ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶವು ನಿರಂಕುಶ ಆಳ್ವಿಕೆಯತ್ತ ಹೆಜ್ಜೆ ಹಾಕುತ್ತಿರುವಾಗ ನಮ್ಮ ಸಂಸದೀಯ ಪ್ರಜಾಪ್ರಭುತ್ವವು “ಒಂದು ದೇಶ-ಒಂದು ಚುನಾವಣೆ” ಎಂಬ ಬೆದರಿಕೆಯನ್ನು ಎದುರಿಸುವಂತಾಗಿದೆ. ಈ ಕುರಿತು ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕಲಾಗಿದ್ದು ಕರ್ನಾಟಕದಲ್ಲಿ ಈ ಚರ್ಚೆಗೆ ನಾಂದಿ ಹಾಡಲು ಮುಖ್ಯಮಂತ್ರಿ ಯಡಿಯೂರಪ್ಪನವರು ಮುಂದಾಗಿದ್ದಾರೆ. ವಿಧಾನಮಂಡಲದ ಬಜೆಟ್ ಅಧಿವೇಶನ ಮೊದಲ ಎರಡು ದಿನಗಳನ್ನು ಚರ್ಚೆಗಾಗಿ ನಿಗದಿ ಮಾಡಲಾಗಿತ್ತು. ಆದರೆ ಸಂವಿಧಾನ ವಿರೋಧಿ ಚರ್ಚೆಗೆ ಪ್ರತಿಪಕ್ಷಗಳು ಅವಕಾಶ ನೀಡಲಿಲ್ಲ. ಹಾಗಾಗಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ಬಿಜೆಪಿ ಪಕ್ಷವು 2020ರ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ‘ಒಂದು ದೇಶ-ಒಂದು ಚುನಾವಣೆ’ ಎಂಬ ವಿಷಯದ ಪ್ರಚಾರಾರ್ಥ 25 ವೆಬಿನಾರ್‌ಗಳನ್ನು ನಡೆಸಿತ್ತು. ಅಂತಹ ಒಂದು ಸಮ್ಮೇಳನವನ್ನು ‘ಸಂವಿಧಾನ ದಿನ’ ಎಂದು ಆಚರಿಸಲಾಗುತ್ತಿರುವ ನವಂಬರ್ 26ರಂದೇ ನಡೆಸಲಾಗಿತ್ತು. ಈ ಸಮ್ಮೇಳನಗಳ ಮೂಲಕ ‘ಒಂದು ದೇಶ-ಒಂದು ಚುನಾವಣೆ’ಯನ್ನು ಪ್ರತಿಪಾದಿಸುವ ವಾದಗಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತದೆ. ಏಕಕಾಲದ ಚುನಾವಣೆಯಿಂದ ಮಾನವಶ್ರಮ, ಸಮಯ, ಭಾರಿ ಮೊತ್ತದ ಹಣ ಉಳಿತಾಯವಾಗುತ್ತದೆ. ಆಗಾಗ್ಗೆ ಚುನಾವಣೆ ನಡೆಯುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ. ಪ್ರಧಾನಿ ಮೋದಿಯವರು ದೂರದೃಷ್ಟಿ ಚಿಂತನೆಯೊಂದಿಗೆ ಈ ಪ್ರಸ್ತಾವವನ್ನು ಮಾಡಿದ್ದಾರೆ. ಅಖಿಲ ಭಾರತ ಸ್ಪೀಕರ್‌ಗಳ ಸಮ್ಮೇಳನದಲ್ಲಿ ಮೋದಿಯವರು ಈ ಪ್ರಸ್ತಾಪ ಮಾಡಿದ್ದಾರೆ ಎಂದು ದೇಶಾದ್ಯಂತ ಪ್ರಚಾರ ಮಾಡಲಾಗಿದೆ. ಈ ವಾದಗಳ ಹಿಂದಿನ ಸಂದೇಶ ಸ್ಪಷ್ಟವಾಗಿದೆ. ‘ಒಂದು ದೇಶ-ಒಂದು ಚುನಾವಣೆ’ ಎಂಬ ಘೋಷಣೆ ‘ಒಂದು ದೇಶ ಒಬ್ಬ ನಾಯಕ’ ಎಂಬ ಘೋಷಣೆಯ ಮುಂದುವರೆದ ಭಾಗವಾಗಿದೆ.
