ಕರ್ನಾಟಕದಲ್ಲಿ ಎಲ್ಲಿದೆ ಸರ್ಕಾರ?

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಬಿಜೆಪಿ ಕೈಗೆ ಬಂದ ಮೇಲೆ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ ಎಂದು ಬಿಜೆಪಿ ನಾಯಕರು ಬಿಂಬಿಸಿದ್ದರು. ಆದರೆ ಹಾಗೆ ಆಗಲಿಲ್ಲ. ಬಿಜೆಪಿ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತದೆ ಎಂಬ ಭಾವನೆ ಜನರಲ್ಲಿ ಈಗ ಉಳಿದುಕೊಂಡಂತೆ ಕಾಣುವುದಿಲ್ಲ. ಬಿಜೆಪಿ ಸರ್ಕಾರಕ್ಕೆ ಸರಳ ಬಹುಮತ ದಕ್ಕಿಸಿಕೊಳ್ಳಲು ಉಪಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು. ಹಾಗಾಗಿ ಆಡಳಿತರೂಢರ ಗಮನವು ಸಹಜವಾಗಿಯೇ ಆ ಕಡೆ ಕೇಂದ್ರೀಕೃತವಾಗಿತ್ತು. ಇದರ ಪರಿಣಾಮವಾಗಿ ಅಭಿವೃದ್ಧಿ ಕಾರ್ಯಗಳು ಕಡಗಣನೆಗೆ ಒಳಗಾದವು. ಇದಕ್ಕೂ ಮೊದಲು ಕೊರೋನಾ ತಂದಿಟ್ಟ ಅಡೆತಡೆಗಳು ಅಭಿವೃದ್ಧಿಗೆ ತೊಡರುಗಾಲಾಗಿ ಪರಿಣಮಿಸಿದವು. ಈ ನಡುವೆ ಆಡಳಿತ ಪಕ್ಷದೊಳಗಿನ ಗೊಂದಲ, ಪದೇ ಪದೇ ಮುನ್ನಲೆಗೆ ಬಂದ ನಾಯಕತ್ವ ಬದಲಾವಣೆಯ ಪ್ರಶ್ನೆ, ಸಚಿವ ಸಂಪುಟ ವಿಸ್ತರಣೆಯ ಗೊಂದಲಗಳು ಆಡಳಿತ ಯಂತ್ರವನ್ನೇ ಸ್ತಬ್ಧಗೊಳಿಸುವಂತಾಯಿತು. ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು ಮತ್ತು ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬ ಸ್ವಯಂ ಘೋಷಿತ ಪ್ರಕಟಣೆಯಿಂದ ಸಂತೃಪ್ತರಾದ ಮುಖ್ಯಮಂತ್ರಿಯವರು ಮುಂದಿನ ಎರಡೂವರೆ ವರ್ಷ ತಾವೇ ಮುಖ್ಯಮಂತ್ರಿ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡದ್ದು ರಾಜ್ಯದ ಜನತೆಗೆ ಒಳ್ಳೆಯ ಮನೋರಂಜನೆ ನೀಡಿದ್ದು ಮಾತ್ರ ನಿಜ. ಈಗ ನಾಯಕತ್ವ ಬದಲಾವಣೆಯ ಪ್ರಶ್ನೆ ಬಿಜೆಪಿ ವರಿಷ್ಠರ ಮುಂದಿಲ್ಲವಂತೆ! ಇದು ದೀರ್ಘಕಾಲ ಉಳೀಯಬಹುದಾದ ಭರವಸೆಯೇ ಅಥವ ಅಲ್ಲವೇ ಎಂಬುದನ್ನು ಕಾದುನೋಡಬೇಕು.

ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ತನ್ನ ಕುರಿಗಳನ್ನು ತನ್ನ ಕುರಿಹಿಂಡಿನಲ್ಲಿ ಹಿಡಿದಿಡುವುದು ತಲೆನೋವಿನ ಪ್ರಶ್ನೆಯಾಗಿದೆ. ಯಡಿಯೂರಪ್ಪನವರು ಇತ್ತೀಚೆಗೆ ಪ್ರದೇಶವಾರಾಗಿ ಕರೆದ ಬಿಜೆಪಿ ಶಾಸಕರ ಸಭೆಗಳಲ್ಲಿ ಶಾಸಕರು ಈ ಅವಕಾಶವನ್ನು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಬಳಸಿಕೊಂಡರಂತೆ. ಯಡಿಯೂರಪ್ಪನವರ ಶಾಸಕರಲ್ಲಿ ಸಾಕಷ್ಟು ಪ್ರಮಾಣದ ಅತೃಪ್ತಿ ತುಂಬಿಕೊಂಡಿದೆ ಎಂಬ ಸತ್ಯ ಬಯಲಿಗೆ ಬಂದಂತಾಗಿದೆ. ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳಿಗೆ ಅಗತ್ಯ ಹಣ ದೊರೆಯುತ್ತಿಲ್ಲ ಎಂದು ಶಾಸಕರು ತಮ್ಮ ಗೋಳನ್ನು ತೋಡಿಕೊಂಡರಂತೆ.

