ಎರಡನೇ ಕೋವಿಡ್ ಅಲೆಗೆ ಮೋದಿ ಸರಕಾರ ಸಿದ್ಧವಾಗಿರಲಿಲ್ಲ ಎನ್ನುವುದಕ್ಕಿಂತ, ಪರಿಸ್ಥಿತಿ ಇನ್ನೇನೂ ಕೆಡುವುದಿಲ್ಲ ಎಂದೇ ಅದು ಜನವರಿ ತಿಂಗಳಿಂದ ಭಾವಿಸಿದಂತೆ ಕಾಣುತ್ತದೆ. ಆರೋಗ್ಯ ಕ್ಷೇತ್ರದಲ್ಲೂ, ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ಜನರಿಗೆ ಪರಿಹಾರ ಒದಗಿಸುವಲ್ಲಿಯೂ ಭಾರಿ ನಿರ್ಲಕ್ಷ್ಯದಿಂದಿದ್ದ ಈ ಸರಕಾರ ಅದನ್ನು ಮುಂದುವರೆಸಿರುವುದು 2021-22ನೇ ಸಾಲಿನ ಬಜೆಟ್‌ನಲ್ಲಿಯೂ ಪ್ರತಿಬಿಂಬಿತವಾಗಿತ್ತು. ಅದರ ಲಸಿಕೆ ಅಭಿಯಾನ ನೀತಿ ಕೂಡ ವಿರೋಧಾಭಾಸ ಮತ್ತು ಗೊಂದಲದಿಂದ ಕೂಡಿದೆ. ಇನ್ನಾದರೂ ಮುಂಬರುವ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ಮೂರ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಿಕ್ಕಟ್ಟನ್ನು ನವ-ಉದಾರವಾದಿ ಕ್ರಮಗಳನ್ನು ಮುಂದೊತ್ತಲು ಬಳಸುವ ಮಾರಕ ನಡೆಯನ್ನು ನಿಲ್ಲಿಸಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಜನರನ್ನು ರಕ್ಷಿಸಲು ಅಗತ್ಯ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲು ಗಮನ ಕೇಂದ್ರೀಕರಿಸಬೇಕು.
ಕೋವಿಡ್-19 ಸೋಂಕಿನ ಎರಡನೇ ಅಲೆ ಅನಾವರಣಗೊಳ್ಳುತ್ತಿದ್ದು ಭಾರತದಲ್ಲಿ ಅನಾಹುತಕಾರಿ ಪರಿಸ್ಥಿತಿ ತಲೆದೋರುತ್ತಿದೆ. ಏಪ್ರಿಲ್ 4 ರಂದು ದಿನದ ಪ್ರಕರಣಗಳು ಒಂದು ಲಕ್ಷದ ಗಡಿ ದಾಟಿದ್ದು(1,03,709) ಏಪ್ರಿಲ್ 7 ರಂದು 1,26,260 ಹೊಸ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕ ಸೋಂಕು ದೇಶದಲ್ಲಿ ದಾಂಗುಡಿ ಇಟ್ಟಾಗಿನಿಂದ ಇದುವರೆಗಿನ ಅತ್ಯಂತ ಹೆಚ್ಚಿನ ನಿತ್ಯದ ಪ್ರಕರಣ ಏಪ್ರಿಲ್ 8ರಂದು ದಾಖಲಾಗಿದೆ. ಅಂದು 1,26,789 ಪ್ರಕರಣ ಪತ್ತೆಯಾಗಿವೆ. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 1,29,28,574ಕ್ಕೆ ತಲುಪಿದೆ. ಸಾವಿನ ದರ ಕೂಡ ಕಳವಳಕಾರಿ ರೀತಿಯಲ್ಲಿ ಏರುತ್ತಿದೆ.
