ಮ್ಯಾನ್ಮಾರ್ ನಿಂದ ದೊಡ್ಡ ಸಂಖ್ಯೆಯಲ್ಲಿ ಜನಗಳು ಬರುತ್ತಿರುವುದನ್ನು ತಡೆಯಬೇಕು ಎಂದು ಈಶಾನ್ಯ ಭಾಗದ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೋ ಆಳವಾದ ಆತಂಕವನ್ನು ವ್ಯಕ್ತಪಡಿಸಿದೆ.
ಗೃಹ ಸಚಿವಾಲಯ ಒಂದು ಪತ್ರದಲ್ಲಿ ರಾಜ್ಯಗಳು “ಕಾನೂನುಬಾಹಿರ ವಲಸೆಗಾರರ’ರನ್ನು ಗುರುತಿಸಬೇಕು, ಹಿಡಿದಿಡಬೇಕು ಮತ್ತು ಗಡಿಪಾರು ಮಾಡುವ ಕ್ರಮವನ್ನು ಆರಂಬಿಸಬೇಕು ಎಂದು ಹೇಳಿದೆ.
ಇದು ಆಂಗ್ ಸಾನ್ ಸೂಕ್ಯಿ ನೇತೃತ್ವದ ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರ ವಶಪಡಿಸಿಕೊಂಡಿರುವ ಮಿಲಿಟರಿ ಆಳರಸರು ನಡೆಸಿರುವ ಹಿಂಸಾಚಾರದಿಂದ ಓಡಿ ಬರುತ್ತಿರುವ ಜನಗಳ ಬಗ್ಗೆ ಒಂದು ಅಮಾನವೀಯ ಮತ್ತು ಪ್ರಜಾಪ್ರಭುತ್ವ-ವಿರೋಧಿ ನಿಲುವು ಎಂದು ಪೊಲಿಟ್ ಬ್ಯುರೊ ಅಭಿಪ್ರಾಯಪಟ್ಟಿದೆ.
ಭಾರತೀಯ ಜನತೆ ನೆರೆದೇಶ ಮ್ಯಾನ್ಮಾರ್ ಜನತೆಯ ಬಗ್ಗೆ ಬಹಳ ಸಹಾನುಭೂತಿ ಹೊಂದಿದ್ದಾರೆ, ಮಿಲಿಟರಿ ಆಡಳಿತ ವಹಿಸಿಕೊಂಡಿರುವುದನ್ನು ಧೀರತನದಿಂದ ಪ್ರತಿಭಟಿಸುತ್ತಿರುವವರಿಗೆ ಬೆಂಬಲ ಹೊಂದಿದ್ದಾರೆ.
ಭಾರತದ ಸರಕಾರ ಈ ಸಹಾನುಭೂತಿಯನ್ನು ಬಿಂಬಿಸಬೆಕು, ಜೀವ ಭಯದಿಂದ ಗಡಿದಾಟಿ ಬಂದಿರುವ ಜನಗಳನ್ನು ‘ಕಾನೂನುಬಾಹಿರ ವಲಸೆಗಾರರು’ ಎಂದು ಕಾಣಬಾರದು ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಅವರಿಗೆ ನಿರಾಶ್ರಿತರ ಸ್ಥಾನಮಾನ ನೀಡಬೇಕು ಮತ್ತು ಮಾನವೀಯ ನೆರವನ್ನು ಒದಗಿಸಬೇಕು ಎಂದು ಆಗ್ರಹಿಸಿದೆ.