ರಾಜ್ಯದಲ್ಲಿ ಇಂದು ಕೊರೋನಾ ದಾಳಿಗೆ ತುತ್ತಾದ ಬಡವರಿಗೆ ಯಾವುದೇ ನೆರವನ್ನು ಸರ್ಕಾರ ನೀಡಲಿಲ್ಲ. ಜನತೆಯನ್ನು ಅಭಿವೃದ್ಧಿಯತ್ನ ಕೊಂಡೊಯ್ಯುವುದು ಒಂದು ಚುನಾಯಿತ ಸರ್ಕಾರದ ಹೊಣೆಗಾರಿಕೆಯಾಗಿದೆ. ಆದರೆ ಅಧಿಕಾರವನ್ನು ತನ್ನ ಹಾಗೂ ತನ್ನವರ ಕೈಯಲ್ಲಿ ಭದ್ರಗೊಳಿಸಲು ಹೆಣಗುವುದು ನ್ಯಾಯವಲ್ಲ. ರಾಜ್ಯದಲ್ಲಿರುವ ಈಗ ಇರುವ ಸರ್ಕಾರ ಒಂದು ಜನಪರ ಸರ್ಕಾರ ಅಲ್ಲವೆ ಅಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸುವ ಆಸಕ್ತಿ ಅದಕ್ಕಿಲ್ಲ. ಜನರ ಜೀವನ ನಿರ್ವಹಣೆ ಯಾತನಾಮಯವಾಗಿದೆ. ಜನರ ಕಷ್ಟ ನಷ್ಟಗಳಿಗೆ ಅದು ಸ್ಪಂಧಿಸುವುದಿಲ್ಲ. ಬೆಲೆಗಳ ಏರಿಕೆ, ನಿರುದ್ಯೋಗ, ಜನರ ಆದಾಯದ ಕುಸಿತ ಇವೆಲ್ಲವುಗಳನ್ನು ಮರೆಮಾಚಲಾಗುತ್ತದೆ. ಸಮಾಜದಲ್ಲಿ ದ್ವೇಷವನ್ನು ಬೆಳೆಸಿ, ಪರಸ್ಪರ ಅಪನಂಬಿಕೆಯನ್ನು ಹರಡಿ ಶಾಂತಿಯನ್ನು ಕದಡಲಾಗುತ್ತದೆ. ಇದೊಂದು ಮಾನವ ಸಮಾಜ ಹೌದು. ಆದರೆ ಇದು ಒಂದು ಮಾನವೀಯ ಸಮಾಜವಾಗಿ ಉಳಿದಿಲ್ಲ. ಇಲ್ಲಿ ಅಮಾಯಕರನ್ನು ಜೈಲಿಗೆ ಹಾಕುತ್ತಾರೆ. ಅಪರಾಧಿಗಳನ್ನು ರಾಜಾರೋಷವಾಗಿ ಓಡಾಡಲು ಬಿಡುತ್ತಾರೆ. ಇಲ್ಲಿ ಹಸಿವೆಯಿಂದ ಸಾಯುವವರಿದ್ದಾರೆ. ಇಲ್ಲಿ ತಿಂದು ತೇಗುವವರೂ ಇದ್ದಾರೆ ಇಲ್ಲಿ ಕಣ್ಣಿರುವ ಸರ್ಕಾರ ಇಲ್ಲ; ಕಿವಿ ಕೇಳುವ ಸರ್ಕಾರ ಇದ್ದಂತಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಹುಡುಕಿ ನೋಡಿ, ಇಲ್ಲಿ ಸರ್ಕಾರ ಇದೆಯಾ? ಜನತೆಯತ್ತ ದೃಷ್ಠಿ ಬೀರಡ ಸರ್ಕಾರ ಇದ್ದರೆಷ್ಟು? ಬಿಟ್ಟರೆಷ್ಟು?

Leave a Reply

Your email address will not be published. Required fields are marked *