ಸೋಂಕಿನ ಈ ರೀತಿಯ ಏರಿಕೆಗೆ ಸರ್ಕಾರ ಸಿದ್ಧವಾಗಿರಲಿಲ್ಲ ಎನ್ನುವುದು ಅಪೂರ್ಣ ಹೇಳಿಕೆಯಾಗುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ, ಮೋದಿ ಸರ್ಕಾರ ಜನವರಿಯಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿ ಅಂತ್ಯಗೊಂಡಿದೆ ಎನ್ನುವ ರೀತಿಯಲ್ಲಿ ವರ್ತಿಸತೊಡಗಿತ್ತು. ದೇಶದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದೆ ಎಂಬ ವಿಶ್ವಾಸದಲ್ಲಿತ್ತು.
ಆರೋಗ್ಯ ಕ್ಷೇತ್ರದಲ್ಲೂ, ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ಜನರಿಗೆ ಪರಿಹಾರ ಒದಗಿಸುವಲ್ಲಿಯೂ ಮೋದಿ ಸರ್ಕಾರ ಭಾರಿ ನಿರ್ಲಕ್ಷ್ಯದಿಂದಿತ್ತು. 2021-22ನೇ ಸಾಲಿನ ಬಜೆಟ್‌ನಲ್ಲಿ ಇದು ಪ್ರತಿಬಿಂಬಿತವಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಅಭೂತಪೂರ್ವವಾದ 137 ಶೇಕಡದಷ್ಟು ಹೆಚ್ಚು ಹಣ ಕೊಡಲಾಗಿದೆ ಎಂದು ಅದರ ಬಜೆಟ್ ಬಡಾಯಿ ಕೊಚ್ಚಿತ್ತು. ಆದರೆ, 2021-22ನೇ ಬಜೆಟ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒದಗಿಸಿದ ಬಜೆಟ್ ಹಣ 2020-21ರಲ್ಲಿ ಮಾಡಲಾದ ನಿಜವಾದ ವೆಚ್ಚಕ್ಕಿಂತ 9.6 ಶೇಕಡ ಕಡಿಮೆಯಾಗಿದೆ ಎನ್ನುವುದು ವಾಸ್ತವ ಸಂಗತಿ.
ಗೊಂದಲಮಯ ಲಸಿಕೆ ಅಭಿಯಾನ
ಲಸಿಕೆ ಅಭಿಯಾನ ನೀತಿ ರೂಪಿಸಿದ ಸರ್ಕಾರದ ವಿಧಾನ ಕೂಡ ವಿರೋಧಾಭಾಸ ಮತ್ತು ಗೊಂದಲದಿಂದ ಕೂಡಿದೆ. ಇದುವರೆಗೆ ಎರಡು ಲಸಿಕೆಗಳಿಗೆ ತುರ್ತು ಬಳಕೆಗಾಗಿ ಅನುಮೋದನೆ ನೀಡಲಾಗಿದೆ. ಒಂದು ಅಸ್ಟ್ರಾ ಜೆನೆಕಾದ ಕೋವಿಶೀಲ್ಡ್, ಇನ್ನೊಂದು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್. ಎರಡನೇ ಲಸಿಕೆ ಕೊವ್ಯಾಕ್ಸಿನ್‌ಅನ್ನು ಮೂರನೇ ಹಂತದ ಪರೀಕ್ಷೆಯ ಭಾಗವಾಗಿ ಬಳಕೆಗೆ ನೀಡಿರುವುದು ವಿವಾದಕ್ಕೆ ಕಾರಣವಾಯಿತು. ಅಲ್ಲದೆ ದೇಶದ ಔಷಧ ನಿಯಂತ್ರಣ ಸಂಸ್ಥೆ ರಷ್ಯಾದ ಸ್ಪುಟ್ನಿಕ್-5 ಲಸಿಕೆಗೆ ಇನ್ನೂ ಅನುಮೋದನೆ ನೀಡಿಲ್ಲ. ಇದು 35 ದೇಶಗಳಲ್ಲಿ ಬಳಕೆಯಲ್ಲಿದೆ. ಆದರೆ ಭಾರತದ ಕಂಪೆನಿಯಿಂದ ಅದರ ಉತ್ಪಾದನೆ ಮಾಡಲು ಇನ್ನೂ ಅನುಮತಿಗಾಗಿ ಕಾಯಲಾಗುತ್ತಿದೆ.
