹಕ್ಕುಗಳು ಹಾಗೂ ನಾಗರಿಕ ಹಕ್ಕುಗಳ ಲಜ್ಜಾಹೀನ ಉಲ್ಲಂಘನೆ ಮುಂದುವರಿದಿದ್ದು ಹಲವಾರು ರಾಜಕೀಯ ಕಾರ್ಯಕರ್ತರನ್ನು ಜೈಲಿನಲ್ಲಿಡಲಾಗಿದೆ ಮತ್ತು ದೂರಸಂಪರ್ಕದ 4ಜಿ ಸಂಪರ್ಕವನ್ನು ಜನರಿಗೆ ವಂಚಿಸಲಾಗಿದೆ.
ಒಕ್ಕೂಟ ತತ್ವಗಳ ಕನಿಷ್ಠ ಸ್ವರೂಪವನ್ನೂ ತೆಗೆದುಹಾಕಿ ಅಧಿಕಾರ ಕೇಂದ್ರೀಕರಣ ಭರದಿಂದ ಸಾಗಿದೆ. ರಾಜ್ಯಗಳ ಹಕ್ಕುಗಳನ್ನು ಹರಣ ಮಾಡಲಾಗಿದೆ ಅಥವಾ ಎಲ್ಲಾ ರಂಗಗಳಲ್ಲಿ ಬದಿಗೊತ್ತಲಾಗಿದೆ – ಜಿ.ಎಸ್.ಟಿ. ಕೊರತೆ ಪರಿಹಾರವನ್ನು ನಿರಾಕರಿಸಲಾಗಿದೆ; ಕೃಷಿ ಕಾಯಿದೆಗಳು ಹಾಗೂ ವಿದ್ಯುತ್ ಮಸೂದೆಗಳಂತಹ ಶಾಸನಗಳ ಮೂಲಕ ರಾಜ್ಯಗಳ ಹಕ್ಕುಗಳ ಮೇಲೆ ಅತಿಕ್ರಮಣ ನಡೆದಿದೆ; ಚುನಾಯಿತ ರಾಜ್ಯ ಸರ್ಕಾರಗಳನ್ನು ದುರ್ಬಲಗೊಳಿಸಲು ರಾಜ್ಯಪಾಲರುಗಳನ್ನು ಬಳಸಲಾಗುತ್ತಿದೆ ಮತ್ತು ರಾಜ್ಯಗಳಿಗೆ ಸಂಪನ್ಮೂಲಗಳನ್ನು ವರ್ಗಾಯಿಸಲು ಸಂವಿಧಾನೇತರ ಷರತ್ತುಗಳನ್ನು ವಿಧಿಸಲಾಗುತ್ತಿದೆ.
ಅಮೆರಿಕಾದೊಂದಿಗಿನ ರಕ್ಷಣಾ ಸಂಬಂಧವನ್ನು ಬಿಗಿಗೊಳಿಸುವ ಮೂಲಕ ಹಿಂದುತ್ವ ಶಕ್ತಿಗಳು ಹಾಗೂ ಅಮೆರಿಕ ಸಾಮ್ರಾಜ್ಯಶಾಹಿಗಳ ನಡುವಿನ ನಂಟನ್ನು ಗಟ್ಟಿಗೊಳಿಸಲಾಗಿದೆ. ಮಹಾಸೋಂಕಿನ ಅವಧಿಯು ಕ್ವಾಡ್ ಮಿಲಿಟರಿ ಮೈತ್ರಿಕೂಟವೊಂದನ್ನು ಹುಟ್ಟುಹಾಕಿದೆ.
