ತ್ರಿಪುರಾದಲ್ಲಿ ಬಿಜೆಪಿ ಮಂದಿಯ ಹಿಂಸಾತ್ಮಕ ಹಲ್ಲೆಗಳು

ತ್ರಿಪುರಾದಲ್ಲಿ ಬಿಜೆಪಿಯ ಸಮಾಜ-ಘಾತುಕ ಶಕ್ತಿಗಳು ಸಿಪಿಐ(ಎಂ) ಮುಖಂಡರು, ಕಾರ್ಯಕರ್ತರು ಮತ್ತು ಕಚೇರಿಗಳ ಮೇಲೆ ಮತ್ತೆ ಹಿಂಸಾಚಾರ ಆರಂಭಿಸಿವೆ. ಜನವರಿ 17ರಂದು ಪಕ್ಷದ ಸ್ಥಳೀಯ ಸಮಿತಿ ಕಚೇರಿ ಮತ್ತು ಅಲ್ಲಿದ್ದ ಕಾರ್ಯಕರ್ತರ ಮೇಲೆ ದೈಹಿಕ ದಾಳಿ ನಡೆಸಿದಾಗ ಅಲ್ಲಿಗೆ ಹೋದ ಪಕ್ಷದ ರಾಜ್ಯಸಮಿತಿಯ ಸದಸ್ಯೆ, ರಾಜ್ಯ ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯೆಯೂ ಆದ ಜರ್ನಾ ದಾಸ್ ಬೈದ್ಯ ಮತ್ತು ಅವರ ಭದ್ರತಾ ಅಧಿಕಾರಿ ಮೇಲೂ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಅವರ ನಿವಾಸದ ಮೇಲೂ ದಾಳಿ ಮಾಡಿ ಹಾಳುಗೆಡವಿದ್ದಾರೆ ಮತ್ತು ನಗದೂ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ಈ ಹಿಂಸಾ ಕೃತ್ಯವನ್ನು ಖಂಡಿಸುತ್ತ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

ಸಿಪಿಐ(ಎಂ)ನ ಸಬ್‌ ಡಿವಿಜನ್ ಸಮಿತಿಯ ಕಾರ್ಯದರ್ಶಿ ಮತ್ತು ಕಾಂಗ್ರೆಸಿನ ಅಧ್ಯಕ್ಷರ ಮೇಲೂ ಹಲ್ಲೆಗಳು ನಡೆದಿವೆ.

ಬಿಜೆಪಿ ರಾಜ್ಯ ಸರಕಾರ ಕಾನೂನು ವ್ಯವಸ್ಥೆ ಕಾಪಾಡುವ ತನ್ನ ಕರ್ತವ್ಯವನ್ನು ನೆರವೇರಿಸುವ ಬದಲು ವಿಪಕ್ಷಗಳ ಮೇಲೆ ಈ ರೀತಿ ಹಲ್ಲೆ ನಡೆಸುತ್ತಿರುವವರಿಗೆ ಕೃಪಾಪೋಷಣೆ ಒದಗಿಸುತ್ತಿದೆ, ತ್ರಿಪುರಾದ ಜನತೆ ಇಂತಹ ಪ್ರಜಾಪ್ರಭುತ್ವ-ವಿರೋಧಿ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಎಚ್ಚರಿಸಿದೆ.

ಜನವರಿ 20ರಂದು ಎಡರಂಗದ ಶಾಸಕರು ಪ್ರತಿಪಕ್ಷದ ಮುಖಂಡರೂ, ಸಿಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯರೂ ಆಗಿರುವ ಮಾಣಿಕ್ ಸರ್ಕಾರ್ ಸೇರಿದಂತೆ ಅಪಾರ ಕಾರ್ಯಕರ್ತರು ಅಗರ್ತಲಾದ ಬೀದಿಗಳಲ್ಲಿ ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದರು.

Leave a Reply

Your email address will not be published. Required fields are marked *