ಸೋಂಕು ಏರಿಕೆ ಅತಿ ಹೆಚ್ಚಾಗಿರುವ ರಾಜ್ಯಗಳಲ್ಲಿ ಲಸಿಕೆ ಸರಬರಾಜಿನಲ್ಲಿ ತ್ವರಿತವಾಗಿ ಕೊರತೆ ಕಾಡಲು ಆರಂಭವಾಗಿದೆ. ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭವಾಗಿರುವ ಸಮಯದಲ್ಲಿ ಇದು ಉಂಟಾಗಿದೆ. ದೊಡ್ಡ ಪ್ರಮಾಣದಲ್ಲಿ ಲಸಿಕೆ ಕಾರ್ಯಕ್ರಮ ಯೋಜಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಸರ್ಕಾರದ ವೈಫಲ್ಯ ಇದರಿಂದಾಗಿ ಎದ್ದು ಕಾಣುತ್ತಿದೆ.
ಸರ್ಕಾರ, ಸ್ಪುಟ್ನಿಕ್ 5 ಲಸಿಕೆಯನ್ನು ತಕ್ಷಣವೇ ಬಳಕೆಗೆ ಆರಂಭಿಸಬೇಕು ಹಾಗೂ ಕೇವಲ ಒಂದು ಡೋಸ್ ಸಾಕಾಗುವಂಥ ಜಾನ್ಸನ್ ಅಂಡ್ ಜಾನ್ಸನ್‌ನಂತಹ ಲಸಿಕೆಯ ಉತ್ಪಾದನೆಗೆ ಲೈಸೆನ್ಸ್ ಪಡೆದುಕೊಳ್ಳಬೇಕು. ನೋವಾವ್ಯಾಕ್ಸ್ ನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕೊವೊವ್ಯಾಕ್ಸ್ ಎಂಬ ಹೆಸರಲ್ಲಿ ಉತ್ಪಾದಿಸುವುದನ್ನು ತ್ವರಿತಗೊಳಿಸಬೇಕು. ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೋಗ್ಯ ವ್ಯವಸ್ಥೆಯ ಹಾಗೂ ಇತರ ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ಸಾಮರ್ಥ್ಯ ಹೆಚ್ಚಳಕ್ಕೆ ‘ಆತ್ಮನಿರ್ಭರ್ ಸ್ವಾಸ್ಥ್ಯ ಭಾರತ್ ಯೋಜನಾ’ ದಂಥ ಕೇಂದ್ರೀಯ ಪ್ರಾಯೋಜಿತ ಯೋಜನೆಗೆ ಕೇಂದ್ರ ಸರ್ಕಾರ ತಕ್ಷಣವೇ ಹಣ ಒದಗಿಸಬೇಕು. ಈ ಯೋಜನೆಯಡಿ ಆರು ವರ್ಷಗಳಲ್ಲಿ 64,180 ಕೋಟಿ ರೂಪಾಯಿ ಖರ್ಚು ಮಾಡುವ ಗುರಿಯಿದ್ದರೂ ಬಜೆಟ್‌ನಲ್ಲಿ ಅದಕ್ಕೆ ಯಾವುದೇ ಹಣ ಒದಗಿಸಿಲ್ಲ. ಈ ಯೋಜನೆಯನ್ನು ಕೂಡಲೇ ಕಾರ್ಯಗತಗೊಳಿಸಬೇಕು. ಏಕೆಂದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಆದ್ಯತೆ ನೀಡಬೇಕಾಗಿದೆ.