ಎಲ್ಲಾ ಹಂತದ ಚುನಾವಣೆಗಳು ಒಟ್ಟಿಗೆ ನಡೆಸುವುದು ಮತ್ತು ಅದಕ್ಕಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವುದು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಮೂಲ ಸ್ವರೂಪವನ್ನು ತಿರುಚುವುದು ಮಾತ್ರವಲ್ಲ ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುವುದು. ಲೋಕಸಭಾ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದೆಂದರೆ ಸರ್ಕಾರವು ಶಾಸಕಾಂಗಕ್ಕೆ ಹೊಂದಿರಬೇಕಾದ ಉತ್ತರದಾಯಕತ್ವಕ್ಕೆ ಧಕ್ಕೆಯಾಗುವುದು. ಸಂವಿಧಾನದ ಪ್ರಕಾರ ಒಂದು ಸರ್ಕಾರ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರ ಕಳೆದುಕೊಂಡಾಗ ಅಥವ ಹಣಕಾಸು ಮಸೂದೆಗೆ ಅಗತ್ಯ ಬಹುಮತ ದೊರೆಯದಿದ್ದಾಗ ಅದು ರಾಜಿನಾಮೆ ಕೊಡಬೇಕಾಗುತ್ತದೆ ಅಥವ ಪರ್ಯಾಯ ಸರ್ಕಾರ ರಚನೆ ಸಾಧ್ಯವಾಗದಾಗ ಸರ್ಕಾರ ವಿಸರ್ಜನೆಯಾಗುತ್ತದೆ ಮತ್ತು ಮಧ್ಯಂತರ ಚುನಾವಣೆ ನಡೆಯುತ್ತದೆ. ಸಂವಿಧಾನದಲ್ಲಿ ಲೋಕಸಭೆಗಾಗಲಿ ಅಥವ ರಾಜ್ಯ ವಿಧಾನಸಭೆಗಾಗಲಿ ಅಧಿಕಾರವಧಿ ನಿಗದಿಯಾಗಿರುವುದಿಲ್ಲ.
ನೀತಿ ಆಯೋಗ 2017ರಲ್ಲಿ ಮತ್ತು ಕಾನೂನು ಆಯೋಗ 2018ರಲ್ಲಿ ಕೆಲವು ಸೂಚನೆಗಳನ್ನು ಬಿಡುಗಡೆ ಮಾಡಿವೆ. ಅವುಗಳು ರಾಜ್ಯ ವಿಧಾನಸಭೆಗಳ ಅವಧಿಯನ್ನು ಹೆಚ್ಚಿಸುವ ಅಥವ ಕಡಿತ ಮಾಡುವ ಮೂಲಕ ವಿಧಾನಸಭಾ ಚುನಾವಣೆಗಳು, ಲೋಕಸಭಾ ಚುನಾವಣೆಗಳ ಜೊತೆಯಲ್ಲಿ ನಡೆಸುವ ಉದ್ದೇಶ ಹೊಂದಿವೆ. ಆದರೆ ರಾಜ್ಯ ವಿಧಾನಸಭೆಗಳ ಅವಧಿಯನ್ನು ಕಡಿಮೆ ಮಾಡುವುದಾಗಲಿ, ಹೆಚ್ಚು ಮಾಡುವುದಾಗಲಿ ಎರಡೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಮಾತ್ರವಲ್ಲ ತಮ್ಮ ಶಾಸಕರನ್ನು ಆಯ್ಕೆ ಮಾಡುವ ಜನರ ಹಕ್ಕಿನ ಉಲ್ಲಂಘನೆಯಾಗಿದೆ.
