ಫೆಬ್ರವರಿ-ಮಾರ್ಚ್ 2022ರಲ್ಲಿ ಪಕ್ಷದ 23ನೇ ಮಹಾಧಿವೇಶನ-ಜುಲೈ 2021ರಿಂದ ಶಾಖಾ ಸಮ್ಮೇಳನಗಳು
ಫೆಬ್ರವರಿ 2021 ರ ದ್ವಿತೀಯಾರ್ಧದಲ್ಲಿ ಪಕ್ಷದ ಎಲ್ಲಾ ಘಟಕಗಳು ದೇಶಾದ್ಯಂತ ಹದಿನೈದು ದಿನಗಳ ಪ್ರಚಾರಾಂದೋಲನವನ್ನು ನಡೆಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಕರೆ ನೀಡಿದೆ. ಇದು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಮೂಲಕ ಭಾರತದ ಸಾಂವಿಧಾನಿಕ ವ್ಯವಸ್ಥೆಯನ್ನು ಮತ್ತು ಆರ್ಥಿಕ ಬುನಾದಿಗಳನ್ನು ನಾಶಪಡಿಸುತ್ತಿರುವುದು, ರಾಷ್ಟ್ರೀಯ ಸ್ವತ್ತುಗಳ ಲೂಟಿ, ದೊಡ್ಡ ಪ್ರಮಾಣದ ಖಾಸಗೀಕರಣ,; ಬೆಲೆ ಏರಿಕೆ; ಕಾರ್ಮಿಕ ಕಾನೂನುಗಳ ರದ್ಧತಿ, ನಿರುದ್ಯೋಗದ ನಾಗಾಲೋಟ ಇತ್ಯಾದಿ ವಿಷಯಗಳ ಮೇಲೆ ಮತ್ತು ಈಗ ನಡೆಯುತ್ತಿರುವ ರೈತರ ಹೋರಾಟಗಳಿಗೆ ಸೌಹಾರ್ದವನ್ನು ಬಲಪಡಿಸುವ ಹಾಗೂ ಆರ್ಎಸ್ಎಸ್ / ಬಿಜೆಪಿಯ ಸುಳ್ಳು ಪ್ರಚಾರವನ್ನು ಬಯಲಿಗೆಳೆಯುವ ವಿಷಯಗಳ ಮೇಲೆ ಇರುತ್ತದೆ ಎಂದು ಅದು ನಿರ್ಧರಿಸಿದೆ.
ಪಕ್ಷದ 23ನೇ ಮಹಾಧಿವೇಶನ ಏಪ್ರಿಲ್ 2021ರಲ್ಲಿ ನಡೆಯಬೇಕಾಗಿತ್ತು. ಸಾಂಕ್ರಾಮಿಕ/ಲಾಕ್ ಡೌನ್ ಗಳು ಮತ್ತು ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳಿಂದಾಗಿ ಅದನ್ನು ಮುಂದೂಡಬೇಕಾಗಿ ಬಂದಿದೆ ಎಂದಿರುವ ಕೇಂದ್ರ ಸಮಿತಿ 23ನೇ ಮಹಾಧಿವೇಶನವನ್ನು 2022ರ ಮೊದಲ ತ್ರೈಮಾಸಿಕದಲ್ಲಿ, ಸಾಧ್ಯವಾದಷ್ಟೂ ಫೆಬ್ರುವರಿ ಅಂತ್ಯದೊಳಗೆ ನಡೆಸಲು ನಿರ್ಧರಿಸಿದೆ. ಇದಕ್ಕೆ ಸಿದ್ಧತೆಗಳು ಮುಂಬರುವ ವಿಧಾನಸಭಾ ಚುನಾವಣೆಗಳ ನಂತರ 2021ರ ಜುಲೈ ಮೊದಲ ವಾರದಿಂದ ಶಾಖಾ ಸಮ್ಮೇಳನಗಳೊಂದಿಗೆ ಪ್ರಾರಂಭವಾಗುತ್ತವೆ.