V ಆಕಾರದ ಆರ್ಥಿಕ ಚೇತರಿಕೆ ಆಗುತ್ತಿದೆ ಎಂಬ ಸರ್ಕಾರ ಮುಂದಿಟ್ಟ ಸುಂದರ ಚಿತ್ರಣಕ್ಕೆ ತದ್ವಿರುದ್ಧವಾಗಿ ಆರ್ಥಿಕ ಬೆಳವಣಿಗೆಯಲ್ಲಿ ತಡೆಯುಂಟಾಗುತ್ತಿದೆ, ಅದು ನಿಂತು ಬಿಡುವಂತೆಯೂ ಕಾಣುತ್ತಿದೆ. ಎಂಟು ವಲಯಗಳನ್ನು ಒಳಗೊಂಡ ಪ್ರಮುಖ ಕ್ಷೇತ್ರವು (ಕೋರ್ ಸೆಕ್ಟರ್) ಆರು ತಿಂಗಳಲ್ಲಿ ಅತ್ಯಂತ ತೀವ್ರವಾಗಿ ಕುಗ್ಗಿದೆ. ತಯಾರಿಕಾ ಕ್ಷೇತ್ರದ ಉತ್ಪನ್ನದಲ್ಲಿ ಎರಡನೇ ಅಲೆ ಅರಂಭವಾಗುವುದಕ್ಕೂ ಮೊದಲೇ ಏಳು ತಿಂಗಳಲ್ಲೇ ಅತಿ ತೀವ್ರವಾದ ಕುಸಿತ ಕಂಡಿದೆ. ಇದೀಗ ಸೋಂಕು ಹೆಚ್ಚಳದೊಂದಿಗೆ ರಾತ್ರಿ ಕರ್ಫ್ಯೂ, ವಾರಾಂತ್ಯ ಲಾಕ್‌ಡೌನ್ ಮತ್ತು ಓಡಾಟದ ಮೇಲೆ ನಿರ್ಬಂಧ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಪೇಲವಗೊಂಡಿವೆ. ಪೂರ್ಣ ಪ್ರಮಾಣದ ಲಾಕ್‌ಡೌನ್ ಹೇರದಿದ್ದರೂ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತು ಸೀಮಿತ ನಿಯಂತ್ರಣ ಕ್ರಮಗಳು ಮಹಾರಾಷ್ಟ್ರದಲ್ಲಿ ಚಿಲ್ಲರೆ ವ್ಯಾಪಾರ ವಹಿವಾಟು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್ ವ್ಯವಹಾರಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಸೇವಾ ವಲಯದಲ್ಲಿ ಕೆಲಸಗಳಿಗೆ ಕತ್ತರಿ ಹಾಕಲಾಗುತ್ತಿದೆ. ಇದರಿಂದಾಗಿ ಉಲ್ಟಾ ವಲಸೆ (ನಗರಗಳಿಂದ ಹಳ್ಳಿಗಳಿಗೆ ವಲಸೆ) ಆರಂಭವಾಗಿದೆ.
ದಿವ್ಯ ನಿರ್ಲಕ್ಷ್ಯ ಮತ್ತು ಅಮಾನವೀಯ ಸ್ಪಂದನೆ
ಈ ಮಹಾಸೋಂಕಿನ ಮೊದಲ ಅಲೆಯ ಸಮಯದಲ್ಲಿ ಸಂಕಟದಲ್ಲಿದ್ದ ಜನರ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಮೋದಿ ಸರ್ಕಾರ ಅತ್ಯಂತ ನಿರ್ಲಕ್ಷ್ಯ ತೋರಿತ್ತು. ಸರ್ಕಾರ ಪ್ರಕಟಿಸಿದ ಆರ್ಥಿಕ ಚೇತರಿಕೆಯ ಪ್ಯಾಕೇಜ್‌ನಲ್ಲಿ, ಹೆಚ್ಚುವರಿ ಖರ್ಚಿನ ವಿಚಾರವಾಗಿ ಹೇಳುವುದಾದರೆ ಜಿಡಿಪಿಯ 1.5 ಶೇಕಡದಷ್ಟೂ ಇರಲಿಲ್ಲ. ತಮ್ಮ ನಾಗರಿಕರಿಗೆ ಗಮನಾರ್ಹ ಪ್ರಮಾಣದಲ್ಲಿ ನಗದು ಸಬ್ಸಿಡಿಗಳನ್ನು ಕೊಟ್ಟ ಅಮೆರಿಕ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ದೇಶಗಳಂತಲ್ಲದೆ ಮೋದಿ ಸರ್ಕಾರ ತೀರಾ ಅಲ್ಪಪ್ರಮಾಣದ ನಗದು ನೆರವು ನೀಡಿದೆ, ಸಣ್ಣ ವ್ಯವಹಾರಸ್ಥರು ಮತ್ತು ಕಿರು ಉತ್ಪಾದಕರಿಗೆ ಬೆಂಬಲ ನೀಡಲು ನಿರಾಕರಿಸಿದೆ.