ವಿಧಾನಸಭೆಯ ಮಧ್ಯಂತರ ವಿಸರ್ಜನೆಯನ್ನು ತಡೆಯಲು ಮತ್ತೆ ಚುನಾವಣೆ ನಡೆಸುವುದನ್ನು ತಡೆಯಲು ಅವಧಿಯನ್ನು ನಿಗದಿ ಮಾಡಲು ಉದ್ದೇಶಿಸಲಾಗಿದೆ. ಇದು ಅಪಾಯಕಾರಿಯಾಗಿದೆ. ಲೋಕಸಭೆಯ ವಿಸರ್ಜನೆ ತಡೆಯಲು ಸಾಧ್ಯವಾಗದಿದ್ದರೆ ರಾಷ್ಟ್ರಪತಿಯವರು ನೇಮಿಸುವ ಮಂತ್ರಿಮಂಡಲದ ನೆರವಿನೊಂದಿಗೆ ಅವರು ದೇಶದ ಆಡಳಿತ ನಡೆಸಬಹುದು ಎಂದು ನೀತಿ ಆಯೋಗವು ನೀಡುವ ಸಲಹೆಯಾಗಿದೆ. ಇದರಿಂದಾಗಿ ಕಾರ್ಯಾಂಗದ ಮುಖ್ಯಸ್ಥರನ್ನು ಹಿಂಬಾಗಿಲಿನಿಂದ ದೇಶದ ಆಡಳಿತ ನಡೆಸಲು ಅವಕಾಶ ನೀಡಿದಂತಾಗುವುದು.
ಅವಧಿಯನ್ನು ನಿಗದಿಪಡಿಸಲು ಅವಕಾಶ ನೀಡಿದರೆ ಬಹುಮತ ಹೊಂದಿರುವ ಆಡಳಿತ ಪಕ್ಷವು ಸರ್ಕಾರವನ್ನು ವಿಸರ್ಜಿಸಿ ತುರ್ತು ಚುನಾವಣೆಗಳನ್ನು ನಡೆಸುವಂತಿಲ್ಲ. ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದರೆ ಪರ್ಯಾಯ ಸರ್ಕಾರ ನಡೆಸಲು ಹೊಸ ನಾಯಕನನ್ನು ಸೂಚಿಸಲೇಬೇಕೆಂದು ಕಾನೂನು ಆಯೋಗ ಹೇಳುತ್ತದೆ. ಇದರ ಅರ್ಥ, ಒಂದು ಸರ್ಕಾರ ವಿಸರ್ಜನೆಯಾದರೂ, ಒಂದು ಪರ್ಯಾಯ ಸರ್ಕಾರ ಇರಲೇಬೇಕು, ಅದು ಜನರ ಪ್ರಾತಿನಿಧ್ಯವನ್ನು ಹೊಂದಿರದಿದ್ದರೂ. ಹೀಗೆ ಚುನಾವಣೆಗಳನ್ನು ಒಟ್ಟೊಟ್ಟಿಗೆ ನಡೆಸಲು ಸಾಧ್ಯವಾಗಬೇಕಾದರೆ ಸಂವಿಧಾನದ ಹಲವು ಕಲಂಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ.
‘ಒಂದು ದೇಶ – ಒಂದು ಚುನಾವಣೆ’ ಎಂಬ ಪ್ರಸ್ತಾಪವನ್ನು ಬಿಜೆಪಿ 2014ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುತ್ತಾ ಬಂದಿದೆ. ಎಲ್ಲಾ ಪ್ರಜಾಪ್ರಭುತ್ವವಾದಿ ರಾಜಕೀಯ ಪಕ್ಷಗಳು ಬಿಜೆಪಿಯ ಕುತಂತ್ರವನ್ನು ಎಚ್ಚರದಿಂದ ಗಮನಿಸಬೇಕು. ಈ ಕರಾಳ, ಪ್ರಜಾಪ್ರಭುತ್ವ ವಿರೋಧಿ ಹುನ್ನಾರಗಳನ್ನು ಎದುರಿಸಿ ಹಿಮ್ಮೆಟ್ಟಿಸಬೇಕು. ಸಂಸದೀಯ ಪ್ರಜಾಪ್ರಭುತ್ವವನ್ನು ಕಾಪಾಡಬೇಕು. ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಕ್ರಮಗಳನ್ನು ನಿರ್ಮೂಲನೆ ಮಾಡಬೇಕು. “ಒಂದು ದೇಶ, ಒಂದು ಚುನಾವಣೆ” ದೇಶವನ್ನು ಸರ್ವಾಧಿಕಾರದತ್ತ ದೂಡುತ್ತಿದ್ದು ಇದನ್ನು ತಡೆಯಲೇಬೇಕು.