ಜನವರಿ 30-31ರಂದು ಅನ್ಲೈನಿನಲ್ಲಿ ಸಭೆ ಸೇರಿದ ಸಿಪಿಐ(ಎಂ) ಕೇಂದ್ರ ಸಮಿತಿ ಸಭೆಯ ನಂತರ ನೀಡಿರುವ ಹೇಳಿಕೆಯಲ್ಲಿ ಇದನ್ನು ತಿಳಿಸಿದೆ.
ಹೇಳಿಕೆಯ ಪೂರ್ಣಪಾಟವನ್ನು ಈ ಮುಂದೆ ಕೊಡಲಾಗಿದೆ:
ರೈತರ ಹೋರಾಟ
ಪ್ರತಿಗಾಮಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಮತ್ತು ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ(ಎಂ.ಎಸ್.ಪಿ.)ಗಳನ್ನು ಎಲ್ಲ ರೈತರ ಕಾನೂನುಬದ್ಧ ಹಕ್ಕಾಗಿ ಮಾಡುವ ಶಾಸನವನ್ನು ಒತ್ತಾಯಿಸಿ ಮುಂದುವರೆಯುತ್ತಿರುವ ಬೃಹತ್ ರೈತ ಹೋರಾಟವನ್ನು ಕೇಂದ್ರ ಸಮಿತಿ ಶ್ಲಾಘಿಸಿದೆ.
ಈ ಹೋರಾಟಕ್ಕೆ ಕೇಂದ್ರ ಸಮಿತಿ ತನ್ನ ಸಂಪೂರ್ಣ ಸೌಹಾರ್ದ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದೆ.
ಬೃಹತ್ ಗಣರಾಜ್ಯ ದಿನದ ಟ್ರಾಕ್ಟರ್ ಪರೇಡಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಟ್ರಾಕ್ಟರುಗಳಲ್ಲಿ ಅನೇಕ ಲಕ್ಷ ರೈತರು ಭಾಗವಹಿಸಿದ್ದರು, ಅದು ಒಪ್ಪಿದ ಮಾರ್ಗಗಳಲ್ಲಿ ಶಾಂತಿಯುತವಾಗಿ ಚಲಿಸಿತು. ದೇಶದ ಎಲ್ಲಾ ರಾಜ್ಯಗಳಲ್ಲಿ, ಇದೇ ರೀತಿಯ ಪರೇಡ್ಗಳು ಮತ್ತು ಇತರ ಸೌಹಾರ್ದ ಕಾರ್ಯಾಚರಣೆಗಳು ದೊಡ್ಡ ಪ್ರಮಾಣದಲ್ಲಿ ನಡೆದವು.
ಗಣರಾಜ್ಯೋತ್ಸವದಂದು ಅಲ್ಲಲ್ಲಿ ಕೆಲವೆಡೆಗಳಲ್ಲಿ ನಡೆದ ಅಹಿತಕರ ಘಟನೆಗಳು ಈ ಕಾನೂನುಗಳನ್ನು ರದ್ದುಗೊಳಿಸುವ ಮುಖ್ಯ ಬೇಡಿಕೆಯಿಂದ ಗಮನವನ್ನು ತಿರುಗಿಸಲು ಸಾಧ್ಯವಿಲ್ಲ. ಈ ಘಟನೆಗಳು, ದಳ್ಳಾಳಿ ಪ್ರಚೋದಕರ ಕೈವಾಡಗಳು, ಇವರಲ್ಲಿ ಕೆಲವರು ಬಿಜೆಪಿಯೊಂದಿಗೆ ಸಂಪರ್ಕ ಇರುವವರು ಎಂದು ಸಾಬೀತಾಗಿದೆ. ಇದನ್ನು ಇಡೀ ಚಳುವಳಿ ಮತ್ತು ದೇಶ ಬಲವಾಗಿ ಖಂಡಿಸಿವೆ.