ಮಕ್ಕಳು, ಮಹಿಳೆಯರು ಮತ್ತು ಪುರುಷರಾದಿಯಾಗಿ ಆಹಾರ ಮತ್ತು ವಸತಿಯಿಲ್ಲದೆ ಹೆದ್ದಾರಿಗಳಲ್ಲಿ ನಡೆದು ಸಾಗಿದ ಲಕ್ಷಾಂತರ ವಲಸೆ ಕಾರ್ಮಿಕರ ದಯನೀಯ ದೃಶ್ಯ ಈ ಸರ್ಕಾರದ ಸ್ಪಂದನೆಯಲ್ಲಿ ದಿವ್ಯ ನಿರ್ಲಕ್ಷ್ಯ ಮತ್ತು ಅಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ.
ಮುಂಬರುವ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ಇನ್ನಾದರೂ ಮೂರ್ತ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 35 ಕೆ.ಜಿ. ಆಹಾರ ಧಾನ್ಯವನ್ನು ಖಾತರಿಪಡಿಸುವುದು ಮೊದಲ ಹೆಜ್ಜೆ. ಅದರಲ್ಲಿ 10 ಕೆಜಿ ಧಾನ್ಯ ಉಚಿತವಾಗಿ ಒದಗಿಸಬೇಕು. ಅಹಾರ ಭದ್ರತೆ ಕಾನೂನು ವ್ಯಾಪ್ತಿಗೆ ಬರುವ 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ/ಗೋಧಿ ಮತ್ತು ಒಂದು ಕೆಜಿ ಬೇಳೆಯನ್ನು ಉಚಿತವಾಗಿ ಕೊಡುವುದಾಗಿ ಸರ್ಕಾರ ಘೋಷಿಸಿತ್ತು. ಅದು 2020 ನವೆಂಬರ್ ವರೆಗೆ ಮಾತ್ರ ಮುಂದುವರಿಯಿತು.
2021 ಮಾರ್ಚ್ 1ರ ಹೊತ್ತಿಗೆ ದೇಶದಲ್ಲಿ 9.2 ಕೋಟಿ ಟನ್ ಆಹಾರ ಧಾನ್ಯದ ಕಾಪು ದಾಸ್ತಾನಿದೆ. ಇದು ಕಡ್ಡಾಯ ಕಾಪು ದಾಸ್ತಾನಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಕನಿಷ್ಠ ಮುಂದಿನ ಆರು ತಿಂಗಳವರೆಗಾದರೂ ಪ್ರತಿ ಕುಟುಂಬದ ಉಚಿತ ಧಾನ್ಯ ಪ್ರಮಾಣವನ್ನು 10 ಕೆಜಿಗೆ ಏರಿಸಬೇಕು.
ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ 7,500 ರೂಪಾಯಿ ನಗದನ್ನು ನೀಡುವಂತೆ ಎಲ್ಲ ಪ್ರತಿಪಕ್ಷಗಳು 2020ರ ಸೆಪ್ಟೆಂಬರ್‌ನಲ್ಲೇ ಆಗ್ರಹಿಸಿದ್ದವು. ಆದರೆ ಸರ್ಕಾರ ಜನಧನ್ ಖಾತೆ ಹೊಂದಿದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮೂರು ಮಾಸಿಕ ಕಂತುಗಳಲ್ಲಿ 1,500 ರೂಪಾಯಿ ಜಮಾ ಮಾಡಿ ಕೈತೊಳೆದುಕೊಂಡಿದೆ. ಈ ಮಹಾಸೋಂಕು ಇನ್ನೂ ದೀರ್ಘ ಅವಧಿ ಇರಲಿರುವುದರಿಂದ ಕೇಂದ್ರ ಸರ್ಕಾರ ಎಲ್ಲ ಕುಟುಂಬಗಳಿಗೆ ನಗದು ಸಬ್ಸಿಡಿಯನ್ನು ಒದಗಿಸಬೇಕು.
