ಒಂದು ಫ್ರೆಂಚ್ ಮಾಧ್ಯಮ ತಾಣದಲ್ಲಿ, ೩೬ ರಫೇಲ್ ಜೆಟ್ ಗಳನ್ನು ಖರೀದಿಸುವ ವ್ಯವಹಾರದಲ್ಲಿ ಒಬ್ಬ ‘ಮಧ್ಯವರ್ತಿ’ಗೆ ಒಂದು ಮಿಲಿಯ ಯುರೋಗಳನ್ನು ಪಾವತಿ ಮಾಡಲಾಗಿದೆ ಎಂದು ಬಹಿರಂಗಗೊಂಡಿರುವುದು ರಫೆಲ್ ವ್ಯವಹಾರದಲ್ಲಿ ಲಂಚಗಳು ಮತ್ತು ಇತರ ಕಾನೂನುಬಾಹಿರ ಪಾವತಿಗಳ ಪ್ರಶ್ನೆಯನ್ನು ಮತ್ತೆ ಎತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಟಿಪ್ಪಣಿ ಮಾಡಿದೆ. ಈ ವರದಿ ದಸಾಲ್ಟ್ ಕಂಪನಿಯ ೨೦೧೭ರ ಲೆಕ್ಕಪತ್ರಗಳ ಒಂದು ವಿಶ್ಲೇಷಣೆಯನ್ನು ಆಧರಿಸಿದೆ ಎಂದು ಅದು ಹೇಳಿದೆ.
ರಫೆಲ್ ವ್ಯವಹಾರದ ಬಗ್ಗೆ ಒಂದು ತನಿಖೆಗೆ ಆದೇಶ ನೀಡಲು ಮೋದಿ ಸರ್ಕಾರ ಪಟ್ಟು ಹಿಡಿದು ನಿರಾಕರಿಸುತ್ತಿರುವುದು ಈ ವಿಷಯದಲ್ಲಿ ಅದು ಏನನ್ನೋ ಮರೆಮಾಚುತ್ತಿದೆ ಎಂಬ ಸಂದೇಹ ಮೂಡಿಸುತ್ತದೆ.
ಸಿಎಜಿ ವರದಿ ಕಾನೂನುಬಾಹಿರ ಪಾವತಿಗಳ ಪ್ರಶ್ನೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂಬುದು ಸ್ವಯಂವೇದ್ಯ.ಎಂದಿರುವ ಸಿಪಿಐ(ಎಂ) ಹಿಂದಿನ ಆರ್ಡರನ್ನು ರದ್ದು ಮಾಡುವ ಮತ್ತು ೩೬ ವಿಮಾನಗಳಿಗೆ ಹೆಚ್ಚಿನ ವೆಚ್ಚದಲ್ಲಿ ಹೊಸ ಆರ್ಡರ್ ಕೊಟ್ಟಿರುವ ಈ ಇಡೀ ವ್ಯವಹಾರದ ಬಗ್ಗೆ ಒಂದು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.