ದಬ್ಬಾಳಿಕೆ : ಸಿ.ಎ.ಎ. ಇತ್ಯಾದಿಗಳ ವಿರುದ್ಧ ಜನಗಳ ಶಾಂತಿಯುತವಾದ ಬೃಹತ್ ಆಂದೋಲನವನ್ನು ಛಿದ್ರಗೊಳಿಸಲು ಆರ್ಎಸ್ಎಸ್-ಬಿಜೆಪಿ ಬಳಸಿದ ವಿಧಾನವನ್ನೇ ಅನುಸರಿಸಿ, ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಕುಳಿತಿದ್ದ ರೈತರ ಮೇಲೆ ಹಲ್ಲೆ ನಡೆಸಲು ಸಶಸ್ತ್ರ ಗೂಂಡಾಗಳನ್ನು ದಿಲ್ಲಿ ಪೋಲೀಸರ ರಕ್ಷಣೆಯಲ್ಲಿ ಕಳುಹಿಸಲಾಯಿತು . ಆದರೆ, ಇದು ರೈತರು ಮತ್ತು ಸಾಮಾನ್ಯ ಜನರನ್ನು ಕೆರಳಿಸಿತು, ಅವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರತಿಭಟನೆಯಲ್ಲಿ ಕೈಜೋಡಿಸಿ ಈ ಗೂಂಡಾಗಳನ್ನು ಹೊರಹೋಗುವಂತೆ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ದಿಲ್ಲಿ ಪೊಲೀಸ್ ನ ಚಾಳಿಯಂತೆ, ಇಂತಹ ಹೀಸಾತ್ಮಕ ಹಲ್ಲೆಗಳನ್ನು ನಡೆಸಿದವರನ್ನು ವಿಚಾರಣೆಗೆ ಗುರಿಪಡಿಸದೆ, ಅದರಿಂದ ಸಂತ್ರಸ್ತರಾದವರ ಮೇಲೆಯೇ ಕೇಸುಗಳನ್ನು ಹೇರಲಾಗಿದೆ. ಸರಕಾರದೊಡನೆ ಮಾತುಕತೆಗಳಲ್ಲಿ ತೊಡಗಿರುವ 30 ಕ್ಕೂ ಹೆಚ್ಚು ರೈತ ಮುಖಂಡರ ಮೇಲೆ. ಗಲಭೆ, ಕ್ರಿಮಿನಲ್ ಪಿತೂರಿ, ಕೊಲೆ ಯತ್ನ ಮತ್ತು ದರೋಡೆ ಆರೋಪದ ಮೇಲೆ 25 ಎಫ್.ಐ.ಆರ್.ಗಳನ್ನು ಹೇರಲಾಗಿದೆ. ಕೇಂದ್ರ ಸಮಿತಿಯು ಬಿಜೆಪಿ ಸರ್ಕಾರ ಮತ್ತು ದಿಲ್ಲಿ ಪೊಲೀಸರ ಈ ದಮನಕಾರಿ ಕ್ರಮವನ್ನು ಖಂಡಿಸಿದೆ ಮತ್ತು ಈ ಸುಳ್ಳು ಪ್ರಕರಣಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.