ಉದ್ಯೋಗ ಕ್ಷೇತ್ರದಲ್ಲಿ ಬಿಕ್ಕಟ್ಟು ಆಳಗೊಳ್ಳುತ್ತಿರುವುದರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ವಿಸ್ತರಿಸಬೇಕು. ಹೆಚ್ಚಿನ ಕೂಲಿಯೊಂದಿಗೆ ವರ್ಷಕ್ಕೆ ಕನಿಷ್ಠ 200 ದಿನ ಕೆಲಸ ಒದಗಿಸುವುದನ್ನು ಖಾತರಿಪಡಿಸಲು ಇದು ಅತ್ಯಗತ್ಯ. ಅದುವರೆಗೆ ರಾಜ್ಯಗಳಲ್ಲಿ ಕಾರ್ಯಗತಗೊಳಿಸುತ್ತಿರುವ ಕೆಲಸದ ದಿನಗಳಿಗೆ ಕೂಲಿ ಕೊಡಲು ಸಾಲುವಷ್ಟು ಹಣವನ್ನು ಒದಗಿಸಬೇಕು. ಸರಕಾರ ನಗರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯೊಂದನ್ನು ತಕ್ಷಣವೇ ಪ್ರಕಟಿಸಿ ನಗರ ಪ್ರದೇಶಗಳ ನಿರುದ್ಯೋಗಿಗಳ ಸ್ವಲ್ಪ ಪರಿಹಾರ ಒದಗಿಸಬೇಕು.
ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆ (ಎಂಎಸ್‌ಎಂಇ) ಕ್ಷೇತ್ರ ದೇಶದ 11 ಕೋಟಿ ಜನರಿಗೆ ಉದ್ಯೋಗ ಕಲ್ಪಿಸುತ್ತದೆ. ಈ ಮಹಾಸೋಂಕಿನಿಂದ ಅತಿ ಹೆಚ್ಚು ಹಾನಿ ಅನುಭವಿಸಿದ ಕ್ಷೇತ್ರ ಇದಾಗಿದೆ. ಅದರ ನೆರವಿಗೆ ಈವರೆಗೆ ಕೈಗೊಂಡ ಕ್ರಮಗಳು ಏನೇನೂ ಸಾಲದು. ಸಾಲ ಮರುಪಾವತಿ ಕಂತು ಮುಂದೂಡಿಕೆ (ಮಾರಟೋರಿಯಂ), ಉಳಿದ ಬಾಕಿ ಸಾಲಗಳ ಬಡ್ಡಿ ಮನ್ನಾ, ಕಚ್ಚಾ ವಸ್ತುಗಳ ಖರೀದಿಗೆ ಸಬ್ಸಿಡಿ ಮತ್ತಿತರ ಬೆಂಬಲದ ಕ್ರಮಗಳಿಗೆ ಕೇಂದ್ರ ಸರ್ಕಾರ ಮುಂದಾಗಬೇಕಿದೆ.
