ಗಾಂಧಿ ಹತ್ಯೆಗೈದವರು ಗೋಹತ್ಯೆ ನಿಷೇಧಿಸುತ್ತಾರೆ!

ತೀವ್ರ ಗದ್ದಲ, ಕೋಲಾಹಲದ ಮಧ್ಯೆ ಗೋಹತ್ಯೆ ನಿಷೇಧಿಸುವ `ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ವಿಧೇಯಕ-2020’ ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ ಸಿಕ್ಕಿದೆ. ಕಳೆದ ಅಧಿವೇಶನದಲ್ಲಿ ಮೇಲ್ಮನೆಯ ಅಂಗೀಕಾರ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದ ಯೂಡಿಯೂರಪ್ಪ ಸರ್ಕಾರ ಕೊನೆಗೂ ತನ್ನ ತಂತ್ರಗಾರಿಕೆಯಲ್ಲಿ ಯಶಸ್ವಿಯಾಗಿದೆ. ಸರ್ಕಾರಕ್ಕೆ ಮತ್ತು ಆಳುವ ಬಿಜೆಪಿ ಪಕ್ಷಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿತ್ತು. ಆದ್ದರಿಂದಲೇ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿತ್ತು.

ಅಂದು ಸೋಮವಾರ ಮಧ್ಯಾಹ್ನದ ಕಲಾಪದಲ್ಲಿ ಸಭಾಪತಿ ಪೀಠದಲ್ಲಿದ್ದ ಎಂ.ಕೆ. ಪ್ರಾಣೇಶ್ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯನ್ನು ಮೊಟಕುಗೊಳಿಸಿ ಈ ವಿಧೇಯಕದ ಮಂಡನೆಯನ್ನು ಎತ್ತಿಕೊಂಡರು. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಈ ತರಾತುರಿಯ ಮಂಡನೆ ಮತ್ತು ಚರ್ಚೆ ಈಗ ಬೇಡವೆಂದು ಪಟ್ಟುಹಿಡಿದರು. ಆದರೂ ಸಭಾಪತಿ ಅವರು ಕಿವಿಗೊಡದೆ ಪಶು ಸಂಗೋಪನಾ ಮಂತ್ರಿ ಪ್ರಭು ಚವಾಣ್‌ರವರಿಗೆ ವಿಧೇಯಕ ಮಂಡಿಸಲು ಸೂಚಿಸಿದರು. ಬಳಿಕ ವಿಧೇಯಕದ ಪರವಾಗಿ ಗೃಹ ಮತ್ತು ಕಾನೂನು ಮಂತ್ರಿ ಬಸವರಾಜ್ ಬೊಮ್ಮಾಯಿ ವಿವರಣೆ ನೀಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ವಿಧೇಯಕವನ್ನು ವಿರೋಧಿಸಿ ಸುದೀರ್ಘವಾಗಿ ಮಾತನಾಡಿದರಲ್ಲದೆ ಅದನ್ನು ಕೈಬಿಡಬೇಕೆಂದು ಆಗ್ರಹಿಸಿದರು. ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದವೇ ನಡೆಯಿತು. ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಮುಂದೆ ಬಂದು ಘೋಷಣೆ ಕೂಗಿದರಲ್ಲದೆ ವಿಧೇಯಕದ ಪ್ರತಿಯನ್ನು ಹರಿದು ಹಾಕಿದರು. ಸದನದಲ್ಲಿ ಉಂಟಾದ ಕೋಲಾಹಲದ ಲಾಭ ಪಡೆದು ಎರಡೇ ನಿಮಿಷದಲ್ಲಿ ವಿಧೇಯಕಕ್ಕೆ ಧ್ವನಿಮತದ ಅಂಗೀಕಾರ ಪಡೆದುಕೊಳ್ಳಲಾಯಿತು.