ಪತ್ರಕರ್ತರ ಮೇಲೆ ಗುರಿ : ಬಿಜೆಪಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಕರ್ನಾಟಕದಲ್ಲಿನ ತನ್ನ ರಾಜ್ಯ ಸರ್ಕಾರಗಳ ಮೂಲಕ ಮತ್ತು ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಇರುವ ದಿಲ್ಲಿಯಲ್ಲಿ , ರೈತರ ಪ್ರತಿಭಟನೆಗಳಿಗೆ ಸಂಬಂಧಪಟ್ಟ ಘಟನೆಗಳನ್ನು ಸತ್ಯವಾಗಿ ವರದಿ ಮಾಡುವ ಪತ್ರಕರ್ತರ ವಿರುದ್ಧ ದಾಳಿಗಳನ್ನು ತೀವ್ರಗೊಳಿಸಿದೆ. ಪತ್ರಕರ್ತರನ್ನು ಬೆದರಿಸುವ ಮತ್ತು ಭಯ ಹುಟ್ಟಿಸುವ ಇಂತಹ ಪ್ರಯತ್ನಗಳು ಬಿಜೆಪಿ ಆಡಳಿತಗಳಲ್ಲಿ ಹಲವು ಸಂದರ್ಭಗಳಲ್ಲಿ ನಡೆಯುತ್ತ ಬಂದಿವೆ. ಆದರೆ ಜನವರಿ 28 ರಿಂದ, ಭಾರತದ ಪತ್ರಕರ್ತರ ವಿರುದ್ಧ ರಾಜದ್ರೋಹದ ಆರೋಪ ಮತ್ತು ಕೋಮು ಅಸಾಮರಸ್ಯವನ್ನು ಉತ್ತೇಜಿಸುವುದು, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು, ರಾಷ್ಟ್ರೀಯ ಸಮಗ್ರತೆಗೆ ಮಾರಕವಾದ ಪ್ರತಿಪಾದನೆಗಳನ್ನು ಮಾಡುವುದು ಇತ್ಯಾದಿ ಇತರ ಒಂಬತ್ತು ಕಾನೂನು ನಿಬಂಧನೆಗಳ ಅಡಿಯಲ್ಲಿ ಎಫ್.ಐ.ಆರ್. ದಾಖಲಿಸಲಾಗುತ್ತಿದೆ. ಪ್ರತಿಷ್ಠಿತ ಹಿರಿಯ ಪತ್ರಕರ್ತರ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವೈಯಕ್ತಿಕ ಟ್ವೀಟ್ಗಳ ಆಧಾರದ ಮೇಲೆ ಇಂತಹ ಆರೋಪಗಳನ್ನು ಹಾಕಲಾಗಿದೆ. ಇದು ದೂಷಣೀಯ, ಇದರಲ್ಲಿ ಮಾಧ್ಯಮಗಳನ್ನು ಮಣಿಸಲು, ಬೆದರಿಸಲು ಮತ್ತು ಕಿರುಕುಳ ನೀಡುವ ಪ್ರಯತ್ನಗಳ ವಾಸನೆ ಬರುತ್ತಿದೆ.
ಕೇಂದ್ರ ಸಮಿತಿಯು ಇಂತಹ ಕ್ರಮಗಳನ್ನು ತೀವ್ರವಾಗಿ ಖಂಡಿಸಿದೆ ಮತ್ತು ಎಫ್.ಐ.ಆರ್.ಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿದೆ.
ಈ ದಬ್ಬಾಳಿಕೆಯನ್ನು ಖಂಡಿಸುತ್ತಲೇ, ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಕೇಂದ್ರ ಸಮಿತಿ ಪುನರುಚ್ಚರಿಸಿದೆ. ತರುವಾಯ ಸರ್ಕಾರವು ಕೃಷಿ ಸುಧಾರಣೆಗಳನ್ನು ರೈತರು ಮತ್ತು ಎಲ್ಲಾ ಭಾಗೀದಾರರೊಂದಿಗೆ ಚರ್ಚಿಸಬೇಕು ಮತ್ತು ಯಾವುದಾದರೂ ಹೊಸ ಪ್ರಸ್ತಾವಗಳಿದ್ದರೆ ರೂಪಿಸಿ ಸಂಸದೀಯ ಸಮಿತಿಗಳ ಸ್ಥಾಪಿತ ರಚನೆಗಳ ಮೂಲಕ ಸಂಸತ್ತಿನ ಪರಿಶೀಲನೆ ಮತ್ತು ಚರ್ಚೆಗಳಿಗೆ ಅವನ್ನು ಮಂಡಿಸಬೇಕು. ಸಂಸತ್ತಿನ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಈ ಕಾನೂನುಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಕೇಂದ್ರ ಪಕ್ಷದ ಸಂಸದರಿಗೆ ನಿರ್ದೇಶನ ನೀಡಿದೆ.