ಸರ್ಕಾರದ ಮಾರಕ ನಡೆ ನಿಲ್ಲಬೇಕು
ಇವಕ್ಕೆಲ್ಲ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಕ್ಕಿಂತ ಹೆಚ್ಚಿನ ಮಟ್ಟದ ಸಾರ್ವಜನಿಕ ವೆಚ್ಚ ಇರುತ್ತದೆ. ಸರ್ಕಾರ ವಿತ್ತೀಯ ಕೊರತೆ ಮಿತಿಗಳಿಗೆ ಅಂಟಿಕೊಳ್ಳದೆ ಸಾರ್ವಜನಿಕ ವೆಚ್ಚಗಳನ್ನು ಹೆಚ್ಚಿಸಲು ಸಾಲ ತರಬಹುದು. ಅಲ್ಲದೆ, ಕಾರ್ಪೊರೇಟ್ ಮತ್ತು ಅತಿ-ಶ್ರೀಮಂತರ ಮೇಲೆ ತೆರಿಗೆಗಳನ್ನು ಹೆಚ್ಚಿಸಬೇಕು, ಒಂದು ಸಂಪತ್ತು ತೆರಿಗೆ ವಿಧಿಸುವುದನ್ನು ಆರಂಭಿಸಬೇಕು. ಆದಾಯ ಸಂಗ್ರಹಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಪರೀತ ತೆರಿಗೆಗಳನ್ನು ಅವಲಂಬಿಸುವ ಮಾರಕ ನೀತಿಗೆ ಬದಲು ಈ ಕ್ರಮಕ್ಕೆ ಮುಂದಾಗಬೇಕು.
ಎರಡು ಮಹತ್ವದ ಕ್ಷೇತ್ರಗಳಲ್ಲಿ ಕೇರಳ ಸರ್ಕಾರ ಮಾಡಿದ್ದನ್ನು ಇಡೀ ದೇಶಕ್ಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗುವುದು ಒಳ್ಳೆಯದು. ಕೇರಳದಲ್ಲಿ ಕೋವಿಡ್ ಸೋಂಕಿತರಲ್ಲಿ 95 ಶೇಕಡದಷ್ಟು ಜನರಿಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ ಎಲ್‌ಡಿಎಫ್ ಸರ್ಕಾರ, ಮಹಾಸೋಂಕಿನ ಅವಧಿಯುದ್ದಕ್ಕೂ 88 ಲಕ್ಷ ಕುಟುಂಬಗಳಿಗೆ ಉಚಿತ ಆಹಾರದ ಕಿಟ್‌ಗಳನ್ನು ಪೂರೈಸಿದೆ. ಕಿಟ್‌ನಲ್ಲಿ ಆಹಾರ ಧಾನ್ಯ ಮಾತ್ರವಲ್ಲದೆ, ಬೇಳೆ, ಖಾದ್ಯ ತೈಲ ಮತ್ತು ಮಸಾಲೆ ಪದಾರ್ಥಗಳೂ ಇದ್ದವು.
ಮೋದಿ ಸರ್ಕಾರ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಗಮನ ಕೇಂದ್ರೀಕರಿಸುವ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಜನರನ್ನು ರಕ್ಷಿಸಲು ಅಗತ್ಯ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವ ಬದಲು ಈ ಬಿಕ್ಕಟ್ಟನ್ನು ನವ-ಉದಾರವಾದಿ ನೀತಿಯನ್ನು ಮುಂದೊತ್ತಿ ಕೆಲವೇ ಕಾರ್ಪೊರೇಟ್ ಮತ್ತು ಹಣಕಾಸು ಮಹಾಕುಳಗಳ ಹಿತಗಳನ್ನು ಈಡೇರಿಸುತ್ತಿದೆ. ಕೃಷಿ ಕಾನೂನುಗಳು, ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣದ ಧಾವಂತ, ಅದರ ಜೊತೆ-ಜೊತೆಗೇ ವಿಷಮಯ ಕೋಮುವಾದಿ ರಾಜಕೀಯ ಸಾಗುತ್ತಿದೆ. ದೇಶದ ಹಿತದೃಷ್ಟಿಯಿಂದ ಈ ಮಾರಕ ನಡೆಯನ್ನು ತಡೆಯಲೇ ಬೇಕು. ಮಹಾಸೋಂಕು ಮತ್ತು ಜನರ ಕಲ್ಯಾಣ- ಇವೆರಡಕ್ಕೂ ಸರ್ಕಾರ ಸಂಪೂರ್ಣ ಗಮನ ನೀಡಲೇಬೇಕಾಗಿದೆ.
ಅನು: ವಿಶ್ವ