ಗಾಂಧೀಜಿಯವರನ್ನು ಹತ್ಯೆ ಮಾಡಲಾಯಿತು. ಅದು ಕೆಲವು ಮತಾಂದರ ದ್ವೇಷದ ಪರಾಕಾಷ್ಠೆಯಾಗಿತ್ತು. ಹಾಗೆ ಗೋವುಗಳನ್ನು ಯಾರೂ ಹತ್ಯೆ ಮಾಡಿ ಬಿಸಾಡುವುದಿಲ್ಲ. ದ್ವೇಷ ಸಾಧನೆಗಾಗಿ ಯಾರೂ ಜಾನುವಾರುಗಳ ಹತ್ಯೆ ಮಾಡುವುದಿಲ್ಲ. `ಹತ್ಯೆ’ ಎಂಬ ಈ ಪದ ಇಲ್ಲಿ ಅಸಂಬದ್ಧವಾಗಿದೆ. ಪ್ರಾಣಿಗಳನ್ನು ಮಾನವ ಆರಂಭದಿಂದಲೂ ವಧಿಸುತ್ತಾ ಅವುಗಳ ಮಾಂಸವನ್ನು ಸೇವಿಸುತ್ತಾ ಬೆಳೆದಿದ್ದಾನೆ. ಜಾನುವಾರುಗಳನ್ನು ಬುಡಕಟ್ಟು ಸಮುದಾಯಗಳು ಆಸ್ತಿಯಾಗಿ ಸಾಕುತ್ತಿದ್ದರು. ಹೆಚ್ಚು ಜಾನುವಾರುಗಳನ್ನು ಹೊಂದಿದ್ದ ಬುಡಕಟ್ಟು ಹೆಚ್ಚು ಬಲಿಷ್ಠವೆಂದು ಪರಿಗಣಿಸಲಾಗುತಿತ್ತು. ಪ್ರಾಚೀನ ವಸ್ತು ವಿನಿಮಯ ಪದ್ಧತಿಯಲ್ಲಿ ಕೆಲಕಾಲ ಜಾನುವಾರುಗಳು ಮಾಧ್ಯಮವಾಗಿ ಬಳಸಲ್ಪಟ್ಟವು. ಕ್ರಮೇಣ ಪ್ರಾಚೀನ ಮಾನವರು ಕೃಷಿ ಮಾಡುವುದನ್ನು ಕಂಡುಕೊಂಡ ನಂತರ, ಕೃಷಿಯಲ್ಲಿ ಜಾನುವಾರುಗಳ ಬಳಕೆ ರೂಢಿಯಲ್ಲಿ ಬಂತು. ಕೃಷಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ದನಗಳನ್ನು ಮಾಂಸಕ್ಕಾಗಿ ವಧಿಸುವುದನ್ನು ಕೈಬಿಡಲಾಯಿತು. ಅದಾಗ್ಯೂ ಕೃಷಿಗೆ ಉಪಯೋಗವಿಲ್ಲದ ಜಾನುವಾರುಗಳನ್ನು ಆಹಾರಕ್ಕಾಗಿ ವಧಿಸುವ ಪದ್ಧತಿ ಮುಂದುವರೆದಿತ್ತು. ಈಗಲೂ ಸಹ ಹೆಚ್ಚು ಬೆಲೆ ತರಬಲ್ಲ ಜಾನುವಾರುಗಳನ್ನು ಅವುಗಳನ್ನು ಸಾಕುವವರು ವಧಿಸಲು ನೀಡುವುದಿಲ್ಲ.