ಜನರ ಸಂಕಟಗಳು ಹೆಚ್ಚುತ್ತಿವೆ
ನಿರುದ್ಯೋಗದ ನಾಗಾಲೋಟ: ಸಿ.ಎಂ.ಐ.ಇ.ಯ ಒಂದು ಮಿತವಾದ ಅಂದಾಜಿನ ಪ್ರಕಾರ ಸಂಘಟಿತ ವಲಯವೊಂದರಲ್ಲೇ ಸುಮಾರು 150ಲಕ್ಷ ಉದ್ಯೋಗಗಳು ನಷ್ಟಗೊಂಡಿವೆ. ಈ ಪೈಕಿ ಸುಮಾರು 100 ಲಕ್ಷ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು. ಇದಲ್ಲದೆ ಅನೌಪಚಾರಿಕ ವಲಯದ ನಾಶ ಮತ್ತು ದೊಡ್ಡ ಪ್ರಮಾಣದಲ್ಲಿ ಕೋಟ್ಯಂತರ ಜನರ ಜೀವನೋಪಾಯಗಳ ನಷ್ಟವೂ ಆಗಿದೆ.
ಶಕ್ತಿ ಉಡುಗಿಸುವ ಬೆಲೆ ಏರಿಕೆ : ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗದ ನಾಗಾಲೋಟದ ಮಧ್ಯೆ , ಎಲ್ಲಾ ಅಗತ್ಯ ವಸ್ತುಗಳ, ವಿಶೇಷವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ವಿಪರೀತ ಬೆಲೆ ಏರಿಕೆಯಿಂದ ಜನರ ಸಂಕಟಗಳು ಮೇರೆ ಮೀರುತ್ತಿವೆ . ಇಂಧನ ಬೆಲೆಗಳನ್ನು ವಿವೇಚನೆಯಿಲ್ಲದೆ ನಿಯಮಿತವಾಗಿ ಎಂಬಂತೆ ಏರಿಸಲಾಗುತ್ತಿದೆ. ಭಾರತವು ಜಗತ್ತಿನಲ್ಲೇ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅತಿ ಹೆಚ್ಚು ದರಗಳಲ್ಲಿ ತೆರಿಗೆ ವಿಧಿಸುವ ದೇಶವಾಗಿದೆ.
ಇದರ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಬೇಕು ಎಂದು ಎಲ್ಲಾ ಪಕ್ಷದ ಘಟಕಗಳಿಗೆ ಕೇಂದ್ರ ಸಮಿತಿ ಕರೆ ನೀಡುತ್ತದೆ..
ಆರ್ಥಿಕ ಸಮೀಕ್ಷೆ
ಬೃಹದಾಕಾರದ ‘ಆರ್ಥಿಕ ಸಮೀಕ್ಷೆ’’ ಈ ಕಸರತ್ತನ್ನೇ ಅಪ್ರಸ್ತುತಗೊಳಿಸಿ ಬಿಡುತ್ತಿದೆ. ಭಾರತವನ್ನು ಸಾಂಕ್ರಾಮಿಕದಿಂದಾಗಲೀ ಅಥವಾ ಅದರ ವಿನಾಶಕಾರಿ ಆರ್ಥಿಕ ಪರಿಣಾಮಗಳಿಂದಾಗಲೀ ರಕ್ಷಿಸುವಲ್ಲಿ ಸರ್ಕಾರದ ವಿರಾಟ್ ವೈಫಲ್ಯದ ಕಟು ಸಾಕ್ಷ್ಯವನ್ನು ಅಂಕೆ-ಸಂಖ್ಯೆಗಳ ಮಾಯಾಜಾಲದಲ್ಲಿ ಮುಚ್ಚಿ ಹಾಕಲಾಗಿದೆ. ತಮಾಷೆಯೆಂದರೆ, ಈ ವಿನಾಶಕಾರಿ ನಿರ್ವಹಣೆಯನ್ನು ಜೀವಗಳು ಮತ್ತು ಜೀವನೋಪಾಯಗಳು ಎರಡನ್ನೂ ಉಳಿಸಿದ ಧೋರಣೆಗಳ ಮೂಲಕದ `ದೂರದೃಷ್ಟಿಯ’ ಸ್ಪಂದನೆ ಎಂದು ಶ್ಲಾಘಿಸಲಾಗಿದೆ.. ಇದು ಜನರ ಜೀವನೋಪಾಯದ ಮೇಲೆ ಸರ್ಕಾರದ ಧೋರಣೆಗಳ ವಿಧ್ವಂಸಕಾರಿ ಪರಿಣಾಮವನ್ನು ಮರೆಮಾಚುವ ಅಪಪ್ರಚಾರ ಮತ್ತು ವಂಚಕ ಕಸರತ್ತಾಗಿದೆ.