2020 ಭೀಕರ ವರ್ಷವಾಗಿದ್ದಾಗ್ಯೂ, ಕಪ್ಪು ಮೋಡಗಳ ನಡುವೆ ಬೆಳಕಿನ ಕಿರಣಗಳೂ ಕಾಣಿಸಿವೆ. ವರ್ಷದ ಆರಂಭವು ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಅದರ ಪ್ರತಿರೂಪವಾದ ರಾಷ್ಟ್ರೀಯ ಪೌರರ ರಿಜಿಸ್ಟರ್ ವಿರುದ್ಧ ಸಮರಶೀಲ ಪ್ರತಿಭಟನೆಗಳನ್ನು ಕಂಡಿತು. ಡಿಸೆಂಬರ್ 2019 ರಲ್ಲಿ ಪ್ರಾರಂಭವಾದ ಈ ಪ್ರತಿಭಟನೆಗಳು ವಿಸ್ತಾರಗೊಂಡು 2020ರ ಮೊದಲ ಮೂರು ತಿಂಗಳಲ್ಲಿ ದೇಶದೆಲ್ಲೆಡೆ ಹಬ್ಬಿದವು. ಹಿಂದುತ್ವ ಕಾರ್ಯಸೂಚಿಯ ವಿರುದ್ಧ ಇದು ಮೊಟ್ಟ ಮೊದಲ ಸಾಮೂಹಿಕ ಚಳುವಳಿಯಾಯಿತು; ಸಿಎಎ-ಎನ್ಆರ್ಸಿಯ ಉದ್ದೇಶವು ಭಾರತೀಯ ಪೌರತ್ವವನ್ನು ಮರುನಿರ್ವಚಿಸುವುದಾಗಿತ್ತು ಮತ್ತು ಮುಸ್ಲಿಮರನ್ನು ಗುರಿಯಾಗಿಸಿ ಅವರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡುವುದಾಗಿತ್ತು. ಮಹಾಸೋಂಕು ಹಾಗೂ ಲಾಕ್ಡೌನ್ ದೇಶವ್ಯಾಪಿ ಸಾಮೂಹಿಕ ಚಳುವಳಿಯನ್ನು ಹಠಾತ್ತಾಗಿ ಅಂತ್ಯಗೊಳಿಸಿತು. ವರ್ಷದ ಕೊನೆಯ ಎರಡು ತಿಂಗಳುಗಳು ಎರಡನೆಯ ಸಾಮೂಹಿಕ ಚಳುವಳಿಗೆ, ಈ ಬಾರಿ ರೈತರ ಚಳುವಳಿಗೆ, ಮೂರು ಕೃಷಿ ಕಾನೂನುಗಳ ವಿರುದ್ಧದ ಚಳುವಳಿಗೆ ಸಾಕ್ಷಿಯಾಯಿತು. ನವಂಬರ್ 26 ರಂದು ‘ದೆಹಲಿ ಚಲೋ’ ಶುರುವಾದ ದಿನವೇ ಕಾರ್ಮಿಕ ವರ್ಗದ ಬೃಹತ್ ಸಾರ್ವತ್ರಿಕ ಮುಷ್ಕರ ನಡೆಯಿತು. ರೈತರ ಹೋರಾಟ ಹೊಸ ವರ್ಷದಲ್ಲೂ ಮುಂದುವರಿಯಲಿದೆ.
ಮೋದಿ ಸರ್ಕಾರದ ಕಾರ್ಪೊರೇಟ್ ಪರ ಹಾಗೂ ಹಿಂದುತ್ವ ಕಾರ್ಯಸೂಚಿಗೆ ಪ್ರತಿರೋಧವಾಗಿ ಈ ಎರಡೂ ಚಳುವಳಿಗಳು ಹೊಸ ಮನ್ವಂತರವಾಗಿ ಪರಿಣಮಿಸಲಿವೆ. ಹೀಗೆ ಹೊಸ ವರ್ಷವು ಆಶಾದಾಯಕ ಕಥನದೊಂದಿಗೆ ಆರಂಭವಾಗಲಿದೆ: ವರ್ಷದ ಮಧ್ಯದ ಹೊತ್ತಿಗೆ ಲಸಿಕೆಯು ಎಲ್ಲರಿಗೂ ಸಿಗುವಂತಾಗಿ ಮಹಾಸೋಂಕಿನ ಅಂತ್ಯವನ್ನು ನೋಡುವ ಆಶಾದಾಯಕ ವರ್ಷವಾಗಲಿದೆ ಮತ್ತು ಪ್ರತಿಗಾಮಿ ಜನ-ವಿರೋಧಿ ಆಳ್ವಿಕೆಗೆ ಎದುರಾಗಿ ವ್ಯಾಪಕ ಪ್ರತಿರೋಧ ಹುಟ್ಟುಹಾಕುವ ಸಾಧ್ಯತೆಗಳ ವರ್ಷವಾಗಿ ಹೊರಹೊಮ್ಮಲಿದೆ.
ಅನು: ಟಿ.ಸುರೇಂದ್ರ ರಾವ್