ಇಂದು ಪರಿಸ್ಥಿತಿ ತುಂಬಾ ಬದಲಾಗಿದೆ. ಜನಸಂಖ್ಯೆ ಭಾರೀ ಹೆಚ್ಚಾಗಿದೆ. ಕೇವಲ ಸಸ್ಯಹಾರದಿಂದ ಮಾತ್ರ ಬದುಕಲು ಸಾಧ್ಯವಿಲ್ಲದಂತಾಗಿದೆ. ದನಗಳ ಮಾಂಸ ಇತರ ಎಲ್ಲಾ ಜಾನುವಾರುಗಳ ಮಾಂಸಕ್ಕಿಂತ ಉತ್ಕೃಷ್ಟವಾಗಿದೆ. ಕುರಿ, ಕೋಳಿಗಳ ಮಾಂಸಕ್ಕಿಂತ ಅದು ಹೆಚ್ಚು ಹಗ್ಗವಾಗಿ ದೊರೆಯುತ್ತದೆ. ಕೃಷಿಗೆ ಉಪಯೋಗವಿಲ್ಲದ ದನಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಅಷ್ಟು ಮಾತ್ರವಲ್ಲ, ಇಂದು ಆಧುನಿಕ ಕೃಷಿ ಪದ್ಧತಿ ಹೆಚ್ಚು ಬಳಕೆಗೆ ಬರುತ್ತಿದ್ದು ಕೃಷಿಯಲ್ಲಿ ದನಗಳಿಗಿಂತ ಯಂತ್ರಗಳನ್ನೇ ಹೆಚ್ಚು ಲಾಭದಾಯಕವಾಗಿ ಬಳಸಲಾಗುತ್ತದೆ. ಹೀಗೆ ಕೃಷಿಯಲ್ಲಿಯೂ ದನಗಳ ಬೇಡಿಕೆ ಕುಸಿಯುತ್ತಿದೆ. ರೈತನಿಗೆ ಅವುಗಳ ಸಾಕಾಣಿಕೆ ದುಬಾರಿಯಾಗುತ್ತಿದೆ. ಹೈನೋದ್ಯಮದಲ್ಲಿ ತೊಡಗಿದವರಿಗೆ ಹಾಲು ನೀಡದಂತಾದ ದನಗಳನ್ನು ಸಾಕುವುದು ಹೊರೆಯಾಗುತ್ತದೆ. ದನಗಳ ಮಾಂಸವನ್ನು ಆಹಾರವಾಗಿ ಸೇವಿಸುವವರು ಇಲ್ಲದೆ ಹೋಗಿದ್ದರೆ ಸಮಸ್ಯೆ ಭಾರಿ ಗಂಭೀರವಾಗುತಿತ್ತು.

ಹಣೆಗೆ ವಿಭೂತಿ ಹಚ್ಚಿಕೊಳ್ಳುವ ಬದಲು ಆರೆಸ್ಸೆಸ್ ತಿಲಕವನ್ನು ಇಟ್ಟುಕೊಳ್ಳುವ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಧಾನಸಭೆಯ ಎರಡೂ ಮನೆಗಳಲ್ಲಿ ಕನಿಷ್ಠ ಚರ್ಚೆಗೂ ಅವಕಾಶ ನೀಡದೆ ಜಾನುವಾರು ಹತ್ಯಾ ನಿಷೇಧ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡದ್ದು ಆರೆಸ್ಸೆಸ್ ಯಜಮಾನರನ್ನು ಸಂತೃಪ್ತಗೊಳಿಸಿ ಕುರ್ಚಿ ಮೇಲಿನ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದ್ದು ಗುಟ್ಟಿನ ವಿಷಯವೇನಲ್ಲ. ಗೋಹತ್ಯೆ ನಿಷೇಧ ಆರೆಸ್ಸೆಸ್ – ವಿಶ್ವ ಹಿಂದೂ ಪರಿಷತ್‌ಗಳ ಪ್ರಮುಖ ಅಜೆಂಡಾಗಳಲ್ಲಿ ಒಂದು. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಅವುಗಳ ಗುರಿಸಾಧನೆಯತ್ತ ಹಿಂದೂ ಮತ ಬ್ಯಾಂಕನ್ನು ಭದ್ರಗೊಳಿಸುವುದು ಅವರ ಉದ್ದೇಶವಾಗಿದೆ. ಈ ಗುರಿಸಾಧನೆಗಾಗಿ ಅವರು ಭಾರತದ ಮುಗ್ಧ ಹಿಂದುಗಳ ಭಾವನೆಗಳನ್ನು, ನಂಬಿಕೆಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ. ಭಾರತದ ಶ್ರೇಣೀಕೃತ ಸಮಾಜದಲ್ಲಿ ಮೇಲ್ವರ್ಗದ ಜನಗಳಲ್ಲಿ ಗೋವು ಪವಿತ್ರವಾದದ್ದು, ಅದರ ದೇಹದೊಳಗೆ ದೇವರುಗಳು ನೆಲೆಸಿದ್ದಾರೆ ಎಂಬ ಕಲ್ಪನೆಯನ್ನು ಆಳವಾಗಿ ಬೆಳೆಸಿದ್ದಾರೆ. ನಮಗೆ ಪವಿತ್ರವಾದ ಹಸುವನ್ನು ಇವರು ಯಾಕೆ ಹತ್ಯೆ ಮಾಡಬೇಕು ಎಂದು ಅವರನ್ನು ಹಿಂದುಯೇತರರ ವಿರುದ್ಧ ಎತ್ತಿಕಟ್ಟಲಾಗುತ್ತಿದೆ.