2020-20121ರ ವರ್ಷದ ಮೊದಲ ತ್ರೈಮಾಸಿಕದಲ್ಲಿ (-) 23.9ಶೇ.ದಷ್ಟು, ಅದರ ಮೇಲೆ ಎರಡನೇ ತ್ರೈಮಾಸಿಕದಲ್ಲಿ ಮತ್ತೆ (-) 7.5ಶೇ. ದಷ್ಟು ಜಗತ್ತಿನ ಅತೀ ಕೆಟ್ಟ ಜಿ.ಡಿ.ಪಿ. ಸಂಕೋಚನವನ್ನು ಒಂದು ವಿಚಿತ್ರವಾದ ರೀತಿಯಲ್ಲಿ, V ಆಕಾರದ ಚೇತರಿಕೆ ಎಂದು ತೋರಿಸಲಾಗಿದೆ! ಚೇತರಿಕೆ ಏನಾದರೂ ಇದ್ದರೆ, ಅದು K-ಆಕಾರದ ಚೇತರಿಕೆಯಾಗಿದೆ, ಅಂದರೆ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುವ ಮತ್ತು ಬಡವರು ಮತ್ತಷ್ಟು ಬಡವರಾಗುವಂತದ್ದು. ಇತ್ತೀಚಿನ ಆಕ್ಸ್ಫಾಮ್ ವರದಿ, “ಅಸಮಾನತೆಯ ವೈರಸ್”. ಇದನ್ನು ವ್ಯಕ್ತಗೊಳಿಸಿದೆ. ಲಕ್ಷಾಂತರ ಬಡವರು ಈ ವರ್ಷ ಉದ್ಯೋಗ ಕಳೆದುಕೊಂಡಿರುವಾಗ ಹಸಿವು, ಅಪೌಷ್ಟಿಕತೆ ಮತ್ತು ಅಭಾವಗಳಿಂದ ಬಳಲುತ್ತಿರುವಾಗ ಭಾರತದ ಶ್ರೀಮಂತ ಬಿಲಿಯಾಧಿಪತಿಗಳು ತಮ್ಮ ಸಂಪತ್ತನ್ನು ಶೇಕಡಾ 35 ರಷ್ಟು ಹೆಚ್ಚಿಸಿಕೊಂಡಿದ್ದಾರೆ . ಇದೀಗ ‘ಆರ್ಥಿಕ ಸಮೀಕ್ಷೆ’ ಮರೆಮಾಚಿರುವ ಮತ್ತು ತಪ್ಪಾಗಿ ನಿರೂಪಿಸಿರುವ ಸುಧಾರಣೆ’ಗಳ ವಾಸ್ತವತೆ.
ಮುಂಬರುವ ಬಜೆಟ್
ಯಾವುದೇ ಚೇತರಿಕೆ ಸರ್ಕಾರದ ವೆಚ್ಚಗಳಲ್ಲಿ ಭಾರೀ ಏರಿಕೆಯ ಮೂಲಕ ಮಾತ್ರ ಸಾಧ್ಯ ಎಂಬುದನ್ನು ಸಾರ್ವತ್ರಿಕವಾಗಿ ಗುರುತಿಸಲಾಗಿದೆ. ಆರ್ಥಿಕ ಚೇತರಿಕೆ ಮತ್ತು ಜನರ ಕಲ್ಯಾಣವನ್ನು ಖಾತ್ರಿಪಡಿಸಬೇಕಾದ ಅಗತ್ಯಕ್ಕೆ ಸ್ಪಂದಿಸುವ ಯಾವುದೇ ಸರ್ಕಾರವು ನಮ್ಮ ಬಹಳಷ್ಟು ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಸಾರ್ವಜನಿಕ ಹೂಡಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಬೇಕು, ಇದು ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಯುವಕರು ತಮ್ಮ ಸಂಬಳಗಳನ್ನು ಖರ್ಚು ಮಾಡಲು ಪ್ರಾರಂಭಿಸಿದಾಗ, ಆಂತರಿಕ ಬೇಡಿಕೆಯು ಚೇತರಿಕೆಯ ಪ್ರಕ್ರಿಯೆಯನ್ನು ರಭಸದಿಂದ ಪ್ರಾರಂಭಿಸುತ್ತದೆ.