ಯಾರಾದರೂ ಪವಿತ್ರ ಎನ್ನಿಸುವುದನ್ನೇ ತಿನ್ನುತ್ತಾರೆಯೇ ಹೊರತು ಅಪವಿತ್ರವಾದುದನ್ನಲ್ಲ. ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವನ್ನು ಪವಿತ್ರ ಎಂದುಕೊಂಡೇ ಸೇವಿಸಲಾಗುತ್ತದೆ. ಕೆಲವರಿಗೆ ಹಂದಿ ಎಂಬುದು ಅಪವಿತ್ರ. ಆದ್ದರಿಂದ ಅವರು ಅದರ ಮಾಂಸವನ್ನು ಸೇವಿಸುವುದಿಲ್ಲ. ಯೇಸುಕ್ರಿಸ್ತ `ನನ್ನ ಮಾಂಸವನ್ನು ನೀವು ಸೇವಿಸದಿದ್ದರೆ, ನಿಮ್ಮಲ್ಲಿ ಜೀವ ಇರಲಾರದು’ ಎಂದು ತನ್ನ ಶಿಷ್ಯವೃಂದಕ್ಕೆ ಹೇಳುತ್ತಾನೆ. ಹೀಗೆ ಅವರೆಲ್ಲರೂ ಪವಿತ್ರವಾದುದನ್ನು ಮಾತ್ರ ಸೇವಿಸುತ್ತಾರೆ. ಗೋವು ಪವಿತ್ರ ಎಂದಾದರೆ ಆಹಾರವಾಗಿ ಸೇವಿಸಲು ಅದು ಅತೀ ಯೋಗ್ಯವಾದ ಜಾನುವಾರು ಆಗಿದೆ.

ಗೋವುಗಳನ್ನು ವಧಿಸುವುದು ನಮ್ಮ ಭಾವನೆಗೆ ನೋವುಂಟು ಮಾಡುತ್ತದೆ ಎಂದು ಹಿಂದುಗಳಲ್ಲಿ ಕೆಲವರು ಆತಂಕಪಡಬಹುದು. ಯಾರಿಗೂ ಯಾರಿಂದಲೂ ನೋವಾಗಬಾರದು. ಅದು ಯಾವ ಪ್ರಾಣಿ ವಧೆಗಿಂತಲೂ ಹೆಚ್ಚು ಕ್ರೂರವಾದ ಹಿಂಸೆ. ಮಾನವರು ಮಾನವರಿಗೆ ನೀಡುವ ನೋವು ಅತಿ ದೊಡ್ಡ ಹಿಂಸೆ. ಮಾನವನಿಂದ ಮಾನವನಿಗಾಗುವ ಹಿಂಸೆಯನ್ನು ತಡೆಯಲು ನಾವೆಲ್ಲರೂ ಒಂದಾಗಿ ಪ್ರಯತ್ನಿಸಬೇಕಾಗಿದೆ. ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ನರು, ಮುಸಲ್ಮಾನರು, ಹಿಂದುಗಳೇ ಆಗಿರುವ ಶೂದ್ರರು, ದಲಿತರು ಗೋಮಾಂಸವನ್ನು ಆಹಾರವಾಗಿ ಸೇವಿಸುತ್ತಾರೆ. ಯಾರಿಗೂ ನೋವು ಉಂಟುಮಾಡುವುದು ಅವರ ಉದ್ದೇಶವಲ್ಲ. ಶತಮಾನಗಳಿಂದ ಅದು ಅವರ ಆಹಾರ ಪದ್ಧತಿಯ ಭಾಗವಾಗಿದೆ. ಅವರು ಗೋಮಾಂಸ ತಿನ್ನುವುದರಿಂದ ಹಿಂದುಗಳ ಮನಸ್ಸಿಗೆ ನೋವು ಆಗುವುದಾದರೆ ಅದನ್ನು ಅವರೊಂದಿಗೆ ವಿನಯದಿಂದ ಚರ್ಚಿಸಬೇಕು. ಅವರ ಮನಸ್ಸುಗಳಿಗೆ ಹಿಂದುಗಳು ನೋವು ನೀಡುತ್ತಿರುವುದನ್ನು ತ್ಯಜಿಸಲಾಗದೆ? ಅವರ ಮಸೀದಿಗಳನ್ನು, ಕಾರಣ ಏನೇ ಇರಲಿ, ನೀವು ನಾಶಮಾಡುವುದರಿಂದ ಅವರಿಗೆ ನೋವಾಗುವುದಿಲ್ಲವೆ? ದೇವಸ್ಥಾನ ಪ್ರವೇಶ ನಿರಾಕರಣೆ, ಸಹಬೋಜನ ನಿರಾಕರಣೆ, ಕ್ಷೌರದ ಅಂಗಡಿಗೆ ಪ್ರವೇಶ ನಿರಾಕರಣೆ, ಹೊಟೇಲುಗಳಲ್ಲಿ ತಾರತಮ್ಯ, ಅಂತರಜಾತಿ ಮದುವೆಗಳಿಗೆ ಪ್ರತಿಬಂಧ ಮುಂತಾದ ನಡವಳಿಕೆಯಿಂದ ನಮ್ಮ ದಲಿತ ಬಂಧುಗಳಿಗೆ ನೋವಾಗುವುದಿಲ್ಲವೆ.? ನೀವು ಒಮ್ಮೆಯಾದರೂ ಇದನ್ನು ಆಲೋಚಿಸಿದ್ದೀರಾ? ಪಶ್ಚಾತ್ತಾಪ ಪಟ್ಟಿದ್ದೀರಾ? ಗೋಮಾಂಸ ಸೇವಿಸುವುದು ಅವರ ಹಕ್ಕು. ಆ ಹಕ್ಕನ್ನು ಅವರು ತ್ಯಾಗ ಮಾಡಬೇಕಾದರೆ ನೀವು ಪರ್ಯಾಯವಾದ ಯಾವ ತ್ಯಾಗಕ್ಕೆ ಸಿದ್ದರಿದ್ದೀರಿ? ಅವರ ಬಾಬರಿ ಮಸೀದಿಯನ್ನು ಅವರಿಗೆ ವಾಪಸ್ ಕೊಡುತ್ತಿರಾ? ದಲಿತ ಹೆಣ್ಣು ಮಕ್ಕಳೊಂದಿಗೆ ನೀವು ನಿಮ್ಮ ಗಂಡು ಮಕ್ಕಳ ಮದುವೆಗೆ ಸಾರ್ವತ್ರಿಕವಾಗಿ ಸಮ್ಮತಿಸುತ್ತೀರಾ? ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಾಧ್ಯವಿದೆ. ಬಲವಂತದ ಕಾನೂನು ಬೇಕಾಗಿಲ್ಲ. ನೀವು ನಿಮ್ಮ ನೆರೆಹೊರೆಯ ಅಲ್ಪಸಂಖ್ಯಾತರೊಂದಿಗೆ, ದಲಿತರೊಂದಿಗೆ ಅನ್ಯೋನ್ಯವಾಗಿ ಬಾಳಿದರೆ ಅಲ್ಲೇ ಸಿಗಲಿದೆ ಪರಿಹಾರ. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಕಂಡ ಕನಸಿನ ಭಾರತ! ಮತಬ್ಯಾಂಕ್ ರಾಜಕಾರಣಕ್ಕೆ ಧಿಕ್ಕಾರವಿರಲಿ. ಈ ಕಾಯ್ದೆಯಿಂದ ಸಮಾಜದಲ್ಲಿ ದ್ವೇಷ ಹೆಚ್ಚಾಗುವುದು. ಅಲ್ಪಸಂಖ್ಯಾತರ ಮೇಲೆ ದಾಳಿ ದೌರ್ಜನ್ಯ ಹೆಚ್ಚಾಗುವುದು. ಯಡಿಯೂರಪ್ಪನವರೆ, ಈ ಕರಾಳ ಕಾನೂನು ವಾಪಸ್ ಪಡೆಯಿರಿ.

Leave a Reply

Your email address will not be published. Required fields are marked *