ಜನರು ಇದನ್ನು ಬಯಸುತ್ತಾರೆ, ಆದರೆ ಈ ಬಿಜೆಪಿ ಸರಕಾರ ಮಾಡುವುದು ಇದನ್ನಲ್ಲ. ಏಕೆಂದರೆ ಅದು ಭಾರತದ ರಾಷ್ಟ್ರೀಯ ಸ್ವತ್ತುಗಳನ್ನು ನಿಷ್ಕರುಣೆಯಿಂದ ಲೂಟಿ ಮಾಡುವುದರಲ್ಲಿ ಮತ್ತು ತನ್ನ ಬಂಟ ಕಾರ್ಪೊರೇಟ್ಗಳನ್ನು ಉತ್ತೇಜಿಸುವುದರಲ್ಲಿಯೇ ಮಗ್ನವಾಗಿದೆ.
ಸಿಪಿಐ (ಎಂ)ನ 23ನೇ ಮಹಾಧಿವೇಶನ
ಪಕ್ಷದ ಮೂಲ ಘಟಕವಾದ ಶಾಖೆಯಿಂದ ಪ್ರಾರಂಭವಾಗಿ ಪಕ್ಷದ ಮಹಾಧಿವೇಶನದೊಂದಿಗೆ ಮುಕ್ತಾಯಗೊಳ್ಳುವ ವಿಸ್ತಾರವಾದ ಪಕ್ಷದೊಳಗಣ ಪ್ರಕ್ರಿಯೆಯನ್ನು ಆರಂಭಿಸಲು ಕೇಂದ್ರ ಸಮಿತಿ ನಿರ್ಧರಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಗಳ ನಂತರ 2021 ರ ಜುಲೈ ಮೊದಲ ವಾರದಿಂದ ಶಾಖಾ ಸಮ್ಮೇಳನಗಳು ಪ್ರಾರಂಭವಾಗುತ್ತವೆ. ಪಕ್ಷದ 23ನೇ ಮಹಾಧಿವೇಶನ ಏಪ್ರಿಲ್ 2021ರಲ್ಲಿ ನಡೆಯಬೇಕಾಗಿತ್ತು. ಸಾಂಕ್ರಾಮಿಕ/ಲಾಕ್ ಡೌನ್ ಗಳು ಮತ್ತು ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳಿಂದಾಗಿ ಅದನ್ನು ಮುಂದೂಡಬೇಕಾಗಿ ಬಂದಿದೆ. ಕೇಂದ್ರ ಸಮಿತಿ 23ನೇ ಮಹಾಧಿವೇಶನವನ್ನು 2022 ರ ಮೊದಲ ತ್ರೈಮಾಸಿಕದಲ್ಲಿ, ಸಾಧ್ಯವಾದಷ್ಟೂ ಫೆಬ್ರುವರಿ ಅಂತ್ಯದೊಳಗೆ ನಡೆಸುವ ಗುರಿ ಇಟ್ಟುಕೊಂಡಿದೆ.
ಕೇಂದ್ರ ಸಮಿತಿ ಕರೆ
ಫೆಬ್ರವರಿ 2021 ರ ದ್ವಿತೀಯಾರ್ಧದಲ್ಲಿ ಪಕ್ಷದ ಎಲ್ಲಾ ಘಟಕಗಳು ದೇಶಾದ್ಯಂತ ಹದಿನೈದು ದಿನಗಳ ಪ್ರಚಾರಾಂದೋಲನವನ್ನು ನಡೆಸಬೇಕು ಎಂದು ಕೇಂದ್ರ ಸಮಿತಿ ನಿರ್ಧರಿಸಿದೆ. ಇದು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಮೂಲಕ ಭಾರತದ ಸಾಂವಿಧಾನಿಕ ವ್ಯವಸ್ಥೆಯನ್ನು ಮತ್ತು ಆರ್ಥಿಕ ಬುನಾದಿಗಳನ್ನು ನಾಶಪಡಿಸುತ್ತಿರುವುದು, ರಾಷ್ಟ್ರೀಯ ಸ್ವತ್ತುಗಳ ಲೂಟಿ, ದೊಡ್ಡ ಪ್ರಮಾಣದ ಖಾಸಗೀಕರಣ, ಬೆಲೆ ಏರಿಕೆ; ಕಾರ್ಮಿಕ ಕಾನೂನುಗಳ ರದ್ಧತಿ, ನಿರುದ್ಯೋಗದ ನಾಗಾಲೋಟ ಇತ್ಯಾದಿ ವಿಷಯಗಳ ಮೇಲೆ ಮತ್ತು ಈಗ ನಡೆಯುತ್ತಿರುವ ರೈತರ ಹೋರಾಟಗಳಿಗೆ ಸೌಹಾರ್ದವನ್ನು ಬಲಪಡಿಸುವುದು ಹಾಗೂ ಆರ್ಎಸ್ಎಸ್ / ಬಿಜೆಪಿಯ ಸುಳ್ಳು ಪ್ರಚಾರವನ್ನು ಬಯಲಿಗೆಳೆಯುವ ವಿಷಯಗಳ ಮೇಲೆ ಇರುತ್ತದೆ.
ಕಾರ್ಮಿಕ ವರ್ಗ, ರೈತಾಪಿಗಳು ಮತ್ತು ನಮ್ಮ ಜನಗಳ ಎಲ್ಲಾ ಇತರ ವಿಭಾಗಗಳ ಹೋರಾಟಗಳು ಮತ್ತು ಸೌಹಾರ್ದ ಕಾರ್ಯಾಚರಣೆಗಳಲ್ಲಿ ಹೆಚ್ಚೆಚ್ಚು ಜನವಿಭಾಗಗಳನ್ನು ಪಕ್ಷ ಸಜ್ಜುಗೊಳಿಸುತ್ತದೆ.
ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವುದು, ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಸರ್ಕಾರ ಮರಳುವಂತೆ ನೋಡಿಕೊಳ್ಳುವುದು, ಪಶ್ಚಿಮ ಬಂಗಾಲದಲ್ಲಿ ಎಡ, ಜಾತ್ಯತೀತ ಪ್ರಜಾಪ್ರಭುತ್ವ ಪರ್ಯಾಯಕ್ಕಾಗಿ ಕೆಲಸ ಮಾಡುವುದು, ಬಿಜೆಪಿ-ಎಐಎಡಿಎಂಕೆ ಮೈತ್ರಿಯನ್ನು ಸೋಲಿಸಿ ಡಿಎಂಕೆ ರಂಗದ ವಿಜಯವನ್ನು ಖಾತ್ರಿಪಡಿಸುವುದು ಮತ್ತು ಅಸ್ಸಾಂ ವಿಧಾನಸಭೆಯಲ್ಲಿ ಪಕ್ಷದ ಪ್ರಭಾವವನ್ನು ಹೆಚ್ಚಿಸುವುದು ಇವುಗಳ ಮೇಲೆ ಮುಂಬರುವ ಅವಧಿಯಲ್ಲಿ ಮುಖ್ಯ ಗಮನವಿರುತ್ತದೆ ಎಂದು ಕೇಂದ್ರ ಸಮಿತಿ ನಿರ್ಧರಿಸಿದೆ.